ಭಕ್ತಿ-ಜ್ಯೋತಿಷ್ಯ

ಬಾಳು ಬೆಳಕಾಯಿತು...

ಬಾಳು ಬೆಳಕಾಯಿತು...
Published On :

ಪ್ರತಿವರ್ಷ ಆಶ್ವೀಜದ ಕೊನೆಯಲ್ಲಿ ಮತ್ತು ಕಾರ್ತೀಕದ ಆರಂಭದಲ್ಲಿ ದೀಪಾವಳಿ ಬರುತ್ತದೆ. ಈ ಸಮಯದಲ್ಲಿ ಪೈರುಗಳು ಬೆಳೆದು ನಿಂತು ಎಲ್ಲೆಡೆಯೂ ಹಸಿರು ಕಂಗೊಳಿಸುತ್ತಿರುತ್ತದೆ. ದೀಪಾವಳಿ ಹಬ್ಬವು ನಾಲ್ಕು ದಿನದ ಸಂಭ್ರಮ. ಮೊದಲ ದಿನ ಸಂಜೆ ನೀರು ತುಂಬುವ ಹಬ್ಬ, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ಧನಲಕ್ಷ್ಮಿ ಪೂಜೆ ಮತ್ತು ನಾಲ್ಕನೇ ದಿನ ಬಲಿಪಾಡ್ಯಮಿ.

ಅಶ್ವೀಜದ ಕೃಷ್ಣ ಪಕ್ಷದ ತ್ರಯೋದಶಿ ದಿನದ ಸಾಯಂಕಾಲ ನೀರು ತುಂಬುವ ಹಬ್ಬ. ಇದನ್ನು 'ಧನ ಶ್ರಯೋದಶಿ' ಎನ್ನುವರು. ಆ ದಿನ ನೀರಿನ ಹಂಡೆಗಳನ್ನು ತೊಳೆದು ಸ್ವಚ್ಛಮಾಡಿ, ನೀರು ತುಂಬಲಾಗುತ್ತದೆ. ಹಂಡೆಗೆ ಸುಣ್ಣದ ಪಟ್ಟೆ ಬಳಿದು, ಹಿಂಗಲಚ್ಚಿಕಾಯಿ ಇರುವ ಬಳ್ಳಿಯನ್ನು ಕಟ್ಟಲಾಗುತ್ತದೆ. ಕಳಶಪೂಜೆ ಮಾಡಿದ ರೀತಿಯಲ್ಲಿ ಆ ಹಂಡೆಯನ್ನು ಪೂಜಿಸಬೇಕು.

ನರಕ ಚತುರ್ದಶಿ ಹಬ್ಬ
ದ್ವಾಪರಯುಗದಲ್ಲಿ ನರಕಾಸುರನು ದೇವತೆ ಮತ್ತು ಋಷಿಗಳನ್ನು ಹಿಂಸಿಸುತ್ತಿದ್ದನು. 16 ಸಾವಿರ ರಾಜಪುತ್ರಿಯರನ್ನು ಅಂತಃಪುರದಲ್ಲಿ ಸೆರೆಯಿಟ್ಟಿದ್ದನು. ಇವನ ಹಿಂಸೆ ತಡೆಯಲಾಗದೆ ದೇವತೆಗಳೆಲ್ಲಾ ಸೇರಿ ಶ್ರೀಕೃಷ್ಣನ ಮೊರೆ ಹೋದರು. ನಂತರ ಶ್ರೀಕೃಷ್ಣ ನರಕಾಸುರನ ಜೊತೆ ಘೋರ ಯುದ್ಧಮಾಡಿ ರಾಕ್ಷಸನನ್ನು ಅಶ್ವೀಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ ರಾತ್ರಿಯಂದು ಸಂಹರಿಸಿದನು. ಕತ್ತಲೆಯಲ್ಲಿ ಈ ನರಕಾಸುರನನ್ನು ಕೊಂದು ಇಡೀ ಲೋಕಕ್ಕೆ ನೆಮ್ಮದಿಯ ಬೆಳಕನ್ನು ನೀಡಿದ ಕಾರಣಕ್ಕಾಗಿ ಆ ದಿನವನ್ನು 'ನರಕ ಚತುರ್ದಶಿ' ಎಂದು ಕರೆಯಲಾಗುತ್ತದೆ.
ನರಕಾಸುರನ ಬಂಧನದಲ್ಲಿದ್ದ 16,000 ರಾಜ ಪುತ್ರಿಯರೆಲ್ಲಾ ಶ್ರೀಕೃಷ್ಣನನ್ನು ತಮ್ಮ ಪತಿಯೆಂದು ಭಾವಿಸಿದರು. ಈ ಕಾರಣಕ್ಕಾಗಿ ಶ್ರೀಕೃಷ್ಣನು ಅವರನ್ನು ವಿವಾಹವಾದ. ರಾಜಪುತ್ರಿಯರು ಸಮಾಜದಲ್ಲಿ ಎದುರಿಸುವ ಅವಮಾನ ತಡೆಯಲು ಕೃಷ್ಣನು ವಿವಾಹವಾದ ಎಂದು ಹೇಳಿದರೆ ತಪ್ಪಾಗಲಾರದು.

