ಭಕ್ತಿ-ಜ್ಯೋತಿಷ್ಯ

ಸೇವೆಯ ಕೊಡುಗೆ

ಮನುಷ್ಯ ಜನ್ಮ ಬಂದಿರುವುದೇ ಇನ್ನೊಬ್ಬರ ಸೇವೆ ಮಾಡುವುದಕ್ಕಾಗಿ ಎಂದು ತಿಳಿದು ಮತ್ತೊಬ್ಬರಿಗೆ ಉಪಕಾರ...

ಸೇವೆಯ ಕೊಡುಗೆ
Published On :

ಮನುಷ್ಯ ಜನ್ಮ ಬಂದಿರುವುದೇ ಇನ್ನೊಬ್ಬರ ಸೇವೆ ಮಾಡುವುದಕ್ಕಾಗಿ ಎಂದು ತಿಳಿದು ಮತ್ತೊಬ್ಬರಿಗೆ ಉಪಕಾರ ಮಾಡಿ ಜೀವಿಸುವುದರಿಂದ ನಮಗೆ ಎಲ್ಲಿಲ್ಲದ ಆನಂದ ಸಿಗುತ್ತದೆ. ಮನಸ್ಸು ಬಹಳ ಸಂತೋಷದಿಂದ ಇದ್ದು, ಸುಖ ನಿದ್ರೆಯೂ ಬರುತ್ತದೆ.
ಯಾರು ನಮ್ಮ ಸೇವೆ ಕೇಳುತ್ತಾರೋ ಜಾತಿ ಬೇಧ ಇಲ್ಲದೆ ಅವರ ಸೇವೆ ಮಾಡಬೇಕು. ಕೆಲವರು ನಾನಾ ವಿಧದ ಸಮಸ್ಯೆಯಲ್ಲಿರುತ್ತಾರೆ. ಆಗ ಅವರ ಸಮಸ್ಯೆ ಬಗೆಹರಿಸುವ ದಾರಿ ಕಂಡು ನಮ್ಮಿಂದಾದ ಸಹಾಯ ಮಾಡಿದರೆ ಅವರ ಮನಸ್ಸಿನ ಚಿಂತೆ ದೂರವಾಗಿ ಸಂತೋಷದಿಂದ ಇರುತ್ತಾರೆ. ಹೀಗೆ ಒಂದಲ್ಲಾ ಒಂದು ಸೇವೆ ಮಾಡುತ್ತಿದ್ದರೆ ನಮಗೆ ಎದುರಾಗುವ ಕಷ್ಟ ಕಾರ್ಪಣ್ಯಗಳೂ ಕಡಿಮೆಯಾಗುತ್ತವೆ. ಮಗುವನ್ನು ಪ್ರೀತಿ, ವಾತ್ಸಲ್ಯದಿಂದ ಬೆಳೆಸುವುದು ನಮ್ಮ ಕರ್ತವ್ಯ. ಹೀಗೆ ಬೆಳೆಸಿದಾಗ ಅದರ ಸಾಂಗತ್ಯಕ್ಕೆ ಬರುವ ಇನ್ನೊಂದು ಮಗುವೂ ಒಳ್ಳೆಯದನ್ನೇ ಕಲಿಯುತ್ತದೆ. ಇದರಿಂದ ಸಮಾಜಕ್ಕೆ ಉತ್ತಮ ಮಕ್ಕಳನ್ನು ನೀಡಿದಂತಾಗುತ್ತದೆ.
ನಾವು ಮಾಡುವ ಪರೋಪಕಾರದ ಫಲ ನಮಗೇ ಸಿಕ್ಕೇ ಸಿಗುತ್ತದೆ ಎಂದು ಎದುರು ನೋಡಬಾರದು. ಆತ್ಮತೃಪ್ತಿ ಸಿಗುವುದಕ್ಕೆ ನಿರಂತರವಾಗಿ ನಮ್ಮ ಮನಸನ್ನು ಜಾಗೃತಗೊಳಿಸಬೇಕು. ಪರಿಶ್ರಮ ಪಡದೇ ಯಾವ ಸಾಧನೆಯೂ ಅಸಾಧ್ಯ. ಒಳ್ಳೆಯ ಕೆಲಸ ಮಾಡುತ್ತಿದ್ದರೆ ಮಾತ್ರ ಲಕ್ಷ್ಮೀ ಒಲಿಯುವಳು. ಒಳ್ಳೆಯ ಕೆಲಸ ಮಾಡುವಾಗ ಕೆಟ್ಟ ಆಲೋಚನೆ ಮಾಡಬಾರದು. ಯಾವುದೇ ಕೆಲಸವನ್ನು ನನ್ನಿಂದ ಆಗದು ಎಂದು ಹಿಂಜರಿಯಬಾರದು.
ಕಷ್ಟಗಳು ಸದಾ ಬೆನ್ನ ಹಿಂದೆಯೇ ಇರುತ್ತವೆ. ಮನಸ್ಸನ್ನು ನಿಯಂತ್ರಣದಲ್ಲಿಡಲು ತಿಳಿಯದೇ ಇನ್ನೊಬ್ಬರನ್ನು ದ್ವೇಷ ಮತ್ತು ಕೆಟ್ಟ ಭಾವನೆಯಿಂದ ನೋಡುತ್ತಿದ್ದರೆ ನಮಗೆ ಕಷ್ಟಗಳು ಬರುವುದು ನಿಶ್ಚಿತ. ಆದ್ದರಿಂದ ಮನೋ ನಿಯಂತ್ರಣ ಮಾಡಿಕೊಂಡರೆ, ಸದಾ ಒಳ್ಳೆಯದಾಗುತ್ತದೆ.
