ವಾಣಿಜ್ಯ

Oracle ಕಂಪೆನಿಯಿಂದ ಸಾವಿರಾರು ಮಂದಿ ವಜಾ; ಜಾಗತಿಕ ಅನಿಶ್ಚಿತತೆ ನಡುವೆ ಸಾಮೂಹಿಕ layoff; ಭಾರತಕ್ಕೂ ತಟ್ಟಿದ ಬಿಸಿ

ಈ ಕ್ರಮವು ಒಟ್ಟು ಸುಮಾರು 30,000 ಉದ್ಯೋಗಿಗಳ ಮೇಲೆ ಪ್ರಭಾವ ಬೀರಬಹುದಾಗಿದ್ದು, ಕಂಪೆನಿಯ ದೊಡ್ಡ ಪುನರ್ ರಚನೆ ಯೋಜನೆಯ ಭಾಗವಾಗಿದೆ. ಮುಂದಿನ ತಿಂಗಳಲ್ಲಿ ಇನ್ನೊಂದು ಹಂತದ ಉದ್ಯೋಗ ಕಡಿತ ಸಂಭವಿಸಬಹುದು ಎಂಬ ಆತಂಕದಿಂದ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.

Oracle ಕಂಪೆನಿಯಿಂದ ಸಾವಿರಾರು ಮಂದಿ ವಜಾ; ಜಾಗತಿಕ ಅನಿಶ್ಚಿತತೆ ನಡುವೆ ಸಾಮೂಹಿಕ layoff; ಭಾರತಕ್ಕೂ ತಟ್ಟಿದ ಬಿಸಿ
ಒರಾಕಲ್
Published On :

ಬೆಂಗಳೂರು: ಅಮೆರಿಕ ಮೂಲದ ಐಟಿ ದಿಗ್ಗಜ Oracle ಸಂಸ್ಥೆ ದೊಡ್ಡ ಪ್ರಮಾಣದ ಉದ್ಯೋಗ ಕಡಿತ (layoffs) ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದೀಗ ಅದು ಭಾರತಕ್ಕೂ ತಲುಪಿದೆ. ವರದಿಗಳ ಪ್ರಕಾರ, ಜಾಗತಿಕ ಮಟ್ಟದ ಉದ್ಯೋಗ ಕಡಿತದ ಭಾಗವಾಗಿ ಸುಮಾರು 2,000 ದಿಂದ 2,500 ಮಂದಿ ಉದ್ಯೋಗಿಗಳಿಗೆ ಪರಿಣಾಮ ಬೀರಿದೆ. ಕೆಲವು ವರದಿಗಳು ಈ ಸಂಖ್ಯೆ 12,000ರವರೆಗೆ ಇರಬಹುದು ಎಂದು ಹೇಳುತ್ತಿವೆ.

ಈ ಕ್ರಮವು ಒಟ್ಟು ಸುಮಾರು 30,000 ಉದ್ಯೋಗಿಗಳ ಮೇಲೆ ಪ್ರಭಾವ ಬೀರಬಹುದಾಗಿದ್ದು, ಕಂಪೆನಿಯ ದೊಡ್ಡ ಪುನರ್ ರಚನೆ ಯೋಜನೆಯ ಭಾಗವಾಗಿದೆ. ಮುಂದಿನ ತಿಂಗಳಲ್ಲಿ ಇನ್ನೊಂದು ಹಂತದ ಉದ್ಯೋಗ ಕಡಿತ ಸಂಭವಿಸಬಹುದು ಎಂಬ ಆತಂಕದಿಂದ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.

ಲೇಆಫ್ ಪ್ರಭಾವಕ್ಕೆ ಒಳಗಾಗುವ ಉದ್ಯೋಗಿಗಳಲ್ಲಿ ಕೆಲವರು, HR ವಿಭಾಗದ ಒಬ್ಬರು, ಭಾರತದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇನ್ನೊಂದು ದೊಡ್ಡ ಮಟ್ಟದ ಕಡಿತವನ್ನು ಒಂದು ತಿಂಗಳೊಳಗೆ ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಉದ್ಯೋಗ ಕಡಿತಗಳು, ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಮೂಲಸೌಕರ್ಯಗಳ ಕಡೆಗೆ ಸಂಪನ್ಮೂಲಗಳನ್ನು ವರ್ಗಾಯಿಸುವ ಸಂಸ್ಥೆಯ ಪುನರ್‌ರಚನೆಯ ಭಾಗವಾಗಿವೆ. ಕಂಪನಿ AI ಮೂಲಸೌಕರ್ಯಕ್ಕೆ ಸುಮಾರು 50 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆ ಘೋಷಿಸಿದೆ. ಇದಕ್ಕಾಗಿ 50 ಬಿಲಿಯನ್ ಡಾಲರ್ ಸಾಲವೂ ಸಂಗ್ರಹಿಸಿದೆ.

