ವಾಣಿಜ್ಯ

ಅಮೆರಿಕಾ-ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ; ತೈಲ ಬೆಲೆ ಏರಿಕೆ..!

ಪಾಕಿಸ್ತಾನದಲ್ಲಿ ನಡೆದ ಸುಮಾರು 21 ಗಂಟೆಗಳ ಮಹತ್ವದ ಮಾತುಕತೆ ಯಾವುದೇ ಸ್ಪಷ್ಟ ಒಪ್ಪಂದವಿಲ್ಲದೆ ಅಂತ್ಯಗೊಂಡಿದ್ದು, ಈಗಾಗಲೇ ಜಾರಿಗೆ ಬಂದಿದ್ದ ಎರಡು ವಾರಗಳ ತಾತ್ಕಾಲಿಕ ಯುದ್ಧ ವಿರಾಮವೂ ಕುಸಿಯುವ ಭೀತಿ ಎದುರಾಗಿದೆ.

ಅಮೆರಿಕಾ-ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ; ತೈಲ ಬೆಲೆ ಏರಿಕೆ..!
ಸಂಗ್ರಹ ಚಿತ್ರ
Published On :

ಮುಂಬೈ: ಅಮೆರಿಕಾ–ಇರಾನ್ ನಡುವಿನ ಶಾಂತಿ ಮಾತುಕತೆ ವಿಫಲವಾದ ಪರಿಣಾಮ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಅದರ ನೇರ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆಗಳು ಸೋಮವಾರ ಆರಂಭಿಕ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿವೆ.

ಪಾಕಿಸ್ತಾನದಲ್ಲಿ ನಡೆದ ಸುಮಾರು 21 ಗಂಟೆಗಳ ಮಹತ್ವದ ಮಾತುಕತೆ ಯಾವುದೇ ಸ್ಪಷ್ಟ ಒಪ್ಪಂದವಿಲ್ಲದೆ ಅಂತ್ಯಗೊಂಡಿದ್ದು, ಈಗಾಗಲೇ ಜಾರಿಗೆ ಬಂದಿದ್ದ ಎರಡು ವಾರಗಳ ತಾತ್ಕಾಲಿಕ ಯುದ್ಧ ವಿರಾಮವೂ ಕುಸಿಯುವ ಭೀತಿ ಎದುರಾಗಿದೆ.

ಈ ಮಾತುಕತೆಗಳ ವಿಫಲತೆಗೆ ಅಮೆರಿಕಾ ಮತ್ತು ಇರಾನ್ ಪರಸ್ಪರ ಆರೋಪ ಮಾಡಿಕೊಳ್ಳುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಇದೇ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯಲ್ಲಿ ನೌಕಾ ತಡೆ (naval blockade) ಘೋಷಿಸಿರುವುದು ಜಾಗತಿಕ ತೈಲ ಸರಬರಾಜಿನ ಬಗ್ಗೆ ಗಂಭೀರ ಆತಂಕ ಮೂಡಿಸಿದೆ.

ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಪ್ರದೇಶದಲ್ಲಿ ಯಾವುದೇ ತಡೆ ಉಂಟಾದರೆ, ಜಗತ್ತಿನ ಬಹುತೇಕ ದೇಶಗಳಿಗೆ ತೈಲ ಪೂರೈಕೆ ವ್ಯತ್ಯಯಗೊಳ್ಳುವ ಸಾಧ್ಯತೆ ಇದೆ.

ಈ ಹಿನ್ನೆಲೆ Brent crude ಬೆಲೆ ತಕ್ಷಣವೇ 7 ಶೇಕಡಕ್ಕಿಂತ ಹೆಚ್ಚು ಏರಿಕೆಯಾಗಿ ಬ್ಯಾರೆಲ್‌ಗೆ 102 ಡಾಲರ್ ಮೀರಿದೆ. ತೈಲದ ಬೆಲೆ ಏರಿಕೆಯಿಂದ ಭಾರತಂತಹ ಆಮದು ಆಧಾರಿತ ದೇಶಗಳಿಗೆ ಹೆಚ್ಚುವರಿ ಒತ್ತಡ ಉಂಟಾಗಲಿದೆ.

ಈ ಬೆಳವಣಿಗೆಗಳ ನಡುವೆಯೇ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 1,613 ಅಂಕಗಳಷ್ಟು ಕುಸಿದು 75,937 ಮಟ್ಟಕ್ಕೆ ಇಳಿದರೆ, 50 ಷೇರುಗಳ ಎನ್ಎಸ್ಇ ನಿಫ್ಟಿ ಸುಮಾರು 495 ಅಂಕಗಳಷ್ಟು ಕುಸಿದು 23,555 ಮಟ್ಟದಲ್ಲಿ ವಹಿವಾಟು ನಡೆಸಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ನ ಎಲ್ಲಾ ಕಂಪನಿಗಳ ಷೇರುಗಳು ಕೆಂಪು ಗುರುತಿನಲ್ಲಿ ವಹಿವಾಟು ನಡೆಸಿದವು.

