ಜಿಎಸ್ ಟಿಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 42 ಸಾವಿರ ಕೋಟಿ ಸಂಗ್ರಹ!
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್ ಟಿ ಜಾರಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 42 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್ ಟಿ ಜಾರಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 42 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ವಿತ್ತೀಯ ವರ್ಷದ ಮೊದಲ ತಿಂಗಳಿನಲ್ಲೇ ಲೆಕ್ಕಪತ್ರ ಸಲ್ಲಿಕೆ ಮಾಡಿರುವವರಿಂದ ಕೇಂದ್ರ ಜಿಎಸ್‌ಟಿ, ರಾಜ್ಯ ಜಿಎಸ್‌ಟಿ ಮತ್ತು ಸಮಗ್ರ ಜಿಎಸ್‌ಟಿ ರೂಪದಲ್ಲಿ ಈ ಪ್ರಮಾಣದ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಆಗಸ್ಟ್ 25ಕ್ಕೆ ಜುಲೈ ತಿಂಗಳ ರಿಟರ್ನ್ ಸಲ್ಲಿಕೆ ಪೂರ್ಣಗೊಂಡಾಗ ತೆರಿಗೆ ಸಂಗ್ರಹದಲ್ಲಿ ಮತ್ತಷ್ಟು ಏರಿಕೆ ಕಂಡು ಬರಲಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪ್ರಸಕ್ತ ವರ್ಷ ತೆರಿಗೆ ಸಲ್ಲಿಕೆ ಮಾಡಿದವರ ಸಂಖ್ಯೆಯಲ್ಲೂ ಕೂಡ ಗಣನೀಯ ಏರಿಕೆ ಕಂಡುಬಂದಿದ್ದು, ಶೇ 90 ರಿಂದ ಶೇ 95 ರಷ್ಟು ರಿಟರ್ನ್ ಸಲ್ಲಿಕೆಯಾಗುವ ಮತ್ತು ತೆರಿಗೆ ಪಾವತಿಸುವ ನಿರೀಕ್ಷೆ ಮಾಡಲಾಗಿದೆ. ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಅಬಕಾರಿ ಸುಂಕದಿಂದ ರೂ.31,782 ಕೋಟಿ ಮತ್ತು ಸೇವಾ ತೆರಿಗೆಯಿಂದ ರೂ.29,600 ಕೋಟಿ ಸಂಗ್ರಹವಾಗಿತ್ತು ಎಂದು ವಿತ್ತ ಇಲಾಖೆಯ ವರದಿ ತಿಳಿಸಿದೆ.
ಸರಕು ಮತ್ತು ಸೇವಾ ತೆರಿಗೆಯಿಂದಾಗಿ ಕಂಪನಿಗಳ ಲಾಭಾಂಶದಲ್ಲಿ ಇಳಿಕೆ
ಇದೇ ವೇಳೆ ಜಿಎಸ್ ಟಿ ಜಾರಿಯಿಂದಾಗಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 2,108 ಕಂಪೆನಿಗಳ ಲಾಭದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಲಾಭಾಂಶದಲ್ಲಿ ಶೇ 15.7 ರಷ್ಟು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಕಂಪನಿಗಳ ಲಾಭಾಂಶ ಗಳಿಕೆ ರೂ.87,475 ಕೋಟಿಗಳಿಗೆ ಇಳಿದಿದೆ ಎನ್ನಲಾಗಿದೆ. 2016–17ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಕಂಪೆನಿಗಳ ನಿವ್ವಳ ಲಾಭ ರೂ.1.04 ಲಕ್ಷ ಕೋಟಿಗಳಷ್ಟಿತ್ತು ಎಂದು ಕೇರ್ ರೇಟಿಂಗ್ಸ್ ಏಜೆನ್ಸಿ ವರದಿಯಲ್ಲಿ ತಿಳಿಸಿದೆ.
ಜಿಎಸ್‌ಟಿ ಜಾರಿಯ ಬಗ್ಗೆ ಮೂಡಿದ್ದ ಅನಿಶ್ಚಿತತೆಯಿಂದ ಕಂಪೆನಿಗಳು ಜುಲೈ 1ಕ್ಕೂ ಮೊದಲು ತಮ್ಮಲ್ಲಿದ್ದ ದಾಸ್ತಾನನ್ನು ಖಾಲಿ ಮಾಡಲು ಮುಂದಾದವು. ಇದರಿಂದ ಲಾಭದ ಪ‍್ರಮಾಣ ಕಡಿಮೆ ಆಗುವಂತಾಯಿತು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಗ್ರಾಹಕ ಬಳಕೆ ವಸ್ತುಗಳು, ವಾಹನ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳು, ನಿರ್ಮಾಣ ಮತ್ತು ರಿಯಲ್ ರಿಯಲ್ ಎಸ್ಟೇಟ್, ಹಣಕಾಸು, ರಿಫೈನರಿ, ಕಾಗದ ಉದ್ಯಮ, ಕೃಷಿ ರಾಸಾಯನಿಕ ವಲಯಗಳ ನಿವ್ವಳ ಲಾಭದಲ್ಲಿ ಇಳಿಕೆ ಕಂಡಿದೆ. ಕಂಪೆನಿಗಳ ನಿವ್ವಳ ಮಾರಾಟ ಶೇ 9.5 ರಿಂದ ಶೇ 8.7ಕ್ಕೆ ಇಳಿಕೆ ಕಂಡಿದೆ. ನಿವ್ವಳ ಮಾರಾಟಕ್ಕೆ ಸಂಬಂಧಿಸಿದಂತೆ 40 ಉದ್ಯಮಗಳು ಸಕಾರಾತ್ಮಕ ಪ್ರಗತಿ ಸಾಧಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


