ಭಕ್ತಿ-ಜ್ಯೋತಿಷ್ಯ

ಸೂರ್ಯೋಪಾಸಕ

ಸೂರ್ಯೋಪಾಸಕ
Published On :

ಆನೇಕಲ್ ತಾಲೂಕಿನ ಮಾಯಸಂದ್ರದಲ್ಲಿ ಸಮಾಧಿರೂಪವಾಗಿ ನೆಲೆಗೊಂಡಿರುವ ಸೂರ್ಯೋಪಾಸಕರೂ ಆಗಿರುವ ಪಿಳ್ಳಪ್ಪ ಸ್ವಾಮಿಗಳು ಕುಂಬಾರ ಕುಟುಂಬದಲ್ಲಿ ಕಣ್ತೆರೆದವರು. ಬಾಲ್ಯದಿಂದಲೇ ಅಧ್ಯಾತ್ಮಿಕ ಜೀವನದತ್ತ ಒಲವು ಹೊರಳಿ, ಲೌಕಿಕ ನಿರ್ಲಿಪ್ತತೆಗೆ ಶರಣಾದರು.

ಕೋಲಾರದ ಬಳಿಯ ಮಿಣಕಿನ ಗುರಿಕೆಯಲ್ಲಿರುವ ಕೊಂಡಾರ್ಯರ ಮಠದಲ್ಲಿ ಗುರುಗಳಿಂದ ದೀಕ್ಷೆ. ನಂತರವೇ ಅವರು ಮೌನಧಾರಿಗಳಾಗಿದ್ದು. ಮರಳಿ ಹುಟ್ಟೂರಿಗೆ ಬಂದು ಸನಿಹದ ಆರೇಹಳ್ಳಿ ಎಂಬಲ್ಲಿ 24 ವರ್ಷ ನಿರ್ವಾಣರಾಗಿ ಬಾಹ್ಯ ಜಗತ್ತಿಗೆ ಅವಧೂತರಾಗುಳಿದರು.
ಆದರೆ, ಆಂತರಿಕವಾಗಿ ಅವರ ಅಧ್ಯಾತ್ಮ ಶಕ್ತಿಯನ್ನು ಕಂಡವರು ಅವರನ್ನು ಮನಸಾರೆ ಸೇವಿಸಿದರು. ಅವರೂ ಹಲವು ಸಂದರ್ಭಗಳಲ್ಲಿ ತಮ್ಮ ಆಂತರಿಕ ಪ್ರಜ್ಞೆಯಿಂದ ಸಮಾಜ ಸುಧಾರಣೆಗೆ ಮಹತ್ವದ ಕಾಣಿಕೆ ಸಲ್ಲಿಸಿದರು. 29.9.1963ರಂದು ಏಕಾದಶಿ ಅಪರಾಹ್ನ ಜೀವ ಸಮಾಧಿಯಾದರು. ಅಂದಿನಿಂದಲೂ ಸಮಾಧಿ ಸ್ಥಳವಾದ ಮಾಯಸಂದ್ರದಲ್ಲಿ ಅವರ ದಿವ್ಯ ಸ್ಮರಣೆ ನಡೆದು ಬಂದಿದೆ.

