ಚಾತುರ್ಮಾಸ್ಯದ ಸಾಹಿತ್ಯದೌತಣ
ಚಾತುರ್ಮಾಸ್ಯ ಹಿಂದೂ ಪುರಾಣದಲ್ಲಿ ತನ್ನದೇ ವಿಶಿಷ್ಟ ಸ್ಥಾನ ಹೊಂದಿದೆ. ಈ ಸಂದರ್ಭದಲ್ಲಿ ಯತಿ, ಮುನಿಗಳು ...

ಚಾತುರ್ಮಾಸ್ಯ ಹಿಂದೂ ಪುರಾಣದಲ್ಲಿ ತನ್ನದೇ ವಿಶಿಷ್ಟ ಸ್ಥಾನ ಹೊಂದಿದೆ. ಈ ಸಂದರ್ಭದಲ್ಲಿ ಯತಿ, ಮುನಿಗಳು ಹಲವು ವ್ರತ, ನಿಯಮ ಕೈಗೊಳ್ಳುತ್ತಾರೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ಕೈಗೊಳ್ಳುವ ಸಣ್ಣ ವ್ರತವೂ ಮಹತ್ವದ ಫಲ ಕೊಡುತ್ತದೆ ಎಂಬುದು ಪುರಾಣಗಳಲ್ಲಿನ ನಂಬಿಕೆ. ಹೀಗಾಗಿಯೇ ಚಾತುರ್ಮಾಸ್ಯ ಕಾಲದಲ್ಲಿ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಇಂತಹ ಚಾತುರ್ಮಾಸ್ಯ ಕಾಲವನ್ನು ಕೇವಲ ಧಾರ್ಮಿಕ ಕ್ರಿಯೆಗಳಿಗೆ ಸೀಮಿತಗೊಳಿಸದೇ ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರಗಳಿಗೂ ವಿಸ್ತರಿಸಬಹುದು ಎಂದು ತೋರಿಸಿಕೊಟ್ಟವರಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಅಗ್ರಗಣ್ಯರು ಎಂದರೆ ತಪ್ಪಾಗಲಾರದು.
ಈ ಬಾರಿ ಶ್ರೀಗಳು 21ನೇ ಚಾತುರ್ಮಾಸ್ಯಕ್ಕೆ ಕುಳಿತಿರುವುದು ಹೊನ್ನಾವರ ಬಳಿಯ ಕೆಕ್ಕಾರು ರಘೋತ್ತಮ ಮಠದಲ್ಲಿ. ವ್ರತಾಚರಣೆ ಸಂದರ್ಭದಲ್ಲಿ ಧರ್ಮ- ಸಾಹಿತ್ಯವನ್ನು ಒಂದೇ ತಕ್ಕಡಿಯಲ್ಲಿಡುವ ಮಹತ್ವದ ಪ್ರಯತ್ನಕ್ಕೆ ಶ್ರೀಗಳು ಚಾಲನೆ ನೀಡಿದ್ದಾರೆ.
ಏನು ವಿಶೇಷ?
