ಧನ್ಯ ನಾದ ಪ್ರಭುವೇ...
ಈ ಯಂತ್ರಾತ್ಮಕ ಯುಗದಲ್ಲಿ, ಸದಾ ಒತ್ತಡದಿಂದ ಕೂಡಿರುವ ಮನಸ್ಸುಗಳು ಹೆಣಗುತ್ತಿರುವ ಈ ವಿಸ್ಮಯಕಾರಿ ಪ್ರಪಂಚದಲ್ಲಿ,...

ಈ ಯಂತ್ರಾತ್ಮಕ ಯುಗದಲ್ಲಿ, ಸದಾ ಒತ್ತಡದಿಂದ ಕೂಡಿರುವ ಮನಸ್ಸುಗಳು ಹೆಣಗುತ್ತಿರುವ ಈ ವಿಸ್ಮಯಕಾರಿ ಪ್ರಪಂಚದಲ್ಲಿ, ಆ ಮನಗಳಿಗೆ ಒಂದೇ ಒಂದು ಕ್ಷಣದಲ್ಲಿ ಮುದ ನೀಡಬಲ್ಲ, ನೆಮ್ಮದಿಯ ಮುಗುಳ್ನಗೆ ನೀಡಬಲ್ಲ ಒಂದು ಅದ್ಭುತವಾದ ಮಾಧ್ಯಮವೇ ಸಂಗೀತ.
ಒಳ್ಳೆಯ ಶಬ್ದದಿಂದ ಕೂಡಿದ, ಕೇಳುಗನ ಕಿವಿಗೆ ಸುಶ್ರಾವ್ಯ ಹಾಗೂ ಒಬ್ಬ ವಿದ್ವಾಂಸನ ಮನಸ್ಸನ್ನು ಇನ್ನೂ ಸಾಧಿಸಲು ಹುರಿದುಂಬಿಸುವ ಶಕ್ತಿ ಸಂಗೀತಕ್ಕಿದೆ. ಅದು ಶಾಸ್ತ್ರೀಯ ಸಂಗೀತಕ್ಕೇ ಆಗಿರಬಹುದು ಅಥವಾ ಸುಗಮ ಸಂಗೀತಕ್ಕೇ ಆಗಿರಬಹುದು. ಎಲ್ಲಕ್ಕೂ ಮೊದಲು 'ನಾದ' ಎಂದರೆ ಏನು ಎಂಬುದನ್ನು ಅರಿಯುವುದು ಸೂಕ್ತ.
ನಾದಾತ್ಮಕಂ ಇದಂ ಜಗತ್ ಎನ್ನುವ ಹಾಗೆ, ಇಡೀ ಜಗತ್ತು ನಾದದಿಂದಲೇ ಕೂಡಿದ್ದು, ನಾವು ಕೇಳಬಹುದಾದ ಪ್ರತಿಯೊಂದು ಶಬ್ದದಲ್ಲೂ ನಾದ ಎಂಬ ಶಕ್ತಿ ಅಡಗಿರುತ್ತದೆ. ನಾದಾನುಭವವು ಒಂದು ದೈವಿಕ ಹಾಗೂ ಸೃಜನಶೀಲ ಅನುಭವವಾಗಿದ್ದು, ಇದನ್ನು ಪಡೆಯಬಯಸುವವ ಕೇವಲ ನುರಿತ ಸಂಗೀತಗಾರನೇ ಆಗಿರಬೇಕು ಎಂದೇನಿಲ್ಲ. ಈ ಅನುಭವವನ್ನು ಪಡೆಯಬಯಸುವವ ಸಂಗೀತಾಸಕ್ತನಾಗಿದ್ದರೆ ಅಷ್ಟು ಸಾಕು.
