ವಾಣಿಜ್ಯ

ಇ-ವಿಮೆ

ಇ-ವಿಮೆ
Published On :

ಹಳೆ ವರ್ಷ ಕಳೆದು ಹೋಗಿ ಹೊಸ ವರ್ಷ ಬಂದಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಹೊಸತನದ ಛಾಪು ಮೂಡಿಸಲು ತವಕ ಹೆಚ್ಚಾಗಿದೆ. ಹಣಕಾಸು ಕ್ಷೇತ್ರ ಕೂಡ ಹಿಂದೆ ಬಿದ್ದಿಲ್ಲ. ವಿಶೇಷವಾಗಿ ವಿಮಾ ಕ್ಷೇತ್ರದಲ್ಲಿ ಪ್ರಸಕ್ತ ವರ್ಷ ಗ್ರಾಹಕರ ಅನುಕೂಲಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ. ಮಾತ್ರವಲ್ಲದೆ ಕೆಲವೊಂದು ಕಂಪನಿಗಳ ಯೋಜನೆಗಳು ಬರೋಬ್ಬರಿಯಾಗಿ ಜ.1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿವೆ.

ಇ- ಇನ್ಶೂರೆನ್ಸ್
ಮುಂದಿನ ಹಣಕಾಸು ವರ್ಷ ಏಪ್ರಿಲ್ ಒಂದರಿಂದ (ಪ್ರತಿ ಹಣಕಾಸು ವರ್ಷ ಆರಂಭವಾಗುವುದು ಪ್ರತಿ ವರ್ಷದ ಏಪ್ರಿಲ್ 1. ಮುಕ್ತಾಯವಾಗುವುದು ಮಾ.31) ಹೊಸತಾಗಿ ವಿಮೆ ಮಾಡಿಸಿಕೊಳ್ಳುವವರಿಗೆ ವಿಮೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಇ-ಮೇಲ್ ಮೂಲಕ ಬರಲಿದೆ. ಸುಮಾರು 25 ಕೋಟಿ ವಿಮೆ ಹೊಂದಿರುವವರು 37 ಕೋಟಿ ಇ-ವಿಮೆ ಪಾಲಿಸಿಗಳನ್ನು ಇ-ಮೇಲ್‌ನಲ್ಲಿ ಹಂತಹಂತವಾಗಿ ಪಡೆಯಲಿದ್ದಾರೆ.

ಏನಿದು ವ್ಯವಸ್ಥೆ?
ವಿಮೆ ಮಳಿಗೆಯಲ್ಲಿ ವಿಮೆ ಹೊಂದಿರುವ ವ್ಯಕ್ತಿಯೊಬ್ಬ ಆನ್‌ಲೈನ್‌ನಲ್ಲಿ ಖಾತೆ ತೆರೆಯಬೇಕು. ವ್ಯಕ್ತಿಯೊಬ್ಬ ಕೇವಲ ಒಂದೇ ಒಂದು ಖಾತೆ ತೆರೆಯಲು ಅವಕಾಶವಿದೆ. ಆದರೆ ಇದರಲ್ಲಿ ಜೀವ ವಿಮೆ, ಆರೋಗ್ಯ ವಿಮೆ, ಪಿಂಚಣಿ ಮತ್ತು ಇತರ ವಿಮೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಈ ಖಾತೆಯಲ್ಲಿ ಪರಿಶೀಲಿಸಲು ಸಾಧ್ಯವಿದೆ. ಪ್ರತಿ ಇ-ಇನ್ಶೂರೆನ್ಸ್‌ಗೆ ತನ್ನದೇ ಆದ ವಿಶೇಷ ಸಂಕೇತ ಸಂಖ್ಯೆ ಇದೆ. ಮಾತ್ರವಲ್ಲದೆ ಲಾಗ್ ಇನ್ ಐಡಿ ಕೂಡ ಸಿಗುತ್ತದೆ. ಈ ಮೂಲಕ ಆನ್‌ಲೈನ್‌ನಲ್ಲಿ ವಿಮೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಪರಿಶೀಲಿಸಬಹುದು.

ಯಾಕೆ ಈ ವ್ಯವಸ್ಥೆ?
ಒಂದು ವಿಚಾರವನ್ನು ಇಲ್ಲಿ ಗಮನಿಸಬೇಕು. ಅದೇನೆಂದರೆ ಇ-ಇನ್ಶೂರೆನ್ಸ್ ಮಾಡಿಸಿಕೊಂಡರೆ ಅಂಚೆಯ ಮೂಲಕವೋ, ಕೊರಿಯರ್ ಮೂಲಕ ವಿಮೆಯ ದಾಖಲೆಗಳು ಬರುವುದಿಲ್ಲ ಎಂದು ಅರ್ಥವಲ್ಲ.
 ಕೆಲವು ವಿಮಾ ಕಂಪನಿಗಳು ಈಗಾಗಲೇ  ಇ-ಇನ್ಶೂರೆನ್ಸ್ ಅನ್ನು ಜಾರಿಗೊಳಿಸಿವೆ.
ವಿಮೆಯ ದಾಖಲೆ ಪತ್ರಗಳನ್ನು ಜೋಪಾನವಾಗಿ ಇರಿಸಿಕೊಳ್ಳುವುದರ ಜತೆಗೆ ವಿಮೆಯ ಕಂತಿನಲ್ಲಿ ಕೂಡ ಅಲ್ಪ ಪ್ರಮಾಣದಲ್ಲಿ ತಗ್ಗಬಹುದು.
ಆನ್‌ಲೈನ್‌ನಲ್ಲಿ ವಿಮೆ ಖರೀದಿಸಿದ ಸಂದರ್ಭದಲ್ಲಿ ಕೋ ಯುವರ್ ಕಸ್ಟಮರ್ (ಕೆವೈಸಿ) ಅನ್ನು ಒಂದೇ ಬಾರಿ ಕೊಟ್ಟರೆ ಸಾಕು.
ಪ್ರತಿ ಹೊಸ ವಿಮೆ ಖರೀದಿಯ ಸಂದರ್ಭದಲ್ಲೂ ಮನೆ ವಿಳಾಸ, ಆದಾಯ ದೃಢೀಕರಣಕ್ಕೆ ಪ್ರಮಾಣ ಪತ್ರಗಳನ್ನು ನೀಡಬೇಕಾದ ಅಗತ್ಯವಿಲ್ಲ.
ಆನ್‌ಲೈನ್‌ನಲ್ಲಿ ವಿಮೆ ಪತ್ರವಿದ್ದರೆ ಅಗತ್ಯ ಬಿದ್ದಾಗ ಅದರ ಪ್ರತಿಗಳನ್ನು ಪಡೆಯಲು ಅವಕಾಶ ಉಂಟು.
ಸಾಂಪ್ರದಾಯಿಕವಾಗಿ ವಿಮೆ ಪತ್ರ ನೀಡಲು ಮೂರು ವಾರಗಳ ಸಮಯ ಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಒಂದೇ ವಾರದಲ್ಲಿ ವಿಮೆ ಪತ್ರ ಸಿಗುತ್ತದೆ.