ಶ್ರೀಗಳು ಚಾತುರ್ಮಾಸ್ಯ ಪ್ರಾರಂಭಿಸಿದ ದಿನದಿಂದ ಸತತ 60 ದಿನಗಳ ಕಾಲ ಪ್ರತಿದಿನವೂ ಒಬ್ಬೊಬ್ಬ ಮಹಾನ್ ಪುರುಷರ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದು, ತಮ್ಮ ವ್ರತ ಕಾಲದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಹೀಗೊಂದು ವಿಶೇಷ ಕೊಡುಗೆ ನೀಡಲಿದ್ದಾರೆ. ಭರತ ಖಂಡದ ಶ್ರೇಯಸ್ಸಿಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಯುವ ಜನತೆ ಸೇರಿದಂತೆ ಎಲ್ಲರಿಗೂ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶ. ಹಿಂದೂ ಧರ್ಮದ ಪುನರ್ ಪ್ರತಿಷ್ಠಾಪನೆಗೆ ಶಿವಾಜಿ ಮಹಾರಾಜನಿಗೆ ಆದೇಶಿಸಿ, ಅದನ್ನು ಅವನಿಂದ ಕಾರ್ಯ ಸಾಧ್ಯ ಮಾಡಿಸಿದ ಸಮರ್ಥ ರಾಮದಾಸರು, ಸಂಸ್ಕೃತ ವ್ಯಾಕರಣ ಪಿತಾಮಹ ಮಹರ್ಷಿ ಪಾಣಿನಿ, ವಿಶ್ವಕ್ಕೇ ಭಾರತದ ದೊಡ್ಡ ಕೊಡುಗೆಯಾದ ಸೊನ್ನೆಯನ್ನು ಕೊಟ್ಟ ವರಾಹ ಮಿಹಿರ, ಕೃಷ್ಣ ಚೈತನ್ಯ, ಸಂತ ಜ್ಞಾನೇಶ್ವರ ಹೀಗೆ ಆಚಾರ್ಯ, ಗುರು, ಯತಿ, ಋಷಿ ಸೇರಿದಂತೆ 60 ಮಂದಿ ಮಹಾಪುರುಷರ ಬಗ್ಗೆ ತಿಳಿದುಕೊಂಡಿರಲೇಬೇಕಾದ ಕನಿಷ್ಠ ಮಾಹಿತಿ ಪುಸ್ತಕದಲ್ಲಿ ಸಿಗಲಿದೆ.
ಲೇಖಕರ್ಯಾರು?
ಇಂತಹ ಮಹಾನ್ ಪುರುಷರ ಬಗ್ಗೆ ಬರೆದಿರುವ ಲೇಖಕರೂ ಸಂಪನ್ಮೂಲ ವ್ಯಕ್ತಿಗಳೇ. ಶಂಕರನಾರಾಯಣ ಜೋಯಿಸರು, ಹಿತ್ಲಲ್ಲಿ ಸೂರ್ಯನಾರಾಯಣ ರಾವ್, ವಿದುಷಿ ಮನೋರಮಾ, ಉಮಾಕಾಂತ ಭಟ್ಟರು ಮೊದಲಾದವರು. ಯಾವುದೇ ಕೋನದಿಂದ ನೋಡಿದರೂ ಇದೊಂದು ಐತಿಹಾಸಿಕ ದಾಖಲೆಯಾಗಲಿದೆ. ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕವಾಗಿ ಯಾವುದೇ ದಿಕ್ಕುಗಳಿಂದಲೂ ಹಿಂದೆಂದೂ ಆಗಿರದ ಕಾರ್ಯಕ್ರಮ ಇದಾಗಲಿದೆ. ದಾಖಲೆ ಮಾಡುವ ಉದ್ದೇಶವಲ್ಲದಿದ್ದರೂ, ದಾಖಲೆಯಾಗುವ ಎಲ್ಲಾ ಕಾರಣಗಳೂ ಇರುವುದರಿಂದ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಕೂಡಾ ಈ ಕಾರ್ಯಕ್ರಮ ಸೇರಿಸಲು ಪ್ರಕ್ರಿಯೆ ಆರಂಭವಾಗಿದೆ.
60 ದಿನಗಳ ಕಾಲ ಪ್ರತಿದಿನ ಒಂದೇ ಪ್ರಕಾಶನದಿಂದ ಒಂದೊಂದು ಪುಸ್ತಕದ ಬಿಡುಗಡೆಯಾಗಲಿದೆ. ಹೀಗೆ ಬಿಡುಗಡೆಯಾಗುವ ಪುಸ್ತಕಗಳ ಸುಮಾರು 30,000 ಪ್ರತಿಗಳನ್ನು (ಪ್ರತಿ ಪುಸ್ತಕದ 500) ಉಚಿತವಾಗಿ ಶಿಷ್ಯರ ಮನೆಮನೆಗೆ ತಲುಪಿಸಲಾಗುತ್ತದೆ. ಇಂತಹ ಒಂದು ಕನ್ನಡ ಸಾರಸ್ವತ, ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಒಂದು ಬೃಹತ್ ಯೋಜನೆ ಸದ್ದಿಲ್ಲದೇ ಕಾರ್ಯರೂಪಕ್ಕೆ ಬರುತ್ತಿದೆ.
- ಪ್ರಸನ್ನ ಎಂ. ಮಾವಿನಕುಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


