ಅಂತಃಶಕ್ತಿಗೊಂದು ಜಮಾ ಪಟ್ಟಿ
ವ್ಯಾಪಾರ- ವ್ಯವಹಾರ ಮಾಡುವವರು, ಪ್ರತೀವರ್ಷ ಬ್ಯಾಲೆನ್ಸ್ ಶೀಟ್ ತಯಾರಿಸುತ್ತಾರೆ...

ವ್ಯಾಪಾರ- ವ್ಯವಹಾರ ಮಾಡುವವರು, ಪ್ರತೀವರ್ಷ ಬ್ಯಾಲೆನ್ಸ್ ಶೀಟ್ ತಯಾರಿಸುತ್ತಾರೆ. ತಮ್ಮ ಖಾತೆಗಾದ ಜಮಾ, ಖಾತೆಯಿಂದಾದ ಖರ್ಚುಗಳ ಲೆಕ್ಕ ಬರೆದು ಲಾಭ- ನಷ್ಟಗಳ ವಿಮರ್ಶೆ ಮಾಡುತ್ತಾರೆ. ಇದು ಬದುಕಿನ ಆರ್ಥಿಕ ಲೆಕ್ಕಾಚಾರವಾದರೆ ಮನಸ್ಸಿನ ವ್ಯಾಪಾರಗಳಿಗೂ ಲೆಕ್ಕ ಬರೆಯಬಹುದು.
ಜೀವನದ ಸುಖಕ್ಕೆ ಬಾಹ್ಯವಸ್ತುಗಳ ಸಂಗ್ರಹಣೆಯಷ್ಟೇ ಕಾರಣವಲ್ಲ. ಮಾನಸಿಕ ವ್ಯಾಪಾರದಿಂದ ಲಭಿಸುವ ಅಂತಃಶಕ್ತಿ ಬದುಕಿನ ಅರೋಗ್ಯವನ್ನು ನಿರ್ಣಯಿಸುತ್ತದೆ. ಅಂತಹ ಬ್ಯಾಲೆನ್ಸ್ ಶೀಟ್ ಒಂದನ್ನು ತಮ್ಮ ಆತ್ಮನಿವೇದನೆ ಪುಸ್ತಕದಲ್ಲಿ ನೀಡಿದ್ದಾರೆ ತರಳಬಾಳು ಬೃಹನ್ಮಠದ ಲಿಂಗೈಕ್ಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಶ್ರೀ.
ಯಾವುದೇ ರೀತಿಯನ್ನು ಮೋಕ್ಷವನ್ನು ಬಯಸುವ ವ್ಯಕ್ತಿಯ ಮನಸ್ಸಿನ ವ್ಯಾಪಾರದ ಜಮಾ-ಖರ್ಚುಗಳು ಈ ರೀತಿ ಇರುತ್ತವೆ ಎಂದು ಪಟ್ಟಿ ಮಾಡುತ್ತಾರೆ ಶಿವಕುಮಾರ ಶಿವಾಚಾರ್ಯ ಶ್ರೀಗಳು. ಜಮಾವು ಜ್ಞಾನ, ವೈರಾಗ್ಯ, ಸತ್ಯ, ಅಹಿಂಸೆ ಗುರುಭಕ್ತಿ. ಈಶ್ವರನಲ್ಲಿ ವಿಶ್ವಾಸದಿಂದ ಹೊಂದುವ ಸೌಭಾಗ್ಯ. ಖರ್ಚು ಅಜ್ಞಾನ, ಲಾಲಸೆ, ಅಸತ್ಯ, ಹಿಂಸೆ, ಕಾಮ, ಭುಕ್ತಿ, ಈಶ್ವರನಲ್ಲಿ ಅವಿಶ್ವಾಸದಿಂದ ಹೊಂದುವ ದೌರ್ಭಾಗ್ಯ.