ವಿವಿಧ ತಂಡಗಳ ಉದ್ಯೋಗಿಗಳಿಗೆ ಬೆಳಗಿನ ಜಾವ, ಕೆಲವರಿಗೆ ಬೆಳಗ್ಗೆ 6 ಗಂಟೆಯಷ್ಟರಲ್ಲಿ, ಕೆಲಸದಿಂದ ತಕ್ಷಣವೇ ಬಿಡುಗಡೆ ಮಾಡಲಾಗಿದೆ ಎಂಬ ಇಮೇಲ್‌ಗಳು ಬಂದಿವೆ.

ಒಂದು ಇಮೇಲ್‌ನಲ್ಲಿ, ನಿಮ್ಮ ಹುದ್ದೆಗೆ ಸಂಬಂಧಿಸಿದ ಕಠಿಣ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಕಂಪನಿಯ ಪ್ರಸ್ತುತ ವ್ಯವಹಾರ ಅವಶ್ಯಕತೆಗಳನ್ನು ಪರಿಗಣಿಸಿ, ಸಂಘಟನಾ ಬದಲಾವಣೆಯ ಭಾಗವಾಗಿ ನಿಮ್ಮ ಹುದ್ದೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ಇಂದು ನಿಮ್ಮ ಕೊನೆಯ ಕೆಲಸದ ದಿನವಾಗಿದೆ” ಎಂದು ತಿಳಿಸಲಾಗಿದೆ.

ಮುಂದೆ, ಉದ್ಯೋಗ ಕಳೆದುಕೊಳ್ಳುವವರು ತಮ್ಮ ವೈಯಕ್ತಿಕ ಇಮೇಲ್ ವಿಳಾಸವನ್ನು ನೀಡುವಂತೆ ಸೂಚಿಸಲಾಗಿದ್ದು, ನಂತರದ ದಾಖಲೆಗಳು ಮತ್ತು ಪರಿಹಾರ ವಿವರಗಳನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಜೊತೆಗೆ ಕಂಪನಿಯ ಇಮೇಲ್ ಮತ್ತು ಫೈಲ್‌ಗಳಿಗೆ ಪ್ರವೇಶವನ್ನು ಶೀಘ್ರದಲ್ಲೇ ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಭಾರತದಲ್ಲಿ, ಲೇಆಫ್ ಗೆ ಒಳಗಾಗುವ ಉದ್ಯೋಗಿಗಳಿಗೆ ಪ್ರತಿ ಸೇವಾ ವರ್ಷದ 15 ದಿನಗಳ ವೇತನ, ಸೇವಾ ಅವಧಿಯವರೆಗೆ ಒಂದು ತಿಂಗಳ ಬಾಕಿ ವೇತನ, ರಜೆ ಹಣ, ಗ್ರ್ಯಾಚ್ಯುಟಿ (ಅನ್ವಯಿಸಿದರೆ), ನೊಟೀಸ್ ಅವಧಿ ವೇತನ ಹಾಗೂ ಸ್ವಯಂ ರಾಜೀನಾಮೆ ನೀಡುವವರಿಗೆ ಹೆಚ್ಚುವರಿ ಎರಡು ತಿಂಗಳ ವೇತನ ನೀಡಲಾಗುತ್ತಿದೆ.

ಈ ಉದ್ಯೋಗ ಕಡಿತದ ಪ್ರಮಾಣವು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. X, Reddit ಮತ್ತು LinkedIn ನಲ್ಲಿ ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಒಂದು Reddit ಪೋಸ್ಟ್‌ನಲ್ಲಿ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ 20 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಯನ್ನು ಕೇವಲ ಇಮೇಲ್ ಮೂಲಕ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಲಾಗಿದೆ.

“ನನ್ನ ತಂದೆ 20 ವರ್ಷಗಳಿಂದ Oracleನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ಫೋನ್ ಕಾಲ್ ಕೂಡ ಬಂದಿಲ್ಲ, ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಈ ಆರೋಪವನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲದಿದ್ದರೂ, ದೊಡ್ಡ ತಂತ್ರಜ್ಞಾನ ಕಂಪನಿಗಳು ಉದ್ಯೋಗ ಕಡಿತವನ್ನು ಹೇಗೆ ನಿರ್ವಹಿಸುತ್ತಿವೆ ಎಂಬ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಇನ್ನೂ ಹಲವರು ಇದೇ ರೀತಿಯ ಇಮೇಲ್‌ಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಒಬ್ಬರು, ನಾನು 29 ವರ್ಷಗಳಿಂದ ಕಂಪನಿಯಲ್ಲಿ ಇದ್ದೆ, ಇಂದು ಇಮೇಲ್ ಮೂಲಕ ಕೆಲಸ ಕಳೆದುಕೊಂಡೆ ಎಂದು ಬರೆದಿದ್ದಾರೆ.

ಈ ಬಗ್ಗೆ Oracle ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವರ್ಷವೂ ಸುಮಾರು 3,000 ಉದ್ಯೋಗಿಗಳನ್ನು ಕಡಿತಗೊಳಿಸಲಾಗಿದ್ದು, AI ಹೂಡಿಕೆಗಳ ಮೇಲೆ ಗಮನ ಕೇಂದ್ರೀಕರಿಸಲು ಈ ಕ್ರಮ ಕೈಗೊಳ್ಳಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.