ಪವಾಡ ಸದೃಶ ದೃಷ್ಟಾಂತಗಳು
ಸತತ 9 ವರ್ಷ ದಿನವಿಡೀ ಸೂರ್ಯೋಪಾಸನೆ ಮಾಡಿದ ಪಿಳ್ಳಪ್ಪ ಸ್ವಾಮಿಗಳ ವಿಶೇಷತೆ ಎಂದರೆ ಅವರು ನಿರ್ವಾಣರಾಗಿ ನಡೆದಾಡುವಾಗ ನೆಲವನ್ನಾಗಲಿ, ಯಾರನ್ನಾದರೂ ದೃಷ್ಟಿಸಿಯಾಗಲಿ ನೋಡುತ್ತಿರಲಿಲ್ಲ. ತಮ್ಮ ದೃಷ್ಟಿಯನ್ನು ತದೇಕ ಚಿತ್ತರಾಗಿ ಆಗಸದೆಡೆಗೆ ನೆಟ್ಟು ನಡೆದಾಡುತ್ತಿದ್ದರು. ಆದರೂ ಅವರು ಹೆಜ್ಜೆ ತಪ್ಪದೆ ಸೇರಬೇಕಾದಲ್ಲಿಗೆ ಹೋಗಿ ಬರುತ್ತಿದ್ದರು. ಜಟಾಧಾರಿಗಳಾದ ಅವರ ನಡಿಗೆಗೆ ಒಂದು ಶಕ್ತಿ ಇತ್ತು.
ಪಿಳ್ಳಪ್ಪ ಸ್ವಾಮಿಗಳು ತಮ್ಮ ಕೋಣೆಯಲ್ಲಿ ಧ್ಯಾನಾಸಕ್ತ ಸ್ಥಿತಿಯಲ್ಲಿ ವಿರಮಿಸುತ್ತಿದ್ದ ಸಂದರ್ಭದಲ್ಲಿ ಹಲವರು ಬಾಗಿಲ ಕಿಂಡಿಯ ಮೂಲಕ ನೋಡಿ, ಒಳ ಹೋಗಲು ಸಿದ್ಧರಾದವರಿಗೆ ಪಿಳ್ಳಪ್ಪ ಸ್ವಾಮಿಗಳ ರುಂಡ, ಮುಂಡ, ಕೈಕಾಲುಗಳು ಬಿಡಿ ಬಿಡಿಯಾಗಿದ್ದ ದೃಶ್ಯಗಳು ಕಂಡು ಹೌಹಾರಿ ಹಿಂತಿರುಗಿದರೂ ಇದ್ದಾರೆ. ತಮ್ಮ ವಿಶ್ರಾಂತಿ ಮುಗಿಸಿ ಬಾಗಿಲು ತೆರೆದು ಹೊರಬಂದಾಗ ಸಹಜ ಸ್ಥಿತಿಯಲ್ಲಿದ್ದ ಅವರನ್ನು ಕಂಡು ವಿಸ್ಮಿತರೂ ಆಗಿದ್ದಾರೆ. ಇದೇ ಸ್ಥಿತಿಯನ್ನು ಅವರು ಬಾವಿಯಲ್ಲಿ ಸ್ನಾನಕ್ಕೆಂದು ಕೂತಾಗ ಅಲ್ಲಿಂದ ಹಿಂತಿರುಗುವಾಗಲೂ ಪ್ರತ್ಯಕ್ಷ ಕಂಡವರಿದ್ದಾರೆ.

ಪಿಳ್ಳಪ್ಪ ಸ್ವಾಮಿಗಳ ಕುರಿತ ಹಲವು ದಂತಕಥೆಗಳು, ಪವಾಡ ಪ್ರಸಂಗಗಳು ಜನರ ಬಾಯಲ್ಲಿವೆ. ಜನ ಜೀವನವನ್ನು ಶಿಸ್ತಿಗೊಳಪಡಿಸಿ ಧಾರ್ಮಿಕ ತಳಹದಿ ಮೇಲೆ ಮೌಲ್ಯಗಳನ್ನು ಜಾಗೃತಗೊಳಿಸುವ ನಾಡಿನ ಇಂಥ ಅವಧೂತರು ನಮಗೆ ಒಳಿತನ್ನೇ ಸಾರಿ ಹೇಳಿದ್ದಾರೆ. ತಮ್ಮ ಬದುಕನ್ನು ಸಾಮೂಹಿಕ ಸ್ಪಂದನೆಗೆ ಉದಾಹರಣೆಯಾಗಿಸಿದ್ದಾರೆ. ಇಂತಹ ಸಾಧು ಪುರುಷರ ನೆನಪು ಶಾಶ್ವತ.

- ಎಸ್. ಜಗನ್ನಾಥ್‌ರಾವ್ ಬಹುಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.