ಗರಿಕೆಪ್ರಿಯ

ವಿಶಿಷ್ಟ ದೇವತೆ ವಿನಾಯಕನ ಜನ್ಮವೃತ್ತಾಂತದಿಂದ ಹಿಡಿದು ಅವನ ಆಕಾರ, ಸ್ವರೂಪ, ಆರಾಧನೆ, ಆಚರಣೆಯ ವಿಧಾನಗಳಲ್ಲೆಲ್ಲಾ ವಿಶಿಷ್ಟ, ವೈವಿಧ್ಯಗಳನ್ನು ಕಾಣಬಹುದು.
ವಕ್ರತುಂಡ, ಏಕದಂತ, ಮಹೋದರ, ಗಜಾನನ, ಲಂಭೋದರ, ವಿಕಟರಾಜ, ಧೂರ್ಮವರ್ಣ ಎಂದು ಪ್ರಖ್ಯಾತನಾದ ಗಣಪತಿಗೆ ವಿನಾಯಕ, ವಿಘ್ನೇಶ, ಬೆನಕ, ಸುಮುಖನೆಂಬ ಹಲವು ಹೆಸರುಗಳಿವೆ. ಕೃತಯುಗದಲ್ಲಿ ವಿನಾಯಕ, ತ್ರೇತಾಯುಗದಲ್ಲಿ ಮಯೂರೇಶ್ವರ, ದ್ವಾಪರಯುಗದಲ್ಲಿ ಗಜಾನನ, ಕಲಿಯುಗದಲ್ಲಿ ಗಣಪನಾಗಿ ಪೂಜೆಗೊಳ್ಳುತ್ತಿದ್ದಾನೆ ಈತ.
ಗಣಪ ಯೋಗಿಗಳಿಗೆ ಪರಬ್ರಹ್ಮ, ನರ್ತಕರಿಗೆ ನಾಟ್ಯಾಚಾರ್ಯ, ವಿದ್ಯಾರ್ಥಿಗಳಿಗೆ ವಿದ್ಯಾಗಣಪತಿ, ಮಕ್ಕಳಿಗೆ ಬಾಲಗಣಪತಿ, ಸರ್ವರಿಗೂ ವಿಘ್ನನಿವಾರಕನಾಗಿ ಸರ್ವಸಿದ್ಧಿ ಪ್ರದಾಯಕನಾಗಿದ್ದಾನೆ. ಗಣಪನ ಜನ್ಮವೃತ್ತಾಂತ ಸ್ಕಂದ, ಮತ್ಸ್ಯ, ಬ್ರಹ್ಮದೈವರ್ತ ಸೇರಿದಂತೆ 18 ಪುರಾಣಗಳಲ್ಲೂ ವಿವೇಚಿಸಲಾಗಿದೆ.
ಗಣಪತಿಯನ್ನು ಏಕದಂತ, ಚತುರ್ಭುಜ, ಸಂಕಷ್ಟಹರ, ವಿಚ್ಚಿಷ್ಠ, ವಿತ್ತಿಷ್ಟ, ಬಲಮುರಿ, ಎಡಮುರಿ ಹೀಗೆ ವಿವಿಧ ರೂಪದಲ್ಲಿ ಆರಾಧಿಸಲಾಗುತ್ತದೆ. ಬಲಮರಿ ಗಣಪ ಜಾಗೃತ ಗಣಪ, ಎಡಮುರಿ ಗಣಪ ಅಧ್ಯಾತ್ಮಕ್ಕೆ ಪೂರಕ ಮತ್ತು ಆನಂದದಾಯಕ, ವಿಚ್ಛಿಷ್ಠ ಗಣಪ ಶುಭದಾಯಕ, ವಿತ್ತಿಷ್ಠ ಗಣಪ ಕಾರ್ಯ ಸಿದ್ಧಿಯನ್ನುಂಟುಮಾಡುತ್ತಾನೆ.
ಗಣಪತಿಯನ್ನು ಒಂದು ದಿನದಿಂದ ಎರಡು, ನಾಲ್ಕು, ಐದುದಿನ, ಅಂತನ ಚತುರ್ದಶಿವರೆಗೆ ಅಥವಾ ತಿಂಗಳ ಪರ್ಯಂತ ಆರಾಧಿಸಲಾಗುತ್ತದೆ. ಈ ಸಮಯದಲ್ಲಿ 21 ರೀತಿಯ ಭಕ್ಷ್ಯ ಅಥವಾ 21 ಮೋದಕ ನೈವೇದ್ಯ ಮಾಡಲಾಗುತ್ತದೆ. ಗಣಪತಿ ಓಂಕಾರದ ಪ್ರತೀಕ. ಗಣಪ ಗರಿಕೆ ಪ್ರಿಯ. ತುಳಸಿ ಅವನಿಗೆ ನಿಷಿದ್ಧ.
ವಿಶ್ವವ್ಯಾಪಿ ವಿನಾಯಕ
ಭಾರತದಲ್ಲಿ ಗಣಪನಿಲ್ಲದ ಊರಿಲ್ಲ. ಮಾತ್ರವಲ್ಲದೆ ಆದ ವಿಶ್ವವಂದ್ಯನೂ ಹೌದು. ಚೀನಾ, ಜಪಾನ್, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ ಮುಂತಾದ ಹಲವು ದೇಶಗಳಲ್ಲೂ ಆರಾಧನೆಗೊಳ್ಳುತ್ತಿದ್ದಾನೆ. ಸರ್ವಮಾನ್ಯ ವಿನಾಯಕನನ್ನು ಗಾಣಪತ್ಯ, ಶೈವ, ವೈಷ್ಣವ, ಶಾಕ್ತಸೌರ, ಮೀಮಾಂಸಕಾದಿ ಸಮಸ್ತ ಮತದವರೂ ಆರಾಧಿಸುತ್ತಾರೆ.
ಇಂದು ಗಣೇಶ ಯಾವುದೇ ಒಂದು ವಿಶಿಷ್ಟ ವರ್ಗ ಅಥವಾ ಪ್ರದೇಶದ ದೇವತೆಯಾಗಿರದೆ ಸಕಲ ಮತ, ಸಕಲ ದೇಶದವರೂ ಪೂಜಿಸಲ್ಪಡುವ ದೇವನಾಗಿದ್ದಾನೆ.
ಶ್ರೀಲಂಕಾದ ಕಟರ್ ಎಂಬಲ್ಲಿ ಗಣಪತಿಯನ್ನು ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಪೂಜಿಸುತ್ತಾರೆ. ಗುಜರಾತಿನ ಜೈನ ದೇವಾಯದಲ್ಲಿ ಗಣಪತಿಯ ವಿಗ್ರಹಗಳನ್ನು ಕಾಣಬಹುದು. ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಲಕ್ಷಾಂತರ ದೇಗುಲಗಳಿವೆ. ಸಾಮ್ರಾಟ್ ಅಶೋಕನ ಮಗಳು ಚಾರುಮತಿ ನೇಪಾಳದಲ್ಲಿ ಗಣಪತಿ ದೇವಾಲಯ ಕಟ್ಟಿಸಿದ್ದಾಳೆ. ಬದರಿ ಹತ್ತಿರ ಮಾನಾ ಎಂಬಲ್ಲಿ ವ್ಯಾಸ ಗುಹೆಯ ಹತ್ತಿರ ಗಣಪತಿ ಮಂದಿರವೂ ಇದೆ.
- ಸೀತಾ. ಎಸ್. ನಾರಾಯಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


