ಮಂಗಳ ಗೌರಿ
ವಿಶ್ವಪ್ರಸಿದ್ಧ ಗಣೇಶ ಚತುರ್ಥಿಯ ಒಂದು ದಿನ ಮೊದಲು ಬರುವುದು ಈ ಗೌರಿ ತೃತೀಯ. ಅರಿಶಿನ ಗೌರಿ ಪೂಜಿಸುವವರು...

ವಿಶ್ವಪ್ರಸಿದ್ಧ ಗಣೇಶ ಚತುರ್ಥಿಯ ಒಂದು ದಿನ ಮೊದಲು ಬರುವುದು ಈ ಗೌರಿ ತೃತೀಯ. ಅರಿಶಿನ ಗೌರಿ ಪೂಜಿಸುವವರು ಕೆಲವರಾದರೆ, ಹಸಿಮಣ್ಣಿನಿಂದ ಪೂಜಿಸುವ ಪದ್ಧತಿ ಕೆಲವರದು. ಪೂಜೆಯ ನಂತರದಲ್ಲಿ ಬಾಗಿನ ಕೊಡುತ್ತಾರೆ, ಜೋಡಿ ಮೊರದಲ್ಲಿ ಆಹಾರ ಪದಾರ್ಥ, ಜೊತೆಗೆ ಮಂಗಳ ದ್ರವ್ಯಗಳನ್ನು ಇಟ್ಟು ಅರ್ಪಿಸುತ್ತಾರೆ. ಗೌರಿಯನ್ನು ಮನೆ ಮಗಳೆಂದು ಭಾವಿಸಿ ಪ್ರತಿವರ್ಷವೂ ಆಹ್ವಾನಿಸಿ ಉಡಿತುಂಬುವುದು ಈ ಹಬ್ಬದ ವಿಶೇಷ.
ಇದು ಸಕಲ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ ಹೆಂಗಳೆಯರದ್ದು. ಎರಡು ಸಂದರ್ಭಗಳಲ್ಲಿ ಗೌರಿಯನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ. ಶ್ರಾವಣದ ಮಂಗಳಗೌರಿ ವ್ರತ ಹಾಗೂ ಭಾದ್ರಪದದ ಸ್ವರ್ಣಗೌರಿವ್ರತ. ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗಳ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಹಬ್ಬ.
ಗೌರವಾದರ
ಜನಪದ ಸಾಹಿತ್ಯದಲ್ಲಿ ಗೌರಿ ಮತ್ತು ಗಂಗೆಯ ಸಂಬಂಧವನ್ನು ಮನ ಮನಮುಟ್ಟುವಂತೆ ಬಣ್ಣಿಸಲಾಗಿದೆ. ಅವರ ದೃಷ್ಟಿಯಲ್ಲಿ ಭೂಲೋಕಕ್ಕೆ ಗೌರಿಗಣೇಶನ ಜೊತೆ ಶಿವನೂ ಬರುತ್ತಾನೆ. ವರ್ಷಕ್ಕೊಮ್ಮೆ ಮಾವನ ಮನೆಗೆ ಬರುವ ಶಿವನಿಗೆ ಮಗಳು ಮೊಮ್ಮಗನಿಗೆ ನೀಡುವ ಪ್ರೀತಿ ಆದರಗಳು ಅಳಿಯನಿಗೂ ನೀಡಿದ್ದಾರೆ. ಅವನನ್ನು ಗೌರವದಿಂದ ಬರಮಾಡಿಕೊಳ್ಳುತ್ತಾರೆ.
ಮನೆಮಂದಿಯೆಲ್ಲ ಸಂಭ್ರಮಿಸುವ ಶುಭ ಸಂದರ್ಭದಲ್ಲಿ ಗೌರಿಯ ಸವತಿ ಗಂಗೆಯ ನೆನಪು ಯಾರಿಗೂ ಬರುವುದಿಲ್ಲ. ಗೌರಿಯ ಪರವಾದ ಪ್ರೀತಿಯೇ ಈ ಜಾಣ ಮರೆವಿಗೆ ಕಾರಣವಿರಬಹುದೇನೋ, ಗೌರಿಹಬ್ಬಕ್ಕೆ ಗಂಗೆಯನ್ನು ಕರೆಯದಿದ್ದರೇನಂತೆ, ಗೌರಿಗೆ 'ಬಾಗಿನ' ನೀಡುವುದು ಗಂಗೆಯ ಮೂಲಕವೇ.
ಬೇರೆಲ್ಲಾ ಹಬ್ಬಗಳಿಗಿಂತ ಗೌರಿ ಹಬ್ಬ ಆಪ್ತವೆನಿಸುವುದು ಹಲವು ಕಾರಣಗಳಿಗಾಗಿ. ಇದು ದೇವತಾರಾಧನೆಯ ಹಬ್ಬವಾದರೂ ಇದರ ಮೂಲತತ್ತ್ವ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿದೆ.
