ಭಕ್ತಿ-ಜ್ಯೋತಿಷ್ಯ

ತೇರ ತಾರೆ

ಗೋಟಖಿಂಡ್ಕಿ ಗ್ರಾಮದಲ್ಲಿ ಮೊನ್ನೆಮೊನ್ನೆ ಅಂದರೆ ಕಾರ್ತೀಕ ಶುದ್ಧ ತ್ರಯೋದಶಿಯಂದು ಗ್ರಾಮ ದೇವತೆ ಮಹಾದೇವಿಯ ಜಾತ್ರೆ ನಡೆಯಿತು.

ತೇರ ತಾರೆ
Published On :

ಗೋಟಖಿಂಡ್ಕಿ ಗ್ರಾಮದಲ್ಲಿ ಮೊನ್ನೆಮೊನ್ನೆ ಅಂದರೆ ಕಾರ್ತೀಕ ಶುದ್ಧ ತ್ರಯೋದಶಿಯಂದು ಗ್ರಾಮ ದೇವತೆ ಮಹಾದೇವಿಯ ಜಾತ್ರೆ ನಡೆಯಿತು. ಅದರ ವಿಶೇಷವೇನು ಗೊತ್ತಾ? ಮಹಿಳೆಯರೇ ರಥವನ್ನು ಎಳೆದು ಸಂಭ್ರಮಿಸುತ್ತಾರಿಲ್ಲಿ. ಇದು ದಶಕದಿಂದ ನಡೆದುಬಂದಿರುವ ಪದ್ಧತಿ.

ಆರತಿ ಬೆಳಗುವುದು, ಕುಂಭ ಹೊತ್ತು ಎದುರುಗೊಳ್ಳುವುದು. ಬಹುತೇಕ ಕಾರ್ಯಕ್ರಮಗಳಲ್ಲಿ ಮಹಿಳೆ ಅಷ್ಟಕ್ಕೇ ಮೀಸಲು. ಆದರೆ ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗೋಟಖಿಂಡ್ಕಿ ಗ್ರಾಮದಲ್ಲಿ ಹಾಗಿಲ್ಲ. ಇಲ್ಲಿ  ಮಹಿಳೆಯರೇ ಗ್ರಾಮದೇವತೆ ಮಹಾದೇವಿಯ ಜಾತ್ರೆ ರಥವನ್ನು ಎಳೆಯುತ್ತಾರೆ! ಸುಮಾರು 1 ಕಿ.ಮೀ.ವರೆಗೆ ರಥವನ್ನು ಎಳೆದು ನೋಡುಗರನ್ನು ಬೆರಗುಗೊಳಿಸುತ್ತಾರೆ. ದಶಕದಿಂದ ಇದೇ ಪದ್ಧತಿ.
ಹತ್ತು ವರ್ಷ ಹಿಂದೆ ಈ ಗ್ರಾಮದ ಮಹಿಳೆಯರು ಸೇರಿ ರು. 2ಲಕ್ಷ ಸಂಗ್ರಹಿಸಿ ಮಹಾದೇವಿಯ ರಥ ನಿರ್ಮಿಸಿದ್ದರು. ಆದರೆ ಜಾತ್ರೆ ಸಂದರ್ಭ ಈ ರಥವನ್ನು ಪುರುಷರು ಎಳೆಯಲು ಮುಂದಾದಾಗ ರಥ ಮುಂದೆ ಸಾಗಲೇ ಇಲ್ಲ! ಆಗ ತಾಳಿಕೋಟೆಯ ಖಾಸ್ಗತೇಶ್ವರ ಮಠದ ವಿರಕ್ತ ಮಹಾಸ್ವಾಮಿಗಳು ಈ ರಥವನ್ನು ಗೋಟಖಿಂಡ್ಕಿ ಗ್ರಾಮದ ಮುತ್ತೈದೆಯರು ಎಳೆಸಿದರೆ ರಥ ಮುಂದೆ ಸಾಗುತ್ತದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರು ಗ್ರಾಮದಲ್ಲಿ ಹುಟ್ಟಿ ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಜಾತ್ರೆಯಲ್ಲಿ ಈ ರಥವನ್ನು ಎಳೆಯಲಿ ಎಂದು ತೀರ್ಮಾನಿಸಿದರು. ಅಂದಿನಿಂದ ಪ್ರತಿವರ್ಷ ಕಾರ್ತಿಕ ಶುದ್ಧ ತ್ರಯೋದಶಿಯಂದು ಗ್ರಾಮದ ಮುತ್ತೈದೆಯರೇ ರಥ ಎಳೆಯುತ್ತಿದ್ದಾರೆ.

ಮನೆಗೊಬ್ಬಳು ಮಹಾದೇವಿ!

ಇದೇ ಗ್ರಾಮದಲ್ಲಿ ಹುಟ್ಟಿ, ಬೆಳೆದು ಮದುವೆಯಾಗಿ ಹೋದ ಮಹಿಳೆಯರು ಪ್ರತಿ ವರ್ಷ ಮಹಾದೇವಿಯ ಜಾತ್ರೆಯಂದು ಎಲ್ಲೆಯೇ ಇದ್ದರೂ ಗ್ರಾಮಕ್ಕೆ ಬರುತ್ತಾರೆ. ಅವರಿಂದಲೇ ರಥೋತ್ಸವ ಜರುಗುವುದು ಇಲ್ಲಿಯ ವಿಶೇಷ. ಮಹಿಳೆಯರು ಎಲ್ಲ ಜಾತಿ, ಜನಾಂಗ ಭೇದವನ್ನು ತೊರೆದು ಜೈಕಾರ ಹಾಕುತ್ತಾ ನಾವೆಲ್ಲಾ ಒಂದೇ ಎಂಬ ಸಾಮರಸ್ಯ ಮೂಡಿಸಿ ಎಲ್ಲರ ಗಮನ ಸೆಳೆಯುತ್ತಾರೆ.
ಗಂಡು ಮಗು ಹುಟ್ಟಲಿ ತೇರೆಳೆಸುವೆನು ಎಂದು ಭಾರತೀಯ ಸ್ತ್ರೀಯರು ಹರಕೆ ಹೊರುವುದು ಸಾಮಾನ್ಯ. ಆದರೆ ಗೋಟಖಿಂಡ್ಕಿ ಗ್ರಾಮದಲ್ಲಿ ಇದಕ್ಕೆ ಅಪವಾದವೆಂಬಂತೆ ಹೆಣ್ಣು ಹುಟ್ಟಿ ಮಹಾದೇವಿ ತೇರನ್ನು ಎಳೆದು ತವರು ಮನೆಗೆ ಸಮೃದ್ಧಿ ಬೇಡುತ್ತಾಳೆ. ಮನೆಗೊಬ್ಬಳು ಮಹಾದೇವಿ ನಾಮಾಂಕಿತ ಮಹಿಳೆಯನ್ನು ಈ ಗ್ರಾಮದಲ್ಲಿ ಕಾಣಬಹುದಾಗಿದೆ.

- ಶ್ರೀಶೈಲ ಎಸ್. ಬಿರಾದಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.