ಭಕ್ತಿ-ಜ್ಯೋತಿಷ್ಯ

ಅಹಂ ಬ್ರಹ್ಮಾಸ್ಮಿ

ಇದೊಂದು ಜನಪ್ರಿಯ ಝೆನ್ ಕಥೆ. ಒಮ್ಮೆ ಒಬ್ಬ ಪ್ರೊಫೆಸರ್ ಸಾಹೇಬರು ಗುರುಗಳ ಬಳಿ ಜ್ಞಾನ ಪಡೆದುಕೊಳ್ಳಲು...

ಅಹಂ ಬ್ರಹ್ಮಾಸ್ಮಿ
Published On :

ಇದೊಂದು ಜನಪ್ರಿಯ ಝೆನ್ ಕಥೆ. ಒಮ್ಮೆ ಒಬ್ಬ ಪ್ರೊಫೆಸರ್ ಸಾಹೇಬರು ಗುರುಗಳ ಬಳಿ ಜ್ಞಾನ ಪಡೆದುಕೊಳ್ಳಲು ಹೋದರಂತೆ. ಪ್ರೊಫೆಸರರನ್ನು ಸ್ವಾಗತಿಸಿದ ಝೆನ್ ಗುರುಗಳು ಅವರೆದುರು ಟೀ ಕಪ್ಪನರಿಸಿ, ಜಗ್‌ನಲ್ಲಿದ್ದ ಟೀಯನ್ನು ಕಪ್‌ಗೆ ಸುರಿಯಲಾರಂಭಿಸಿದರು.
ಕಪ್ ತುಂಬಿತು. ಅದರೂ ಗುರುಗಳು ಟೀ ಯನ್ನು ಹಾಕುತ್ತಲೇ ಇದ್ದರು. ಟೀ ಹೊರಗೆಲ್ಲಾ ಚೆಲ್ಲಲಾರಂಭಿಸಿತು.ಅದನ್ನು ಗಮನಿಸುತ್ತಿದ್ದ ಪ್ರೊಫೆಸರ್ ಸಾಹೇಬರ ತಾಳ್ಮೆ ಮೀರಿತು. 'ಸ್ವಾಮಿ, ತಾವು ಮಹಾಜ್ಞಾನಿಗಳೆಂದು ತಮ್ಮ ಬಳಿ ಬಂದೆ. ಆದರೆ, ನೀವು ನೋಡಿದರೆ ತುಂಬಿರುವ ಕಪ್‌ಗೆ ಟೀ ಸುರಿಯುತ್ತಿದ್ದೀರಿ' ಎಂದರು ಅಸಹನೆಯಿಂದ ನುಡಿದರು.

ಆಗ ಶಾಂತಚಿತ್ತರಾಗಿ ಗುರುಗಳು, 'ಸ್ವಾಮಿ, ಈಗ ನಿಮ್ಮ ಮನಸ್ಥಿತಿ ಕೂಡ ಹೀಗೆಯೇ ಇದೆ. ನಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂಬ ಭಾವದೊಂದಿಗೆ ಇಲ್ಲಿಗೆ ಬಂದಿದ್ದೀರಿ. ಹೇಗೆ ತುಂಬಿರುವ ಟೀ ಕಪ್ಪಿಗೆ ಮತ್ತೆ ಟೀ ಹಾಕಿದರೆ ಚೆಲ್ಲುತ್ತದೆಯೋ ಹಾಗೇ, ನಿಮ್ಮ ಮನಸ್ಸಿನಲ್ಲಿ ಯಾವ ಜ್ಞಾನವೂ ನಿಲ್ಲಲಾರದು. ಮೊದಲು ನಿಮ್ಮ ಮನಸ್ಸಿನಲ್ಲಿರುವ ಈ ಭಾವವನ್ನು ಖಾಲಿಮಾಡಿಕೊಂಡು ಬನ್ನಿ' ಎಂದು ಉತ್ತರಿಸಿದರು.

ನಾವು ಹಲವು ಸಂದರ್ಭಗಳಲ್ಲಿ ನಮಗೆಲ್ಲಾ ಗೊತ್ತು ಎಂಬ ಭಾವನೆಯಿಂದ ಬಳಲುತ್ತಿರುತ್ತೇವೆ. ಇದನ್ನು ಮೇಲರಿಮೆ (superiority complex) ಎಂದು ಕರೆಯುತ್ತಾರೆ. ಈ ಬಗೆಯ ಭಾವ ನಮ್ಮ ಮನಸ್ಸಿನಲ್ಲಿದ್ದಾಗ, ಜ್ಞಾನಾರ್ಜನೆ ಸಾಧ್ಯವಾಗದು. ಸರ್ವಜ್ಞನು ವಚನವೊಂದರಲ್ಲಿ ಹೀಗೆನ್ನುತ್ತಾನೆ...