ನಾದ ಎಂಬುದು ಸಂಗೀತದ ಮೂಲಕ ಪ್ರಕಟವಾದಾಗ, ಆ ಸಂಗೀತಗಾರನ ಇರುವಿಕೆಯ ರೀತಿ, ಆತ ಜೀವಿಸುವ ಕ್ರಮ, ಆತನ ಗುಣ, ನಡವಳಿಕೆ, ಚಿಂತನೆ ಹಾಗೂ ಮನೋಬಲದ ಮೇಲೆ ಗಾಢವಾದ ಪರಿಣಾಮ ಎಂದರೆ ಸಂಗೀತ ದೇವತೆಯನ್ನು ಗಾಢವಾಗಿ ಒಲಿಸಿಕೊಂಡವನು ಎಂದರ್ಥ.
ಒಬ್ಬ ದೈವಿಕ ಸಂಗೀತಗಾರ ನಾದವನ್ನು ತನ್ನ ಜೀವದಲ್ಲಿ ಜೀವವನ್ನಾಗಿಟ್ಟುಕೊಂಡು ಅದನ್ನು ಆರಾಧಿಸಿ, ಪೋಷಿಸಿ, ಅದರಲ್ಲೇ ಸಂಪೂರ್ಣ ಮಗ್ನನಾಗಿ, ಒಂದು ವಿಶೇಷವಾದ ಶಕ್ತಿ ಹಾಗೂ ತೇಜಸ್ಸನ್ನು ಹೊಂದುತ್ತಾನೆ. ನಾವುಗಳು ದೇವರು ಎಂಬುದನ್ನು ತಲುಪಲು, ನವವಿಧ ಭಕ್ತಿ ಮಾರ್ಗಗಳಾದ ಸ್ನೇಹ, ಹಾಸ್ಯ, ಸಖ್ಯ ಮುಂತಾದವುಗಳನ್ನು ಅನುಸರಿಸಬೇಕು ಎಂದು ಹಿರಿಯಲು ತಿಳಿಸಿದ್ದಾರೆ.
ಆದರೆ, ಒಬ್ಬ ನೈಜ ನಾದೋಪಾಸಕ ತನ್ನ ನಾದೋಪಸಾನೆಯಿಂದ ಪರಶ್ರೇಷ್ಠನನ್ನು ತಲುಪುತ್ತಾನೆ. ಅಂದರೆ ನಾದಾರಾಧನೆಯಿಂದಾಗಿ ಎಲ್ಲಕ್ಕೂ ಮಿಗಿಲಾದ ಒಂದು ಆನಂದವನ್ನು ಸಂಪಾದಿಸಬಲ್ಲವನಾಗಿರುತ್ತಾನೆ. ಇದರ ಸುಖಾನುಭವವನ್ನು ಕೇವಲ ಅಪೂರ್ವ ನಾದೋಪಾಸಕನೇ ಬಲ್ಲ.
ಒಬ್ಬ ವೃತ್ತಿಪರ ಸಂಗೀತಗಾರನಿಗೂ ಹಾಗೂ ಒಬ್ಬ ದೈವಿಕ ನಾದಾನುಭವಿಗೂ ಅಜಗಜಾಂತರ ವ್ಯತ್ಯಾಸವಿದೆ. ವೃತ್ತಿಪರ ಸಂಗೀತಗಾರ ಸಕಲ ವಿದ್ವತ್ತು ಹೊಂದಿದ್ದು, ಕಲಾಭಿಮಾನಿಗಳ ಮನಃಸೂರೆಗೊಳ್ಳುವ ಕಲೆಗಾರನಾಗಿರುತ್ತಾನೆ. ಆದರೆ, ಒಬ್ಬ ದೈವಿಕ ನಾದಾರಾಧಕ ತನ್ನ ಸಂಗೀತ ವಿದ್ಯೆಯನ್ನು ನಾದದೇವತೆಯನ್ನಾಗಿಸಿಕೊಂಡು ಆಕೆಯನ್ನು ಒಲಿಸಿಕೊಂಡು, ಕಲಾಭಿಮಾನಿಯನ್ನು ಮೆಚ್ಚಿಸುವ ಮೊದಲು, ತಾನೇ ತಾನಾಗಿ ಅದರಲ್ಲಿ ಮಿಂದು, ಅಧ್ಯಾತ್ಮಿಕವಾಗಿ ಸಶಕ್ತನೂ ಅಂತರಂಗದಲ್ಲಿ ಪರಿಶುದ್ಧನೂ, ವಿದ್ವತ್ತಿನಲ್ಲಿ, ಅಪಾರ ಜ್ಞಾನಿಯೂ ಆಗಿರುತ್ತಾನೆ.
