ದಾರಿ ದೀಪ
ದೀಪಾವಳಿ... ಆ ಹೆಸರು ಕೇಳುತ್ತಲೇ ನಮ್ಮೆಲ್ಲರ ಎದೆಯಲ್ಲೊಂದು ಬೆಳಕಿನ ತೋರಣ. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ...

ದೀಪಾವಳಿ... ಆ ಹೆಸರು ಕೇಳುತ್ತಲೇ ನಮ್ಮೆಲ್ಲರ ಎದೆಯಲ್ಲೊಂದು ಬೆಳಕಿನ ತೋರಣ. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುವ ಬೆರಗಿನ ಹಬ್ಬ. ಒಬ್ಬರಿಗೆ ನರಕ ಚತುರ್ದಶಿ ಸಂಭ್ರಮವಾದರೆ ಇನ್ನೊಬ್ಬರಿಗೆ ಬಲಿ ಪಾಡ್ಯಮಿಯೇ ಜೋರು. ವ್ಯಾಪಾರವನ್ನೇ ನೆಚ್ಚಿಕೊಂಡಿರುವ ಪೇಟೆಗಳಲ್ಲಿ ಲಕ್ಷ್ಮೀ ಪೂಜೆಯದ್ದೇ ಅಬ್ಬರವಾದರೆ, ತೃಪ್ತಿಯ ಬದುಕು ಹೊದ್ದುಕೊಂಡಿರುವ ಹಳ್ಳಿಗಳಲ್ಲಿ ಗೋ ಪೂಜೆ ಮಾಡುವ, ಕೃಷಿ ಸಲಕರಣೆಗಳನ್ನೆಲ್ಲಾ ಧನ್ಯತಾಭಾವದಿಂದ ಪೂಜಿಸುವ ಸಡಗರ.
ದೀಪಾವಳಿ ಯಾವುದೇ ಧರ್ಮಕ್ಕೆ ಸೀಮಿತವಾಗದ ಭಾರತವ್ಯಾಪಿ ಹಬ್ಬ. ಇಲ್ಲಿ ದೀಪದ್ದೇ ಆರಾಧನೆ. ಹಾಗೆಂದೇ ಎಲ್ಲರಿಗೂ ಈ ಹಬ್ಬ ಅತ್ಯಾಪ್ತ. ಕೆಟ್ಟದರ ದಮನ ಮತ್ತು ಒಳ್ಳೆಯದರ ಹಾಗೂ ನಮ್ಮತನದ ರಕ್ಷಣೆ- ಇದು ದೀಪಾವಳಿ ತನ್ನ ಒಡಲೊಳಗೆ ಅಡಗಿಸಿಕೊಂಡಿರುವ ಒಂದು ಸಾಲಿನ ಕತೆ. ಈ ಹಬ್ಬ ಅರಿವಿನ ದೀವಿಗೆಯೂ ಹೌದು. ಸ್ವಾಭಿಮಾನದ ದೀವಿಗೆಯೂ ಹೌದು.
ದಿನ ವಿಶೇಷ
ಜೈನ ತೀರ್ಥಂಕರ ಮಹಾವೀರ ಮೋಕ್ಷ ಅಥವಾ ನಿರ್ವಾಣ ಹೊಂದಿದ್ದ ದಿನವಾಗಿ ಆಚರಿಸಲಾಗತ್ತದೆ. ಶ್ರೀಕೃಷ್ಣ ನರಕನನ್ನು ವಧಿಸಿದ್ದು ಕಾರ್ಯವೊಂದರ ಅಂತ್ಯ. ಸಹಜವಾಗಿಯೇ ಸಂಭ್ರಮ ಅದಕ್ಕಾಗಿ. ವಿಷ್ಣು ವಾಮನಾವತಾರ ತಾಳಿ ಬಲಿಯನ್ನು ಪಾತಾಳಕ್ಕೆ ಅಟ್ಟಿದ ಕಟ್ಟಿದ ಕತೆಯೂ ದೀಪಾವಳಿಯೊಂದಿಗೆ ತಳಕುಹಾಕಿಕೊಂಡಿದೆ.
ತ್ರೇತಾಯುಗದ ಶ್ರೀರಾಮನೂ ಇಲ್ಲಿ ವೇದಿಕೆಗೆ ಬರುತ್ತಾನೆ. ರಾವಣನನ್ನು ವಧಿಸಿ ಬಂದಿದ್ದ ಆತ ಮತ್ತೆ ಸಿಂಹಾಸನವೇರುವ ಕಾಲ ಇದು.
