ವಾಣಿಜ್ಯ

ಷೇರುಪೇಟೆಗೆ ಕರಾಳ ಬುಧವಾರ, ವಹಿವಾಟಿನಲ್ಲಿ 1.84 ಲಕ್ಷ ಕೋಟಿ ರುಪಾಯಿ ನಷ್ಟ

ದೇಶೀಯ ಷೇರುಮಾರುಕಟ್ಟೆ ಕುಸಿತ ಬುಧವಾರವೂ ಮುಂದುವರೆದಿದ್ದು, ಬುಧವಾರ ಷೇರುಪೇಟೆ ವ್ಯವಹಾರ ಪಾತಳಕ್ಕೆ ಕುಸಿಯಿತು....

ಷೇರುಪೇಟೆಗೆ ಕರಾಳ ಬುಧವಾರ, ವಹಿವಾಟಿನಲ್ಲಿ 1.84 ಲಕ್ಷ ಕೋಟಿ ರುಪಾಯಿ ನಷ್ಟ
ಪಾತಾಳಕ್ಕೆ ಕುಸಿದ ಷೇರುಮಾರುಕಟ್ಟೆ (ಸಂಗ್ರಹ ಚಿತ್ರ)
Published On :

ಮುಂಬೈ: ದೇಶೀಯ ಷೇರುಮಾರುಕಟ್ಟೆ ಕುಸಿತ ಬುಧವಾರವೂ ಮುಂದುವರೆದಿದ್ದು, ಬುಧವಾರ ಷೇರುಪೇಟೆ ವ್ಯವಹಾರ ಪಾತಳಕ್ಕೆ ಕುಸಿಯಿತು.

ಚೀನಾದ ದುರ್ಬಲ ಆರ್ಥಿಕತೆ ಮತ್ತು ಕಚ್ಚಾತೈಲ ದರ ಕುಸಿತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರ ಪರಿಣಾಮ ಬೀರಿದ್ದು, ಬುಧವಾರ ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ  ಕಲ್ಲೋಲ ಸೃಷ್ಟಿಯಾಯಿತು. ದಿನದ ಆರಂಭಿಕ ವಹಿವಾಟಿನಲ್ಲೇ ಕುಸಿತಕ್ಕೊಳಗಾದ ಬಿಎಸ್‌ಇ ಸೆನ್ಸೆಕ್ಸ್ ಮಧ್ಯಾಹ್ನದ ವೇಳೆಗೆ 616 ಅಂಕ ಇಳಿಕೆ ಕಂಡು ದಿನದ ಕನಿಷ್ಠ ಮಟ್ಟ 23,864ಕ್ಕೆ  ತಲುಪಿತ್ತು. ಇದೇ ವೇಳೆ ನಿಫ್ಟಿ ಕೂಡ 188 ಅಂಶಗಳ ಕುಸಿತ ಕಂಡು 7,247ಕ್ಕೆ ತಲುಪಿತ್ತು. ಆದರೆ ದಿನದ ವಹಿವಾಟು ಮುಕ್ತಾಯವಾಗುವ ವೇಳೆ ತುಸು ಚೇತರಿಕೆ ಕಂಡಿತಾದರು, ಒಟ್ಟಾರೆ ಸೆನ್ಸೆಕ್ಸ್  417.80 ಅಂಕ ಪತನಗೊಂಡು 24,062 ಹಾಗೂ ನಿಫ್ಟಿ 125.80 ಅಂಶ ನಷ್ಟ ಅನುಭವಿಸಿ 7,309.30ಕ್ಕೆ ಅಂತ್ಯಗೊಂಡಿತು.

1.84 ಲಕ್ಷ ಕೋಟಿ ರು.ನಷ್ಟ
ಬ್ಲೂಚಿಪ್ ಪಟ್ಟಿಯಲ್ಲಿರುವ ಅದಾನಿ ಪೋರ್ಟ್ ಆಂಡ್ ಎಸ್‌ಇಜೆಡ್, ಲಾರ್ಸನ್ ಆಂಡ್ ಟ್ಯೂಬ್ರೊ, ಒಎನ್‌ಜಿಸಿ, ರಿಲಯನ್ಸ್ ಇಂಡಸ್ಟ್ರಿ, ಟಾಟಾ ಸ್ಟೀಲ್ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಶೇ. 3ರಷ್ಟು ಕುಸಿತ ಕಂಡುಬಂತು. ಅಂತೆಯೇ ಒಟ್ಟಾರೆ ವಹಿವಾಟಿನಲ್ಲಿ ಹೂಡಿಕೆದಾರರ ಒಟ್ಟು 1.84 ಲಕ್ಷ ಕೋಟಿ ರು.ನಷ್ಟು ಉಂಟಾಯಿತು.

ತಗ್ಗಿದ ಪ್ರಧಾನಿ ಮೋದಿ ಪ್ರಭಾವ!
2014 ಮೇ 26ರಂದು ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ್ದರು. ಆರ್ಥಿಕ ಅಭಿವೃದ್ಧಿಗೆ ಅವರು ಆದ್ಯತೆ ನೀಡುವ ನಿರೀಕ್ಷೆ ಹೊಂದಿದ್ದ ಕಾರಣ ಷೇರುಪೇಟೆ ದಾಖಲೆಯ  ಮಟ್ಟಕ್ಕೆ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ 2015 ಮಾರ್ಚ್‌ನಲ್ಲಿ ಸೆನ್ಸೆಕ್ಸ್ 30 ಸಾವಿರ ಗಡಿ ದಾಟಿತ್ತು. ನಿಫ್ಟಿ ಕೂಡ 9100 ಮುಟ್ಟಿತ್ತು. ಆ ಬಳಿಕ ಆರಂಭವಾದ ಕುಸಿತ ನಿಯಂತ್ರಣಕ್ಕೆ ಬರಲೇ  ಇಲ್ಲ. ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾಗ ಷೇರು ಮಾರುಕಟ್ಟೆ ಯಾವ ಮಟ್ಟದಲ್ಲಿತ್ತೊ ಈಗ ಪುನಃ ಅದೇ ಮಟ್ಟಕ್ಕೆ ಬಂದು ತಲುಪಿದೆ.

ನೆಲಕಚ್ಚಿದ ಕಚ್ಚಾತೈಲ
ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 28 ಅಮೆರಿಕನ್ ಡಾಲರ್ (1, 903 ರು.) ಗಿಂತ ಕಡಿಮೆಯಾಗುವ ಮೂಲಕ 12 ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಅಮೆರಿಕ  ಮಾರುಕಟ್ಟೆಯಲ್ಲಿ ದಿನದ ಕನಿಷ್ಠ ದರ ಪ್ರತಿ ಬ್ಯಾರಲ್‌ಗೆ 27.55 ಡಾಲರ್ ಆಗಿತ್ತು. 2003 ಸೆಪ್ಟೆಂಬರ್‌ನಲ್ಲಿ ಕಚ್ಚಾತೈಲ ಈ ಮಟ್ಟ ತಲುಪಿತ್ತು. ಕಚ್ಚಾತೈಲ ಪೂರೈಕೆಯಲ್ಲಿ ನಿರಂತರ ಏರಿಕೆ  ಕಂಡುಬರುತ್ತಿರುವ ಕಾರಣ ಮತ್ತು ಬೇಡಿಕೆಯಲ್ಲಿ ಕುಸಿತ ಕಂಡಬಂದ ಹಿನ್ನಲೆಯಲ್ಲಿ ದರ ಕುಸಿಯುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.