India's forex reserve Record: ಭಾರತದ ವಿದೇಶಿ ಮೀಸಲು ನಿಧಿಯಲ್ಲಿ ದಾಖಲೆ ಹೆಚ್ಚಳ; 620 ಬಿಲಿಯನ್ ಡಾಲರ್ ಗೆ ಏರಿಕೆ
ಜಾಗತಿಕವಾಗಿ ಬಲಿಷ್ಠ ಆರ್ಥಿಕತೆಯತ್ತ ಮುನ್ನುಗ್ಗುತ್ತಿರುವ ಭಾರತ ಮತ್ತೊಂದು ದಾಖಲೆಗೆ ಪಾತ್ರವಾಗಿದ್ದು, ಭಾರತದ ವಿದೇಶಿ ಮೀಸಲು ನಿಧಿಯಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ.

ನವದೆಹಲಿ: ಜಾಗತಿಕವಾಗಿ ಬಲಿಷ್ಠ ಆರ್ಥಿಕತೆಯತ್ತ ಮುನ್ನುಗ್ಗುತ್ತಿರುವ ಭಾರತ ಮತ್ತೊಂದು ದಾಖಲೆಗೆ ಪಾತ್ರವಾಗಿದ್ದು, ಭಾರತದ ವಿದೇಶಿ ಮೀಸಲು ನಿಧಿಯಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ.
ಹೌದು.. ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (forex reserves) ಇನ್ನಷ್ಟು ಭರ್ತಿಯಾಗಿದ್ದು, ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್ 22ರಂದು ಅಂತ್ಯಗೊಂಡ ವಾರದಲ್ಲಿ 4.471 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಹೆಚ್ಚಳಕಂಡಿದೆ. ಇದರೊಂದಿಗೆ ಒಟ್ಟು ನಿಧಿ 620.441 ಬಿಲಿಯನ್ ಡಾಲರ್ನಷ್ಟಾಗಿದೆ.
ಡಿಸೆಂಬರ್ 22ರ ವಾರದಲ್ಲಿ ಭಾರತದ ಫಾರೆಕ್ಸ್ ನಿಧಿಯಲ್ಲಿ 4.471 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಇದರಲ್ಲಿ ಫಾರಿನ್ ಕರೆನ್ಸಿ ಆಸ್ತಿಗಳೇ 4.898 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿವೆ. ಆದರೆ, ಚಿನ್ನದ ಸಂಗ್ರಹ 101 ಬಿಲಿಯನ್ನಷ್ಟು ಕಡಿಮೆ ಆಗಿದೆ. IMFನೊಂದಿಗಿನ ಮೀಸಲು ಮೊತ್ತವೂ 129 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. 2021ರ ಅಕ್ಟೋಬರ್ನಲ್ಲಿ ಭಾರತದ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್ ಮಟ್ಟ ಮುಟ್ಟಿತ್ತು. ಅದು ಭಾರತದ ಫಾರೆಕ್ಸ್ನ ಸಾರ್ವಕಾಲಿಕ ಮಟ್ಟ. ಆ ಬಳಿಕ ರುಪಾಯಿ ಮೌಲ್ಯ ಕುಸಿತವನ್ನು ತಡೆಯಲು ಆರ್ಬಿಐ ಕೈಗೊಂಡ ವಿವಿಧ ಕ್ರಮಗಳ ಪರಿಣಾಮ ಮೀಸಲು ನಿಧಿಯಲ್ಲಿ ಕ್ರಮೇಣ ಇಳಿಕೆ ಆಗುತ್ತಾ ಬಂದಿತ್ತು. ಈಗ್ಗೆ ಕೆಲ ವಾರಗಳಿಂದ ನಿಧಿಯಲ್ಲಿ ಮತ್ತೆ ಏರಿಕೆ ಆಗುತ್ತಿದೆ ಎಂದು ಹೇಳಲಾಗಿದೆ.