ಜ್ಞಾನ ಮತ್ತು ಅಜ್ಞಾನ
ನಿಮ್ಮ ಮನೋವ್ಯಾಪಾರ ಲಾಭದಾಯಕವಾಗಬೇಕಾದರೆ ನಿಮ್ಮ ಜ್ಞಾನದ ಹಂಬಲ ಹೆಚ್ಚಬೇಕು. ಜ್ಞಾನ ಆತ್ಮವಿಶ್ವಾಸಕ್ಕೆ ನಾಂದಿ ಹಾಡುತ್ತದೆ. ಖರ್ಚಿನ ಖಾತೆಯಲ್ಲಿರುವ ಅಜ್ಞಾನ ಅಹಂಕಾರಕ್ಕೆ ಮೂಲ. ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ ಎಂಬುದನ್ನು ಮರೆಯಬೇಡಿ.
ವೈರಾಗ್ಯ ಮತ್ತು ಲಾಲಸೆ
ವೈರಾಗ್ಯ ಕೇವಲ ಸಂನ್ಯಾಸಿಗಳಲ್ಲಿರಬೇಕಾದ ಗುಣವಲ್ಲ. ಸಂಸಾರಿಗಳಲ್ಲೂ ವೈರಾಗ್ಯವಿರಬೇಕು.
ನಾನು ಶಾಶ್ವತ ಎಂಬ ಭಾವನೆಯಿಂದ ಸಂಬಂಧಗಳ ವ್ಯಾಮೋಹಕ್ಕೆ ಅಂಟಿಕೊಂಡು ತೊಳಲಾಡಬಾರದು. ನಾನು ಒಂದಲ್ಲ ಒಂದು ದಿನ ಈ ಜಗತ್ತಿನಿಂದ ನಿರ್ಗಮಿಸಲೇಬೇಕು ಎಂಬ ಸತ್ಯ ನಮ್ಮ ಮನದ ಮೂಲೆಯಲ್ಲಿ ಸದಾ ಇರಬೇಕು. ಬದುಕಿನ ಸುಖವನ್ನು ಆಸ್ವಾದಿಸುತ್ತಲೇ ಎಲ್ಲವನ್ನೂ ಬಿಟ್ಟು ಹೋಗುವ ತಯಾರಿಯನ್ನೂ ಅಂತರಂಗದಲ್ಲಿ ನಡೆಸಬೇಕು.
ಸತ್ಯ ಮತ್ತು ಅಸತ್ಯ
ಸತ್ಯಾಚರಣೆಯೇ ನನ್ನ ಬದುಕಿನ ಗುರಿ ಎಂದು ನುಡಿದು, ಅಂತೆಯೇ ನಡೆದರು ಮಹಾತ್ಮಾ ಗಾಂಧಿ. ಸತ್ಯವಂತರಾದಷ್ಟೂ ನಾವು ಗಟ್ಟಿಯಾಗುತ್ತೇವೆ. ಸತ್ಯವಂತರಿಗಿದು ಕಾಲವಲ್ಲ ಎಂಬ ದಾಸರ ವ್ಯಂಗ್ಯವನ್ನು ನೇರಾರ್ಥದಲ್ಲಿ ಗ್ರಹಿಸಿ, ಅಸತ್ಯವಾಡಿದರೆ ಮೇಲೆರಲು ಸಾಧ್ಯ ಎಂದು ಕೊಂಡವರೂ ಇದ್ದಾರೆ. ಆದರೆ ನಮ್ಮ ಅಂತಃಸಾಕ್ಷಿಗೆ ನಿಜವೇನೆಂದು ಗೊತ್ತಿರುತ್ತದೆ. ಸದಾ ಸತ್ಯವಂತರಾಗಿ ನಮ್ಮ ಜಮಾ ಖಾತೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು.
