ರಿಯಾಲ್ಟಿ ಷೇರುಗಳಿಗೆ ಶುಕ್ರದೆಸೆ
ರಿಯಾಲ್ಟಿ ಕಂಪನಿ ಷೇರುಗಳಿಗೆ ಗುರುವಾರ ಶುಕ್ರದೆಸೆ ಬಂದಿತ್ತು. ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಮಸೂದೆಗೆ...

Published On :
ಮುಂಬೈ: ರಿಯಾಲ್ಟಿ ಕಂಪನಿ ಷೇರುಗಳಿಗೆ ಗುರುವಾರ ಶುಕ್ರದೆಸೆ ಬಂದಿತ್ತು. ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದರಿಂದ ದೇಶದ ರಿಯಾಲ್ಟಿ ಕಂಪನಿಗಳ ಷೇರುಗಳು ಗಣನೀಯ ಏರಿಕೆ ದಾಖಲಿಸಿದವು.
ಇದರೊಂದಿಗೆ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಆರು ದಿನಗಳ ಕುಸಿತಕ್ಕೆ ಅಂತ್ಯ ಹಾಡಿವೆ. ಏಳನೆ ದಿನ ಗುರುವಾರ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫಿ್ಟ ಗಳಿಕೆ ದಾಖಲಿಸಿದ್ದು ಮೂರು ತಿಂಗಳ ಕನಿಷ್ಠ ಹಂತದಿಂದ ಮೇಲೇರಿದವು.
ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 216.27 ಅಂಕ ಏರಿಕೆಯೊಂದಿಗೆ 25,252,32ಕ್ಕೆ ಅಂತ್ಯ ಕಂಡರೆ, ನಿಫ್ಟಿ 70.80 ಅಂಕ ಗಳಿಕೆಯೊಂದಿಗೆ 7,683.30ಕ್ಕೆ ಕೊನೆಗೊಂಡಿತು. ಮುಂದಿನ ವಾರ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಪರಿಶೀಲನೆ ಸಭೆ ಇದ್ದರೂ, ಜಿಎಸ್‍ಟಿ ಜಾರಿ ಕುರಿತಂತೆ ಸಂಸತ್ತಿನಲ್ಲಿ ಇನ್ನೂ ಖಾತರಿ ಸಿಗದಿದ್ದರೂ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಬಂಡವಾಳ ಹಿಂಪಡೆಯುತ್ತಿದ್ದರೂ ಲೆಕ್ಕಿಸದ ದೇಶೀಯ ಹೂಡಿಕೆದಾರರು ಗುರುವಾರ ಹೆಚ್ಚಿನ ಖರೀದಿಯಲ್ಲಿ ತೊಡಗಿದ್ದರು.
ಮಾರುಕಟ್ಟೆಯಲ್ಲಿ ಸ್ವಲ್ಪ ಏರಿಳಿತ ಕಂಡಿದ್ದರೂ ಬಲಿಷ್ಠ ಮತ್ತು ಪ್ರಮುಖ ಷೇರುಗಳು ಉತ್ತಮ ಖರೀದಿ ಕಂಡವು. ಕಳೆದ ಆರು ವಹಿವಾಟು ಅವಧಿಗಳಲ್ಲಿ ಷೇರು ದರಗಳು ಇಳಿಮುಖ ಕಂಡಿದ್ದರಿಂದ ಕಡಿಮೆ ದರ ಹಂತದಲ್ಲಿ ಖರೀದಿಗೆ ಹೂಡಿಕೆದಾರರು ಮುಂದಾಗಿದ್ದರೂ ಸೂಚ್ಯಂಕಗಳು ಏರಿಕೆಗೆ ಕಾರಣವಾಯಿತು.
ನವೆಂಬರ್ 19ರ ನಂತರದಲ್ಲಿ ಇದು ಗರಿಷ್ಠ ಏಕದಿನ ಗಳಿಕೆಯಾಗಿದೆ. ಏಪ್ರಿಲ್-ನವೆಂಬರ್ ಅವಧಿಯಲ್ಲಿ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಶೇ.34ರಷ್ಟು ಏರಿಕೆ ದಾಖಲಿಸಿರುವುದು ಸಹ ಷೇರು ಪೇಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಿನ ಮಾರಾಟದಲ್ಲಿ ತೊಡಗಿದ್ದರಿಂದ ಮತ್ತು ಜಿಎಸ್‍ಟಿ ಮಸೂದೆ ಇನ್ನೂ ಸಂಸತ್ತಿನ ಅನುಮೋದನೆ ಸಿಗದಿದ್ದರಿಂದ ಕಳೆದ ಆರು ವಹಿವಾಟು ಅವಧಿಗಳಲ್ಲಿ ಸೆನ್ಸೆಕ್ಸ್ 1,133.36 ಅಂಕ ಕಳೆದುಕೊಂಡಿತ್ತು.
ಯೂರೋಪ್‍ನಲ್ಲಿನ ತನ್ನ ಅಂಗಸಂಸ್ಥೆ ಸಿಲ್ವೇನಿಯಾದಲ್ಲಿನ ನಿಯಂತ್ರಣ ಪಾಲನ್ನು ಮಾರಾಟ ಮಾಡುವುದಾಗಿ ಹ್ಯಾವೆಲ್ಸ್ ಇಂಡಿಯಾ ಪ್ರಕಟಿಸಿದ್ದರಿಂದ ಆ ಕಂಪನಿ ಷೇರು ದರ ಗರಿಷ್ಠ ಶೇ.9ರಷ್ಟು ಏರಿಕೆ ದಾಖಲಿಸಿತು. ರಿಯಲ್ ಎಸ್ಟೇಟ್ ನಿಯಂತ್ರಣ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದರಿಂದ ರಿಯಾಲ್ಟಿ ಕಂಪನಿಗಳಾದ ಡಿಎಲ್‍ಎಫ್ , ಇಂಡಿಯಾಬುಲ್ಸ್ ರಿಯಲ್ ಎಸ್ಟೇಟ್, ಯೂನಿಟೆಕ್ ಮತ್ತು ಎನ್‍ಬಿಸಿಸಿ ಷೇರು ದರಗಳು ಶೇ.3.26ರವರೆಗೂ ಗಳಿಕೆ ಕಂಡವು.
ಬಿಎಸ್‍ಇ ಸಣ್ಣ ಬಂಡವಾಳ ಮತ್ತು ಮಧ್ಯಮ ಬಂಡವಾಳ ಸೂಚ್ಯಂಕಗಳು ಶೇ.1.24ರವರೆಗೂ ಮೇಲೇರಿದವು. ಹಾಗಿದ್ದರೂ ಏಷ್ಯಾ ವಲಯದ ಸೂಚ್ಯಂಕಗಳು ನಷ್ಟ ಕಂಡವು. ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿನ ನಿರಾಶಾದಾಯಕ ಬೆಳವಣಿಗೆಗಳಿಂದಾಗಿ ಯೂರೋಪ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಮೂರನೆ ದಿನ ನಕಾರಾತ್ಮಕ ವಹಿವಾಟು ಆರಂಭಿಸಿದವು. ರಿಟೇಲ್ ಮತ್ತು ತಂತ್ರಜ್ಞಾನ ಕಂಪನಿಗಳ ಷೇರುಗಳು ನಷ್ಟಕ್ಕೆ ಗುರಿಯಾದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


