ಬಾಲಿವುಡ್

ರಾಖಿ ಸಿಸ್ಟರ್

ರಾಖಿ ಸಾವಂತ್ ಎಂಬ ಹೆಸರೇ ಮಡಿವಂತರ ಡಿಕ್ಷನರಿಯಲ್ಲಿ ಬ್ಯಾನ್ ಆದ ಪದ. ಆಕೆಯ ಬಗ್ಗೆ ಮಾತನಾಡುವುದು, ಓದುವುದು...

ರಾಖಿ ಸಿಸ್ಟರ್
Published On :

ರಾಖಿ ಸಾವಂತ್ ಎಂಬ ಹೆಸರೇ ಮಡಿವಂತರ ಡಿಕ್ಷನರಿಯಲ್ಲಿ ಬ್ಯಾನ್ ಆದ ಪದ. ಆಕೆಯ ಬಗ್ಗೆ ಮಾತನಾಡುವುದು, ಓದುವುದು, ಆಕೆಯ ಚಿತ್ರ ನೋಡುವುದು ಎಲ್ಲವೂ ಪೋಲಿತನದ ಸಂಕೇತ. ಅದಕ್ಕೆ ಕಾರಣ ಇಲ್ಲದಿಲ್ಲ. ರಾಖಿ ಅಂದರೆ ಸ್ವಯಂವರ ಎಂಬ ಅಪದ್ಧದ ರಿಯಾಲಿಟಿ ಶೋ ನೆನಪಾಗುತ್ತದೆ. ರಾಖಿ ಅಂದರೆ ಪಾರ್ಟಿಯಲ್ಲಿ 'ಮಿಕ'ನೊಬ್ಬನಿಂದ ಮುತ್ತಿಕ್ಕಿಸಿಕೊಂಡು ರಾದ್ಧಾಂತ ಮಾಡಿದ ಘಟನೆ ಫೋಟೋ ಸಮೇತ ಕಣ್ಮುಂದೆ ಬರುತ್ತದೆ. ರಾಖಿ ಎಂದರೆ ಆಕೆಯ ಸಿಲಿಕಾನ್ ಸ್ತನಗಳ ಬಗ್ಗೆ ಇರುವ ಅಂತೆಕಂತೆಕತೆಗಳು ತೆರೆದುಕೊಳ್ಳುತ್ತವೆ. ಕಡೆಗೆ ಗೂಗಲ್ಲಲ್ಲಿ ರಾಖಿ ಸಾವಂತಳದು ಒಂದೇ ಒಂದು ಡೀಸೆಂಟಾದ ಫೋಟೋ ಹೆಕ್ಕೋಣ ಎಂದರೂ ಅಲ್ಲಿ ಸಿಗುವುದು ಆಕೆಯ ಅರೆತೆರೆದೆದೆಯ ಫೋಟೋಗಳೇ. ಆದರೆ, ಆ ರಾಖಿಯಲ್ಲೊಬ್ಬಳು ರಾಕಿ ಕಟ್ಟುವ ಮನಸ್ಸುಳ್ಳ  ಸೋದರಿ ಇದ್ದಾಳೆ. ಆಕೆಗೊಂದು ಕರುಣಾಜನಕ ಇತಿಹಾಸವಿದೆ. ಅವಳು ಈ ಮಟ್ಟಕ್ಕೆ ಬಿಂದಾಸ್ ಆಗುವ ಮೊದಲು ಹಲವು ಅವಮಾನಗಳಿಗೆ ಈಡಾಗಿದ್ದಾಳೆ. ಅರೆ, ಪ್ರತಿ ಪಾಪಿಯ ಬದುಕಿನ ಹಿಂದೆಯೂ ಆತ/ ಆಕೆ ಹೀಗಾಗಲು ಪರಿಸ್ಥಿತಿಗಳೇ ಕಾರಣ ಎಂದು ಸಮರ್ಥಿಸುವ ಇತಿಹಾಸದ ಕತೆ ಮಾಮೂಲು. ಇದೇನೂ ಹೊಸತಲ್ಲ ಅನಿಸಬಹುದು. ಆದರೆ ರಾಖಿ ಸಾವಂತಳನ್ನು ಪಾಪಿಗಳ ಕೆಟಗರಿಗೆ ಸೇರಿಸುವ ಹಾಗೆಯೇ ಇಲ್ಲ. ಅಂಥದ್ದೇನೂ ಆಕೆ ಪಾಪ ಮಾಡಿಲ್ಲ. ಭಾರತೀಯ ಸಂಪ್ರದಾಯವಾದದ ಮಟ್ಟಕ್ಕೆ ಹೋಲಿಸಿದರೆ ತುಸು ಬೋಲ್ಡ್ ಇದ್ದಾಳೆ ಅನ್ನೋದು ನಿಜ. ಇರಲಿ. ಆಕೆಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡ ಕೆಲವು ಅಚ್ಚರಿಯ ಸಂಗತಿಗಳು ಇಲ್ಲಿವೆ ಗಮನಿಸಿ.
ಟೀನಾ ಅಂಬಾನಿ (ಅನಿಲ್ ಅಂಬಾನಿ ಪತ್ನಿ)ಯ ಮನೆಯಲ್ಲಿ ರಾಖಿ ಕೇವಲ ಐವತ್ತು ರುಪಾಯಿ ಕೂಲಿಗೆ ಊಟ ತಿಂಡಿ ಬಡಿಸಿದ್ದಳು. ಆಗ ಆಕೆಯ ವಯಸ್ಸು ಕೇವಲ ಹತ್ತು! ಈಗ ಪ್ರತಿಷ್ಠಿತರು ನೆಲೆಸಿರುವ ಮುಂಬೈ ಏರಿಯಾದಲ್ಲಿ ಆಕೆ ಸ್ವಂತ ಅಪಾರ್ಟ್‌ಮೆಂಟ್ ಹೊಂದಿದ್ದಾಳೆ.