ಯಾವ ಕಂಪನಿಗಳ ಜತೆ?
ಸದ್ಯ ಭಾರತೀಯ ವಿಮಾ ಪ್ರಾಧಿಕಾರ (ಐಆರ್‌ಡಿಎ) ಎನ್‌ಎಸ್‌ಡಿಎಲ್ ಡೇಟಾ ಬೇಸ್, ಎಸ್‌ಎಚ್‌ಸಿಐಎಲ್ ಪ್ರಾಜೆಕ್ಟ್ಸ್ ಲಿ. ಸೆಂಟ್ರಲ್ ಇನ್ಶೂರೆನ್ಸ್ ರೆಪಾಸಿಟರಿ ಲಿ ಕಂಪನಿಗಳಿಗೆ ವಿಮಾ ಕೋಶಗಳಾಗಿ ವರ್ತಿಸಲು ಅವಕಾಶ ನೀಡಿದೆ.

ಅಪಾಯವಿದೆಯೇ?
ಖಾಸಗಿ ಕಂಪನಿಗಳು ನಮ್ಮ ನಿಮ್ಮೆಲ್ಲರ ವಿಮೆಗೆ ಸಂಬಂಧಿಸಿದ ಮಾಹಿತಿಯನ್ನು ತಮ್ಮಲ್ಲೇ ಹೊಂದಿರುತ್ತವೆ. ವೆಬ್‌ಸೈಟ್ ಹ್ಯಾಕ್ ಮಾಡುವವರಿಗೆ ಇಂಥ ಮಾಹಿತಿ ಸಿಕ್ಕಿದರೆ ಅಪಾಯ ತಪ್ಪಿದ್ದಲ್ಲ.
ತಾಂತ್ರಿಕ ದೋಷದಿಂದ ಮಾಹಿತಿ ಸೋರಿಕೆಯಾದರೆ ವಿಮೆ ಹೊಂದಿರುವವರಿಗೂ ತೊಂದರೆ.


500ಕ್ಕೂ ಹೆಚ್ಚು ಹೊಸ ವಿಮೆ
ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ ಸೇರಿದಂತೆ ಖಾಸಗಿ ರಂಗದ ಹಲವಾರು ವಿಮಾ ಕಂಪನಿಗಳು ಪ್ರಸಕ್ತ ವರ್ಷ 500ಕ್ಕೂ ಹೆಚ್ಚು ವಿಧದ ವಿಮೆ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿವೆ.
ಎಲ್‌ಐಸಿ 48 ಯೋಜನೆಗಳ ಜಾರಿಗೆ ಮುಂದಾಗಿದೆ. ಈ ಪೈಕಿ ಜೀವನ್ ಆನಂದ್,  ಜೀವನ್ ಮಧುರ್ ಮತ್ತು ಜೀವನ್ ಸರಳ್ ಹೊಸ ನಿಯಮಗಳಿಗೆ ಅನುಸಾರವಾಗಿ ಜಾರಿಗೊಂಡಿವೆ.

ರಿಲಯನ್ಸ್  ಲೈಫ್ ಇನ್ಶೂರೆನ್ಸ್ ಎರಡು ಡಜನ್ ಯೋಜನೆಗಳೊಂದಿಗೆ ಹೊಸ ಗ್ರಾಹಕರಿಗಾಗಿ ಕಾಯುತ್ತಿದೆ.
ಅವಿವಾ ಲೈಫ್ ಇನ್ಶೂರೆನ್ಸ್ ಈಗಾಗಲೇ 14 ವಿಮಾ ಯೋಜನೆಗಳನ್ನು ಜಾರಿ ಮಾಡಿದೆ.
ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್  ನಾಲ್ಕು ಹೊಸ ಯೋಜನೆಗಳನ್ನು ಜಾರಿಗೊಳಿಸಿದೆ.
ಎಚ್‌ಡಿಎಫ್‌ಸಿ, ಬಜಾಜ್ ಅಲಯನ್ಸ್ ಕಂಪನಿಗಳೂ ಕೂಡ ಗ್ರಾಹಕರಿಗಾಗಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ.

-ಸದಾಶಿವ ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.