ಕುದುರಿದ ಷೇರುಪೇಟೆ ಸೆನ್ಸೆಕ್ಸ್ 359 ಅಂಕ ಏರಿಕೆ
ಏಷ್ಯಾದಲ್ಲಿನ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ಕಂಡಿದ್ದರಿಂದ ಮತ್ತು ಸೂಚ್ಯಂಕ ಕೆಳಮಟ್ಟದಲ್ಲಿರುವುದರಿಂದ...

Published On :
ಮುಂಬೈ: ಏಷ್ಯಾದಲ್ಲಿನ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ಕಂಡಿದ್ದರಿಂದ ಮತ್ತು ಸೂಚ್ಯಂಕ ಕೆಳಮಟ್ಟದಲ್ಲಿರುವುದರಿಂದ ಹೂಡಿಕೆದಾರರು ಖರೀದಿಯಲ್ಲಿ ತೊಡಗಿದ್ದರಿಂದ ಗುರುವಾರ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಗಣನೀಯ ಏರಿಕೆ ದಾಖಲಿಸಿದವು.
ಸೆನ್ಸೆಕ್ಸ್ 359.40 ಅಂಕ ಏರಿಕೆಯೊಂದಿಗೆ 25,841.92ಕ್ಕೆ ತಲುಪಿದರೆ, ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 110.95 ಅಂಕ ಏರಿಕೆಯೊಂದಿಗೆ 7,854.90ಕ್ಕೆ ತಲುಪಿತು. ಇದರೊಂದಿಗೆ ಸೂಚ್ಯಂಕಗಳು ಎರಡು ತಿಂಗಳಲ್ಲಿಯೇ ಕನಿಷ್ಠ ಮಟ್ಟದಿಂದ ಮೇಲೇರಿದವು.
ಡಿಸೆಂಬರ್‍ನಲ್ಲಿ ಆರ್ಥಿಕ ಪ್ರಗತಿ ಆಧಾರದಲ್ಲಿ ಬಡ್ಡಿದರಗಳನ್ನು ಹೆಚ್ಚಿಸುವ ಕುರಿತು ನಿರ್ಧರಿಸಲಾಗುವುದು ಎಂದು ಅಮೆರಿಕದ ಫೆಡರಲ್ ರಿಸರ್ವ್ ಹೇಳಿದೆ. ಇದರಿಂದ ಏಷ್ಯಾ ಸೇರಿದಂತೆ ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ದಾಖಲಿಸಿದವು.
ಕೋಲ್ ಇಂಡಿಯಾದಲ್ಲಿ ಬಂಡವಾಳ ವಾಪಸಾತಿ, ರಫ್ತು ಕಂಪನಿಗಳಿಗೆ ಬಡ್ಡಿ ವಿನಾಯಿತಿ, ಕಬ್ಬು ಬೆಳೆಗಾರರಿಗೆ ಸಬ್ಸಿಡಿ ವಿತರಣೆ ಸೇರಿದಂತೆ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ನಿರ್ಧಾರಗಳನ್ನು ಕೇಂದ್ರ ಸರ್ಕಾರ ಬುಧವಾರ ಕೈಗೊಂಡಿದ್ದು ಸಹ ಹೂಡಿಕೆದಾರರಲ್ಲಿ ಉತ್ಸಾಹ ತುಂಬಿತು. ಇಂಟ್ರಾಡೇ ವಹಿವಾಟಿನಲ್ಲಿ ಡಾಲರ್ ಗೆ ಎದುರಾಗಿ ರುಪಾಯಿ ಮೌಲ್ಯ 26 ಪೈಸೆ ಏರಿಕೆ ದಾಖಲಿಸಿದ್ದು ಸಹ ಷೇರು ಮಾರುಕಟ್ಟೆ ಸೂಚ್ಯಂಕ ಏರಿಕೆಗೆ ಪೂರಕವಾಗಿತ್ತು.
