ವಾಣಿಜ್ಯ

West Asia conflict: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 2,300 ಅಂಕ ಕುಸಿತ; 100 ಡಾಲರ್ ದಾಟಿದ ಕಚ್ಚಾತೈಲ ಬೆಲೆ

ಇದರ ನಡುವೆ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಇಂದು ತೀವ್ರ ಏರಿಕೆ ಕಂಡು, ಪ್ರತಿ ಬ್ಯಾರೆಲ್‌ಗೆ 116.5 ಡಾಲರ್ ಗಿಂತ ಹೆಚ್ಚು ಮಟ್ಟಕ್ಕೇರಿವೆ.

West Asia conflict: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 2,300 ಅಂಕ ಕುಸಿತ; 100 ಡಾಲರ್ ದಾಟಿದ ಕಚ್ಚಾತೈಲ ಬೆಲೆ
ಸೆನ್ಸೆಕ್ಸ್ ಕುಸಿತ
Published On :

ಮುಂಬೈ ಷೇರುಮಾರುಕಟ್ಟೆ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 2,300 ಅಂಕಗಳಷ್ಟು ಕುಸಿತ ಕಂಡಿತು. ಇದಕ್ಕೂ ಮೊದಲು ಮೊನ್ನೆ ಶುಕ್ರವಾರ 30 ಷೇರುಗಳ ಸೂಚ್ಯಂಕವು 1,000 ಅಂಕಗಳಿಗಿಂತ ಹೆಚ್ಚು ಇಳಿಕೆಯಾಗಿತ್ತು. ಹಾಗೆಯೇ ನಿಫ್ಟಿ 50 ಸುಮಾರು 24,450 ಅಂಕಗಳ ಬಳಿ ಸ್ಥಿರಗೊಂಡಿತ್ತು.

ಇದರ ನಡುವೆ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಇಂದು ತೀವ್ರ ಏರಿಕೆ ಕಂಡು, ಪ್ರತಿ ಬ್ಯಾರೆಲ್‌ಗೆ 116.5 ಡಾಲರ್ ಗಿಂತ ಹೆಚ್ಚು ಮಟ್ಟಕ್ಕೇರಿವೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿವೆ. ವಹಿವಾಟಿನ ವೇಳೆ ತೈಲದ ಬೆಲೆಗಳು 119.45 ಡಾಲರ್ ಪ್ರತಿ ಬ್ಯಾರೆಲ್ ಮಟ್ಟವನ್ನೂ ತಲುಪಿದ್ದು, ಇಡೀ ವಿಶ್ವದಲ್ಲಿ ಭೂರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚುತ್ತಿರುವುದನ್ನು ತೋರಿಸಿದೆ.

ಇಂದು ಏಷ್ಯಾದ ಮಾರುಕಟ್ಟೆಗಳಲ್ಲಿಯೂ ಭಾರೀ ಕುಸಿತ ಕಂಡುಬಂದಿತು. ಜಪಾನ್‌ನ ನಿಕ್ಕಿ 225 ಮತ್ತು ದಕ್ಷಿಣ ಕೊರಿಯಾದ KOSPI ಸೂಚ್ಯಂಕಗಳು ಸುಮಾರು 7 ಶೇಕಡಾ ಕುಸಿದವು. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೂರಾಜಕೀಯ ಉದ್ವಿಗ್ನತೆ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆಗಳು ತೀವ್ರವಾಗಿ ಏರಿದ ಪರಿಣಾಮ ಈ ಕುಸಿತ ಕಂಡುಬಂದಿದೆ.

ಇಂದು ಷೇರುಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಕಚ್ಚಾ ತೈಲದ ಬೆಲೆಗಳು 25 ಶೇಕಡಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರಲ್ಲಿ ಅಪಾಯದಿಂದ ದೂರ ಉಳಿಯುವ ಮನೋಭಾವವನ್ನು ಉಂಟುಮಾಡಿದೆ.