ಲಕ್ಷ್ಮಿ- ಸರಸ್ವತಿಯರಿಗಿಂತ ಮಾನವ ಗುಣಸ್ವಭಾವಕ್ಕೆ ಹೆಚ್ಚು ಹತ್ತಿರವೆನಿಸುವ ನಮ್ಮೆಲ್ಲರಂತೆ ಸಂಸಾರದ ಒಳ-ಹೊರಗೆ ಗಂಡ ಮಕ್ಕಳೊಡನಾಡುವ ಪಾರ್ವತಿಯ ಹಬ್ಬ ಇದು.
ಹಠ, ಛಲ
ಮದುವೆಯಿಂದಲೇ ತನ್ನ ಹಠ- ಛಲದ ಸಾಧನೆಯನ್ನು ಈ ಗೌರಿ ತೋರಿಸುತ್ತಾಳೆ. ಪರ್ವತರಾಜನ ಮಗಳಾದರು ಬೂದಿ ಬಳಿದುಕೊಂಡಿರುವ ಬೋಲಾ ಶಂಕರನನ್ನು ಮದುವೆಯಾಗುತ್ತಾಳೆ. ಇದಕ್ಕೆ ಮೊದಲಾದರೂ ಅಷ್ಟೇ. 'ಸತಿ'ಯಾಗಿ ತನ್ನ ತಂದೆ ದಕ್ಷ ಪ್ರಜಾಪತಿಯ ಅಪಮಾನ ಸಹಿಸಲಾಗದೇ ಚಿತೆಗೆ ಹಾರುವ ಈಕೆ ಪುನರ್ಜನ್ಮದಲ್ಲಿ ಪಾರ್ವತಿಯಾಗುತ್ತಾಳೆ.
ದಾಂಪತ್ಯ, ವಾತ್ಸಲ್ಯ, ಲಾವಣ್ಯಗಳು ಮಾತ್ರವಲ್ಲದೆ ಗಟ್ಟಿತನ, ಗರ್ವ, ಆತ್ಮಸಮ್ಮಾನಗಳಿಗೂ ಗೌರಿ ನಮಗೆ ಮಾದರಿಯಾಗುತ್ತಾಳೆ. ಲೀಲೆಯಲ್ಲಿ, ಪಾರಮ್ಯದಲ್ಲಿ, ಭಕ್ತರ ಹೊಂದುವಿಕೆಯಲ್ಲಿ, ಜನಪ್ರಿಯತೆಯಲ್ಲಿ ಪತಿರಾಯ ಶಿವನಿಗೆ ಸರಿಸಮನಾಗಿ ನಿಲ್ಲುತ್ತಾಳೆ.
ಅಂತರಂಗಕ್ಕೆ ಕನ್ನಡಿ
ಪುರಾಣ ಹಾಗೂ ಜನಪದದಲ್ಲಿ ಚಿತ್ರಿಸಿರುವ ಗೌರಿಯ ಕಥೆ ಭಾರತೀಯ ಹೆಣ್ಣುಮಕ್ಕಳ ಅಂತರಂಗಕ್ಕೆ ಕನ್ನಡಿ. ಹೆಣ್ಣಿನ ನಿಜವಾದ ಶಕ್ತಿಗಳೇನು ಎನ್ನುವುದು ಗೌರಿಯ ವ್ಯಕ್ತಿತ್ವದಲ್ಲಿ ಅನಾವರಣಗೊಳ್ಳುತ್ತದೆ.
ಗೌರಿ ಸಂಸಾರ ಅತ್ಯಂತ ವಿಲಕ್ಷಣವಾದುದು. ಇವರ ಕುಟುಂಬದಲ್ಲಿ ಗಂಡ ಹೆಂಡತಿ ಸೇರಿ ಕುಣಿಯುತ್ತಾರೆ. ಮಕ್ಕಳೂ ಸೇರಿದಂತೆ ಒಬ್ಬೊಬ್ಬರೂ ಒಂದೊಂದು ಕಡೆ ರಾಕ್ಷಸರನ್ನು ಸಂಹರಿಸಲಿಕ್ಕೊ ಯಾರದೋ ಸಹಾಯಕ್ಕೋ ಯುದ್ಧ ಹೂಡಿ ಹೊರಡುತ್ತಾರೆ. ಇವರೆಲ್ಲರ ವಾಹನಗಳು ನಂದಿ, ಸಿಂಹ, ಹಾವು, ನವಿಲು, ಇಲಿ ಹೀಗೆ ಪರಸ್ಪರ ಶತ್ರುಗಳು ಆದರೂ ಅಲ್ಲಿ ಸೌಹಾರ್ದವಿದೆ.