ವಿಶೇಷವಾಗಿ ಟೈಟಾನ್ ಕಂಪನಿ, ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್, ಎನ್‌ಟಿಪಿಸಿ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಹೆಚ್ಚು ನಷ್ಟವನ್ನು ಅನುಭವಿಸಿದವು. ಮಾರುಕಟ್ಟೆಯ ವ್ಯಾಪಕ ಕುಸಿತವು ಹೂಡಿಕೆದಾರರ ಆತಂಕವನ್ನು ಹೆಚ್ಚಿಸಿದೆ.

ಏಷ್ಯಾದ ಇತರ ಮಾರುಕಟ್ಟೆಗಳಲ್ಲಿಯೂ ಇದೇ ರೀತಿಯ ಕುಸಿತ ಕಂಡುಬಂದಿದೆ, ಕೋಸ್ಪಿ, ನಿಕ್ಕಿ 225, ಎಸ್‌ಎಸ್‌ಇ ಕಾಂಪೋಸಿಟ್ ಇಂಡೆಕ್ಸ್ ಮತ್ತು ಹ್ಯಾಂಗ್ ಸೆಂಗ್ ಇಂಡೆಕ್ಸ್ ಕೂಡ ನಷ್ಟದಲ್ಲೇ ವಹಿವಾಟು ನಡೆಸುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುತ್ತಿರುವುದನ್ನು ಸೂಚಿಸುತ್ತದೆ.

ವಾರಾಂತ್ಯದಲ್ಲಿ ಅಮೆರಿಕ-ಇರಾನ್ ಮಾತುಕತೆಗಳ ವಿಫಲತೆಯು ದೀರ್ಘಕಾಲದ ಸಂಘರ್ಷದ ಕಳವಳಗಳನ್ನು ಹೆಚ್ಚಿಸಿದ್ದು, ಇರಾನಿನ ಬಂದರುಗಳ ಮೇಲೆ ಅಮೆರಿಕದ ನೌಕಾ ದಿಗ್ಬಂಧನದ ವರದಿಗಳು ಇದನ್ನು ಮತ್ತಷ್ಟು ತೀವ್ರಗೊಳಿಸಿವೆ ಎಂದು ಲೈವ್‌ಲಾಂಗ್ ವೆಲ್ತ್‌ನ ಸಂಶೋಧನಾ ವಿಶ್ಲೇಷಕ ಮತ್ತು ಸಂಸ್ಥಾಪಕ ಹರಿಪ್ರಸಾದ್ ಕೆ ಹೇಳಿದ್ದಾರೆ.

ತೈಲದ ಬೆಲೆ ಏರಿಕೆಯಿಂದ ಭಾರತದಲ್ಲಿ ಬೆಲೆ ಏರಿಕೆ ಆತಂಕ ಎದರುಗಾದಿದ್ದು, ಇದರಿಂದ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿಗಳ ಮೇಲೆ ಒತ್ತಡ ಹೆಚ್ಚಾಗಬಹುದು. ಇಂಧನ ವೆಚ್ಚ ಹೆಚ್ಚಾದರೆ ಉತ್ಪಾದನಾ ವೆಚ್ಚ ಕೂಡ ಏರಿಕೆಯಾಗಲಿದ್ದು, ಕಂಪನಿಗಳ ಲಾಭದಾಯಕತೆಯ ಮೇಲೂ ಪರಿಣಾಮ ಬೀರುತ್ತದೆ.

ಇನ್ನೊಂದೆಡೆ, ವಿದೇಶಿ ಹೂಡಿಕೆದಾರರು (FIIs) ಕಳೆದ ಶುಕ್ರವಾರ ಷೇರುಗಳನ್ನು ಖರೀದಿಸಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅವರು ಮತ್ತೆ ಹಣ ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ. ಇದು ರೂಪಾಯಿ ಮೌಲ್ಯ ಕುಸಿತಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಒಟ್ಟಾರೆ, ಅಮೆರಿಕಾ–ಇರಾನ್ ನಡುವಿನ ಉದ್ವಿಗ್ನತೆ ದೀರ್ಘಕಾಲ ಮುಂದುವರಿದರೆ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಗಳ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇದ್ದು, ಹೂಡಿಕೆದಾರರು ತಾತ್ಕಾಲಿಕವಾಗಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.