ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದ ಹೊಸ ದರ ಜಾರಿ, ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು..?
19 ಕೆ.ಜಿ. ತೂಕದ ವಾಣಿಜ್ಯ LPG ಸಿಲಿಂಡರ್ ಬೆಲೆಯನ್ನು ರೂ.183.50 ಇಳಿಕೆ ಮಾಡಲಾಗಿದ್ದು, ಹೊಸ ದರಗಳು ಜುಲೈ 1, 2026ರಿಂದ ಜಾರಿಗೆ ಬಂದಿವೆ.

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬಳಸುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಡಾಬಾಗಳು ಹಾಗೂ ಆಹಾರ ಮತ್ತು ಪಾನೀಯ ಉದ್ಯಮಗಳಿಗೆ ಕೇಂದ್ರ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಭಾರೀ ನಿರಾಳ ನೀಡಿವೆ.
19 ಕೆ.ಜಿ. ತೂಕದ ವಾಣಿಜ್ಯ LPG ಸಿಲಿಂಡರ್ ಬೆಲೆಯನ್ನು ರೂ.183.50 ಇಳಿಕೆ ಮಾಡಲಾಗಿದ್ದು, ಹೊಸ ದರಗಳು ಜುಲೈ 1, 2026ರಿಂದ ಜಾರಿಗೆ ಬಂದಿವೆ.
ಇತ್ತೀಚಿನ ದರ ಪರಿಷ್ಕರಣೆಯ ಬಳಿಕ 19 ಕೆ.ಜಿ. ವಾಣಿಜ್ಯ LPG ಸಿಲಿಂಡರ್ ಬೆಲೆ ರೂ.3,113.50ರಿಂದ ರೂ.2,930ಕ್ಕೆ ಇಳಿಕೆಯಾಗಿದೆ. ಈ ಮೂಲಕ ಆಹಾರ ಉದ್ಯಮದಲ್ಲಿ ತೊಡಗಿರುವ ಸಾವಿರಾರು ವ್ಯಾಪಾರಿಗಳಿಗೆ ನಿರಾಳತೆ ಸಿಕ್ಕಿದೆ.
ಆದರೆ, ಈ ಬಾರಿ ಗೃಹ ಬಳಕೆಯ ಗ್ರಾಹಕರಿಗೆ ಯಾವುದೇ ಸಿಹಿಸುದ್ದಿ ಸಿಕ್ಕಿಲ್ಲ. 14.2 ಕೆ.ಜಿ. ಗೃಹ ಬಳಕೆಯ LPG ಸಿಲಿಂಡರ್ ಬೆಲೆ ರೂ.942ರಲ್ಲೇ ಮುಂದುವರಿದಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಈ ವರ್ಷದ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್-ಇರಾನ್ ಸಂಘರ್ಷದ ಬಳಿಕ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಉಂಟಾಗಿತ್ತು. ಇದರ ಬೆನ್ನಲ್ಲೇ ಇರಾನ್ ತನ್ನ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ಸಾಗುತ್ತಿದ್ದ ಕಚ್ಚಾ ತೈಲ ಮತ್ತು ಅನಿಲ ಸಾಗಣೆ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಪರಿಣಾಮವಾಗಿ ವಿಶ್ವದಾದ್ಯಂತ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಪೆಟ್ರೋಲ್, ಡೀಸೆಲ್ ಹಾಗೂ ಅನಿಲದ ಬೆಲೆಗಳು ಏರಿಕೆಯಾಗಿದ್ದವು.