ನರಕ ಚತುರ್ದಶಿ ದಿನ ತೈಲಸ್ನಾನ ಮಾಡುತ್ತೇವೆ. ನರಕಾಸುರನು ಮರಣ ಹೊಂದಿದ್ದರಿಂದ ಅಶೌಚವಾಯಿತೆಂಬ ನಂಬಿಕೆ. ಆದ್ದರಿಂದ ಅಂದು ಎಣ್ಣೆ ನೀರು ಸ್ನಾನ ಮಾಡಬೇಕು. ಸ್ತ್ರೀಯರು, ಪುರುಷರು ವಿಧವೆಯರು, ಮಕ್ಕಳು ಮತ್ತು ಸನ್ಯಾಸಿಗಳೂ ಎಣ್ಣೆ ಸ್ನಾನ ಮಾಡಬೇಕು ಎಂದು ಧರ್ಮಶಾಸ್ತ್ರ ಹೇಳುತ್ತದೆ. ಎಣ್ಣೆಯಲ್ಲಿ ಲಕ್ಷ್ಮಿಯೂ, ನೀರಿನಲ್ಲಿ ಗಂಗೆಯೂ ಇರುವುದರಿಂದ ನಮಗೆ ಲಕ್ಷ್ಮಿಯ ಕೃಪೆ ಮತ್ತು ಗಂಗಾದೇವಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.

ನರಕ ಚತುರ್ದಶಿಯ ದಿನ ಸಂಜೆ ಮನೆ ಮುಂದೆ ಲೋಹದಿಂದಲೋ ಅಥವಾ ಮಣ್ಣಿನಿಂದಲೋ ಮಾಡಿದ ಹಣತೆಯಲ್ಲಿ ದೀಪ ಹಚ್ಚಬೇಕು. ನರಕಾಸುರನನ್ನು ಸಂಹರಿಸಿದ ಸಂತೋಷಕ್ಕಾಗಿ ಪಟಾಕಿ ಹಚ್ಚಿ ಸಂತೋಷಪಡಬೇಕು.

ಧನಲಕ್ಷ್ಮಿ ಪೂಜೆ
ಮೂರನೇ ಹಬ್ಬ ಧನಲಕ್ಷ್ಮಿ ಪೂಜೆ. ಆ ದಿನವೇ ಅಮವಾಸ್ಯೆ. ಹಿಂದೂ ಪಂಚಾಂಗದ ಪ್ರಕಾರ, ಅಮವಾಸ್ಯೆ 'ಅಶುಭ ದಿನ'. ಅಂದು ಮಂಗಳಕರ ಕೆಲಸ, ಪೂಜೆಗಳನ್ನು ಮಾಡುವುದಿಲ್ಲ. ಆದರೆ ಈ ದೀಪಾವಳಿ ಅಮವಾಸ್ಯೆ ಇದಕ್ಕೆ ವಿರುದ್ಧವಾದುದು. ಏಕೆಂದರೆ, ಅಂದು ಧನ ದೇವತೆಯಾದ ಲಕ್ಷ್ಮಿಯು ಸಮುದ್ರ ಮಥನದಿಂದ ಉದಯಿಸಿದ ದಿನವಾಗಿದೆ ಎಂದು ಪುರಾಣಗಳು ಹೇಳುತ್ತವೆ.