ಶಾಸ್ತ್ರೋಕ್ತವಾಗಿ ಕಲಿಯುವ ಸಂಗೀತ ಕೇವಲ ಕಲಾ ಪ್ರದರ್ಶನಕ್ಕೆ ಮಾತ್ರವಲ್ಲದೆ, ಕಲಿಯುವವನ ಅಥವಾ ಕೇಳುಗನ ಮಾನಸಿಕ ಒತ್ತಡ ನಿವಾರಣೆಗೂ ಉಪಯುಕ್ತ. ಒಬ್ಬ ನಾದೋಪಾಸಕ ಲೌಕಿಕವಾಗಿ ಸಿದ್ಧಿವಂತನಾಗಿದ್ದು, ನಡವಳಿಕೆಯಲ್ಲಿ ಎಲ್ಲರನ್ನೂ ಆಕರ್ಷಿಸುವ ಶಕ್ತಿಯುಳ್ಳವನಾಗಿರುತ್ತಾನೆ. ತನಗೇ ಅರಿವಿಲ್ಲದೆ, ತಾನು ಸುತ್ತಮುತ್ತಲಿನ ಜನರ ಗಮನ ಸೆಳೆಯುವ ವಿಶೇಷ ಕಳೆಯನ್ನೂ ಹೊಂದಿರುತ್ತಾನೆ. ಸದಾ ಸಾತ್ವಿಕ ಚಿಂತನೆ ಹಾಗೂ ತಾತ್ವಿಕ ಮನಸ್ಥಿತಿಯನ್ನು ಒಳಗೊಂಡಿರುತ್ತಾನೆ. ಆದರೆ, ಇವೆಲ್ಲವೂ ದೈವಿಕ ಹಾಗೂ ನೈಜ ನಾದೋಪಾಸಕನಿಗೆ ಮಾತ್ರ ದೊರೆಯುವಂಥದ್ದು.
ನಾದ ಒಬ್ಬ ನಾದೋಪಾಸಕನಿಗೆ ವರವಾಗಿ ಒಲಿಯುವಂಥದ್ದು. ಇದು ಒಂದು ಯೋಗವೇ ಸರಿ. ನಾದಾರಾಧಕ ಸದಾ ತನ್ನ ಆಧಾರವಾದ ಗುರುವಿಗೆ ಪಾದಧೂಳಿಯಾಗಿರುತ್ತಾನೆ. ನಾದವನ್ನು ಕಣಕಣದಲ್ಲೂ ಆರಾಧಿಸುವ ಸಂಗೀತಗಾರನೇ ಇಷ್ಟು ಆನಂದಮಯಿಯಾಗಿರುತ್ತಾನೆಂದರೆ, ಇನ್ನು ಇದನ್ನು ಇಚ್ಛಿಸಿ, ಕಲಿಯಬಯಸುವ ಸಾಮಾನ್ಯರಿಗೆ ಇದರ ಅರಿವು ಮೂಡಬೇಕಲ್ಲವೇ? ಇದನ್ನು ಕಲಿತು ಸಾಧಿಸುವವನೇ ಇಷ್ಟು ಧನ್ಯನಾಗಿದ್ದರೆ, ಕುಳಿತು, ಅದನ್ನು ಕೇಳಿ ಆನಂದಿಸುವ ನಾವೇ ಧನ್ಯರಲ್ಲವೇ?
ಸ್ಮೃತಿ ಬಿ.ಕೆ., ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


