ಕೊನೆಯ ಕಾರ್ತಿಕ ಸೋಮವಾರದ ಕಡಲೆಕಾಯಿ ಪರಿಷೆ
ದೇವರ ಆರಾಧನೆಯ ನೆಪದಲ್ಲಿ ಸಾಂಸ್ಕೃತಿಕ ಉತ್ಸವಗಳು, ಅಥವಾ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುವ ಮೂಲಕ ದೈವದ ಆರಾಧನೆ ಒಂದಕ್ಕೊಂದು ಬೆಸೆದುಕೊಂಡಿರುವುದು ಭಾರತೀಯ ಸಂಸ್ಕೃತಿಯ ವೈಶಿಷ್ಠ್ಯ.

Published On :
ದೇವರ ಆರಾಧನೆಯ ನೆಪದಲ್ಲಿ ಸಾಂಸ್ಕೃತಿಕ ಉತ್ಸವಗಳು, ಅಥವಾ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುವ ಮೂಲಕ ದೈವದ ಆರಾಧನೆ ಒಂದಕ್ಕೊಂದು ಬೆಸೆದುಕೊಂಡಿರುವುದು ಭಾರತೀಯ ಸಂಸ್ಕೃತಿಯ ವೈಶಿಷ್ಠ್ಯ. ಅಂತಹ ವೈಶಿಷ್ಟ್ಯಗಳಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಕಡಲೆಕಾಯಿ ಪರಿಷೆ ಸಹ ಒಂದು.
ಕಡಲೆಕಾಯಿ ಪರಿಷೆ ಎಂದರೆ ಅದು ಸಾಂಸ್ಕೃತಿಕ ಉತ್ಸವ, ಆಧ್ಯಾತ್ಮ, ಆರಾಧನೆ ಎಲ್ಲವೂ ಒಂದೆಡೆ ಇರುವ ಬೃಹತ್ ಸಮಾರಂಭ. ಕಡಲೆಕಾಯಿ ಪ್ರಿಯರಿಗೆ ವಿವಿಧ ರೀತಿಯ ಕಡಲೆಕಾಯಿ ಖರೀದಿಸಲು ಪರಿಷೆ ಉತ್ತಮ ಅವಕಾಶವಾದರೆ, ದೇವಾಲಯನ್ನು ನೋಡಲು ಬರುವವರಿಗೆ ಪರಿಷೆ ಸಂದರ್ಭದಲ್ಲಿ ದೊಡ್ಡ ಬಸವಣ್ಣನ ದರ್ಶನ ಮಾಡುವ ಕಾತುರ. ಕಾಂಕ್ರಿಟ್ ಕಾಡಾಗಿರುವ ಬೆಂಗಳೂರು ನಗರದಲ್ಲಿ ವರ್ಷಕ್ಕೆ ಒಮ್ಮೆಯಾದರೂ ಭಾರತದ ಸಂಸ್ಕೃತಿಯ ಉತ್ಸವ ಜಾತ್ರೆಯನ್ನು ನೆನಪಿಸುವ ಇತಿಹಾಸ ಪ್ರಸಿದ್ಧ ಕಾರ್ಯಕ್ರಮ 600 ವರ್ಷಗಳಿಂದ ನಡೆಯುತ್ತಿದೆ.
ಇಂದು ನಾವು ನೋಡುತ್ತಿರುವ ಬಸವನ ಗುಡಿಯ ಸುತ್ತಮುತ್ತಲ ಪ್ರದೇಶ ಹಿಂದೊಮ್ಮೆ ಹಳ್ಳಿಗಳಾಗಿದ್ದವು. ದೊಡ್ಡ ಬಸವಣ್ಣನ ದೇವಾಲಯದ ಹಿಂದೆ ಸುಂಕೇನಹಳ್ಳಿ, ಗವೀಪುರ, ಹೊಸಕೆರೆಹಳ್ಳಿ, ನಾಗಸಂದ್ರ, ಮಾವಳ್ಳಿ ಮುಂತಾದ ಪ್ರದೇಶಗಳು ಮೊದಲು ಹಳ್ಳಿಗಳಾಗಿದ್ದರಿಂದ ಅಲ್ಲಿ ರೈತರು ಕಡಲೆಕಾಯಿಯನ್ನು ಬೆಳೆಯುತ್ತಿದ್ದರು. ಬಸವಣ್ಣ ರೈತರು ಬೆಳೆಯುತ್ತಿದ್ದ ಬೆಳೆಗಳನ್ನು ಗದ್ದೆಗೆ ನುಗ್ಗಿ ತಿಂದುಹಾಕುತಿದ್ದ. ಇದರಿಂದ ಬೇಸತ್ತ ರೈತರು ಒಂದು ರಾತ್ರಿ ಓಡಿಸಿಕೊಂಡು ಬಂದರು, ಬೆದರಿದ ಬಸವಣ್ಣ, ಬಸವನಗುಡಿ ಬಳಿಯ ಗುಹೆಯಲ್ಲಿ ಸೇರಿತು. ಆದರೆ ಜನರಿಗೆ ಅದನ್ನು ನೋಡುತ್ತಿದ್ದಂತೆ, ದೈವೀಕ ಶಕ್ತಿಯನ್ನು ಹೊಂದಿದ ನಂದಿಯ ಪ್ರತಿರೂಪವೆಂಬ ಭಾವನೆ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಭಯಗೊಂಡ ರೈತರು ನಂದಿಯ ಪ್ರತಿರೂಪದಂತೆ ಕಂಡ ಬಸವಣ್ಣನಿಗೆ ಗುಡಿ ನಿರ್ಮಿಸಿ ತಾವೇ ಆಹಾರ ನೀಡುವುದಾಗಿ ಪ್ರಾರ್ಥಿಸಿದರಂತೆ. ಈ ಘಟನೆಯಾದ ಬಳಿಕ ಗದ್ದೆಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುತ್ತಿದ್ದ ಬಸವಣ್ಣ ಗುಹೆಯಲ್ಲಿ ಐಕ್ಯನಾದ ಎಂಬ ಐತಿಹ್ಯವೂ ಇದೆ. ಈ ಘಟನೆ ನಡೆದ ಬಳಿಕವೇ ಕಡಲೆಕಾಯಿ ಜಾತ್ರೆ ಪ್ರಾರಂಭವಾಯಿತು ಎಂಬುದು ನಂಬಿಕೆ. ಅಂದಿನಿಂದ ಈ ಜಾತ್ರೆಯಲ್ಲಿ ಪಾಲ್ಗೊಂಡು ಕಡಲೆ ಬೀಜಗಳನ್ನು ತಿಂದರೆ ಬಸವಣ್ಣ ತೃಪ್ತನಾಗುತ್ತಾನೆ ಎಂಬುದು ಇಂದಿಗೂ ಕೆಲವರ ನಂಬಿಕೆಯಾಗಿದೆ.