ರಜೆಯ ಮಜಾ, ಖರೀದಿಗೆ ಒದಗುವ ವಿನಾಯತಿ, ಹೊಸ ಬಟ್ಟೆಯ ಹುರುಪು ಪಟಾಕಿಗಳ ಪುಳಕ, ಹಣತೆಯ ಚೆಂದ ಇವೆಲ್ಲವೂ ಸೇರಿ ಒಂದು ಸುಂದರ ದೀಪಾವಳಿಯಾಗುತ್ತದೆ. ಇವೆಲ್ಲ ಅರ್ಥಪೂರ್ಣವೇ. ಇವೆಲ್ಲ ಸಂಭ್ರಮಗಳೊಂದಿಗೆ ನಾವು ಅದ್ಯಾವ ಪರಂಪರೆಯ ಅರಿವಿಗೆ ಮುಖಾಮುಖಿಯಾಗಬೇಕು ಎಂಬುದೂ ಇವತ್ತಿಗೆ ತುಂಬಾ ಮಹತ್ವದ್ದಾಗುತ್ತದೆಯಲ್ಲವೇ. ದೀಪ ಹಚ್ಚುವಾಗ ರಾಮನನ್ನೋ, ಕೃಷ್ಣನನ್ನೋ, ಮಹಾವೀರನನ್ನೋ ಯಾರನ್ನಾದರೂ ನೆನೆಯೋಣ ಯಾರ ನೆನಪಲ್ಲಿ ದೀಪ ಹಚ್ಚಿದರು ಅದು ಭಾರತದ ಆತ್ಮವನ್ನು ಬಲಗೊಳಿಸುತ್ತದೆ.
ದೀಪವೊಂದು ತಾನು ಬೆಳಗಿ ಇನ್ನೊಂದನ್ನು ಬೆಳಗಿಸಿ ಮತ್ತೊಂದಕ್ಕೆ ಬೆಳಕಾಗಿ ಮುಂದುವರಿದು ಸಾಲು-ಸಾಲು ದೀಪಗಳ ಮಾಲೆಯನ್ನೇ ಪೋಣಿಸುತ್ತದೆ. ಬೆಳಕಿಗೆ ಬದುಕಾಗುವ ತಾಕತ್ತಿದೆ. ನಂಬಿದವರನ್ನು ಕೈ ಹಿಡಿದು ನಡೆಸುವ ನಿಯತ್ತಿದೆ. ಅದಕ್ಕೇ ತಾನೇ ನಾವು -ನೀವೆಲ್ಲ ಬೆಳಕು ಕಂಡರೆ ನಲಿಯುವುದು ಅದರೆಡೆಗೆ ಒಲಿಯುವುದು.
ದೀಪ ಬೆಳಗುವುದೆಂದರೆ ಅದು ಇರುಳ ನೀರವತೆಗೊಂದು ಸವಾಲೆಸದಂತೆ. ಕಪ್ಪುಕತ್ತಲನ್ನು ತನ್ನೊಳಗೆ ಬಚ್ಚಿಟ್ಟ ರಹಸ್ಯಗಳನ್ನೆಲ್ಲಾ ಕ್ಷಣದೊಳಗೆ ಬಯಲು ಮಾಡುವ ಸವಾಲು. ದಿಟವೇ, ದೀಪದ ಸಾಮರ್ಥ್ಯವೇ ಅಂಥದ್ದು.
ಬೆಳಕಿನ ಅನುರಕ್ತತೆಯಲ್ಲಿ ಮನೋವಿಜ್ಞಾನದ ಅಂಶ ಅಡಕವಾಗಿದೆ. ಮನೋವಿಜ್ಞಾನದ ಸಂಶೋಧನೆಗಳ ಪ್ರಕಾರ ಬೆಳಕು ಧನಾತ್ಮಕ ಅಂಶಗಳ ಕುರಿತು ಸಂಕೇತವಾದರೆ, ಅಂಧಕಾರ, ಕತ್ತಲು ಋಣಾತ್ಮಕ ಅಂಶಗಳ ಸಂಕೇತ. ಒಬ್ಬ ವ್ಯಕ್ತಿ ಸಂಪೂರ್ಣ ಕತ್ತಲೆಯನ್ನು ಇಷ್ಟಪಡುತ್ತಾನೆಂದರೆ ಅವನಿಗೆ ಮಾನಸಿಕ ಅಸಮತೋಲನ ಇದೆ ಎಂದು ಮನೋವಿಜ್ಞಾನಿಗಳ ಅಂಬೋಣ.
ಕೃಷ್ಣನೆಂಬ ಬೆಳಕು
ಕೃಷ್ಣ ಬೆಳಕಿನ ಅವತಾರ. ಆದರೆ ಅವನಿಗೆ ಪ್ರಿಯವಾದುದುವೆಲ್ಲಾ ಬೆಳಕಿನ ರೂಪಕಗಳೇ ಹಾಲು, ಮೊಸರು, ಬೆಣ್ಣೆ ಇಲ್ಲದೆ ಕೃಷ್ಣನನ್ನು ಕಲ್ಪಿಸಿಕೊಳ್ಳುವುದೇ ಅಸಾಧ್ಯ. ಬೆಳಕನ್ನು ಮಕ್ಕಳು ತಿಂದಹಾಗೆ ತಿನ್ನುವುದು ದೊಡ್ಡವರಿಗೆ ಸಾಧ್ಯವೇ ಇಲ್ಲ. ಬೆಳಕಿಗೆ ಮುಗ್ಧತೆಯ ನಂಟಿದೆ. ಮುಗ್ಧತೆ ಕಳೆದುಕೊಂಡವರು ಬೆಳಕಿಗೆ ಹೆದರಿ ಅಡಗುವುದು ಇದೆ. ಬೆಳಕು ಕಂಡಾಕ್ಷಣ ಕಣ್ಣಿಗೆ ಕೈ ಅಡ್ಡ ಹಿಡಿಯುವರು ಬೆಳಕನ್ನು ತಿನ್ನುವುದಾದರು ಹೇಗೆ?