ನೆರೆಯ ದೇಶಗಳ ಸ್ಥಿತಿ
ಭಾರತದ ನೆರೆಯ ದೇಶಗಳ ಪೈಕಿ ನೇಪಾಳ ಮತ್ತು ಬಾಂಗ್ಲಾದೇಶ 10ರಿಂದ 20 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಹೊಂದಿವೆ. ಪಾಕಿಸ್ತಾನದ ಬಳಿ 7ರಿಂದ 8 ಬಿಲಿಯನ್ ಡಾಲರ್ನಷ್ಟು ಮಾತ್ರ ನಿಧಿ ಇದೆ.
ಏನಿದು ಫಾರೆಕ್ಸ್ ರಿಸರ್ವ್ಸ್?
ವಿದೇಶಗಳೊಂದಿಗೆ ವ್ಯವಹಾರ ನಡೆಸಲು ಮತ್ತು ದೇಶದ ಕರೆನ್ಸಿಯನ್ನು ರಕ್ಷಿಸಲು ಬೇಕಾದ ನಿಧಿ. ಇದರಲ್ಲಿ ವಿದೇಶಿ ಕರೆನ್ಸಿಗಳು, ಚಿನ್ನ, ಎಸ್ಡಿಆರ್ ಮತ್ತು ಐಎಂಎಫ್ನಲ್ಲಿರಿಸಿದ ಕರೆನ್ಸಿ ಮೊತ್ತ ಈ ನಾಲ್ಕು ಅಂಶಗಳು ಇರುತ್ತವೆ. ಇದರಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹ ಅತಿದೊಡ್ಡ ಅಂಶ. ನಂತರದ ಸ್ಥಾನ ಚಿನ್ನದ್ದು. ಇನ್ನು, SDR ಎಂದರೆ ಸ್ಪೆಷಲ್ ಡ್ರಾಯಿಂಗ್ ರೈಟ್ಸ್. ಇದು ಆಯ್ದ ವಿದೇಶೀ ಕರೆನ್ಸಿಗಳ ಮೌಲ್ಯ. ಐಎಂಎಫ್ ರಿಸರ್ವ್ ಪೊಸಿಶನ್ ಎಂಬುದು ಐಎಂಎಫ್ನಲ್ಲಿ ಒಂದು ದೇಶವು ಒಂದಷ್ಟು ಕರೆನ್ಸಿಯನ್ನು ಇರಿಸಬೇಕು.
ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಇರುವ ದೇಶಗಳು
- ಚೀನಾ: 3,800 ಬಿಲಿಯನ್ ಡಾಲರ್ (ಡಿ. 25ಕ್ಕೆ)
- ಜಪಾನ್: 1,530 ಬಿಲಿಯನ್ ಡಾಲರ್ (ನ. 30ಕ್ಕೆ)
- ಸ್ವಿಟ್ಜರ್ಲ್ಯಾಂಡ್: 1,132 ಬಿಲಿಯನ್ ಡಾಲರ್ (ಅ. 31ಕ್ಕೆ)
- ಭಾರತ: 620 ಬಿಲಿಯನ್ ಡಾಲರ್ (ಡಿ. 22ಕ್ಕೆ)
- ರಷ್ಯಾ: 593 ಬಿಲಿಯನ್ ಡಾಲರ್ (ಡಿ. 22ಕ್ಕೆ)
- ತೈವಾನ್: 567 ಬಿಲಿಯನ್ ಡಾಲರ್ (ನವೆಂಬರ್ನಲ್ಲಿ)
- ಸೌದಿ ಅರೇಬಿಯಾ: 508 ಬಿಲಿಯನ್ ಡಾಲರ್ (ಆಗಸ್ಟ್ನಲ್ಲಿ)
- ದಕ್ಷಿಣ ಕೊರಿಯಾ: 484 ಬಿಲಿಯನ್ ಡಾಲರ್ (ಆಗಸ್ಟ್ನಲ್ಲಿ)
- ಬ್ರೆಜಿಲ್: 344 ಬಿಲಿಯನ್ ಡಾಲರ್ (ಆಗಸ್ಟ್ನಲ್ಲಿ)
- ಸಿಂಗಾಪುರ್: 337 ಬಿಲಿಯನ್ ಡಾಲರ್ (ಆಗಸ್ಟ್ 31ಕ್ಕೆ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


