ಶನಿ ಚಂದ್ರ ಯುತಿ
ಯಾವುದೇ ಜಾತಕದಲ್ಲಿ ಶನಿ ಚಂದ್ರರು ಒಟ್ಟಿಗೆ ಇದ್ದರೆ ಜಾತಕರಿಗೆ ಏಳಿಗೆಯಾಗದು. ವಿವಾಹ ವಿಷಯದಲ್ಲಿ ಬಹಳ ವಿಳಂಬ, ವಿವಾಹವಾಗಿದ್ದರೆ ...

ಯಾವುದೇ ಜಾತಕದಲ್ಲಿ ಶನಿ ಚಂದ್ರರು ಒಟ್ಟಿಗೆ ಇದ್ದರೆ ಜಾತಕರಿಗೆ ಏಳಿಗೆಯಾಗದು. ವಿವಾಹ ವಿಷಯದಲ್ಲಿ ಬಹಳ ವಿಳಂಬ, ವಿವಾಹವಾಗಿದ್ದರೆ ನೆಮ್ಮದಿ ಇರುವುದಿಲ್ಲ. ಇವರು ವಿಚ್ಛೇದನದವರೆಗೂ ಹೋಗುವ ಸಂದರ್ಭಗಳು ಬರುತ್ತದೆ. ತಾಯಿ ಮತ್ತು ಮಗ ಒಟ್ಟಿಗೆ ಇದ್ದರೆ ಇಬ್ಬರಿಗೂ ಹೊಂದಾಣಿಕೆ ಇರುವುದಿಲ್ಲ ಮತ್ತು ಅಭಿವೃದ್ಧಿಗೆ ತೊಂದರೆಯಾಗುತ್ತಿರುತ್ತದೆ. ಇಂಥ ಶನಿ, ಚಂದ್ರರ ಯುತಿ ಇದ್ದರೆ ಯಾವರಾಶಿಯವರಿಗೆ ಯಾವ ಫಲ ಎಂದು ನೋಡೋಣ...
ಮೇಷ
ಶನಿ ಮತ್ತು ಚಂದ್ರರಿದ್ದರೆ ಇವರು ಬಹಳ ಕೋಪವುಳ್ಳವರು, ಅನುಮಾನ ಪಡುವವರು, ಕೆಟ್ಟ ಮಾತು ಆಡುವವರು, ಹೀನ ಕೃತ್ಯ ಮಾಡುವವರು, ಅಗ್ನಿ ಅಥವಾ ವಾಯು ಹಾಗೂ ಜಲ ಪ್ರಕೋಪದಿಂದ ನಷ್ಟ ಉಳ್ಳವರು ಸದಾ ಚಿಂತಿತರೂ ಆಗಿರುತ್ತಾರೆ.
ವೃಷಭ
ಶನಿ ಮತ್ತು ಚಂದ್ರರಿದ್ದರೆ ಇವರು ಸದಾ ಕುಟುಂಬದ ಅಭಿವೃದ್ಧಿಗಾಗಿ ದುಡಿಯುವವರು, ನೀಚ ಸ್ತ್ರಿಯರಲ್ಲಿ ಆಸಕ್ತಿಯುಳ್ಳವರು ಮತ್ತು ಅವರಿಂದ ಮೋಸ ಹೋಗುವವರು ಹೆಂಡತಿಯ ಮೇಲೆ ಅನುಮಾನವುಳ್ಳವರು, ಹೆಂಡತಿಯ ಆಸೆ ಆಕಾಂಕ್ಷೆಗಳನ್ನು ಈಡೇರಿಸದವರು ಆಗಿರುತ್ತಾರೆ.
ಮಿಥುನ
ಈ ರಾಶಿಯಲ್ಲಿ ಶನಿ ಮತ್ತು ಚಂದ್ರರು ಒಟ್ಟಿಗೆ ಇದ್ದರೆ ಇವರು ಸಣ್ಣ ವಿಷಯಕ್ಕೂ ಬಹಳ ಆಳವಾಗಿ ಚಿಂತಿಸುವವರು, ಅತಿ ಬುದ್ಧಿ ಉಪಯೋಗಿಸಿ ಮೋಸ ಹೋಗುವವರು, ವಾಣಿಜ್ಯ ವ್ಯವಹಾರದಲ್ಲಿ ನಷ್ಟ ಅನುಭವಿಸುವವರು, ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲದವರೂ ಆಗಿರುತ್ತಾರೆ.