ಸರ್ವಜ್ಞನೆಂಬುವನು ಗರ್ವದಿಂದಾದವನೆ?
ಸರ್ವರೊಳಗೊಂದೊಂದು ನುಡಿಗಲಿತು
ವಿದ್ಯೆಯ ಪರ್ವತವೇ ಸರ್ವಜ್ಞ


ಎಲ್ಲಾ ಗೊತ್ತಿದೆ ಎಂಬ ಗರ್ವದಿಂದ ಕಲಿಕೆ ಅಸಾಧ್ಯ. ಎಲ್ಲರಿಂದಲೂ ತಾನು ಕಲಿತೆ ಎಂಬ ವಿನಯದಿಂದಲೇ ವಿದ್ಯೆಯ ಪರ್ವತವಾದವನು ಸರ್ವಜ್ಞ. ಈ ಜಗತ್ತಿನಲ್ಲಿ ಎಲ್ಲವನ್ನೂ ಬಲ್ಲವರು ಯಾರೂ ಇಲ್ಲ. ಪ್ರತಿಯೊಬ್ಬರಿಂದಲೂ ಕಲಿಯುವುದಿದೆ ಎಂಬುದನ್ನು ಅರಿತವನೇ ಜ್ಞಾನಿಯಾಗಲು ಸಾಧ್ಯ.

ಅಕ್ಕಿಯೊಳಗನ್ನವನು ಮೊದಲಾರು ಕಂಡವರು?
ಅಕ್ಕರದ ಬರಹಕ್ಕೆ ಮೊದಲಿಗನು ಯಾರು?
ಲೆಕ್ಕವಿರಿಸಿಲ್ಲ ಜಗತನ್ನಾದಿ ಬಂಧುಗಳ
ದಕ್ಕುವುದೆ ದೆಸ ನಿನಗೆ ಮಂಕುತಿಮ್ಮ


ಎನ್ನುತ್ತಾರೆ ಡಿ.ವಿ.ಜಿ. ಯವರು. ಈ ಜಗದ ಹಲವು ವಿಸ್ಮಯಗಳಿಗೆ ಮೂಲ ಯಾರು ಎನ್ನುವುದೇ ಗೊತ್ತಿಲ್ಲ. ಅಂತಹುದರಲ್ಲಿ  ನಾನೆಲ್ಲ ಬಲ್ಲವನು ಎಂಬ ಅಹಂಭಾವ, ನಮ್ಮ ಪ್ರಗತಿಗೆ ಮಾರಕ. ನಿಜವಾಗಿ ಕಲಿಯಬೇಕೆಂಬ ಮನೋಭಾವವಿರುವವರು ಎಲ್ಲೆಡೆಯಲ್ಲೂ ಕಲಿಯಲು ಏನಾದರೂ ಸಿಕ್ಕೀತು ಎಂಬ ಹುಡುಕಾಟದಲ್ಲಿರುತ್ತಾರೆ. ಜ್ಞಾನದ ಮೂಲಗಳನ್ನು ಸದಾ ಅರಸುತ್ತಿರುತ್ತಾರೆ. ಬರಿಯ ಪದವಿಗಳಿಂದ ಮಾತ್ರ ಜ್ಞಾನ ಲಭಿಸುವುದಿಲ್ಲ.
ಆಡು ಮುಟ್ಟದ ಸೊಪ್ಪಲ್ಲ ಎಂಬಂತೆ ಕಡಲತೀರದ ಭಾರ್ಗವ ಶಿವರಾಮ ಕಾರಂತರು ಸಾಧನೆ ಮಾಡದ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳೇ ಇಲ್ಲ. ಕಾದಂಬರಿ, ನಾಟಕ, ಯಕ್ಷಗಾನ, ಪರಿಸರ ವಿಜ್ಞಾನ ಹೀಗೆ ಎಲ್ಲಾ ರಂಗಗಳಲ್ಲೂ ಅತ್ಯುತ್ತಮವಾದ ಸಾಹಿತ್ಯ ರಚನೆ, ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕಾರಂತರು ಓದಿದ್ದು ಬರಿಯ ಮೆಟ್ರಿಕ್ಯುಲೇಶನ್. ಆದರೆ ಅವರ ನಿರಂತರ ಜ್ಞಾನದಾಹವೇ ಅವರನ್ನು ಆ ಮಟ್ಟಕ್ಕೆ ಏರಿಸಿದ್ದು. ನಾನು ಎಲ್ಲವನ್ನೂ ಬಲ್ಲವನು ಎಂದು ಅವರು ತಮ್ಮ ಕೊನೆ ಉಸಿರು ಇರುವವರೆಗೂ ಆಲೋಚಿಸಲಿಲ್ಲ. ಈ ಭಾವವೇ ಮೇಲರಿಮೆ ಎಂಬ ವೈರಸ್‌ಗೆ ಮದ್ದು. ಇದೇ ಮನೋವಿಕಾಸದ ಸೋಪಾನ.

- ನವೀನಕುಮಾರ್, ಹೊಸದುರ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.