ಶರಣು ಗಣಪ
ಸತ್ಯ ಲೋಕದಲ್ಲಿ ಬ್ರಹ್ಮ, ವೈಕುಂಠದಲ್ಲಿ ಮಹಾವಿಷ್ಣು, ಕೈಲಾಸದಲ್ಲಿ ಮಹೇಶ್ವರ...

ಸತ್ಯ ಲೋಕದಲ್ಲಿ ಬ್ರಹ್ಮ, ವೈಕುಂಠದಲ್ಲಿ ಮಹಾವಿಷ್ಣು, ಕೈಲಾಸದಲ್ಲಿ ಮಹೇಶ್ವರ- ಹೀಗೆ ಒಬ್ಬೊಬ್ಬ ದೇವನಿಗೂ ಒಂದೊಂದು ಲೋಕ. ಹಾಗಿದ್ದಲ್ಲಿ ವಿಶ್ವಮಾನ್ಯನಾದ ವಿನಾಯಕನು ಇರುವ ಲೋಕ ಯಾವುದು?
ಇದನ್ನು ತಿಳಿಯಲು ನಾವು ಗಣೇಶ ಪುರಾಣದ ಉಪಾಸನಾ ಖಂಡದ 51ನೇ ಅಧ್ಯಾಯ ತೆರೆಯಬೇಕು. ಗಣೇಶನ ಲೋಕ, ಅದರ ಹೆಸರು, ಆ ಲೋಕ ಸ್ವರೂಪ ಹೇಗಿದೆ ಎಂಬ ಎಲ್ಲಾ ಪ್ರಶ್ನೆಗಳಿಗೂ ಈ ಅಧ್ಯಾಯದಲ್ಲಿ ಸೂಕ್ತ ಉತ್ತರ ಲಭಿಸುತ್ತದೆ.
ಪುರಾಣಗಳಲ್ಲಿ ವರ್ಣಿಸಲಾದ ಇತರ ಲೋಕಗಳಿಗಿಂತ ಗಣೇಶ ಲೋಕಕ್ಕೆ ವಿಭಿನ್ನ ವೈಶಿಷ್ಟ್ಯವಿದೆ. ಅಂಡಾಂಡ ಪಿಂಡಾಂಡಗಳನ್ನು ಗಣಪತಿಯ ರೂಪ ಕಲ್ಪನೆಯಲ್ಲಿ ಸಮನ್ವಯ ಮಾಡಿರುವಂತೆ ಗಣೇಶ ಲೋಕದ ನಿರ್ದೇಶನದಲ್ಲೂ ಮಾಡಿರುವುದು ವಿಶೇಷ.
ಮುದ್ಗಲ ಮಹರ್ಷಿಗಳು ಗಣೇಶ ಲೋಕದ ವರ್ಣನೆಯನ್ನು ಗಣೇಶನ ಪರಮ ಭಕ್ತನಾದ ಕಾಶಿ ರಾಜನಿಗೆ ವಿಸ್ತಾರವಾಗಿ ವರ್ಣಿಸುತ್ತಾ ಗಣೇಶ ದೇವನು ನೆಲೆಸಿರುವ ಲೋಕಕ್ಕೆ 'ಸ್ವಾನಂದ' ಲೋಕವೆಂದು ಹೆಸರು. ಇದನ್ನು ನಿಜಲೋಕ, ದಿವ್ಯಲೋಕವೆಂತಲೂ ಕರೆಯುತ್ತಾರೆ ಎಂದಿದ್ದಾರೆ.
ಕಾಶಿ ರಾಜನು ವಿನಾಯಕನ ಅನನ್ಯ ಭಕ್ತ. ಗಣನಾಥನ ವಿರಹ ವ್ಯಥೆಯಲ್ಲಿ ಉಳಿದೆಲ್ಲಾ ದೇಹಧರ್ಮಗಳನ್ನು ತ್ಯಜಿಸಿ, ಹುಚ್ಚನಂತಾಗಿ, ಆತನಿಗೆ 'ಸ್ವಾನಂದ' ಲೋಕದಲ್ಲಿ ವಿನಾಯಕ ದೇವನೊಡನೆ ಸಾಯುಜ್ಯ ಮುಕ್ತಿ ಪಡೆಯುವ ಏಕೈಕವಾದ ಆಕಾಂಕ್ಷೆ ಇತ್ತು. ಅಂಥ ಕಾರ್ಯಕಾರಣಗಳೊಡನೆ ಕಾಲ ಒದಗಿಬಂತು.