ಕಟಕ
ಸಾಮಾನ್ಯವಾಗಿ ಈ ರಾಶಿಯಲ್ಲಿ ಶನಿ ಮತ್ತು ಚಂದ್ರರಿದ್ದರೆ ಇವರ ಜೀವನವು ಸದಾ ಸುನಾಮಿಯ ಥರ ಇರುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಇವರ ಬದಲು ಫಲ ಬೇರೆಯವರ ಪಾಲಾಗುತ್ತದೆ. ಜೀವನದಲ್ಲಿ ಸುಖಕ್ಕಿಂತ ದುಃಖ ಹೆಚ್ಚಾಗಿರುತ್ತದೆ.
ಸಿಂಹ
ಶನಿ, ಚಂದ್ರರು ಒಟ್ಟಿಗೆ ಇದ್ದರೆ ತಂದೆ ತಾಯಿಯೊಂದಿಗೆ ಜಾತಕನ ಹೊಂದಾಣಿಕೆ ಇರುವುದಿಲ್ಲ. ಈತನ ತಂದೆ ತಾಯಿ ಜಾತಕನಿಗೆ ಸದಾ ನಿಂದನೆ ಮಾಡುತ್ತಿರುತ್ತಾನೆ. ಕೋಪಕ್ಕೆ ಗುರಿಯಾಗುತ್ತಾರೆ. ಬಹಳ ಜಿಗುಪ್ಸೆ ಜೀವನವಾಗಿರುತ್ತದೆ. ಈತನ ಅಭಿವೃದ್ಧಿಗೆ ತಂದೆಯೇ ಅಡ್ಡಿಯಾಗಿರುತ್ತಾನೆ.
ಕನ್ಯಾ
ಶನಿ ಮತ್ತು ಚಂದ್ರರು ಈ ರಾಶಿಯಲ್ಲಿದ್ದರೆ ತುಂಬಾ ದೊಡ್ಡ ಮಟ್ಟದ ಸಾಲಗಾರರಾಗಿರುತ್ತಾರೆ. ಮತ್ತು ನಂಬಿಕೆಯಿಂದ ಮೋಸ ಹೋಗುವವರು ಅಥವಾ ಮೋಸ ಮಾಡುವವರಾಗಿರುತ್ತಾರೆ. ವಿವಾಹ ಜೀವನ ಬಹಳ ಕಷ್ಟ. ಇವರು ಅಷ್ಟು ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ವ್ಯವಹಾರದಲ್ಲಿ ಮುಂದುವರಿಯಲು ಸಾಧ್ಯವಾಗದವರು ಆಗಿರುತ್ತಾರೆ.
ತುಲಾ
ಈ ರಾಶಿಯಲ್ಲಿ ಶನಿ ಉಚ್ಛನಾಗಿದ್ದು, ಈತನದೇ ಮೇಲುಗೈ ಆಗಿ ಕೋಪದಲ್ಲಿ ಹತೋಟಿ ತಪ್ಪಿಹೋಗಿ, ಕೆಟ್ಟ ಬೈಗಳಗಳು ಸರಾಗವಾಗಿ ಬರುತ್ತವೆ. ಹತೋಟಿಗೆ ಬರದವರು. ವಾಯು ಪ್ರಕೋಪ ಮತ್ತು ಜಲ ಪ್ರಕೋಪ ಕಾಯಿಲೆಗಳಿಂದ ಬಳಲುವವರು, ಐಷಾರಾಮಿ ಜೀವನವಿದ್ದು, ಹೆಂಡತಿಯಿಂದ ಮತ್ತು ತಾಯಿಯ ಪ್ರೀತಿಯಿಂದ ವಂಚಿತನಾದವರು ಆಗಿರುತ್ತಾನೆ.
ವೃಶ್ಚಿಕ
ಶನಿ ಚಂದ್ರ ಒಟ್ಟಿಗೆ ಇದ್ದರೆ ಚತುರ ಬುದ್ಧಿಯುಳ್ಳವರು, ತೀಕ್ಷ್ಣ ದೃಷ್ಟಿಯುಳ್ಳವರು ತಮ್ಮ ತಪ್ಪನ್ನು ಬೇರೆಯವರ ಮೇಲೆ ಸಲೀಸಾಗಿ ಕೂರಿಸುವವರು, ನಯವಂಚಕರು, ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿದವರು, ಹಿಡಿದ ಕೆಲಸವನ್ನು ಸಾಧಿಸುವ ತನಕ ಬಿಡದವರು, ವಿವಾಹ ಜೀವನದಲ್ಲಿ ದುಃಖ ಅನುಭವಿಸುವವರು ಆಗಿರುತ್ತಾರೆ.
