ವಾಣಿಜ್ಯ

28 ಸಾವಿರ ಗಡಿ ದಾಟಿದ ಚಿನ್ನ; ಒಂದೇ ದಿನ 710 ರು. ಏರಿಕೆ

ತಜ್ಞರ ನಿರೀಕ್ಷೆಯಂತೆಯೇ ಚಿನ್ನದ ದರ ಆಗಸದತ್ತ ಮುಖ ಮಾಡಿದ್ದು, ಮಂಗಳವಾರ ಒಂದೇ ದಿನದಲ್ಲಿ ಬರೋಬ್ಬರಿ 710 ರು. ಏರಿಕೆಯಾಗುವ ಮೂಲಕ ಚಿನ್ನದ ದರ 28 ಸಾವಿರ ಗಡಿ ದಾಟಿದೆ...

28 ಸಾವಿರ ಗಡಿ ದಾಟಿದ ಚಿನ್ನ; ಒಂದೇ ದಿನ 710 ರು. ಏರಿಕೆ
ಚಿನ್ನದ ದರ ಏರಿಕೆ (ಸಂಗ್ರಹ ಚಿತ್ರ)
Published On :

ನವದೆಹಲಿ: ತಜ್ಞರ ನಿರೀಕ್ಷೆಯಂತೆಯೇ ಚಿನ್ನದ ದರ ಆಗಸದತ್ತ ಮುಖ ಮಾಡಿದ್ದು, ಮಂಗಳವಾರ ಒಂದೇ ದಿನದಲ್ಲಿ ಬರೋಬ್ಬರಿ 710 ರು. ಏರಿಕೆಯಾಗುವ ಮೂಲಕ ಚಿನ್ನದ ದರ 28 ಸಾವಿರ ಗಡಿ  ದಾಟಿದೆ.

ಜಾಗತಿಕ ಮಾರುಕಟ್ಟೆಯಲ್ಲಾಗುತ್ತಿರುವ ಬೆಳವಣಿಗೆಗಳು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಖರೀದಿ ಹೆಚ್ಚಾಗಿರುವ ಕಾರಣದಿಂದ ಬೆಲೆ ಮತ್ತೆ ಗಗನಕ್ಕೇರಿದೆ. ಮಂಗಳವಾರದ ವಹಿವಾಟಿನಲ್ಲಿ ಚಿನ್ನದ  ಬೆಲೆ 10 ಗ್ರಾಂಗೆ 710 ರೂ. ಏರಿಕೆಯಾಗಿದ್ದು, 28000 ರೂ. ಗಡಿ ದಾಟಿದೆ. ಈ ಮೂಲಕ ಕಳೆದ 1 ವರ್ಷದ ಅವಧಿಯಲ್ಲಿ ಒಂದೇ ದಿನದಲ್ಲಿ ಚಿನ್ನ ಅತಿಹೆಚ್ಚು ಬೆಲೆಗೆ ವಹಿವಾಟು ನಡೆಸಿದಂತಾಗಿದೆ.  ಕಳೆದ 8 ದಿನಗಳ ಅವಧಿಯಲ್ಲೇ ಚಿನ್ನದ ಬೆಲೆ 825 ರು.ನಷ್ಟು ಏರಿಕೆಯಾಗಿತ್ತು.

ದೆಹಲಿ ಮಾರುಕಟ್ಟೆಯಲ್ಲಿ ಶೇ.99.5 ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 28,435 ರು. ಇದ್ದರೆ, ಶೇ.99.9 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 28, 585 ರು. ಆಗಿದೆ. 2015ರ ಜನವರಿ  21ರಂದು ಚಿನ್ನದ ಬೆಲೆ ಇದೇ ಹಂತ ತಲುಪಿತ್ತು. ಬೆಳ್ಳಿ ಬೆಲೆಯೂ ಮತ್ತೆ 37,000 ರೂ. ಗಡಿ ದಾಟಿದ್ದು, ಕೆಜಿಗೆ 1180 ರು.ಏರಿಕೆಯೊಂದಿಗೆ 37, 230 ರುಪಾಯಿಗೆ ಸ್ಥಿರವಾಗಿದೆ.


ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆಯಾಗಿದ್ದು, ಕಳೆದ ಜೂನ್ ನಂತರ ಇದೇ ಮೊದಲ ಬಾರಿಗೆ ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ 1200 ಡಾಲರ್ ಆಗಿದೆ. ಅಲ್ಲದೆ ಡಾಲರ್  ಎದುರು ರುಪಾಯಿ ಮೌಲ್ಯ ಕುಸಿಯುತ್ತಿದ್ದು, 67.90 ರು. ನಷ್ಟಾಗಿದೆ. ಇದರಿಂದ ಚಿನ್ನದ ಆಮದು ದುಬಾರಿಯಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಜತೆಗೆ ಭಾರತದಲ್ಲಿ ಮದುವೆ ಮತ್ತು ಹಬ್ಬಗಳ  ಸೀಸನ್ ಆರಂಭವಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಖರೀದಿ ಪ್ರಮಾಣ ಏರಿಕೆಯಾಗಿದೆ. ಆದ್ದರಿಂದಲೇ ಚಿನ್ನದ ಬೆಲೆ ಏರಿಕೆಯತ್ತ ಮುಖ ಮಾಡಿದೆ ಎಂದು ಆರ್ಥಿಕ ತಜ್ಞರು  ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.