ಇಂದು ಮುಂಜಾನೆ ವಹಿವಾಟು ಆರಂಭವಾಗುತ್ತಿದ್ದಂತೆ ತೈಲದ ಬೆಲೆಗಳು ಪ್ರತಿ ಬ್ಯಾರೆಲ್‌ಗೆ ಸುಮಾರು 115 ಡಾಲರ್ ಮಟ್ಟದಲ್ಲಿ ವಹಿವಾಟಾಗುತ್ತಿದ್ದು, ದರ ಏರಿಕೆ ಮತ್ತು ಸರಬರಾಜು ವ್ಯತ್ಯಯಗಳ ಬಗ್ಗೆ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

BSE Sensex ನ 30 ಷೇರುಗಳ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ 2,345.89 ಅಂಕಗಳು ಅಥವಾ 2.97 ಶೇಕಡಾ ಕುಸಿದು 76,573.01ಕ್ಕೆ ತಲುಪಿತು. ಇದೇ ವೇಳೆ Nifty 50 ನ 50 ಷೇರುಗಳ ಸೂಚ್ಯಂಕವು 708.75 ಅಂಕಗಳು ಅಥವಾ 2.89 ಶೇಕಡಾ ಕುಸಿದು 23,741.70ಕ್ಕೆ ಇಳಿಯಿತು.

ಸೆನ್ಸೆಕ್ಸ್‌ನ ಎಲ್ಲಾ 30 ಕಂಪನಿಗಳ ಷೇರುಗಳು ಇಳಿಕೆಯಲ್ಲಿ ವಹಿವಾಟಾಗುತ್ತಿವೆ. InterGlobe Aviation ಸುಮಾರು 8 ಶೇಕಡಾ ಕುಸಿತ ಕಂಡಿತು. Tata Steel, Maruti Suzuki, State Bank of India, Eternal, Asian Paints ಮತ್ತು ICICI Bank ಕೂಡ ಪ್ರಮುಖವಾಗಿ ಕುಸಿದ ಷೇರುಗಳಾಗಿವೆ.

ಭಾರತಕ್ಕೆ ಸಂಕಷ್ಟ

ಜಾಗತಿಕ ತೈಲ ಮಾನದಂಡವಾದ Brent Crude Oil ಬೆಲೆ 23.63 ಶೇಕಡಾ ಏರಿಕೆ ಕಂಡು ಬ್ಯಾರೆಲ್‌ಗೆ USD 114.59ಕ್ಕೆ ತಲುಪಿತು. ಭಾರತದಂತಹ ದೊಡ್ಡ ತೈಲ ಆಮದು ದೇಶಗಳು ಪಶ್ಚಿಮ ಏಷ್ಯಾದ ಸಂಘರ್ಷ ದೀರ್ಘಕಾಲ ಮುಂದುವರಿದರೆ ಮತ್ತು ತೈಲದ ಬೆಲೆ ಉನ್ನತ ಮಟ್ಟದಲ್ಲೇ ಉಳಿದರೆ ಗಂಭೀರವಾಗಿ ಹೊಡೆತ ಅನುಭವಿಸಬಹುದು ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳುತ್ತಾರೆ.

ಅಮೆರಿಕದ ಮಾರುಕಟ್ಟೆಯೂ ಕಳೆದ ಶುಕ್ರವಾರ ಕುಸಿತದೊಂದಿಗೆ ವಹಿವಾಟು ಮುಗಿಸಿತು. ವಿದೇಶಿ ಸಂಸ್ಥಾತ್ಮಕ ಹೂಡಿಕೆದಾರರು (Foreign Institutional Investors) ಶುಕ್ರವಾರ 6,030.38 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು ಎಂದು ವಿನಿಮಯದ ಅಂಕಿ-ಅಂಶಗಳು ಸೂಚಿಸುತ್ತವೆ. ಅದೇ ವೇಳೆ ದೇಶೀಯ ಸಂಸ್ಥಾತ್ಮಕ ಹೂಡಿಕೆದಾರರು (Domestic Institutional Investors) ಹಿಂದಿನ ವಹಿವಾಟಿನಲ್ಲಿ 6,971.51 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.