ನಿಕೋಲೆನ್ನಿರೇ...

ಥಟ್ಟನೆ ನೋಡಿದರೆ ಬಿಪಾಶಾ ಬಸು. ಮತ್ತೆಮತ್ತೆ ನೋಡಿದರೆ ಆಕೆಯ ಸಂಬಂಧಿಯಾದರೂ ಇದ್ದಾಳು ಅಂತನಿಸುತ್ತದೆ. ಹೆಸರು ನಿಕೋಲ್ ಫರಿಯಾ. ಸದ್ಯದ ಮಾಡೆಲ್ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವಾಕೆ. ಇಪ್ಪತ್ತರ ಹರಯದಲ್ಲೇ ಮಿಸ್ ಅರ್ಥ್ ಆಗಿ, ಆ ಮೂಲಕ ಬಾಲಿವುಡ್ಗೂ ಎಂಟ್ರಿ ಪಡೆದು ಸದ್ಯಕ್ಕೆ ಫ್ಯಾಷನ್ ಜಗತ್ತಿನಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ನಿಕೋಲ್ ಫರಿಯಾ ಬೆಂಗಳೂರಿನ ಕೂಸು ಅನ್ನೋದು ಸಿಲಿಕಾನ್ ಸಿಟಿಯವರಿಗೆ ಹೆಮ್ಮೆಯ ವಿಷಯ.
ನಿಕೋಲ್ ಮೊನ್ನೆ ರಾಜಧಾನಿಯ ಫೋರಂ ಮಾಲ್ನ ಪಿವಿಆರ್ನಲ್ಲಿ ಪ್ರತ್ಯಕ್ಷವಾಗಿದ್ದಳು. ಅದು ಬೆಂಗಳೂರಿನ ಸಿನಿಮಾಕ್ರೇಜಿ ಸಾಹಸಿಗಳು ಸೇರಿ ನಿರ್ಮಿಸಿರುವ ಬಾಲಿವುಡ್ಸಿನಿಮಾ 'ಸ್ಟೇಷನ್'ನ ಮೊದಲ ಟ್ರೈಲರ್ ಬಿಡುಗಡೆ ಸಮಾರಂಭ. ಚಿತ್ರದ ನಿರ್ದೇಶಕ ಸಾದ್ ಅಲಿ, ನಿರ್ಮಾಪಕ ಸುಮಿತ್ ಘೋಷ್, ಸವಾರಿ ಖ್ಯಾತಿಯ ಕನ್ನಡ ಚಿತ್ರ ನಿರ್ದೇಶಕ ಜೇಕಬ್ ವರ್ಗೀಸ್ ಹಾಗೂ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಜೊತೆ ವೇದಿಕೆಯಲ್ಲಿ ಮಿಂಚುತ್ತಿದ್ದ ನಿಕೋಲ್ ಬೆಂಗಳೂರಿಗರ ಈ ಮೊದಲ ಪ್ರಯತ್ನಕ್ಕೆ ಶುಭ ಹಾರೈಸಿ, 'ಬೆಂಗಳೂರಿನವರು ರಾಷ್ಟ್ರೀಯ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಲಿ' ಎಂದು ಹಾರೈಸಿದಳು.
ಅದ್ಭುತ ಮಾತುಗಾತಿಯಾಗಿರುವ ನಿಕೋಲ್ಗೆ ಫ್ಯಾಷನ್ ಬೊಂಬೆಯಾಗಿ ಗುರುತಿಸಿಕೊಳ್ಳೋದಕ್ಕಿಂತ ತನ್ನ ವ್ಯಕ್ತಿತ್ವವಾದ ಮೂಲಕ ಗುರುತಿಸಿಕೊಳ್ಳುವ ಆಸೆ. ಇನ್ನು 2014ರ ಕಿಂಗ್ಫಿಷರ್ ಕ್ಯಾಲೆಂಡರ್ನಲ್ಲಿ ಈಜುಡುಗೆಯಲ್ಲಿ ಕಾಣಿಸಿಕೊಂಡ ಬಗ್ಗೆ ಕೇಳಿದರೆ, 'ಸುಂದರ ಶರೀರ ಹೊಂದುವುದು ಕೂಡ ಸುಲಭದ ಮಾತಲ್ಲ. ಅದಕ್ಕಾಗಿ ಹಲವು ಕಠಿಣ ಕಸರತ್ತುಗಳ, ಆಹಾರ ತ್ಯಾಗದ ಅಗತ್ಯ ಇರುತ್ತದೆ. ಅದೃಷ್ಟದ ಜೊತೆಗೆ ಪರಿಶ್ರಮ ಕೂಡ ಮುಖ್ಯ. ಅಷ್ಟು ಕಷ್ಟಪಟ್ಟು ದೇಹವನ್ನು ಸುಂದರವಾಗಿಸಿಕೊಂಡು ಫ್ಯಾಷನ್ ಜಗತ್ತಿಗೆ ಪ್ರೊಫೆಷನಲ್ ಆಗಿ ಕಾಲಿಟ್ಟ ಮೇಲೆ ಯಾವ ಉಡುಗೆಯಲ್ಲಿ ಕಾಣಿಸಿಕೊಂಡರೂ ತಪ್ಪಲ್ಲ' ಅನ್ನುತ್ತಾಳೆ ದಿಟ್ಟೆ.
