ಶ್ರಮ ಗೌರವ

ಶ್ರಮ ಪಡುವುದರಲ್ಲಿ ಇರುವ ಸುಖ ಸಂತೋಷಗಳು ಸೋಮಾರಿಗೆ ಅರ್ಥವಾಗಲಾರದು. ಎಲ್ಲಾ ಪ್ರಾಮಾಣಿಕ ಪರಿಶ್ರಮದಲ್ಲಿಯೂ ಅಭಿವೃದ್ಧಿ ಇದ್ದೇ ಇರುತ್ತದೆ. ಶ್ರಮ ಬದುಕಿಸುತ್ತದೆ. ಮನುಷ್ಯನ ಬದುಕಿಗೆ ಅದು ಹೊಸತನ ಮತ್ತು ಹೊಸ ಲಾಭ ಒದಗಿಸುತ್ತದೆ. ಶ್ರಮಜೀವಿಯ ದೇಹ ಚುರುಕಾಗಿರುತ್ತದೆ.
ಆಲಸ್ಯ ಮನುಷ್ಯನ ಶಕ್ತಿ ಚೈತನ್ಯ ಕಸಿದುಕೊಂಡು, ಅವನ ಮಾನಸಿಕ ಚೈತನ್ಯ ಮೊಟಕುಗೊಳಿಸುತ್ತದೆ. ಬಂದಳಿಕೆ ಬಳ್ಳಿ ಮರಗಳನ್ನು, ತುಕ್ಕು ಕಬ್ಬಿಣವನ್ನು, ಗೆದ್ದಲು ಮನೆಯನ್ನು ನಿಧಾನವಾಗಿ ಹಾಳು ಮಾಡುವಂತೆ, ಆಲಸ್ಯ ಮನುಷ್ಯನನ್ನು ನಿಷ್ಪ್ರಯೋಜಕನನ್ನಾಗಿ ಮಾಡುತ್ತದೆ. ಶ್ರಮಜೀವಿಗೆ ಸುಖನಿದ್ರೆಯ ವರದಾನ ಲಭಿಸುತ್ತದೆ.
ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮನುಷ್ಯ ತನ್ನ ಆರೋಗ್ಯ ಸುಧಾರಿಸಿಕೊಳ್ಳುತ್ತಾನೆ. ತನ್ನ ಉಪಯುಕ್ತತೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.
ಮನುಷ್ಯನ ಕೆಲಸವೇ ಅವನ ಆಸ್ತಿ. ಈ ಆಸ್ತಿಯನ್ನು ಪ್ರಾಮಾಣಿಕವಾಗಿ, ಪರಿಶ್ರಮದಿಂದ ಬೆಳೆಸಿಕೊಂಡವರು ಗೌರವಾದರಗಳಿಗೆ ಪಾತ್ರರಾಗುತ್ತಾರೆ. ಫಲವು ಪರಿಶ್ರಮವನ್ನು ಅವಲಂಬಿಸಿರುತ್ತದೆ ಎಂದು ನಂಬಿ ದುಡಿಯುವ ಮನುಷ್ಯರಿಗೂ ಒಮ್ಮೊಮ್ಮೆ ನಿರಾಶೆಯಾಗಬಹುದು. ಮರದಲ್ಲಿ ಅರಳಿದ ಹೂಗಳೆಲ್ಲವೂ ಕಾಯಿ, ಹಣ್ಣುಗಳಾಗಲಾರವು. ಅಂತಹ ಮನೋಭಾವದಿಂದ ಮುನ್ನಡೆದುಕೊಂಡಾಗ ನಮ್ಮ ಪ್ರಾಮಾಣಿಕ ಪರಿಶ್ರಮದ ನಿಜವಾದ ಬೆಲೆ ಅರ್ಥವಾಗುತ್ತದೆ. ತನ್ನ ಕೆಲಸದಲ್ಲಿಯೇ ತಲ್ಲೀನನಾಗಿರುವವನಿಗೆ ಬೇರೆಯವರ ಕೆಲಸದಲ್ಲಿ ಮೂಗು ತೂರಿಸುವುದಕ್ಕೆ ಸಮಯ ಸಿಕ್ಕುವುದಿಲ್ಲ.
ಬಸವೇಶ್ವರರು ತಮ್ಮ ವಚನದಲ್ಲಿ 'ಕಾಯಕ ನಿರತನಾದೊಡೆ ಜಂಗಮವನಾದರೂ ಮರೆಯಬೇಕು. ಗುರುವನಾದರೂ ಮರೆಯಬೇಕು. ಲಿಂಗವನಾದರೂ ಮರೆಯಬೇಕು' ಎಂದು ಹೇಳಿದ ಮಾತು ಇಂದಿಗೂ ಮುಖ್ಯವಾಗುತ್ತದೆ. ಎಲ್ಲ ಜನರ ಏಳಿಗೆಯ ಮೂಲತಂತ್ರ ಇದಾದರೆ, ಮನುಷ್ಯನು ತನ್ನ ಉದ್ಧಾರವನ್ನು ತಾನೇ ಮಾಡಿಕೊಳ್ಳಲು ಸಾಧ್ಯವಿದೆ. ತನ್ನ ಕಾಯಕ ಅಥವಾ ಕೆಲಸಗಳನ್ನು ಸತ್ಯದಿಂದ, ಶುದ್ಧ ಮನಸ್ಸಿನಿಂದ, ಅರ್ಪಿತ ಮನೋಭಾವದಿಂದ ಮಾಡಿದವರಿಂದಲೇ ನಮ್ಮ ನಾಡಿನ ಜನ ಜೀವನ ಸುಸಂಸ್ಕೃತವಾಗಿ ಬೆಳೆದುದು.
ಪ್ರಚೋದಿತ ಆಮಿಷಗಳಿಗೆ ವಿಚಲಿತನಾಗದ ಮನುಷ್ಯ ತನ್ನ ಬದುಕಿಗೆ ಅಮೂಲ್ಯ ಬೆಲೆಯನ್ನು ನೈತಿಕವಾಗಿ, ಸಾಮಾಜಿಕವಾಗಿ ಗಳಿಸುತ್ತಾನೆ. ಕಾಯಕ ನಿಷ್ಠೆ ಮತ್ತು ಶ್ರಮಗೌರವಗಳೆಂಬ ಈ ವಿಶಿಷ್ಟ ಗುಣಗಳನ್ನು ನಾವು ಕಳೆದುಕೊಳ್ಳಬಾರದು.
ಶ್ರಮದ ಕೆಲಸಕ್ಕೆ ಬೇರೆ ಪರ್ಯಾಯವಿಲ್ಲ. ಬದುಕಿನ ಗುರಿ ಕ್ರಿಯಾಶೀಲತೆ, ಕಾರ್ಯಸಿದ್ಧಿ ಕೆಲಸ ಮಾಡುವುದರಿಂದಲೇ ಸಿಗುತ್ತದೆ. ಕರ್ತವ್ಯ ರಾಹಿತ್ಯ ಒಂದು ಕಳಂಕ.
- ಶಿವರಾಮ ಭಟ್, ಹತ್ತೊಕ್ಕಲು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


