ಅವರೋಹಣ

ರುಪಾಯಿ, ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿರುವುದು ಇಡೀ ಆರ್ಥಿಕ ವಲಯವನ್ನೇ ಚಿಂತೆಗೀಡುಮಾಡಿದೆ. ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಡಾಲರ್ ಎದುರು ರುಪಾಯಿ ಕುಸಿತ ನಿಲ್ಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರ್‌ಬಿಐ ಮತ್ತಷ್ಟು ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರಿಂದಾಗಿ ರುಪಾಯಿಯ ಕುಸಿತಕ್ಕೆ ಅಲ್ಪಪ್ರಮಾಣದ ತಡೆ ಸಾಧ್ಯವಾಗಲಿದೆ.
ಹಾಗಾದರೆ, ರುಪಾಯಿ ಕುಸಿತ ತಡೆಗೆ ಆರ್‌ಬಿಐ ಕೈಗೊಂಡ ಕ್ರಮ ಏನು? ಅದರಿಂದಾಗುವ ಪರಿಣಾಮಗಳ ಕುರಿತ ವಿವರ ಇಲ್ಲಿದೆ.
ಆರ್‌ಬಿಐ ಹಣದ ಮಾರುಕಟ್ಟೆ ಮೇಲೆ ಚಿತ್ತಹರಿಸಿದೆ. ಇತರ ಬ್ಯಾಂಕ್‌ಗಳು ಆರ್‌ಬಿಐನಿಂದ ನಿತ್ಯ ಪಡೆಯುವ ಹಣದ (borrowin) ಪ್ರಮಾಣ ನಿಗದಿ ಮಾಡಲಾಗಿದೆ. ಬ್ಯಾಂಕ್‌ಗಳ ಒಟ್ಟೂ ಠೇವಣಿಯ ಶೇ.1 ಅಥವಾ 75 ಸಾವಿರ ಕೋಟಿ ರು.ಗಳನ್ನು ಮಾತ್ರ ಬ್ಯಾಂಕ್‌ಗಳು ದಿನವೊಂದಕ್ಕೆ ಆರ್‌ಬಿಐನಿಂದ ಪಡೆಯಬಹುದು. ಒಂದು ವೇಳೆ ಬ್ಯಾಂಕ್‌ಗಳಿಗೆ ಇದಕ್ಕಿಂತ ಹೆಚ್ಚಿನ ಹಣದ ಅಗತ್ಯವಿದ್ದರೆ ಮಾರ್ಜಿನಲ್ ಸ್ಯಾಂಡಿಂಗ್ ಫೆಸಿಲಿಟಿ ಮೂಲಕ ಹಣ ಪಡೆಯಬಹುದು. ಆದರೆ ಇದಕ್ಕೆ ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ. ಆರ್‌ಬಿಐ ಈ ಹಣಕ್ಕೆ ಶೇ. 10.25ರಷ್ಟು ಬಡ್ಡಿ ದರ ವಿಧಿಸಿದೆ. ಮೊದಲು ಇದು ಶೇ. 8.25 ರಷ್ಟಿತ್ತು. ಇದರಿಂದಾಗಿ ವಾಹನ, ಮನೆ, ವೈಯಕ್ತಿಕ ಮತ್ತಿತರ ಸಾಲದ ಮೇಲಿನ ಬಡ್ಡಿದರ ಅಧಿಕವಾಗುವ ಸಾಧ್ಯತೆ ಹೆಚ್ಚಾಗಿದೆ. ಆರ್‌ಬಿಐ ಪರ್ಯಾಯ ಮಾರುಕಟ್ಟೆ ಮೂಲಕ 12 ಸಾವಿರ ಕೋಟಿ ರು. ಮೊತ್ತದ ಸರ್ಕಾರಿ ಬಾಂಡ್‌ಗಳನ್ನು ಮಾರುವ ನಿರ್ಧಾರ ಕೈಗೊಂಡಿದೆ.
ಮಾರ್ಜಿನಲ್ ಸ್ಯಾಂಡಿಂಗ್
ಬ್ಯಾಂಕ್‌ಗಳಿಗೆ ಆರ್‌ಬಿಐ ನಿಗದಿಗೊಳಿಸಿದ ಪ್ರಮಾಣಕ್ಕಿಂತ ಅಧಿಕ ಹಣದ ಅಗತ್ಯವಿದ್ದಾಗ ಅಥವಾ ಹಣದ ಕೊರತೆ ಎದುರಾದಾಗ ಆರ್‌ಬಿಐ ಹೆಚ್ಚಿನ ಮೊತ್ತವನ್ನು ನೀಡುತ್ತದೆ. ಇದಕ್ಕೆ ಬ್ಯಾಂಕ್‌ಗಳು ಅಧಿಕ ಮೊತ್ತದ ಬಡ್ಡಿ ಹಣ ತೆರಲು ತಯಾರಿರಬೇಕಾಗುತ್ತದೆ. ಆರ್‌ಬಿಐನಲ್ಲಿ ಬ್ಯಾಂಕ್‌ಗಳು ಠೇವಣಿ ಇಟ್ಟಿರುವ ಚಿನ್ನ, ಬಾಂಡ್ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ತಿಯ ಆಧಾರದ ಮೇಲೆ ಹೆಚ್ಚಿನ ಹಣ ನೀಡಲಾಗುತ್ತದೆ.