ಇನ್ನು ಗುಡಿಯೊಳಗೆ ಐಕ್ಯವಾದ ಬಸವಣ್ಣನ ಬಗ್ಗೆ ಮತ್ತೊಂದು ಸ್ವಾರಸ್ಯಕರ ಕಥೆಯೂ ಇದೆ ಅದೇನೆಂದರೆ ಐಕ್ಯನಾದ ಬಸವ ಅಲ್ಲೇ ಕಲ್ಲಾಗಿ ಹಾಗೆಯೇ ಬೆಳೆಯತೊಡಗಿದ. ಇನ್ನೂ ಬೆಳೆಯುತ್ತಾ ಹೋದರೆ ಪೂಜಿಸಲು ಕಷ್ಟವಾಗುವುದೆಂದು ಸ್ಥಳೀಯರು ಬಸವಣ್ಣನ ತಲೆಯ ಮೇಲೆ ಒಂದು ಮೊಳೆ ಹೊಡೆಯಲಾಯಿತಂತೆ ಅಂದಿನಿಂದ ಬಸವಣ್ಣನ ಬೆಳವಣಿಗೆ ನಿಂತಿತಂತೆ. 15ಅಡಿ ಎತ್ತರ 20ಅಡಿ ಉದ್ದದ ಈ ಬಸವಣ್ಣನನ್ನು ಸಾಕ್ಷಾತ್ ಪರಮೇಶ್ವರನ ವಾಹನ ನಂದಿ ಎಂದೇ ಭಾವಿಸಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಗ್ರಾಮಸ್ಥರು ನಿರ್ಮಿಸಿದ್ದ ಚಿಕ್ಕ ಗುಡಿಯೊಂದನ್ನು ನಂತರದ ವರ್ಷಗಳಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ದಕ್ಷಿಣ ಶೈಲಿಯ ಈಗಿರುವ ದೇವಾಲಯವನ್ನು ಕಟ್ಟಿಸಿದರು.
ಅಕ್ಕ-ಪಕ್ಕದ ಊರುಗಳಿಂದ ಬಂದ ರೈತರು ತಾವು ಬೆಳೆದ ಕಡಲೆ ಬೀಜಗಳನ್ನು ಇಲ್ಲಿಗೆ ಹೊತ್ತು ತರುತ್ತಾರೆ. ಹೀಗೆ ತಂದ ಕಡಲೆಕಾಯಿಯನ್ನು ಮೊದಲು ಬಸವಣ್ಣನಿಗೆ ಒಪ್ಪಿಸಿ ನಂತರ ವ್ಯಾಪಾರವನ್ನು ಆರಂಭಿಸುವುದು ಸಂಪ್ರದಾಯ. ಇಲ್ಲಿಗೆ ಬರುವ ಭಕ್ತರೂ ಕೂಡ ಕಡಲೆಕಾಯಿ ಖರೀದಿಸಿ ಬಸವನಿಗೆ ಅರ್ಪಿಸುತ್ತಾರೆ. ನ.28 ಈ ವರ್ಷದ ಕೊನೆಯ ಕಾರ್ತಿಕ ಸೋಮವಾರವಾಗಿದ್ದು, ಇಂದಿನಿಂದ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಪ್ರಾರಂಭವಾಗಲಿದೆ. ಮೂರ್ನಾಲ್ಕು ದಿನಗಳಿಂದಲೇ ಕಡಲೆಕಾಯಿ ಮೂಟೆಗಳೊಂದಿಗೆ ರೈತರು ಲಗ್ಗೆಯಿಟ್ಟಿದ್ದು, ಬೆಂಗಳೂರಿನ ಐತಿಹಾಸಿಕ ಸಾಂಸ್ಕೃತಿಕ ಉತ್ಸವವಾಗಿರುವ ಕಡಲೆಕಾಯಿ ಪರಿಷೆ ಭರದಿಂದ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