ಲೋಕದಲ್ಲಿ ದೇವಾಂತಕ, ನರಾಂತಕರೆಂಬ ದೈತ್ಯರು ಪ್ರಬಲರಾಗಿ ನಡೆದ ಹಿಂಸಾಚಾರಗಳಿಂದ ಧರ್ಮಕ್ಕೆ ಚ್ಯುತಿ ಬಂದಿತು. ಬ್ರಹ್ಮದೇವರ ವರದಾನದಿಂದ ಮದಿಸಿದ ಅವರನ್ನು ಸಂಹರಿಸಲು ವಿನಾಯಕನು ಕಶ್ಯಪ ಮಹರ್ಷಿಗಳ ಮನೆಯಲ್ಲಿ ಅವರ ಪುತ್ರನಾಗಿ ಲೀಲಾಮಯ ದೇಹದಿಂದ ಅವತರಿಸಿನು.
ದೈತ್ಯರನ್ನು ಸಂಹರಿಸಿದ ಮೇಲೆ ಬಾಲ ಗಣಪತಿಯು ಪ್ರದರ್ಶಿಸಿದ ಹಲವು ಲೀಲಾ ವಿನೋದಗಳಲ್ಲಿ ಮುಖ್ಯವಾದುದೆಂದರೆ, ಕಾಶಿ ರಾಜನನ್ನು ಬಾಲ ಕ್ರೀಡೆಗಳಿಂದ ಸಂಪೂರ್ಣವಾಗಿ ತನ್ನೆಡೆಗೆ ಸೆಳೆದಿದ್ದು. ಇದ್ದಕ್ಕಿದ್ದಂತೆ ಕಾಶಿರಾಜನನ್ನು ಬಿಟ್ಟು ತನ್ನ ಸ್ವಾನಂದ ಲೋಕಕ್ಕೆ ಸೇರಿಕೊಂಡನು ಬಾಲ ಗಣಪತಿ.
ಆದರೆ ಭಕ್ತ ಪರಾಧೀನನಾದ ಭಗವಂತನಿಗೆ ಸ್ವಾನಂದ ಲೋಕದಲ್ಲೂ ನೆಮ್ಮದಿ ಸಿಕ್ಕಲಿಲ್ಲ. ಕೊನೆಗೆ ಪ್ರಮೋದ ಮತ್ತು ಆಮೋದರೆಂಬ ತನ್ನ ಧೂತರನ್ನು ಕಳುಹಿಸಿ, ಕಾಶಿರಾಜನನ್ನು ದಿವ್ಯ ವಿಮಾನದಲ್ಲಿ ಕರೆಸಿಕೊಂಡು, ಸ್ವಾನಂದ ಲೋಕದಲ್ಲಿ ಸಾಯುಜ್ಯ ಮುಕ್ತಿಯನ್ನು ಕರುಣಿಸುತ್ತಾನೆ. ಕಾಶಿರಾಜನು ದಿವ್ಯ ವಿಮಾನದಲ್ಲಿ ಅಂತರಿಕ್ಷ ಮಾರ್ಗವಾಗಿ ಪಯಣಿಸುವಾಗ, ಮುದ್ಗಲನು ಕಾಶಿರಾಜನಿಗೆ ಸ್ವಾನಂದ ಲೋಕದ ಬಗ್ಗೆ ವರ್ಣಿಸಿದ ವಿವರಣೆ ಇದೆ.
ಈ ಸ್ವಾನಂದ ಭವನಕ್ಕೆ ವೇದಾಧ್ಯಯನ, ಮಹಾದಾನ, ತಪಸ್ಸು, ಯಜ್ಞ, ವ್ರತ, ಜಪಗಳಿಂದ ಪ್ರವೇಶ ದೊರೆಯುವಂಥದ್ದಲ್ಲ. ನಿತ್ಯವೂ ಭಕ್ತಿಯಿಂದ ಮಾಡುವ ವಿನಾಯಕನ ಸೇವೆಯಿಂದ ಮಾತ್ರ ಈ ದುಃಖ ಮೋಹಗಳಿಲ್ಲದ ಲೋಕವು ಲಭಿಸುವುದು. ಅಂದರೆ ಗಣೇಶನಿಗೆ ಬೇಕಾಗಿರುವುದು ನಿಷ್ಕಲ್ಮಶ ಭಕ್ತಿಯೇ ಹೊರತು ಬೇರೇನೂ ಅಲ್ಲ.
