ಕಟ್ಟಿಹಾಕಿ ಕೀಳರಿಮೆ

ಬಹುತೇಕರು ದೈಹಿಕವಾಗಿ ಬಲಿಷ್ಠರಾಗಿದ್ದರೂ, ಮಾನಸಿಕವಾಗಿ ಶಕ್ತಿಶಾಲಿಯಾಗಿರುವುದಿಲ್ಲ. ಧೈರ್ಯದ ಕೊರತೆಯಿಂದ ಕೀಳರಿಮೆ ಅನುಭವಿಸುತ್ತಿರುತ್ತಾರೆ. ತನ್ನಿಂದ ಏನನ್ನೂ ಸಾಧಿಸಲಾಗದು ಎಂದೇ ಬಲವಾಗಿ ನಂಬಿ, ಸಾಮರ್ಥ್ಯದ ಬಗೆಗೆ ಅಪನಂಬಿಕೆ ಹೊಂದಿರುತ್ತಾರೆ. ಕೀಳರಿಮೆ ಎನ್ನುವುದು ಅವರಲ್ಲಿ ಶಾಶ್ವತವಾಗಿ ನೆಲೆಯಾಗಿರುತ್ತದೆ.
'ನನ್ನಲ್ಲಿ ಅಪಾರ ಶಕ್ತಿ ಅಡಗಿದೆ. ಕಠಿಣತಮವಾದುದನ್ನು ನಾನು ಸಾಧಿಸಬಲ್ಲೆ' ಎಂಬ ದೃಢನಂಬಿಕೆ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸದ ಮಟ್ಟವನ್ನು ಬೆಳೆಸಿಕೊಳ್ಳಬೇಕೇ ವಿನಾ ನಾನು ಎಂಬ ಅಹಂಕಾರವನ್ನಲ್ಲ. ಅಹಂಭಾವ ಅಧೋಗತಿಗೆ ಮುನ್ನುಡಿ ಬರೆಯುತ್ತದೆ. ಹೀಗಾಗಿ ಅಹಂಭಾವವನ್ನು ತೊರೆಯಬೇಕು. ಪ್ರಾರಂಭದಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತ ಅದರಲ್ಲಿ ಯಶ ಪಡೆದ ಮೇಲೆ ನಾನು ದುರ್ಬಲನಲ್ಲ ಎನ್ನುವ ನಕಾರಾತ್ಮಕ ಭಾವವನ್ನು ಮನಸ್ಸಿನಿಂದ ತೊಡೆದುಹಾಕಬೇಕು.
ಬಯಸಿದಂತಾಗುವ ಶಕ್ತಿ
ಪ್ರತಿ ವ್ಯಕ್ತಿಗೂ ತಾನೇನಾಗಬೇಕೆಂದು ಬಯಸುವನೋ ಅದೇ ಆಗುವ ಶಕ್ತಿ ಇದೆ. ಸಣ್ಣ ಗುರಿ ಹೊಂದಿರುವುದು ಅಪರಾಧ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದ್ದಾರೆ. ಸಣ್ಣ ಗುರಿಯನ್ನು ಹೊಂದುವುದೇ ಅಪರಾಧವೆಂದಿರುವಾಗ ಕೀಳರಿಮೆ ಹೊಂದುವುದು ಅದಕ್ಕಿಂತ ದೊಡ್ಡ ಅಪರಾಧವಲ್ಲದೇ ಮತ್ತೇನು? ನಮ್ಮನ್ನು ನಾವು ಕೈಲಾಗದವರು, ಅಬಲರು, ನಿಷ್ಪ್ರಯೋಜಕರು ಎಂದು ತಪ್ಪಾಗಿ ಭಾವಿಸಿಕೊಳ್ಳುವುದು ಅಪಾಯಕಾರಿ. ನಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಗುರುತಿಸಿಕೊಳ್ಳುವುದನ್ನು ಕಲಿಯಬೇಕು. ನಮ್ಮನ್ನು ನಾವು ನಂಬುವ ಮೂಲಕ ಕೀಳರಿಮೆಯಿಂದ ಮುಕ್ತಿ ಪಡೆಯಬಹುದು.
ಈ ಕೀಳರಿಮೆ ಹೆಚ್ಚಾಗಿ ಮೊಳಕೆಯೊಡೆಯುವುದು ಮಕ್ಕಳಲ್ಲಿ. ಹೀಗಾಗಿ ಮಕ್ಕಳಿಗೆ ಸಾಧಕರ ಜೀವನ ಚರಿತ್ರೆ ಬೋಧಿಸಬೇಕು. ಸಾಹಸಮಯ ಕಥೆಗಳಿರುವ ಚಲನಚಿತ್ರಗಳನ್ನು ನೋಡಲು ಪ್ರೇರೇಪಿಸಬೇಕು. ಇದರಿಂದ ಮಕ್ಕಳಲ್ಲಿ ಸಾಹಸ ಪ್ರವೃತ್ತಿ ಎಚ್ಚೆತ್ತುಕೊಳ್ಳುತ್ತದೆ. ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗಗಳೆಂದು ತಿಳಿದು ಧೈರ್ಯದಿಂದ ಮುನ್ನುಗ್ಗುತ್ತಾರೆ.
