ವಾಹನ

ಪಂಪನಾಡಿನ ಮಹಾವೃಕ್ಷ

ಕನ್ನಡದ ಪ್ರಥಮ ರಾಜಧಾನಿಯೆಂಬ ಹಿರಿಮೆಗೆ ಪಾತ್ರವಾಗಿರುವ ಬನವಾಸಿಯು ವರದಾ ನದಿ, ಮಧುಕೇಶ್ವರ ದೇವಸ್ಥಾನ...

ಪಂಪನಾಡಿನ ಮಹಾವೃಕ್ಷ
Published On :

ಕನ್ನಡದ ಪ್ರಥಮ ರಾಜಧಾನಿಯೆಂಬ ಹಿರಿಮೆಗೆ ಪಾತ್ರವಾಗಿರುವ ಬನವಾಸಿಯು ವರದಾ ನದಿ, ಮಧುಕೇಶ್ವರ ದೇವಸ್ಥಾನ ಹಾಗೂ ಕದಂಬ ಅರಸರ ಕಾಲದ ಪಳೆಯುಳಿಕೆಗಳಿಗೆ ಮಾತ್ರ ಪ್ರಸಿದ್ಧಿಯಾಗಿಲ್ಲ. ಪರಿಸರ ಪ್ರಜ್ಞೆಯು ಜಾಗೃತವಾಗುತ್ತಿರುವ ಪ್ರಸ್ತುತ ದಿನಮಾನದಲ್ಲಿ, ಬನವಾಸಿ ಸಮೀಪದ ಬೃಹದಾಕಾರದ ವೃಕ್ಷವೊಂದು ಇಲ್ಲಿನ ಪುರಾತನ ಅವಶೇಷಗಳಷ್ಟೇ ಪ್ರಾಮುಖ್ಯತೆ ಪಡೆಯುತ್ತಿದೆ. ಅದುವೇ ಬನವಾಸಿಯಿಂದ ದಾಸನಕೊಪ್ಪ ಮಾರ್ಗದಲ್ಲಿರುವ ಜಡೆ ಎಂಬ ಗ್ರಾಮದ ಬಳಿ ಇರುವ ಪ್ರಾಚೀನ ಪಿಳಲಿ ಮರ.
ದೂರದಿಂದ ನೋಡಿದರೆ ಗದ್ದೆಯ ನಡುವಿರುವ ಹಚ್ಚಹಸಿರು ಗುಡ್ಡ, ಒಳಹೊಕ್ಕರೆ ವೃಕ್ಷ ಸಮೂಹದ ದಟ್ಟ ನಿತ್ಯಹರಿದ್ವರ್ಣ ಕಾಡು ಎಂಬಂತಹ ವಿಶಿಷ್ಟ ಅನುಭೂತಿ ನೀಡುವ ಬಲು ಅಪರೂಪದ ಮರವಿದು. ಸಸ್ಯಶಾಸ್ತ್ರಜ್ಞರು ಹಾಗೂ ಅರಣ್ಯಾಧಿಕಾರಿಗಳ ಪ್ರಕಾರ, ಈ ಮರವು ಸರಿಸುಮಾರು 300 ವರ್ಷಕ್ಕೂ ಪ್ರಾಚೀನವಾದುದು. ವೈಜ್ಞಾನಿಕವಾಗಿ  ಫೈಕಸ್ ಜಾತಿಗೆ ಸೇರಿದ ವೃಕ್ಷ. ಸ್ಥಳೀಯರು 'ಪಿಳಲಿ' ಎಂದು ಕರೆಯುತ್ತಾರೆ. ಈ ಬೃಹತ್ ವೃಕ್ಷ ಸುಮಾರು 6 ಮೀಟರ್ ಎತ್ತರವಾಗಿದ್ದು, 2 ಎಕರೆಗಳಷ್ಟು ಜಾಗ ಆವರಿಸಿಕೊಂಡಿದೆ.
ಭತ್ತ ಬೆಳೆಯುವ ಗದ್ದೆಯ ನಡುವೆ ಇರುವ ಏಕೈಕ ವೃಕ್ಷ ಇದಾಗಿದ್ದರೂ ಕಡಿಯದೇ ಸಂರಕ್ಷಿಸಲಾಗಿದೆ. ಅದಕ್ಕೆ ಕಾರಣ ಇದೆ ಎನ್ನುವುದು ಗ್ರಾಮಸ್ಥರು ಮಾತು. ಅದೆಂದರೆ- ಹಲವು ವರ್ಷ ಹಿಂದೆ ಭತ್ತದ ಬೆಳೆಗೆ ತೊಂದರೆಯಾಗುತ್ತಿದ್ದ ಕಾರಣದಿಂದ ಈ ಮರದ ಚಿಕ್ಕ ಟೊಂಗೆಯೊಂದನ್ನು ಕಡಿಯಲಾಯಿತು. ಆಗ ಕಾಕತಾಳೀಯವಾಗಿ ಸ್ಥಳೀಯ ರೈತರೊಬ್ಬರಿಗೆ ಸೇರಿದ ನೂರಾರು ಕುರಿಗಳು ಅನಾಮಿಕ ರೋಗಕ್ಕೆ ತುತ್ತಾಗಿ ಸತ್ತುಹೋದವು. ಇದರಿಂದ ಭೀತಿಗೊಂಡ ಸ್ಥಳೀಯರು ಈ ಮರವನ್ನು ಕತ್ತರಿಸುವ ದುಸ್ಸಾಹಸಕ್ಕೆ ಕೈ ಹಾಕಲೇ ಇಲ್ಲ. ಹೀಗಾಗಿ ದಿನದಿಂದ ದಿನಕ್ಕೆ ತನ್ನ ಗಾತ್ರ ವಿಸ್ತರಿಸಿಕೊಳ್ಳುತ್ತ, ಆಕೃತಿಯನ್ನು ಬದಲಿಸಿಕೊಳ್ಳುತ್ತಿದೆ. ಈ ಮರದ ಬಿದ್ದುಹೋಗಿರುವ ಒಣ ಟೊಂಗೆಯನ್ನೂ ಜನರು ಬಳಸದಿರುವದು ವಿಶೇಷವಾಗಿದೆ. ಕಾರಣವೇನೇ ಇರಲಿ, ನಂಬಿಕೆಯ ನೆಪದಲ್ಲಿ ವೃಕ್ಷರಕ್ಷೆಯಾಗುತ್ತಿರುವದು ಶ್ಲಾಘನೀಯ.
ಈ ಮರವನ್ನು ಪೂರ್ಣವಾಗಿ ಸುತ್ತಿ ಅವಲೋಕಿಸಲು ಕನಿಷ್ಠವೆಂದರೂ ಅರ್ಧಘಂಟೆ ಬೇಕು. ದಟ್ಟಾರಣ್ಯದಂತಿರುವ ಪಿಳಲಿಮರದ ಅಡಿಯಲ್ಲಂತೂ ಸದಾಕಾಲವೂ ಸೂರ್ಯರಶ್ಮಿಯು ಭೂಮಿಯನ್ನು ಸ್ಪರ್ಶಿಸುವುದಿಲ್ಲ. ಜೊತೆಯಲ್ಲಿ ಈ ಮರವು ಬಿಸಿಲು-ಮಳೆ-ಗಾಳಿಗಳಿಂದ ರೈತರಿಗಷ್ಟೇ ಅಲ್ಲದೆ, ಪ್ರಾಣಿಗಳಿಗೂ ರಕ್ಷಣೆ ಒದಗಿಸುತ್ತದೆ. ಅನೇಕ ಪಕ್ಷಿಗಳಿಗೆ, ಕ್ರಿಮಿ-ಕೀಟಗಳಿಗೆ ಆಶ್ರಯಧಾಮವಾಗಿರುವ ಮರವು ಒಂದರ್ಥದಲ್ಲಿ ಜೀವವೈವಿಧ್ಯತೆಯ ತಾಣವೂ ಹೌದು. ವಿವಿಧ ಬಗೆಯ ಅಪರೂಪದ ಪಕ್ಷಿಗಳು, ಬಾವಲಿಗಳು, ಹಾವುಗಳು, ಹಲ್ಲಿಗಳು, ಮಿಡತೆಗಳು ಇಲ್ಲಿ ವಾಸಿಸುತ್ತಿದ್ದು ವಿಶಿಷ್ಟವಾದ ಆಹಾರ ಸರಪಳಿ ಮತ್ತು ಆಹಾರ ಜಾಲ ರೂಪಿಸಿಕೊಂಡಿವೆ. ಇಂತಹ ಅತ್ಯಪರೂಪದ ಮರವನ್ನು ಪಶ್ಚಿಮಘಟ್ಟ ಕಾರ್ಯಪಡೆಯ ಶಿಫಾರಸ್ಸಿನಂತೆ ಪರಿಸರ ಇಲಾಖೆಯು 'ಜೀವವೈವಿಧ್ಯತಾ ಪರಂಪರೆಯ ಮಹಾವೃಕ್ಷ' ಎಂದು ಘೋಷಿಸಿದೆ.

-ಚಿತ್ರ-ಲೇಖನ: ಪ್ರೊ. ಶಿವಾನಂದ ಎಸ್. ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.