ಆದರೆ, ಮಕ್ಕಳು ಹಾಗಲ್ಲ ಬೆಣ್ಣೆಯನ್ನು ಕೈಗಂಟಿಸಿಕೊಳ್ಳುವುದು ತುಟಿಗೂ ಸವರಿಕೊಳ್ಳುವುದು ಎದೆಗೂ ಬೀಳಿಸಿಕೊಳ್ಳುವುದು ಇವೆಲ್ಲಾ ಮಗುವಿಗೆ ಸಹಜಕ್ರಿಯೆ.
ಕೃಷ್ಣ ಕದ್ದದ್ದು ಮಡಕೆಯೊಳಗಿದ್ದ ಬೆಳಕನ್ನೇ. ಬೆಳಕಿಗೆ ಮುಕ್ತಿಕೊಟ್ಟವ ಬಾಲಕೃಷ್ಣ. ಕೆಲವರಿದ್ದಾರೆ ಅವರು ಬೆಳಕಿನಿಂದ ಕತ್ತಲೆಯೆಡೆಗೆ ಸಾಗುತ್ತಾರೆ. ನರಕ ಆ ಗುಂಪಿಗೆ ಸೇರಿದವ ಅವನಿಗೂ ಬೆಳಕಿತ್ತು. ಆದರೆ ಅದು ಅವನಿಗೆ ಬೇಡವಾಗಿತ್ತು. ಅದಕ್ಕೆ 16,000 ಮನೆಗಳ ಬೆಳಕನ್ನು ಅಪಹರಿಸಿ ಬಂಧನದಲ್ಲಿಡುವ ಕೆಲಸ ಮಾಡುತ್ತಾನೆ.
ಹೆಣ್ಣು ಕುಟುಂಬದ ಬೆಳಕು. ಆ ಬೆಳಕನ್ನು ಮತ್ತೆ ಮನೆ ಸೇರಿಸಲು ನರಕ ಎನ್ನುವ ಕತ್ತಲೆಯ ಸಂಹಾರ ನಡೆಯಲೇಬೇಕಾಗಿತ್ತು. ಅದು ನಡೆದದ್ದರಿಂದಲೇ ದೀಪಗಳ ಉತ್ಸವ ನಡಾವಳಿಯಾಯ್ತು. ಬೆಳಕಿನ ಈ ನಿರಂತರ ಚಲನೆ ಹೊರಗೆ ಇರುವಂತೆಯೇ ನಮ್ಮೊಳಗೂ ಇದೆ. ಆ ಚಲನೆಯನ್ನು ಗಮನಿಸಿ ಹೆಜ್ಜೆಯಿಟ್ಟಾಗ ಬೆಳಕು ಒಲಿಯುತ್ತದೆ. ಬೆಳಕನ್ನೇ ನಂಬಿದ ಬದುಕು ನಲಿಯುತ್ತದೆ. ನಮ್ಮೊಳಗೊಬ್ಬ ವೈರಿಯಿದ್ದಾನೆ. ಆತ ಹೇಳುತ್ತಲೇ ಇರುತ್ತಾನೆ. ದ್ವೇಷಿಸು, ಹಿಂಸಿಸು, ಬಹಿಷ್ಕರಿಸು ಎಂದು. ಇದು ಕತ್ತಲೆ.
ನಮ್ಮೊಳಗೊಬ್ಬ ಸ್ನೇಹಿತನೂ ಇದ್ದಾನೆ. ಆತ ಹೇಳುತ್ತಲೇ ಇರುತ್ತಾನೆ. ಪ್ರೀತಿಸು, ಸ್ವೀಕರಿಸು, ಆದರಿಸು ಎಂದು ಇದು ಬೆಳಕು. ಇನ್ನೊಬ್ಬರ ಕಷ್ಟಕ್ಕೆ ನಮ್ಮ ಹೃದಯ ಮಿಡಿದಾಗ, ಮನುಕುಲವೆಲ್ಲಾ ಒಂದೇ ಎಂದು ನಮ್ಮ ಮನ ಹಾಡಿದಾಗ ಬೆಳಕೊಂದು ತನ್ನಿಂತಾನೇ ಹುಟ್ಟಿಕೊಳ್ಳುತ್ತದೆ. ಆ ಬೆಳಕು ಎಂದೆಂದೂ ನಮ್ಮ ಜೊತೆಯೇ ಇರುತ್ತದೆ.
- ಗುರುರಾಜ ಪೋಶೆಟ್ಟಿಹಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