ಸ್ಟಾಟ್ಯುಟರಿ ಲಿಕ್ವಿಡಿಟಿ ರೇಶಿಯೋ
ಬ್ಯಾಂಕ್‌ಗಳು ಆರ್‌ಬಿಐನಲ್ಲಿ ನಿಗದಿತ ಹಣವನ್ನು ಠೇವಣಿ ಇಡುವ ಜತೆಗೆ ಪ್ರತಿ ವ್ಯವಹಾರಿಕ ದಿನದ ಅಂತ್ಯಕ್ಕೆ ನಿರ್ದಿಷ್ಟ ಪ್ರಮಾಣದ ಹಣ, ಚಿನ್ನ, ಬಾಂಡ್ ಅಥವಾ ಯಾವುದೇ ಮಾನ್ಯತೆ ಪಡೆದ ಆಸ್ತಿಯನ್ನು ಇಡಬೇಕಾಗುತ್ತದೆ. ಇದರ ಆಧಾರದ ಮೇಲೆ ಬ್ಯಾಂಕ್‌ಗಳಿಗೆ ಆರ್‌ಬಿಐ ಹೆಚ್ಚುವರಿ ಹಣ ನೀಡುತ್ತದೆ.
ರುಪಾಯಿ ಕುಸಿತ ನಿಯಂತ್ರಣ
ಮಾರ್ಜಿನಲ್ ಸ್ಯಾಂಡಿಂಗ್ ಫೆಸಿಲಿಟಿ ಮೇಲಿನ ದರ ಏರಿಕೆಯಿಂದ ರುಪಾಯಿ ಮೇಲಿನ ಒತ್ತಡ ಕೊಂಚ ತಗ್ಗಲಿದೆ. ವಿದೇಶಿ ಕರೆನ್ಸಿಗಳ ವಿನಿಮಯಕ್ಕಾಗಿ ಬ್ಯಾಂಕ್‌ಗಳು ಸಾಕಷ್ಟು ಹಣವನ್ನು ತೆಗೆದಿರಿಸುತ್ತವೆ. ಮಾರ್ಜಿನಲ್ ಸ್ಯಾಂಡಿಂಗ್ ಫೆಸಿಲಿಟಿ ಮೇಲಿನ ದರ ಹೆಚ್ಚಿದಂತೆ ಬ್ಯಾಂಕ್‌ಗಳು ಈ ಹಣವನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಕರೆನ್ಸಿಗಳ ಮೇಲೆ ಒತ್ತಡ ಕಡಿಮೆ ಆಗುತ್ತದೆ.
ಕೇಂದ್ರ ಸರ್ಕಾರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹರಸಾಹಸ ಪಡುತ್ತಿದೆ. ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆರ್ಥಿಕ ಒತ್ತಡ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ತರಕಾರಿ, ಅಕ್ಕಿ, ಗೋಧಿ ಮತ್ತಿತರ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಭಾರತದ ಸಗಟು ಮಾರಾಟ ದರ ಸೂಚ್ಯಂಕ (ಹಣ ದುಬ್ಬರ ಆಧಾರದ ಮೇಲೆ) ಜೂನ್ ಅಂತ್ಯಕ್ಕೆ ಶೇ.9.47ಕ್ಕೆ ಏರಿಕೆಯಾಗಿದೆ. ಇದು ಮೇ ಮಾಸಾಂತ್ಯಕ್ಕೆ 8.25 ಇತ್ತು. ಇದು ಸದ್ಯದಲ್ಲೇ ಎರಡಂಕಿ ಮುಟ್ಟುವ ಸಾಧ್ಯತೆ ಇರುವ ಕಾರಣ ಆರ್‌ಬಿಐ ಜು. 30ರಂದು ನಡೆಯುವ ಸಭೆಯಲ್ಲಿ ಮತ್ತಷ್ಟು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಮೇ ನಂತರ ರುಪಾಯಿ, ಡಾಲರ್ ಎದುರು ಶೇ.13ರಷ್ಟು ಕುಸಿದಿದೆ. ಇದರಿಂದ ಆಮದು ವಸ್ತುಗಳು ಹಾಗೂ ಕಚ್ಚಾ ತೈಲದ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಇದು ಇತರ ಅಗತ್ಯ ವಸ್ತುಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಹಣದುಬ್ಬರ ನಿಯಂತ್ರಣವೂ ಅಗತ್ಯ. ಚಾಲ್ತಿ ಖಾತೆಯಲ್ಲಿನ ಕೊರತೆ (ಸಿಎಡಿ) ತುಂಬಿಕೊಳ್ಳಲು, ಆರ್ಥಿಕ ಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಶ್ರಮ ಪಡುತ್ತಿದೆ. ಹಲವು ಕ್ರಮಗಳನ್ನೂ ಕೈಗೊಂಡಿದೆ ಆದರೆ ಅಲ್ಪಾವಧಿಯಲ್ಲಿ ಅವುಗಳು ತೀವ್ರ ಪರಿಣಾಮ ಬೀರಲಾರವು.
-ಗಣೇಶ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