ಈಶ್ವರನಲ್ಲಿ ವಿಶ್ವಾಸ-ಅವಿಶ್ವಾಸ
ನಂಬಿಕೆ ಎನ್ನುವುದು ಬದುಕನ್ನು ಕಟ್ಟಿ ನಿಲ್ಲಿಸುವ ಶಕ್ತಿ. ಈ ಜಗತ್ತನ್ನು ನಿಯಂತ್ರಿಸುವ ಶಕ್ತಿಯೊಂದಿದೆ ಎಂಬುದು ಬಹುಪಾಲು ಜನರ ನಂಬಿಕೆ. ಡಿ.ವಿ.ಜಿ.ಯವರ ನುಡಿಯಂತೆ ನಾವು ನಂಬಿಯೂ ನಂಬದಿರುವ ಇಬ್ಬಂದಿಗಳಾಗಬಾರದು. ಹಾಗಾದಾಗ ಸಿಂಬಳದ ಮೇಲೆ ಕುಳಿತು ಅದನ್ನು ತಿನ್ನಲೂ ಆಗದ, ಹಾರಲೂ ಆಗದ ನೊಣಗಳಂತಾಗುತ್ತದೆ ನಮ್ಮ ಸ್ಥಿತಿ.
ಬೇರಾವ ಶಕ್ತಿ ಇದೆ ಎಂದು ನಂಬದಿದ್ದರೂ ನಮ್ಮಾಳದಲ್ಲಿರುವ ಚೇತನವನ್ನು ನಾವು ನಂಬಲೇ ಬೇಕು. ಅದೇ ಈಶ್ವರನಲ್ಲಿ ವಿಶ್ವಾಸದಿಂದ ಹೊಂದುವ ಸೌಭಾಗ್ಯ. ಈ ಚೇತನವನ್ನೇ ಕುವೆಂಪುರವರು ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರಾ ಎಂದು ಕರೆದಿರುವುದು. ಈ ಚೇತನದ ಮೇಲಿನ ವಿಶ್ವಾಸ ನಮ್ಮ ಜಮಾ ಖಾತೆ ಸೇರಿ ಅಂತಃಶಕ್ತಿಯನ್ನು ಸದೃಢಗೊಳಿಸುತ್ತದೆ. ಆರ್ಥಿಕ ಲಾಭನಷ್ಟವನ್ನು ಚಾಚೂ ತಪ್ಪದೇ ಲೆಕ್ಕ ಹಾಕುವ ನಾವು ಆಂತರಿಕ ಸುಖಕ್ಕಾಗಿ ಶಿವಕುಮಾರ ಸ್ವಾಮೀಜಿಯವರು ನೀಡಿರುವ ಈ ಅದ್ಭುತ ಜಮಾ-ಖರ್ಚು ಖಾತೆಯನ್ನು ನಿರ್ವಹಿಸಬಹುದಲ್ಲವೇ.
ಅಹಿಂಸೆ ಮತ್ತು ಹಿಂಸೆ
ದಯೆಯೇ ಧರ್ಮದ ಮೂಲವಯ್ಯಾ ಎಂದರು ಬಸವಣ್ಣನವರು. ಧರ್ಮ ಎನ್ನುವುದು ಅಹಿಂಸೆಯ ತಳಹದಿಯ ಮೇಲೆ ನಿಂತಿದೆ. ಹಿಂಸೆ ಬರಿಯ ದೈಹಿಕ ಶೋಷಣೆಗಷ್ಟೇ ಸೀಮಿತವಾಗಿಲ್ಲ. ಕೋಪ, ಕೊಂಕುನುಡಿ, ವ್ಯಂಗ್ಯ ಮಾತುಗಳಿಂದ ಇನ್ನೊಬ್ಬರನ್ನು ಹಿಂಸಿಸುವುದು ಮಾನವ ಪ್ರಾಣಿಯ ಹುಟ್ಟು ಗುಣ. ಇನ್ನೊಬ್ಬರಿಗೆ ನೋವಾಗುವಂತೆ ಮಾತನಾಡುವುದು, ವರ್ತಿಸುವುದೂ ಹಿಂಸೆಯೇ. ಇದು ನಮ್ಮ ಖರ್ಚಿನ ಖಾತೆಗೆ ಸೇರುವಂತಾಹದ್ದು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸಿಸುವ ಪ್ರವೃತ್ತಿಯನ್ನು ನಾವು ಕಡಮೆ ಮಾಡಿಕೊಂಡರೆ ಮೋಕ್ಷದೆಡೆಗೆ ಸಾಗುತ್ತೇವೆ.
= ಎಚ್.ಎಸ್. ನವೀನ ಕುಮಾರ್, ಹೊಸದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


