ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕ; 16 ಸ್ಥಾನ ಜಿಗಿದ ಭಾರತ
ವಿಶ್ವ ಆರ್ಥಿಕತೆಯಲ್ಲಿ ಭಾರತ ಗಮನಾರ್ಹ ಸಾಧನೆ ತೋರುತ್ತಿದ್ದು, ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕದಲ್ಲಿ ಬರೊಬ್ಬರಿ 16 ಸ್ಥಾನ ಮೇಲಕ್ಕೇರುವ ಮೂಲಕ ಭಾರತ 39ನೇ ಸ್ಥಾನಕ್ಕೇರಿದೆ.

ನವದೆಹಲಿ: ವಿಶ್ವ ಆರ್ಥಿಕತೆಯಲ್ಲಿ ಭಾರತ ಗಮನಾರ್ಹ ಸಾಧನೆ ತೋರುತ್ತಿದ್ದು, ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕದಲ್ಲಿ ಬರೊಬ್ಬರಿ 16 ಸ್ಥಾನ ಮೇಲಕ್ಕೇರುವ ಮೂಲಕ ಭಾರತ 39ನೇ ಸ್ಥಾನಕ್ಕೇರಿದೆ.
ಉತ್ತಮ ಮೂಲಸೌಕರ್ಯ ಮತ್ತು ಪ್ರಬಲ ಆರ್ಥಿಕ ಬೆಳವಣಿಗೆ ಭಾರತದ ಈ ಸಾಧನೆಗೆ ಕಾರಣವಾಗಿದ್ದು, 138 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 39ನೇ ಸ್ಥಾನ ಪಡೆದಿದೆ. ಕಳೆದೆರಡು ವರ್ಷಗಳಲ್ಲಿಯೇ ಭಾರತ ಈ ಬಾರಿ ಗರಿಷ್ಠ ಸಾಧನೆ ಮಾಡಿದ್ದು, ಒಟ್ಟು 32 ರ‍್ಯಾಂಕ್ ಗಳ ಏರಿಕೆ ಕಂಡಿದೆ. ಒಂದೆಡೆ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾನೆ ವಿರುದ್ಧದ ಹೋರಾಟದ ನಡುವೆಯೂ ಭಾರತ ವಿಶ್ವ ಆರ್ಥಿಕ ವೇದಿಕೆಪಟ್ಟಿಯಲ್ಲಿ ಏರುಗತಿಯಲ್ಲಿ ಸಾಗಿರುವುದು ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
ಸಾರ್ವಜನಿಕ ಸೇವಗಳಲ್ಲಿ ಅಭಿವೃದ್ಧಿ, ವಿದೇಶಿ ಹೂಡಿಕೆ ಹೆಚ್ಚೆಚ್ಚು ಅವಕಾಶ ಹಾಗೂ ಹಣಕಾಸು ವ್ಯವಹಾರಗಳಲ್ಲಿನ ಪಾರದರ್ಶಕತೆಯೇ ಭಾರತದ ಸ್ಥಾನ ಏರಿಕೆಯಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅಂತೆಯೇ ಭಾರತ ಹಲುವ ವಿಚಾರಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಪ್ರಮುಖವಾಗಿ ಕಾರ್ಮಿಕರ ಸಮಸ್ಯೆ, ಸಾರ್ವಜನಿಕ ಮಾರುಕಟ್ಟೆಯ ದಕ್ಷತೆ ಹಾಗೂ ಮೂಲಸೌಕರ್ಯಗಳಲ್ಲಿ ಸಮಸ್ಯೆ ಎದುರಿಸುತ್ತಿದೆ ಎಂದು ಆರ್ಥಿಕ ವೇದಿಕೆ ಅಭಿಪ್ರಾಯಪಟ್ಟಿದೆ.
ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಪಟ್ಟಿಯಲ್ಲಿ ಭಾರತ ಪ್ರಬಲ ಪೈಪೋಟಿ ನೀಡುತ್ತಿದ್ದ ರಷ್ಯಾ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಹಿಂದಿಕ್ಕಿದ್ದು, ಚೀನಾ 28ನೇ ಸ್ಥಾನಗಳಿಸಿ ಭಾರತಕ್ಕಿಂತ ಮುಂದಿದೆ. ಉಳಿದಂತೆ ಶ್ರೀಲಂಕಾ 71ನೇ ಸ್ಥಾನ, ಭೂತಾನ್ 97ನೇ ಸ್ಥಾನ, ನೇಪಾಳ 98ನೇ ಸ್ಥಾನ ಹಾಗೂ ಬಾಂಗ್ಲಾದೇಶ 106ನೇ ಸ್ಥಾನ ಪಡೆದಿದೆ.
ಕುಸಿದ ಪಾಕಿಸ್ತಾನ
ಇನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕುಸಿಯುತ್ತಿರುವ ಪಾಕಿಸ್ತಾನ ಪಟ್ಟಿಯಲ್ಲಿ 122ನೇ ಸ್ಥಾನ ಪಡೆದಿದೆ. ತಾನೇ ಪ್ರಾಯೋಜಿಸುತ್ತಿರುವ ಭಯೋತ್ಪಾದನೆ ಪಾಕಿಸ್ತಾನ ಪ್ರಗತಿಗೆ ಮುಳುವಾಗಿದ್ದು, ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಪಾಕಿಸ್ತಾನ ಅಲ್ಪ ಪ್ರಗತಿ ಸಾಧಿಸಿದೆ. ಭ್ರಷ್ಟಾಚಾರ, ಅಸ್ಥಿರ ಆಡಳಿತ, ಕ್ರಿಮಿನಲ್ ಪ್ರಕರಣಗಳ ಏರಿಕೆ, ತೆರಿಗೆ ಪಾಕಿಸ್ತಾನ ಪ್ರಗತಿಗೆ ಅಡ್ಡಗಾಲು ಹಾಕಿದೆ ಎಂದು ಆರ್ಥಿಕ ವೇದಿಕೆ ಹೇಳಿದೆ.
ಇನ್ನು ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್ ಅಗ್ರಸ್ಥಾನ ಪಡೆದಿದ್ದು, ಸಿಂಗಾಪುರ, ಅಮೆರಿಕಸ ನೆದರ್ಲೆಂಡ್ ಹಾಗೂ ಜರ್ಮನಿ ನಂತರದ ಸ್ಥಾನ ಪಡೆದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


