ಬಸವನಗುಡಿಯ ಕಡಲೆಕಾಯಿ ಪರಿಷೆ ಹಿನ್ನೆಲೆ, ಮಹತ್ವ
ಹಸಿ ಕಡಲೆಕಾಯಿ, ಹುರಿದದ್ದು, ಬೇಯಿಸಿದ ಕಾಯಿ ಹೀಗೆ ಅವರವರ ರುಚಿಗೆ ತಕ್ಕಂತೆ ಬೇಕಾದ ಕಡ್ಲೆಕಾಯಿ, ಇದೆಲ್ಲಾ ಸಿಗುವುದು ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ...

ಬೆಂಗಳೂರು: ಹಸಿ ಕಡಲೆಕಾಯಿ, ಹುರಿದದ್ದು, ಬೇಯಿಸಿದ ಕಾಯಿ ಹೀಗೆ ಅವರವರ ರುಚಿಗೆ ತಕ್ಕಂತೆ ಬೇಕಾದ ಕಡ್ಲೆಕಾಯಿ, ಇದೆಲ್ಲಾ ಸಿಗುವುದು ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ.
ಬಸವನಗುಡಿಯ ದೊಡ್ಡ ಬಸವಣ್ಣ ದೇವಾಲಯ ಬೆಂಗಳೂರಿನ ಐತಿಹಾಸಿಕ ದೇವಾಲಯಗಳ ಪೈಕಿ ಪ್ರಮುಖವಾದದ್ದು. ಇಂತಹ ಐತಿಹಾಸಿಕ ದೇವಾಲಯದಲ್ಲಿ ಪ್ರತಿ ವರ್ಷ ನಡೆಯುವ ಕಡಲೆಕಾಯಿ ಪರಿಷೆಯ ಹಿಂದೆಯೂ ಐತಿಹಾಸಿಕ ಕತೆಯಿದೆ.
ಕಡಲೆ ಕಾಯಿ ಪರಿಷೆ ಹಿನ್ನೆಲೆ
ಹಿಂದೆ ಈ ಪ್ರದೇಶ ರೈತರು ಕೃಷಿ ಮಾಡುತ್ತಿದ್ದ ಭೂಮಿಯಾಗಿತ್ತು. ಇಲ್ಲಿ ಹೆಚ್ಚಾಗಿ ಕಡಲೆಕಾಯಿಯನ್ನು ಬೆಳೆಯುತ್ತಿದ್ದರು. ಹೀಗಿರುವಾಗ ಸಮೃದ್ಧವಾಗಿ ಬೆಳೆದಿದ್ದ ಬೆಳೆಯನ್ನು ರಾತ್ರಿ ವೇಳೆಯಲ್ಲಿ ಹೋರಿಯೊಂದು ಬಂದು ತಿಂದುಬಿಡುತ್ತಿತ್ತು. ಪದೇಪದೆ ಇದೇ ರೀತಿ ನಡೆಯುತ್ತಿದ್ದುದರಿಂದ ನಷ್ಟ ಅನುಭವಿಸುತ್ತಿದ್ದ ರೈತರು ರಾತ್ರಿ ವೇಳೆಯಲ್ಲಿ ಕಾದು ಕುಳಿತು ನೋಡಿದಾ ಬೃಹತ್ ಗಾತ್ರದಲ್ಲಿದ್ದ ಬಸವ ಕಾಣಿಸಿತು. ಜನರಿಗೆ ಅದನ್ನು ನೋಡುತ್ತಿದ್ದಂತೆ, ಇದು ಸಾಮಾನ್ಯವಾದ ಎತ್ತಲ್ಲ. ಇದು ಶಕ್ತಿಯುತವಾದ ನಂದಿಯ ಪ್ರತಿರೂಪವೆಂಬ ಭಾವನೆ ಮೂಡಿತು.
ಕೂಡಲೇ ಎಲ್ಲ ರೈತರು, ‘ದಯಮಾಡಿ ತಮ್ಮ ಬೆಳೆಯನ್ನು ಹಾಳು ಮಾಡಬೇಡ. ಇದೇ ಸ್ಥಳದಲ್ಲಿ ನಿನಗೊಂದು ಗುಡಿ ಕಟ್ಟಿ ನಿನ್ನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ. ಕಡಲೆಕಾಯಿ ಬೆಳೆ ಸಮೃದ್ಧವಾಗಿ ಬೆಳೆದು ಅದರ ಕೃಷಿ ಚಟುವಟಿಕೆ ಮುಗಿದ ನಂತರ ಕಾರ್ತಿಕಮಾಸದ ಕೊನೆಯ ಸೋಮವಾರ ನಿನ್ನ ಹೆಸರಿನಲ್ಲಿ ಕಡಲೆಕಾಯಿ ಪರಿಷೆ ನಡೆಸುತ್ತೇವೆ’ ಎಂದು ಬಸವಣ್ಣನಿಗೆ ಮೊರೆಯಿಡುತ್ತಾರೆ. ರೈತಭಕ್ತರ ಈ ಮೊರೆಯನ್ನು ಆಲಿಸಿದ ಬಸವಣ್ಣ ಅಂದಿನಿಂದ ರೈತರ ಬೆಳೆಯನ್ನು ನಾಶಗೊಳಿಸದೆ ಕಾಪಾಡುತ್ತಾನೆ. ಅಂದಿನಿಂದ ರೈತರು ತಾವು ಬೆಳೆದ ಕಡಲೆಕಾಯಿಯನ್ನು ತೆಗೆದುಕೊಂಡು ಬಂದು ಪ್ರತಿ ವರ್ಷ ಜಾತ್ರೆಯನ್ನು ನಡೆಸುತ್ತಿದ್ದಾರೆ.
