ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ 3 ರೂ ಏರಿಕೆ; 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರವು ರೂ.94.77ರಿಂದ ರೂ.97.77ಕ್ಕೆ ಏರಿಕೆಯಾದರೆ, ಡೀಸೆಲ್ ದರವು ರೂ.89.67ರಿಂದ ರೂ.90.67ಕ್ಕೆ ಹೆಚ್ಚಳವಾಗಿದೆ.

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ ರೂ.3ರಷ್ಟು ಹೆಚ್ಚಳ ಮಾಡಲಾಗಿದೆ. ನಾಲ್ಕು ವರ್ಷಗಳ ಬಳಿಕ ಸರ್ಕಾರಿ ತೈಲ ಕಂಪನಿಗಳು ಇಂಧನ ದರ ಪರಿಷ್ಕರಣೆಗೆ ಮುಂದಾಗಿರುವುದು ಜನತೆಗೆ ಮತ್ತೊಂದು ಬೆಲೆ ಶಾಕ್ ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರವು ರೂ.94.77ರಿಂದ ರೂ.97.77ಕ್ಕೆ ಏರಿಕೆಯಾದರೆ, ಡೀಸೆಲ್ ದರವು ರೂ.89.67ರಿಂದ ರೂ.90.67ಕ್ಕೆ ಹೆಚ್ಚಳವಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಂಸ್ಥೆಗಳು ಹೊಸ ದರ ಜಾರಿಗೆ ತಂದಿವೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಉಂಟು ಮಾಡಿದೆ.
ತೈಲ ಉತ್ಪಾದನೆ ಮತ್ತು ಸಾಗಣೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಭಾರತ ಆಮದು ಮಾಡುವ ಕಚ್ಚಾ ತೈಲದ ಸರಾಸರಿ ಬೆಲೆ ಫೆಬ್ರವರಿಯಲ್ಲಿ ಬ್ಯಾರೆಲ್‌ಗೆ ಸುಮಾರು 69 ಡಾಲರ್ ಇದ್ದರೆ, ಯುದ್ಧ ಆರಂಭವಾದ ಬಳಿಕ ಅದು 113–114 ಡಾಲರ್ ಮಟ್ಟಕ್ಕೇರಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರೂ ಕಳೆದ 11 ವಾರಗಳಿಂದ ದೇಶೀಯ ಇಂಧನ ದರವನ್ನು ತೈಲ ಕಂಪನಿಗಳು ಸ್ಥಿರವಾಗಿಯೇ ಉಳಿಸಿಕೊಂಡಿದ್ದವು. ಆದರೆ, ನಿರಂತರ ನಷ್ಟ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚದಿಂದ ಇದೀಗ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಮೂಲಗಳು ಹೇಳಿವೆ.
2022ರ ಏಪ್ರಿಲ್‌ನಿಂದಲೇ ದಿನನಿತ್ಯದ ಇಂಧನ ದರ ಪರಿಷ್ಕರಣೆ ಕ್ರಮವನ್ನು ಸರ್ಕಾರಿ ತೈಲ ಕಂಪನಿಗಳು ಬಹುತೇಕ ಸ್ಥಗಿತಗೊಳಿಸಿದ್ದವು. ರಷ್ಯಾ–ಉಕ್ರೇನ್ ಯುದ್ಧದ ನಂತರ ಜಾಗತಿಕ ತೈಲ ದರ ಏರಿಕೆಯಿಂದ ಕಂಪನಿಗಳು ಭಾರೀ ನಷ್ಟ ಅನುಭವಿಸಿದ್ದರೂ, ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ದರವನ್ನು ಹೆಚ್ಚಿಸಿರಲಿಲ್ಲ. ಬಳಿಕ ತೈಲ ದರ ಇಳಿಕೆಯಿಂದ ಆ ನಷ್ಟವನ್ನು ಭಾಗಶಃ ಭರಿಸಲು ಸಾಧ್ಯವಾಗಿತ್ತು.
ಇದಾದ ಬಳಿಕ 2024ರ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ ರೂ.2ರಷ್ಟು ಇಳಿಕೆ ಮಾಡಿತ್ತು. ಆದರೆ, ಮಧ್ಯಪ್ರಾಚ್ಯ ಯುದ್ಧದಿಂದ ಮತ್ತೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿರುವುದರಿಂದ ಇದೀಗ ದರ ಹೆಚ್ಚಳ ಅನಿವಾರ್ಯವಾಗಿದೆ.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚುವ ಸಾಧ್ಯತೆ ಇದ್ದು, ತರಕಾರಿ, ಹಣ್ಣು, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಖಾಸಗಿ ವಾಹನ ಸವಾರರು, ಟ್ಯಾಕ್ಸಿ ಚಾಲಕರು, ಲಾರಿ ಮಾಲೀಕರು ಮತ್ತು ಸಾರ್ವಜನಿಕ ಸಾರಿಗೆ ಕ್ಷೇತ್ರಕ್ಕೂ ಈ ದರ ಏರಿಕೆ ಹೆಚ್ಚುವರಿ ಹೊರೆ ತರಲಿದೆ.
ತಜ್ಞರ ಅಭಿಪ್ರಾಯದಂತೆ ಮಧ್ಯಪ್ರಾಚ್ಯ ಸಂಘರ್ಷ ಇನ್ನಷ್ಟು ತೀವ್ರಗೊಂಡರೆ ಜಾಗತಿಕ ಕಚ್ಚಾ ತೈಲ ಬೆಲೆ ಮತ್ತಷ್ಟು ಏರಿಕೆಯಾಗಬಹುದು. ಅದರ ಪರಿಣಾಮವಾಗಿ ಭಾರತದಲ್ಲೂ ಇಂಧನ ದರ ಮತ್ತೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



