ಜಾನಪದ ಸ್ಪರ್ಶ

ದೀಪಗಳ ಅವಳಿ. ಅಂದರೆ, ದೀಪಗಳ ಸಾಲು. ಇದು ಹಣತೆ ಹಚ್ಚಿ ಆನಂದಿಸುವ ಪರ್ವ. ಮಲೆನಾಡಿನಲ್ಲಿ 5 ದಿನಗಳ ಕಾಲ ಆಚರಿಸುವ ದೀರ್ಘ ಪರ್ವವಿದು. ಕರಿ, ಸಿರಿ, ವರುಷ ತೊಡಕು... ಹೀಗೆ ನಾನಾ ವಿಧದ ಸಾಂಸ್ಕೃತಿಕ ಆಚರಣೆ- ಆಕರ್ಷಣೆಗಳಿರುತ್ತವೆ.
ಅಂಟಿಗೆ ಪಿಂಟಿಗೆ
ದೀಪಾವಳಿ ಸಮಯದಲ್ಲಿ ಮಲೆನಾಡಿನಲ್ಲಿ ಗಮನ ಸೆಳೆಯುವ ಜಾನಪದ ಕಲೆ ಅಂಟಿಗೆ ಪಿಂಟಿಗೆ. ಒಂದಷ್ಟು ಜನರ ಗುಂಪು ಮೊದಲೇ ತಯಾರಿ ನಡೆಸಿಕೊಂಡು, ತಮ್ಮಲ್ಲಿರುವ ಕಲೆ ಹೊರಹಾಕಲು ತಾಲೀಮು ನಡೆಸುತ್ತಾರೆ.
ಹಬ್ಬದ ಹಿಂದಿನ ದಿವಸ ಅಂಟಿಗೆ- ಪಿಂಟಿಗೆಯ ಜ್ಯೋತಿಯನ್ನು ಬೆಳಗಿಸುತ್ತಾರೆ. ನಂತರ ತಂಡದ ನಾಯಕ ಊರಿನ ಹಿರಿಯರ ಮನೆಗೆ ಸುದ್ದಿ ಮುಟ್ಟಿಸಿ, ಸಿದ್ಧತೆ ಮಾಡಿಕೊಳ್ಳಲು ತಿಳಿಸುತ್ತಾರೆ. ಅಂಟಿಗೆ ಪಿಂಟಿಗೆಯಲ್ಲಿ ಒಮ್ಮೆ ಜ್ಯೋತಿ ಹೊತ್ತಿಸಿದ ಮೇಲೆ ಆರುವಂತಿಲ್ಲ. ತಂಡದ ಸದಸ್ಯರು ಸದಾ ಎಣ್ಣೆ ಹಾಕಿ, ಅದರ ಆರೈಕೆ ವಹಿಸುತ್ತಾರೆ. ನಂತರ ಅಂಟಿಗೆ- ಪಿಂಟಿಗೆಯ ಹಾಡು ಹೇಳುತ್ತಾ 8- 10 ಜನರ ತಂಡ ಮನೆಗಳಿಗೆ ಭೇಟಿ ನೀಡಿ ಜಾನಪದ ಜಾಗೃತಿ ಮೂಡಿಸುತ್ತದೆ.
ಇವರಿಗೆ ಮನೆಯ ಯಜಮಾನ ಹೊಸತೊಂದು ಬಟ್ಟೆಯನ್ನು ದಾನವಾಗಿ ನೀಡಬೇಕು. ಇಲ್ಲವೆ ಧಾನ್ಯಗಳನ್ನು ಶಕ್ತ್ಯಾನುಸಾರ ನೀಡಬೇಕು. ಇವರೊಂದಿಗೆ ಮೈಗೆಲ್ಲಾ ಮಸಿ ಬಳಿದುಕೊಂಡು, ಕಪ್ಪು ವೇಷ ಧರಿಸಿದ ಕೊರಗ ಕಾಣಸಿಗುವುದು ದೀಪಾವಳಿಯಲ್ಲಿ ಮಾತ್ರ.
ಬೂರೆ ಹಬ್ಬ
ನೀರು ತುಂಬುವ ಹಬ್ಬದಂದು, ಮಲೆನಾಡಿಗರು ರಾತ್ರಿಯೆಲ್ಲಾ ಎಚ್ಚರದಿಂದ ಇರುತ್ತಾರೆ. ಏಕೆಂದರೆ, ಅಂದು ಊರಿನ ಒಂದಷ್ಟು ಯುವಕರು ಗುಂಪು ಕಟ್ಟಿಕೊಂಡು, ಎಲ್ಲರ ಮನೆಯ ಹಿತ್ತಲಿಗೆ ಮಧ್ಯರಾತ್ರಿಯಲ್ಲಿ ದಾಳಿಯಿಡುತ್ತಾರೆ. ಅವರ ಮನೆಯ ಹಿತ್ತಲಿನಲ್ಲಿ ಬೆಳೆದ ತರಕಾರಿಗಳನ್ನು ಕೊಯ್ದು ಕದ್ದು ತರುತ್ತಾರೆ. ಹೀಗೆ ತರುವಾಗ ಸಿಕ್ಕಿ ಬಿದ್ದರೂ ಮನೆಯ ಯಜಮಾನ ಬಯ್ಯುವಂತಿಲ್ಲ.
ತುರಿಕೆ ಎಲೆಗಳನ್ನು ಹಂಡೆಯ ನೀರಿಗೆ ಹಾಕುವುದು, ಮನೆಯ ಕಚೇರಿಯ ಮುಂದಿರುವ ಬೋರ್ಡುಗಳಿಗೆ ಬಣ್ಣ ಹಚ್ಚುವುದು, ಹೀಗೆ ವಿವಿಧ ಕುಚೋದ್ಯಗಳನ್ನು ಈ ವೇಳೆ ಮಾಡಲಾಗುತ್ತದೆ. ಕಳ್ಳತನದಿಂದ ತೆಗೆದುಕೊಂಡು ಹೋದ ತರಕಾರಿಗಳನ್ನು, ಭೂಮಿ ಹುಣ್ಣಿಮೆಯ ದಿವಸ ಭೂ ತಾಯಿಗೆ ಬಯಕೆ ಹಾಕಿರುವ ಊಟದೊಂದಿಗೆ ಈ ತರಕಾರಿ, ಕಾಯಿ-ಪಲ್ಲೆಗಳನ್ನು ಹಾಕಿ, ಭೂತಾಯಿಗೆ ಉಣ ಬಡಿಸುವ ಪದ್ಧತಿಯೂ ಉಂಟು.
- ಭಾಗ್ಯ ನಂಜುಂಡಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