ಅಪೂರ್ವ ಚೈತನ್ಯ
ಮನೋದೈಹಿಕ ಶಕ್ತಿ- ಆತ್ಮಘನತೆ ಮತ್ತು ವ್ಯಕ್ತಿತ್ವದ ಆಂತರಿಕ ಸೌಂದರ್ಯದಿಂದ ಗೌರಿ ಅಪೂರ್ವ ಚೈತನ್ಯಶಾಲಿಯಾಗಿ ಕಾಣಿಸುತ್ತಾಳೆ. ದಾಂಪತ್ಯದ ಅಗ್ನಿ ದಿವ್ಯಗಳನ್ನು ಗೌರಿ ಮೌನಗೌರಿಯಾಗಿ, ಶಕ್ತಿಗೌರಿಯಾಗಿ, ಕ್ರಿಯಾಗೌರಿಯಾಗಿ ಹಲವು ದಾರಿಗಳಲ್ಲಿ ಜಯಿಸಲು ನೋಡುತ್ತಾಳೆ. ಮಿಸುಕಾಡದೇ ಕುಳಿತು ತಲ್ಲಣವ ತಡೆಯುವ ಅರ್ದ್ರ ಗರ್ವದ ಹುಡುಗಿ ನಮ್ಮ ಗೌರಿ.
ನಮ್ಮ ಕವಿಗಳು ಪುರಾಣಕಾರರು 'ಗಂಡಸಿಗ್ಯಾಕೆ ಗೌರಿ ದುಃಖ' ಅಂದುಕೊಂಡು ಸುಮ್ಮನಿಲ್ಲ, ಕಾವ್ಯಗಳಲ್ಲಿ ಗೌರಿಯ ಸುಖದುಃಖ ಸ್ವಾಭಿಮಾನದ ಸುಂದರ ಚಿತ್ರಣವಿದೆ. ಅಂತೆಯೇ ಅವಳ ಶಕ್ತಿಯ ಉಗ್ರ ವರ್ಣನೆಗಳಿವೆ.
ಭಾರತೀಯ ಪುರಾಣ ಪರಂಪರೆಯ ಸಮಾಜ ವಿಜ್ಞಾನ ಮೂಲದ ವ್ಯಾಖ್ಯಾನ ಹೇಗಾದರೂ ಇರಲಿ, ಈ ಪ ರಂಪರೆಯಲ್ಲಿ ಇವಳಂಥವಳು ಇನ್ನೊಬ್ಬಳಿಲ್ಲ. ಆದ್ದರಿಂದ ಸ್ತ್ರೀಶಕ್ತಿಗೆ ಗೌರಿಯೇ ಮಾದರಿ. ಮಿತಿಗಳ ನಡುವೆ ನಮ್ಮ ಹೆಣ್ಣು ಮಕ್ಕಳಿಗೆ ಗೆಳತಿ.
ತಾಯಿ ನಂಟು
ಸಮಾಜ ಪಿತೃ ಪ್ರಧಾನವೇ ಆಗಿರಲಿ ಮಾತೃಪ್ರಧಾನವೇ ಆಗಲಿ, ತಾಯಿಯೊಂದಿಗಿನ ಗುರುತಿಸಿಕೊಳ್ಳುವಿಕೆ ಸ್ಥಾನ- ಸಂಪ್ರದಾಯ- ಚರಿತ್ರೆ- ಸಾಂಕೇತಿಕತೆ- ಹುಟ್ಟಿನ ಅರಿವು ಇವುಗಳೊಂದಿಗೆ ನಮ್ಮನ್ನು ಹೆಣೆಯುತ್ತದೆ. ತಾಯಿಯೊಂದಿಗೆ ಗುರುತಿಸಿಕೊಳ್ಳದಿದ್ದಾಗ ನಾವು ನಿರ್ಗತಿಕರಾದಂತೆ 'ನಮ್ಮತನ'ವನ್ನೇ ಕಳೆದುಕೊಂಡಂತೆ.
ಗೌರಿಯೆಂದರೆ ಕಣ್ಮುಂದೆ ಬರುವುದು ಮುಗುಳ್ನಗೆಯ ಶಾಂತ ಸುಂದರ ಮುಖ. ಸಮಯ ಬಂದಾಗ ತನ್ನನ್ನು ತಾನು ರಕ್ಷಿಸಕೊಳ್ಳಬಲ್ಲ ಚತುರೆ, ತೋಳ್ಬಲವುಳ್ಳ ಸಬಲೆ ಕೂಡ. ಹಾಗೆಂದೇ ಗೌರಿ ಕಾಳಿಯೂ ಆಗಿ ಅಭಿವ್ಯಕ್ತಗೊಂಡಿದ್ದಾಳೆ. ಇವಳು ಸೌಮ್ಯ ಭಾವದವಳೆಂದು ಕೆಣಕುವಂತಿಲ್ಲ. ಗೌರಿ ಸ್ವರೂಪದ ಸಂಕೇತ, ಗುಣಗಳನ್ನು ಅರ್ಥೈಸಿಕೊಂಡು ಅನುಸರಿಸಿದರೆ ಭಾದ್ರಪದ ತದಿಗೆಯ ಆಚರಣೆ ಸಾರ್ಥಕವಾಗುತ್ತದೆ.
- ಪ್ರಣವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


