ಗಾಂಧಿ ಜಯಂತಿಯಂದು ಯುಪಿಐ ಬಂದ್? ವೈರಲ್ ಸುದ್ದಿ ಬಗ್ಗೆ ವರ್ತಕರ ಸಂಘ ಹೇಳಿದ್ದೇನು? No UPI Day ಗೊಂದಲಕ್ಕೆ ಇಲ್ಲಿದೆ ಸ್ಪಷ್ಟನೆ!
ಅಕ್ಟೋಬರ್ 15 ರಿಂದ ಜಾರಿಗೆ ಬರಲಿರುವ MDR ನಿಯಮದ ವಿರುದ್ದ ಅ.2ರ ಗಾಂಧಿ ಜಯಂತಿಯಂದು ದೇಶಾದ್ಯಂತ No UPI Day ಆಚರಿಸಲಾಗುವುದು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಹಿಷ್ಕರಿಸಲಾಗುವುದು ಎಂದು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ ಸ್ಪಷ್ಟಪಡಿಸಿದೆ.

ನವದೆಹಲಿ: ಅಕ್ಟೋಬರ್ 15 ರಿಂದ ಜಾರಿಗೆ ಬರಲಿರುವ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ನಿಯಮದ ವಿರುದ್ದ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದೇಶಾದ್ಯಂತ 'ನೋ ಯುಪಿಐ ಡೇ' (No UPI Day) ಆಚರಿಸಲಾಗುವುದು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಹಿಷ್ಕರಿಸಲಾಗುವುದು ಎಂದು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ವಿವಾದದ ಹಿನ್ನೆಲೆ ಏನು?
ಕೇಂದ್ರ ಸರ್ಕಾರವು ಅಕ್ಟೋಬರ್ 15 ರಿಂದ ಜಾರಿಗೆ ಬರುವಂತೆ ₹2,000 ಕ್ಕಿಂತ ಹೆಚ್ಚಿನ ಮೌಲ್ಯದ ವ್ಯಾಪಾರಿ ಯುಪಿಐ ವಹಿವಾಟುಗಳ (P2M) ಮೇಲೆ ಶೇಕಡಾ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸಲು ಪ್ರಸ್ತಾಪಿಸಿದೆ. ಗ್ರಾಹಕರಿಗೆ ಯಾವುದೇ ಶುಲ್ಕ ಇರುವುದಿಲ್ಲವಾದರೂ, ಈ ನಿರ್ಧಾರವು ತಮ್ಮ ಲಾಭದ ಗಳಿಕೆಯನ್ನು ಕುಂಠಿತಗೊಳಿಸುತ್ತದೆ ಎಂದು ಕೆಲವು ವ್ಯಾಪಾರಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಅದರಂತೆ, ಈ ಶುಲ್ಕ ಹೆಚ್ಚಳವನ್ನು ವಿರೋಧಿಸಿ ಕೆಲವು ಸ್ಥಳೀಯ ವರ್ತಕರ ಸಂಘಟನೆಗಳು ಅಕ್ಟೋಬರ್ 2 ರಂದು ಸಾಂಕೇತಿಕವಾಗಿ ಕ್ಯೂಆರ್ ಕೋಡ್‌ಗಳನ್ನು ಮುಚ್ಚಿ ಪ್ರತಿಭಟಿಸಲು ನಿರ್ಧರಿಸಿವೆ. ಈ ಸ್ಥಳೀಯ ನಿರ್ಧಾರಗಳನ್ನು ಇಡೀ ದೇಶಾದ್ಯಂತ ಯುಪಿಐ ಬಂದ್ ಆಗಲಿದೆ ಎಂಬಂತೆ ತಪ್ಪು ಮಾಹಿತಿಯೊಂದಿಗೆ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು.
ಬಹಿಷ್ಕಾರದ ಕರೆ ನೀಡಿಲ್ಲ
ಈ ಬೆನ್ನಲ್ಲೇ, ಮಾತನಾಡಿದ ಅಖಿಲ ಭಾರತ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು, CAIT ತನ್ನ ಹೆಸರಿನಲ್ಲಿ ಹರಡುತ್ತಿರುವ ವರದಿಗಳು ಸಂಪೂರ್ಣ ಸುಳ್ಳು , ಅಕ್ಟೋಬರ್ 2 ರಂದು 'ನೋ ಯುಪಿಐ ಡೇ' ಆಚರಿಸುವ ಯಾವುದೇ ಪ್ರಸ್ತಾವನೆ ಅಥವಾ ನಿರ್ಧಾರವನ್ನು ತಾವು ಅಂಗೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಜೊತೆಗೆ, ಭಾರತದ ಡಿಜಿಟಲ್ ಆರ್ಥಿಕತೆಗೆ ಯುಪಿಐ ವ್ಯವಸ್ಥೆಯು ಅತ್ಯಂತ ಪ್ರಮುಖ ಆಧಾರಸ್ತಂಭವಾಗಿದೆ. ತಾವು ಯಾವಾಗಲೂ ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬೆಂಬಲಿಸುತ್ತೇವೆ ಎಂದು CAIT ತಿಳಿಸಿದೆ.
ಏತನ್ಮಧ್ಯೆ, ಹೊಸ ಎಂಡಿಆರ್ ಶುಲ್ಕದ ಪ್ರಸ್ತಾವನೆಯನ್ನು ವಿರೋಧಿಸಿ ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ನಂತಹ ಕೆಲವು ನಿರ್ದಿಷ್ಟ ವಲಯದ ಅಥವಾ ಪ್ರಾದೇಶಿಕ ವರ್ತಕರ ಸಂಘಟನೆಗಳು ಅಕ್ಟೋಬರ್ 2 ರಂದು ಸಾಂಕೇತಿಕವಾಗಿ ಕ್ಯೂಆರ್ ಕೋಡ್‌ಗಳನ್ನು ಮುಚ್ಚಿ ಪ್ರತಿಭಟಿಸಲು ಸ್ವತಂತ್ರವಾಗಿ ನಿರ್ಧರಿಸಿವೆ. ಆದರೆ ಇದು ಇಡೀ ದೇಶದ ವರ್ತಕರ ನಿರ್ಧಾರವಲ್ಲ. ಆದ್ದರಿಂದ, ಗಾಂಧಿ ಜಯಂತಿಯಂದು ಯುಪಿಐ ಸೇವೆಗಳು ದೇಶಾದ್ಯಂತ ಸ್ಥಗಿತಗೊಳ್ಳುವುದಿಲ್ಲ ಮತ್ತು ಗ್ರಾಹಕರು ಎಂದಿನಂತೆ ಡಿಜಿಟಲ್ ಪಾವತಿಗಳನ್ನು ಮಾಡಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