ಮಾಡೆಲಿಂಗ್ ಇಷ್ಟವೋ ಚಿತ್ರರಂಗ ಇಷ್ಟವೋ ಎಂಬ ಪ್ರಶ್ನೆಗೆ, 'ಇವೆರಡೂ ತೀರಾ ಬೇರೆಬೇರೆ ರಂಗಗಳಲ್ಲ. ಒಂದಕ್ಕೊಂದು ಬೆಸೆದುಕೊಂಡಿವೆ. ರೂಪದರ್ಶಿಯಾಗಿ ನಮ್ಮ ಸೌಂದರ್ಯ, ಸ್ಟೈಲುಗಳನ್ನು ಮಾತ್ರ ಪ್ರದರ್ಶನ ಮಾಡಿರುತ್ತೇವೆ. ಆದರೆ ನಟಿಯಾದಾಗ ಇನ್ನಷ್ಟು ಅಭಿವ್ಯಕ್ತಿ ಸಾಧ್ಯ. ಅದು ನಮ್ಮ ಹಲವು ಭಾವಗಳಿಗೆ ವೇದಿಕೆಯಾಗುತ್ತದೆ. ನನ್ನ ವ್ಯಕ್ತಿತ್ವ ಹಿರಿದಾಗೋಕೆ ನಟನೆ ಖಂಡಿತ ಸಹಾಯ ಮಾಡುತ್ತದೆ. ನಾನು ಎರಡೂ ವಿಭಾಗಗಳಿಗೆ ಸಮಾನ ಆದ್ಯತೆ ನೀಡುತ್ತೇನೆ' ಎಂದು ತನ್ನ ಗುರಿಗಳ ಬಗ್ಗೆ ಸ್ಪಷ್ಟತೆ ಪ್ರದರ್ಶಿಸುತ್ತಾಳೆ ನಿಕೋಲ್.
ಬೆಂಗಳೂರಿನಲ್ಲಿ ಹುಟ್ಟಿದವಳಾಗಿ ಈ ನಗರವನ್ನು ಅತಿಯಾಗಿ ಇಷ್ಟಪಡುವುದಾಗಿ ಹೇಳುವ ನಿಕೋಲ್, ಒಳ್ಳೆಯ ಟೀಮ್ ಹಾಗೂ ಕತೆಯ ಜೊತೆ ಸಂಪರ್ಕಿಸಿದಲ್ಲಿ ಕನ್ನಡ ಚಿತ್ರದಲ್ಲಿ ಕೂಡ ನಟಿಸಲು ಸಿದ್ಧವಂತೆ.
ಬೆಂಗಳೂರ್ ಟ್ರೈನ್- ಬಾಂಬೆ ಸ್ಟೇಷನ್
'ಸ್ಟೇಷನ್' ಚಿತ್ರ ಬೆಂಗಳೂರಿನ ಉತ್ಸಾಹಿ ಪ್ರತಿಭೆಗಳ ಪ್ರಾಡಕ್ಟು. 'ಅನದರ್ ಕೈಂಡ್ ಆಫ್ ಬ್ಲ್ಯಾಕ್' ಎಂಬ ಕಿರುಚಿತ್ರ ನಿರ್ದೇಶಿಸಿ ಕ್ಯಾನ್ ಚಿತ್ರೋತ್ಸವಕ್ಕೆ ಪ್ರವೇಶ ಪಡೆದಿದ್ದ ಸಾದ್ ಖಾನ್ರ ಈ ಚಿತ್ರವನ್ನು ಪಿವಿಆರ್ ಸಂಸ್ಥೆ ದೇಶಾದ್ಯಂತ ಬಿಡುಗಡೆ ಮಾಡಲು ಮುಂದೆ ಬಂದಿದೆ. ಇದೇ ಮಾರ್ಚ್ ಇಪ್ಪತ್ತೆಂಟಕ್ಕೆ ತೆರೆಕಾಣಲಿರುವ ಸ್ಟೇಷನ್ ಒಂದು ಥ್ರಿಲ್ಲರ್ ಚಿತ್ರವಾಗಿದ್ದು ಮೂವರು ಮನೋವಿಕೃತ ಹಂತಕರು ರೈಲ್ವೇ ಸ್ಟೇಷನ್ನಿನ ಕೊಠಡಿಯಲ್ಲಿ ಸೇರಿಕೊಂಡಾಗ ಶುರುವಾಗುವ ಸಂಘರ್ಷಗಳ ಕುತೂಹಲಕಾರಿ ಕತೆ ಹೊಂದಿದೆ. ಲಗಾನ್ ಖ್ಯಾತಿಯ ಅಶುತೋಷ್ ಗೊವಾರೀಕರ್ ಅವರ ಶಿಷ್ಯ ಸಾದ್ ಖಾನ್ರ ಈ ಚಿತ್ರದ ಟ್ರೈಲರ್ ಈಗಾಗಲೇ ಎಲ್ಲಾ ಪಿವಿಆರ್ ಸ್ಕ್ರೀನ್ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
-ನವೀನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