ಧನುಸ್
ಶನಿ, ಚಂದ್ರ ಒಟ್ಟಿಗೆ ಇದ್ದರೆ ಧರ್ಮ, ಧಾರ್ಮಿಕ, ಅಧ್ಯಾತ್ಮ ಚಿಂತನೆಯುಳ್ಳವರು, ಅಪಾರ ದೈವ ಭಕ್ತಿಯುಳ್ಳವರು, ಮಠ ಮಂದಿರ ಕಟ್ಟುವವರು, ಮೊಕ್ಷ ಜೀವನದ ಕಡೆ ಮುಖ ಮಾಡುವವರು, ಬ್ರಹ್ಮಚರ್ಯ ಜೀವನ ಇಷ್ಟಪಡುವವರು ಆಗಿರುತ್ತಾರೆ. ಇವರದ್ದು ಅಭಿವೃದ್ಧಿಯೇ ಜೀವನ. ಸದಾ ಯೋಚನೆಯಲ್ಲಿ ಮುಳುಗಿರುತ್ತಾರೆ.
ಮಕರ
ಶನಿ, ಚಂದ್ರ ಒಟ್ಟಿಗೆ ಇದ್ದರೆ ಸ್ಥಿರ ಜೀವನವಿಲ್ಲದವರು, ಕೆಲಸದಲ್ಲಿ ತೊಂದರೆಯಿಂದ ಸದಾ ಚಿಂತೆಯುಳ್ಳವರು. ಹಣಕಾಸು ವಿಷಯದಲ್ಲಿ ಮೋಸ ಹೋಗುವವರು. ಇವರಿಗಿಂತ ದೊಡ್ಡವರ ಸಹವಾಸವಿದ್ದು, ಅವರಿಂದ ಮೋಸ ಹೋಗುವವರು ಆಗಿರುತ್ತಾರೆ. ಜೀವನದಲ್ಲಿ ಸುಖಕ್ಕಿಂತ ದುಃಖ ಮತ್ತು ಅಲೆಮಾರಿ ಜೀವನವಾಗಿರುತ್ತದೆ.
ಕುಂಭ
ಸಾಮಾನ್ಯವಾಗಿ ಶನಿ, ಚಂದ್ರ ಸ್ಥಿರರಿದ್ದರೆ ಬಹಳ ಗುಪ್ತ ಮನಸ್ಸಿನ ವ್ಯಕ್ತಿಗಳಾಗಿ ಅನ್ಯರ ಮನಸ್ಸನ್ನು ಸೂಕ್ಷ್ಮವಾಗಿ ಅರಿತು ಅವರ ಹಾವಭಾವಕ್ಕೆ ತಕ್ಕಂತೆ ನಡೆದು, ನಂಬಿಸಿ ಮೋಸ ಮಾಡುವವರು, ಅಣ್ಣ ಅಕ್ಕಂದಿರಿಗೆ ಮೋಸ ಮಾಡುವವರು ಅಥವಾ ಅವರಿಂದ ಮೋಸ ಹೋಗುವವರು ಆಗಿರುತ್ತಾರೆ. ಇತರರು ಇವರ ಮನಸ್ಸು ಅರಿಯಲು ಬಹಳ ಕಷ್ಟ ಸಾಧ್ಯ. ವ್ಯಾಪಾರ ವ್ಯವಹಾರದಲ್ಲಿ ಬಹಳ ಎಚ್ಚರದಿಂದ ಅಭಿವೃದ್ಧಿಯುಳ್ಳವರಾಗಿರುತ್ತಾರೆ.
ಮೀನ
ಶನಿ, ಚಂದ್ರರು ಒಟ್ಟಿಗೆ ಇದ್ದರೆ ಜೀವನ ಬಹಳ ನಷ್ಟದಿಂದ ಕೂಡಿರುತ್ತದೆ. ಇವರು ಅಭಿವೃದ್ಧಿ ಹೊಂದಬೇಕಾದರೆ ಪರದೇಶದಲ್ಲಿ ನೆಲೆಸಬೇಕಷ್ಟೇ. ಇವರು ಚಂಚಲ ಮನಸ್ಸಿನವರು. ಯೋಗ್ಯ ನಿರ್ಧಾರ ಮಾಡದೆ ಅರ್ಧಕ್ಕೆ ಕೈ ಬಿಡುವರು ಆಗಿರುತ್ತಾರೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇಲ್ಲದೆ ಜೀವನ ಸಾಗಿಸುತ್ತಾರೆ.
ಮಾಹಿತಿಗಾಗಿ ಸಂಪರ್ಕಿಸಿ, ಮೊ. 8553470343.
- ಎನ್. ಅಂಜನ್‌ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