ಭಾನುವಾರ ಬೆಳಗ್ಗೆಯಿಂದ ಕಡಲೆಕಾಯಿ ಪರಿಷೆ ಆರಂಭಗೊಂಡರೆ, ಮುಖ್ಯ ಉತ್ಸವ ಸೋಮವಾರ ನಡೆಯಲಿದೆ. ರಸ್ತೆಯ ಇಕ್ಕೆಲಗಳಲ್ಲಿ ರಾಶಿ ರಾಶಿ ಕಡಲೆಕಾಯಿ ಗ್ರಾಹಕರನ್ನು ಸೆಳೆಯುತ್ತವೆ. ಮೂರು ಬೀಜದ ಉದ್ದನೆಯ ಕಾಯಿ, ಎರಡು ಬೀಜದ ಗಿಡ್ಡ ಕಾಯಿಗಳು, ಕಡುಗುಲಾಬಿ ಬಣ್ಣದ ಬೀಜ ಹಾಗೂ ತಿಳಿ ಗುಲಾಬಿ ಬಣ್ಣದ ಬೀಜಗಳು ಗ್ರಾಹಕರ ಬಾಯಲ್ಲಿ ನೀರೂರಿಸುತ್ತವೆ.
ಕೇವಲ ಕಡಲೆ ಕಾಯಿ ಪರಿಷೆ ಮಾತ್ರವಲ್ಲದೇ ರಾಟೆ, ಉಯ್ಯಾಲೆಗಳು, ಮೇರಿಗೋರೌಂಡ್ ಆಟಿಕೆಗಳು ಇರುತ್ತವೆ. ಜಾತ್ರೆ ಎಂದರೆ ಕೇಳಬೇಕೇ? ಕೆಲವರು ಭಕ್ತಿ-ಭಾವದಲ್ಲಿ ಮಿಂದೆದ್ದರೆ, ಹಲವರು ಅಲ್ಲಿನ ಆಟಿಕೆಗಳಲ್ಲಿ ಕೂತು ಆಡಿ ಸಂಭ್ರಮಿಸುತ್ತಾರೆ. ಮತ್ತೆ ಕೆಲವರು ಬಳೆ, ಓಲೆ ಸೇರಿದಂತೆ ಜಾತ್ರೆಯಲ್ಲಿ ಸಿಗುವ ತರಹೇವಾರಿ ವಸ್ತುಗಳನ್ನು ಖರೀದಿಸುತ್ತಾರೆ. ಕಡ್ಲೆಪುರಿ, ಬೆಂಡು-ಬತ್ತಾಸು, ಕಲ್ಯಾಣ ಸೇವೆ, ಇರುತ್ತದೆ.
ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ನಾನಾ ಭಾಗಗಳಿಂದ ಕಾಯಿಗಳನ್ನು ಹೊತ್ತು ರೈತರು ತರುತ್ತಾರೆ. ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪಾರಿಗಳು ಕೂಡ ಪರಿಷೆಯಲ್ಲಿ ಭಾಗವಹಿಸುತ್ತಾರೆ.
ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ಬಂದಿರುವ ಭಕ್ತರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪಾರಕ್ಕೆ ಮಾರುಕಟ್ಟೆ ದೊರೆಯುತ್ತದೆ.
ಒಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಡಲೆ ಕಾಯಿ ಪರಿಷೆಗೆ ಬಸವನಗುಡಿ ಸಜ್ಜಾಗಿದೆ. ಬೆಂಗಳೂರು ಮಾತ್ರವಲ್ಲದೇ ನಗರದ ಸುತ್ತಮುತ್ತಲಿನ ಹಲವು ಪ್ರದೇಶಗಳಿಂದ ಬರುವ ಭಕ್ತರು ಕಡಲೆಕಾಯಿ ಪರಿಷೆಗೆ ಬಂದು ಬಸವಣ್ಣನ ಕೃಪೆಗೆ ಪಾತ್ರವಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