'ಸ್ವಾನಂದ ಲೋಕ'ದವರೆಗೆ ಇರುವ ಭೂತ (ಪಿಶಾಚಿ), ಗಂಧರ್ವ, ಇಂದ್ರ, ಅಗ್ನಿ, ಯಮ, ಕುಬೇರ, ವರುಣ, ವಾಯು, ಸೂರ್ಯ, ಚಂದ್ರ, ನಕ್ಷತ್ರ, ಗೋ, ಸತ್ಯ, ವೈಕುಂಠ, ಕೈಲಾಸವೇ ಮೊದಲಾದ '21' ಲೋಕಗಳ ಬಳಿಕ 'ಶೂನ್ಯ' ಲೋಕದಲ್ಲಿ ಸೂರ್ಯ-ಚಂದ್ರರಿಲ್ಲ. ಪುಣ್ಯಜೀವಿಗಳ ಪುಣ್ಯದ ಬೆಳಕಿನಿಂದ ಮಾತ್ರವೇ ಈ ಸ್ಥಾನವನ್ನು ದಾಟಿ 'ಸ್ವಾನಂದ ಲೋಕ'ಕ್ಕೆ ಸಾಗಬೇಕು.
ಶೂನ್ಯದ ನಂತರ ಭ್ರಾಮರಿಕ ಶಕ್ತಿಸ್ಥಾನವಿದೆ. ಆಧಾರ ಶಕ್ತಿ ದೇವತೆಯು ಸರ್ವಶಕ್ತಿಮಯಿ. ಆಕೆಯ ಒಂದು ಶ್ವಾಸ ಮಾತ್ರದಿಂದಲೇ ಪರ್ವತಗಳು ತರಗಲೆಗಳಂತೆ ಅಲುಗಾಡುತ್ತವೆ. ಈ ಲೋಕವು 5 ಸಾವಿರ ಯೋಜನೆಗಳಷ್ಟು ವಿಸ್ತಾರವಾದದು. ರತ್ನಖಚಿತವಾದ ಸುವರ್ಣ ಭೂಮಿಯಲ್ಲಿ ಹತ್ತು ದಿಕ್ಕುಗಳನ್ನು ಬೆಳಗುತ್ತಾ ವಿನಾಯಕನು ಸಮಷ್ಟಿ, ವ್ಯಷ್ಟಿ ರೂಪ ಜಗದಾತ್ಮಕವಾಗಿ ಇಲ್ಲಿ ನೆಲೆಸಿದ್ದಾನೆ.
ಶ್ರೀಮನ್ನಾರಾಣನು ಅನ್ನಮಯ ಕೋಶಕ್ಕೂ, ಶಿವನು ಪ್ರಾಣಮಯ ಕೋಶಕ್ಕೂ, ಪರಾಶಕ್ತಿಯು ಮನೋಮಯ ಕೋಶಕ್ಕೂ, ಸೂರ್ಯನು ವಿಜ್ಞಾನಮಯ ಕೋಶಕ್ಕೂ ಒಡೆಯರಾದರೆ, ಗಣಪತಿಯು ಆನಂದಮಯ ಕೋಶಕ್ಕೆ ಅಧಿಪತಿಯಾಗಿದ್ದಾನೆ.
'ಸ್ವಾನಂದ' ಲೋಕವನ್ನು ಗಣೇಶನ ಅನುಗ್ರಹದೊಡನೆ ಮೂರ್ತರೂಪದಲ್ಲಿ, ಸಾಂಪ್ರದಾಯಿಕ ಹೊಯ್ಸಳ ಶೈಲಿಯಲ್ಲಿ 'ಸಿಂಹದ್ವಾರ'ದ ಒಡಗೂಡಿದ ದೇಗುಲವು ಬೆಂಗಳೂರಿಗೆ ಅನತಿ ದೂರದಲ್ಲಿರುವ ಕನಕಪುರ ರಸ್ತೆಯ ಅಗರ ತಾತಗುಣಿ ಗ್ರಾಮದ 'ಶ್ರೀ ಸ್ವಾನಂದಾಶ್ರಮ'ದಲ್ಲಿದೆ. ಸೋಂದಾ ಸ್ವರ್ಣದಲ್ಲಿ ಮಠದ ಶ್ರೀ ಗಂಗಾಧರೇಶ್ವರ ಸರಸ್ವತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಲೋಕಾರ್ಪಣೆಗೊಂಡು ವಿನಾಯಕ ಸದ್ಭಕ್ತಿ ತಾಣವಾಗಿದೆ.
- ಗುರುರಾಜ ಪೋಶೆಟ್ಟಿಹಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