ಮನುಷ್ಯರೊಂದಿಗೆ ಇತರ ಜೀವಿಗಳಿಗೂ ನಮ್ಮಿಂದಾಗುವ ಸೇವೆಯನ್ನು ಮಾಡುತ್ತಿರಬೇಕು. ಜಾನುವಾರುಗಳನ್ನು ಸಾಕಿ ಅವುಗಳನ್ನೂ ಪ್ರೀತಿಯಿಂದ ಕಾಣಬೇಕು. ಮಾನವ ಸಂಘಜೀವಿ ಹಲವು ಸಂಘ ಸಂಸ್ಥೆಗಳಿಂದ ಸದಾ ಸಹಾಯವನ್ನು ಪಡೆಯುತ್ತಲೇ ಇರುತ್ತಾನೆ ಹಾಗೂ ಸಹಾಯ ಮಾಡುತ್ತಲೇ ಇರುತ್ತಾನೆ. ಹೀಗೆ ಸಹಾಯ ಮಾಡುವಾಗ ಹಲವು ಅಪವಾದಗಳು ಬರುತ್ತಲೇ ಇರುತ್ತವೆ. ಆದರೆ, ಇಂಥ ಅಪವಾದಗಳನ್ನು ಗಂಭೀರವಾಗಿ ಪರಿಗಣಿಸದೇ ಒಳ್ಳೆಯ ಕೆಲಸ ಮಾಡಲು ಹಿಂಜರಿಯಬಾರದು.
ಶ್ರೀಕೃಷ್ಣ ಪರಮಾತ್ಮ ಹೊರಗೆ ಲೀಲೆಗಳಲ್ಲಿ ಆಸಕ್ತನಾಗಿರುವಂತೆ ಕಂಡರೂ ಒಳಗೆ ಬಹಳ ಉಪಕಾರ ಭಾವ ಹೊಂದಿದ್ದನು. ಬಹಳ ಜನರ ಕಷ್ಟವನ್ನು ಲೀಲಾಜಾಲವಾಗಿ ಆಟವಾಡಿಸುತ್ತಾ ಹೋಗಲಾಡಿಸಿದನು. ಗೋಪಾಲಕರನ್ನು ರಕ್ಷಿಸಲು ಇಡೀ ಗುಡ್ಡವನ್ನೇ ಎತ್ತಿಹಿಡಿದನು. ಶ್ರೀಕೃಷ್ಣ ಪರಮಾತ್ಮ ಲೋಕಸೇವೆ ಮಾಡುವುದರೊಂದಿಗೆ ಜ್ಞಾನಸೇವೆಯನ್ನೂ ಮಾಡಿದ. ಕೃಷ್ಣನಂತೆ ನಾವೂ ನಮ್ಮ ಕೈಲಾದ ಸೇವೆ ಮಾಡುವಾಗ ಹಸನ್ಮುಖಿಗಳಾಗಿರಬೇಕು.
ನಾವು ನಮ್ಮ ಕರ್ತವ್ಯದಲ್ಲಿದ್ದಾಗ ಇನ್ನೊಬ್ಬರು ಅವರ ಕೆಲಸವನ್ನೂ ಮಾಡಿ ಕೊಡಿ ಎಂದು ವಿನಂತಿಸುತ್ತಾರೆ. ಇದಕ್ಕೆ ನಿಯಮಗಳು, ಕಾನೂನುಗಳು ಇರಬಹುದು. ಆದರೆ ಈ ಕೆಲಸದಿಂದ ಇನ್ನೊಬ್ಬರಿಗೆ ತೊಂದರೆ ಇದೆಯೇ, ಇಲ್ಲವೇ ಎಂದು ನೋಡಿ ಜಾಗರೂಕತೆಯಿಂದ ಸಹಾಯ ಮಾಡಬೇಕು.
ನಮ್ಮ ಜೀವನ ಶಾಶ್ವತ ಅಲ್ಲ. ನಮ್ಮಲ್ಲಿರುವ ಅಹಂಕಾರ ನಮ್ಮನ್ನೇ ಕೆಡಿಸುತ್ತದೆ. ಆದರೂ ಮತ್ತೊಬ್ಬರ ಕಷ್ಟದಲ್ಲಿ ಯಾರು ಸಹಾಯಕ್ಕೆ ಬರುತ್ತಾನೋ ಅವನೇ ನಿಜವಾದ ಜೀವನ ನಡೆಸುವನು ಎಂದು ಹೇಳಬಹುದು. ಇನ್ನೊಬ್ಬರ ಕಷ್ಟದಲ್ಲಿ ಯಾರು ಅನುಕಂಪ ತೋರಿಸುವುದಿಲ್ಲವೋ ಅವರು ಜೀವಂತ ಇದ್ದೇನು ಪ್ರಯೋಜನ?
ಇನ್ನೊಬ್ಬರ ಕಷ್ಟದಲ್ಲಿ ನಾವು ಪಾಲು ಪಡೆದರೆ ಇದರಿಂದ ನಮಗೆ ಆತ್ಮತೃಪ್ತಿ ಸಿಗುತ್ತದೆ. ಪರಮಾತ್ಮನ ಅನುಗ್ರಹವೂ ಸಿಗುತ್ತದೆ.

- ಹರಿಶ್ಚಂದ್ರ ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.