ಸಂಪ್ರದಾಯಸ್ಥ ಕುಟುಂಬದ ರಾಖಿ, ಎಷ್ಟೋ ವರ್ಷಗಳ ತನಕ ಬ್ಯೂಟಿ ಪಾರ್ಲರ್, ಮಾಡರ್ನ್ ಡ್ರೆಸ್ ಒಂದನ್ನೂ ಕಣ್ಣೆತ್ತಿಯೂ ನೋಡಿರಲಿಲ್ಲವಂತೆ. ಮನೆ ಬಾಲ್ಕನಿಯಲ್ಲಿ ನಿಂತರೂ ಹಿರಿಯರು ಗದರುತ್ತಿದರಂತೆ. ಹಬ್ಬದ ದಿನ ಡ್ಯಾನ್ಸ್ ಮಾಡೋದಕ್ಕೂ ಅಂಜುವ ಪರಿಸ್ಥಿತಿ. ಮನೆಯ ಹಿರಿಯರು ದೊಡ್ಡ ಕಣ್ಣು ಬಿಟ್ಟರೆ ಹೆದರಿ ಕಂಗಾಲಾಗುತ್ತಿದ್ದ ರಾಖಿ ಮುಂದೆ ಹಟ ಹೊತ್ತು ರೆಬೆಲ್ ಆದಳು.
ಹನ್ನೊಂದನೇ ವಯಸ್ಸಲ್ಲಿ ಅಪೆಂಡಿಕ್ಸ್ ಆಪರೇಷನ್ ಮಾಡಿಸಿಕೊಂಡು ಬಂದಿದ್ದ ರಾಖಿ, ತನ್ನೊಳಗೆ ಸಂಗೀತ ಹಾಗೂ ಡ್ಯಾನ್ಸ್ ಬಗೆಗೆ ಆಗಷ್ಟೇ ನಿಗಿನಿಗಿಯಲು ಆರಂಭಿಸಿದ್ದ ಪ್ಯಾಶನ್ನನ್ನು ಹತ್ತಿಕ್ಕಿಕೊಳ್ಳಲಾಗದೆ, ದಾಂಡಿಯಾ ನೃತ್ಯ ಮಾಡಲು ಹೋಗಿದ್ದಳಂತೆ. ಕೋಪಗೊಂಡ ಅವಳಮ್ಮ ರಾಖಿಯ ಉದ್ದ ಜಡೆಯನ್ನು ಯದ್ವಾತದ್ವಾ ಕತ್ತರಿಸಿ, ಕೈ ಗಾಯ ಆಗುವಂತೆ ಹೊಡೆದಿದ್ದರಂತೆ. ಇಷ್ಟು ಸಂಪ್ರದಾಯ ಅನ್ನೋವ್ರು ದುಡ್ಡಿಗಾಗಿ ಏನೇ ಮಾಡಿದರೂ ಓಕೆ ಅನ್ನುತ್ತಿದ್ದರಂತೆ.  ಈ ಥರದ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ಈಗಲೂ ದೇವರನ್ನು ರಾಖಿ ಶಪಿಸುತ್ತಾಳೆ. ಅದೇ ಕಾರಣಕ್ಕೆ ಆಕೆ ತನ್ನ ಮರೆಯಲಾಗದ ಬಾಲ್ಯವನ್ನು  ಮರೆಯಲು ಯತ್ನಿಸುತ್ತಿದ್ದಾಳೆ. ಒಂದು ಚೀಲ ವಜ್ರ ಕೊಡ್ತೀನಿ ಅಂದ್ರೂ ನನಗೆ ನನ್ನ ಬಾಲ್ಯ ಮತ್ತೆ ಬೇಡ ಎಂಬಷ್ಟು ಆಕೆಯನ್ನು ಅವಳ ಬಾಲ್ಯ ಹಣಿದಿದೆ.
ಈಗ ರಾಖಿ ಸಾವಂತ್ ಒಬ್ಬ ಬ್ರಾಂಡ್. ಜಾಹೀರಾತು, ಫ್ಯಾಶನ್, ಹಿಂದಿ- ಮರಾಠಿ ಚಿತ್ರರಂಗ, ರಿಯಾಲಿಟಿ ಶೋ ಎಲ್ಲವೂ ಅವಳನ್ನು ಹುಡುಕಿಕೊಂಡು ಬಂದಿದೆ. ಆಕೆಯ ಭೂತಕಾಲ ಗೊತ್ತಿರದ ಮಂದಿ ಕೇವಲ ಆಕೆಯ ದೇಹಸಿರಿಯ ಬಗ್ಗೆ ಮಾತಾಡುತ್ತಾರೆ. ನೇರವಂತಿಕೆಯೇ ನನ್ನ ಆಸ್ತಿ ಎನ್ನುವ ರಾಖಿ ಇದೀಗ ಆ ಮೂಲಕವೇ ರಾಜಕೀಯದ ಹೊಸ್ತಿಲಲ್ಲಿದ್ದಾಳೆ. ಮುಂದೊಮ್ಮೆ ಆಕೆಯ ಆತ್ಮಕತೆಯೂ ಬರಲಿದೆಯಂತೆ.  ಆ ಕಾಲವನ್ನು ಕಾದು ನೋಡೋಣ.

- ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.