ಈ ದರ ಇಳಿಕೆ ದೇಶದ ಇತರ ನಗರಗಳಲ್ಲೂ ಜಾರಿಗೆ ಬಂದಿದೆ. ಲಖನೌನಲ್ಲಿ 19 ಕೆ.ಜಿ. ವಾಣಿಜ್ಯ LPG ಸಿಲಿಂಡರ್ ಬೆಲೆ ರೂ.3,236ರಿಂದ ರೂ.3,052.50ಕ್ಕೆ ಇಳಿಕೆಯಾಗಿದೆ. ಕೋಲ್ಕತ್ತಾದಲ್ಲಿ ರೂ.3,255.50ರಿಂದ ರೂ.3,081.50ಕ್ಕೆ, ಬೆಂಗಳೂರಿನಲ್ಲಿ ರೂ.3,021.00ಕ್ಕೆ ಇಳಿದಿದೆ. ಪಾಟ್ನಾದಲ್ಲಿ ಹೊಸ ದರದಂತೆ 19 ಕೆ.ಜಿ. ಸಿಲಿಂಡರ್ ಬೆಲೆ ರೂ.3,227 ಆಗಿದೆ.
ಇದೇ ವೇಳೆ ಕೇಂದ್ರ ಸರ್ಕಾರ ಪೆಟ್ರೋಲ್ ರಫ್ತು ನಿಯಮಗಳಲ್ಲಿಯೂ ಮಹತ್ವದ ಬದಲಾವಣೆ ಮಾಡಿದೆ. ಜುಲೈ 1ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED)ವನ್ನು ಪ್ರತಿ ಲೀಟರ್‌ಗೆ ರೂ.1.50ರಿಂದ ರೂ.4ಕ್ಕೆ ಏರಿಕೆ ಮಾಡಲಾಗಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ವಾಣಿಜ್ಯ LPG ಸಿಲಿಂಡರ್ ದರವನ್ನು ಸತತವಾಗಿ ನಾಲ್ಕು ಬಾರಿ ಹೆಚ್ಚಿಸಲಾಗಿತ್ತು. ತೈಲ ಮಾರುಕಟ್ಟೆ ಕಂಪನಿಗಳು ನಷ್ಟದ ನೆಪದಲ್ಲಿ ಮಾರ್ಚ್‌ನಲ್ಲಿ ರೂ.144, ಏಪ್ರಿಲ್‌ನಲ್ಲಿ ರೂ.195.50, ಮೇ ತಿಂಗಳಲ್ಲಿ ರೂ.993 ಹಾಗೂ ಜೂನ್‌ನಲ್ಲಿ ರೂ.42 ಹೆಚ್ಚಳ ಮಾಡಿದ್ದವು.
ಹೀಗೆ ನಾಲ್ಕು ಹಂತಗಳಲ್ಲಿ ಒಟ್ಟು ರೂ.1,374.50 ದರ ಏರಿಕೆಯಾಗಿತ್ತು. ಇದೀಗ ರೂ.183.50 ಇಳಿಕೆ ಮಾಡಲಾಗಿದ್ದರೂ, ಹಿಂದಿನ ಏರಿಕೆಗೆ ಹೋಲಿಸಿದರೆ ಬೆಲೆ ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಇದೆ.
ಗೃಹ ಬಳಕೆಯ 14.2 ಕೆ.ಜಿ. LPG ಸಿಲಿಂಡರ್ ಬೆಲೆಯಲ್ಲೂ ಈ ಹಿಂದೆ ಎರಡು ಹಂತಗಳಲ್ಲಿ ಹೆಚ್ಚಳ ಮಾಡಲಾಗಿತ್ತು. ಮಾರ್ಚ್‌ನಲ್ಲಿ ರೂ.60 ಹಾಗೂ ಜೂನ್‌ನಲ್ಲಿ ರೂ.29 ಹೆಚ್ಚಳ ಮಾಡಲಾಗಿದ್ದು, ಒಟ್ಟು ರೂ.89 ಏರಿಕೆಯಾಗಿತ್ತು. ಆದರೆ ಈ ಬಾರಿ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಹೀಗಾಗಿ ವಾಣಿಜ್ಯ ಬಳಕೆದಾರರಿಗೆ ಮಾತ್ರ ಸದ್ಯಕ್ಕೆ ದರ ಇಳಿಕೆಯ ಲಾಭ ದೊರೆತಿದ್ದು, ಗೃಹ ಬಳಕೆದಾರರು ಮುಂದಿನ ದರ ಪರಿಷ್ಕರಣೆಯವರೆಗೆ ಕಾಯಬೇಕಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