ಮನದಟ್ಟಾಗುವಂತೆ ವಿವರಿಸಿ...
ಬಾಲ್ಯದಲ್ಲೇ ಮಕ್ಕಳಿಗೆ ಅವರಲ್ಲಡಗಿದ ಸುಪ್ತ ಪ್ರತಿಭೆ ಬಗೆಗೆ ಮನದಟ್ಟಾಗುವಂತೆ ವಿವರಿಸುವುದು ಅವಶ್ಯ. ಅವರಿಗೆ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲು ಬಿಡಬೇಕು. ಕೆಡಿಸುತ್ತಾರೆ, ಹಾಳು ಮಾಡುತ್ತಾರೆ ಎಂದು ಅವರಿಗೆ ಅವರ ಕೆಲಸಗಳನ್ನು ಮಾಡಲು ಬಿಡದೆ ಪರಾವಲಂಬಿಗಳನ್ನಾಗಿ ಮಾಡಬಾರದು.
ತಮ್ಮ ಕೆಲಸ ತಾವು ಮಾಡಿಕೊಳ್ಳುವುದರಿಂದ, ಮನೆಯಲ್ಲಿ ತಂದೆ ತಾಯಿಗೆ ಸಹಾಯ ಮಾಡುವುದರಿಂದ ಅವರ ಆತ್ಮವಿಶ್ವಾಸದ ಮಟ್ಟ ಹೆಚ್ಚುತ್ತದೆ. ಇವೆಲ್ಲವುಗಳಿಂದ ನಾನೂ ಮಾಡಬಲ್ಲೆ ಎನ್ನುವ ನಂಬಿಕೆ ಬೆಳೆಯುತ್ತದೆ. ಅಂಜಿಕೆಯಂಥ ನಕಾರಾತ್ಮಕ ಭಾವಗಳನ್ನು ಬಿಟ್ಟು ಸಮಸ್ಯೆಯನ್ನು ಎದೆಗಾರಿಕೆಯಿಂದ ಎದುರಿಸುವ ಮನೋಭಾವ ಬೆಳೆಯುತ್ತದೆ. ಸ್ವಾವಲಂಬನೆಯ ಬದುಕಿಗೆ ಬುನಾದಿ ಹಾಕಿದಂತಾಗುತ್ತದೆ.
ಅಗಾಧ ಪ್ರತಿಭೆ
ಪ್ರತಿ ಮಗುವಿನಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಅವರ ಅರಿವಿಗೆ ಬರುವಂತೆ ಮಾಡಿ ಶಹಬ್ಬಾಸ್ ಗಿರಿ ನೀಡುತ್ತಿದ್ದರೆ, ಅವರ ನಡವಳಿಕೆಯಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು. 'ಸ್ವ ಸಾಮರ್ಥ್ಯದಿಂದ ವಿಶೇಷವಾದುದುನ್ನು ಸಾಧಿಸಬಲ್ಲೆ' ಎಂಬ ಸಂಪೂರ್ಣ ವಿಶ್ವಾಸ ಅವರಲ್ಲಿ ತುಂಬಿಕೊಳ್ಳುತ್ತದೆ. ತನ್ನ ಜೀವನದ ಗುರಿ ಧ್ಯೇಯಗಳನ್ನು ನಿರ್ಧರಿಸುವ ಅವುಗಳನ್ನು ಸಾಕಾರಗೊಳಿಸಿಕೊಳ್ಳುವ ಶಕ್ತಿ ಬೆಳೆಯುತ್ತದೆ.
ಶಕ್ತಿಗಿಂತ ಯುಕ್ತಿ ಮೇಲು ಎಂಬ ಮಾತಿನಂತೆ ಮನುಷ್ಯ ಕಾಡು ಪ್ರಾಣಿಗಳಾದ ಸಿಂಹ, ಹುಲಿ, ಆನೆಗಿಂತಲೂ ದೈಹಿಕವಾಗಿ ಅಶಕ್ತವಾಗಿದ್ದರೂ, ಯುಕ್ತಿಯಿಂದ ಅವುಗಳನ್ನು ಪಳಗಿಸಿದ್ದಾನೆ. ಬಲಿಷ್ಠ ಪ್ರಾಣಿಗಳ ಮೇಲೆ ಹಿಡಿತ ಸಾಧಿಸಲು ಮಾನವನ ಮನೋಬಲವೇ ಕಾರಣ. ವಿವೇಕ ಭರಿತ ಜೀವನ ನಡೆಸಿದರೆ ಕೀಳರಿಮೆಯಿಂದ ಪಾರಾಗಬಹುದು. ನಮ್ಮ ಬದುಕನ್ನು ಹಸನಾಗಿಸಿಕೊಂಡು, ಮಕ್ಕಳಿಗೆ ಸುಂದರ ಬಾಳು ನೀಡಬಹುದು.
= ಜಯಶ್ರೀ ಅಬ್ಬಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


