"ಬಾಲಿಕಾ ವಧು" ನಟಿ ಪ್ರತ್ಯೂಷ ಆತ್ಮಹತ್ಯೆಗೆ ಶರಣು
ಬಾಲಿಕಾ ವಧು ಖ್ಯಾತಿಯ ಜನಪ್ರಿಯ ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ (24) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ...

ನವದೆಹಲಿ: ಬಾಲಿಕಾ ವಧು ಖ್ಯಾತಿಯ ಜನಪ್ರಿಯ ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ (24) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ನಟಿ ಪ್ರತ್ಯೂಷ ಅವರು ಅಂಧೇರಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಅವರ ತಾಯಿ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದರು ವೈದ್ಯರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಪ್ರತ್ಯೂಷ ಅವರು ಕೆಲವು ದಿನಗಳಿಂದ ವೈಯಕ್ತಿಕ ಸಮಸ್ಯೆಯಿಂದ ನೊಂದಿದ್ದು, ಇದರಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ಪ್ರತ್ಯೂಷ ಸಾಯುವುದಕ್ಕೂ ಮುನ್ನ ಯಾವುದೇ ಡೆತ್ ನೋಟ್ ಬರೆದಿಲ್ಲ ಎಂದು ತಿಳಿದುಬಂದಿದ್ದು, ಪ್ರಸ್ತುತ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತ್ಯೂಷ ತಮ್ಮ ಸ್ನೇಹಿತರೊಂದಿಗೆ ಅಂಧೇರಿಯಲ್ಲಿರುವ ಮನೆಯೊಂದರಲ್ಲಿ ನೆಲೆಸಿದ್ದರು.
ಕೆಲವು ವರ್ಷಗಳಿಂದಲೂ ನಟಿ ಪ್ರತ್ಯೂಷ ಮತ್ತು ನಟ ರಾಹುಲ್ ರಾಜ್ ಸಿಂಗ್ ಎಂಬುವವರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಇಬ್ಬರೂ ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆಂಬ ವರದಿಗಳು ಕೂಡ ಕೇಳಿಬಂದಿತ್ತು. ಆದರೆ, ಕೆಲ ವೈಯುಕ್ತಿಕ ಕಾರಣಗಳಿಂದಾಗಿ ಕೆಲವು ದಿನಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ಇದಾದ ಬಳಿಕ ಸಾಕಷ್ಟು ನೊಂದಿದ್ದ ಪ್ರತ್ಯೂಷ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ಈಗ್ಗೆ ಕೆಲ ದಿನಗಳ ಹಿಂದಷ್ಟೇ ನಟಿ ಪ್ರತ್ಯೂಷ, ಮುಂಬೈ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಾಹಿನಿಗಳಲ್ಲಿ ಸುದ್ದಿಗೆ ಗ್ರಾಸವಾಗಿದ್ದರು. ಮುಂಬೈನಲ್ಲಿರುವ ತಮ್ಮ ಮನೆಗೆ ನುಗ್ಗಿದ ಗುಂಪೊಂದು ತಮಗೆ ಕಿರುಕುಳ ನೀಡಿದೆ ಎಂದು ಆರೋಪಿಸಿ ಮುಂಬೈ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರು. ಇದೀಗ ಪ್ರತ್ಯೂಷ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಬಾಲಿಕಾ ವಧು ಧಾರಾವಾಹಿಯಲ್ಲಿ ಆನಂದಿ ಎಂಬ ಪಾತ್ರದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದ ಪ್ರತ್ಯೂಷ, ನಂತರ ಬಿಗ್ ಬಾಸ್ ಸೀಸನ್ 7 ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಿಗ್ ಬಾಸ್ ನಿಂದ ಹೊರಬಂದ ನಂತರ ಸಸುರಾಲ್ ಸಿಮರ್ ಕಾ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