ಬುಧವಾರದ ದಿನದಂತ್ಯಕ್ಕೆ ಹೋಲಿಸಿದರೆ ಸೆನ್ಸೆಕ್ಸ್ ಗಳಿಕೆಯೊಂದಿಗೆ ವಹಿವಾಟು ಆರಂಭಿಸಿತು. ಇಡೀ ದಿನ ಏರುಮುಖದಲ್ಲಿತ್ತು. ಗುರುವಾರದ ಏರಿಕೆ ಅಕ್ಟೋಬರ್ 5ರ ನಂತರದಲ್ಲಿ ಏಕದಿನ ಗರಿಷ್ಠ ಏರಿಕೆಯಾಗಿದೆ. ಆರೋಗ್ಯ ವಲಯದ ಸೂಚ್ಯಂಕ ಹೊರತುಪಡಿಸಿ, ಗ್ರಾಹಕರ ಉತ್ಪನ್ನ, ಐಟಿ ಸೇರಿದಂತೆ ಎಲ್ಲ ಸೂಚ್ಯಂಕಗಳು ಗಳಿಕೆಯೊಂದಿಗೆ ದಿನದಂತ್ಯ ಕಂಡವು.
ಬಜಾಜ್ ಆಟೋ, ವೇದಾಂತ, ಎಚ್‍ಡಿಎಫ್ಸಿ, ಇನ್ ಫೋಸಿಸ್ ಮತ್ತು ಮಾರುತಿ ಕಂಪನಿ ಷೇರುಗಳು ಹೆಚ್ಚಿನ ಗಳಿಕೆ ದಾಖಲಿಸಿದವು. ಹಾಗಿದ್ದರೂ ವಿದೇಶಿ ಫೋರ್ಟ್ಫೋಲಿಯೊ ಹೂಡಿಕೆದಾರರು ಬುಧವಾರದ ವಹಿವಾಟಿನಲ್ಲಿ ರು.768.46 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿರುವುದಾಗಿ ಬಿಎಸ್‍ಇ ಅಂಕಿಅಂಶಗಳಿಂದ ತಿಳಿದುಬಂದಿದೆ.
ದೇಶೀಯ ಹೂಡಿಕೆದಾರರು ಚೀನಾದಲ್ಲಿನ ಆರ್ಥಿಕ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ಅಲ್ಪಾವಧಿಯಲ್ಲಿ ಮಾರುಕಟ್ಟೆಗಳು ದುರ್ಬಲವಾಗಿರಲಿವೆ ಎಂಬ ನಿರೀಕ್ಷೆಗಳಿವೆ. ನಿಫ್ಟಿ 8,100ರಿಂದ 8,500ರ ನಡುವೆ ವಹಿವಾಟು ಕಾಣಬಹುದು ಎಂದು ಹಣಕಾಸು ಸಂಸ್ಥೆ ಬೊನಾಂಜ ಫೋರ್ಟ್ಫೋಲಿಯೊ ಲಿಮಿಟೆಡ್‍ನ ಅಸೋಸಿಯೇಟ್ ಫಂಡ್ ಮಾ್ಯನೇಜರ್ ಹಿರೇನ್ ದಾಖನ್ ಹೇಳಿದ್ದಾರೆ.
ಸೆನ್ಸೆಕ್ಸ್ ಗುಂಪಿನಲ್ಲಿರುವ 30 ಷೇರುಗಳ ಪೈಕಿ 26 ಗಳಿಕೆಯೊಂದಿಗೆ ವಹಿವಾಟು ಅಂತ್ಯ ಕಂಡಿತು. ಹಾಗಿದ್ದರೂ ಡಾ.ರೆಡ್ಡೀಸ್ ಗರಿಷ್ಠ ಶೇ.2.63ರಷ್ಟು ಕುಸಿತ ಕಂಡಿತು. ಸನ್ಫಾರ್ಮ ನಂತರದ ಸ್ಥಾನದಲ್ಲಿದೆ. ಇಡೀ ವಹಿವಾಟು ಸಕಾರಾತ್ಮಕವಾಗಿದ್ದು 1,785 ಷೇರುಗಳು ಏರಿಕೆ ದಾಖಲಿಸಿದರೆ, 919 ಷೇರುಗಳು ನಷ್ಟದೊಂದಿಗೆ ಅಂತ್ಯ ಕಂಡವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