ಲಕ್ಷ್ಮಿಯಲ್ಲಿ ಎರಡು ವಿಧ
ಚರ ಲಕ್ಷ್ಮಿ ಮತ್ತು ಸ್ಥಿರ ಲಕ್ಷ್ಮಿ. ದುಡಿಯುವುದು ಮುಖ್ಯವಲ್ಲ ದುಡಿದ ಸಂಪತ್ತು ಸ್ಥಿರವಾಗಿ ನಮ್ಮಲ್ಲಿರಬೇಕು ಎಂದು ಜ್ಞಾನಿಗಳು ತಿಳಿಸುತ್ತಾರೆ. ಆದ್ದರಿಂದ ಆ ದಿನ ನಾವು ಶ್ರದ್ಧಾ ಭಕ್ತಿಯಿಂದ ಸ್ಥಿರ ಲಕ್ಷ್ಮಿ ಪೂಜೆ ಮಾಡಬೇಕು.

ಬಲಿಪಾಡ್ಯಮಿ
ನಾಲ್ಕನೇ ಹಬ್ಬವೇ ಬಲಿಪಾಡ್ಯಮಿ ಅಥವಾ ದೀಪಾವಳಿ. ಬಲಿ ಚಕ್ರವರ್ತಿಯು ಪ್ರಹ್ಲಾದನ ಮೊಮ್ಮಗ. ಇವನು ಇಂದ್ರನನ್ನು ಸೋಲಿಸಿ ಸ್ವರ್ಗವನ್ನು ವಶದಲ್ಲಿಟ್ಟುಕೊಂಡಿದ್ದ. ಈತನ ಗರ್ವವನ್ನು ಮುರಿಯಬೇಕೆಂದು ಮಹಾವಿಷ್ಣು ವಾಮನ ರೂಪ ತಾಳಿ ಬಲಿ ಚಕ್ರವರ್ತಿ ಹತ್ತಿರ ಮೂರು ಹೆಜ್ಜೆ ಭೂಮಿ ದಾನ ಕೇಳುತ್ತಾನೆ.

ಮಹಾದಾನಿ ಬಲಿಯು ಒಪ್ಪಿದ ನಂತರ ವಾಮನನು ಒಂದು ಹೆಜ್ಜೆಯನ್ನು ಆಕಾಶದಲ್ಲೂ, ಮತ್ತೊಂದನ್ನು ಬಲಿಯ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳುತ್ತಾನೆ. ಬಲಿ ಚಕ್ರವರ್ತಿಯು ಕಾರ್ತೀಕ ಮಾಸದ ಪಾಡ್ಯದ ದಿನ ಸಂಹಾರವಾದ್ದರಿಂದ ಅಂದು ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ.

ಬಲಿಪಾಡ್ಯಮಿ ಶ್ರೀರಾಮನಿಗೆ ಪಟ್ಟಾಭಿಷೇಕವಾದ ದಿನ. ಪಾಂಡವರು ಅಜ್ಞಾತವಾಸ ಮುಗಿಸಿದ ದಿನ. ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿಹಿಡಿದ ದಿನ. ಆದ್ದರಿಂದ ಅಂದು ಮಾತೃ ಸ್ವರೂಪವಾದ ಗೋಮಾತೆಯನ್ನು ಪೂಜಿಸಿ 33 ಕೋಟಿ ದೇವತೆಗಳ ಕೃಪೆಗೆ ಪಾತ್ರರಾಗುತ್ತಾರೆ.

ಒಂದು ದೀಪದಿಂದ ನೂರಾರು ದೀಪಗಳನ್ನು ಬೆಳಗಿಸಬಹುದು. ಹಾಗೆಯೇ ಒಬ್ಬ ಜ್ಞಾನಿಯು ನೂರಾರು ಅಜ್ಞಾನಿಗಳನ್ನು ಜ್ಞಾನಿಗಳನ್ನಾಗಿ ಪರಿವರ್ತಿಸಬಹುದು. ಈ ಜ್ಞಾನದ ಸಂಕೇತವಾಗಿರುವ ದೀಪಾವಳಿ ಹಬ್ಬವನ್ನು ನಾಡಿನಲ್ಲೆಲ್ಲಾ ಆಚರಿಸುತ್ತಿರುವುದು ಒಂದು ವಿಶೇಷವೇ ಸರಿ.

- ಮಂಡಗದ್ದೆ ಪ್ರಕಾಶಬಾಬು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.