ಮನಶ್ಯಾಂತಿ

ಶಾಂತಿಯೆಂಬುದು ಪ್ರತಿಯೊಬ್ಬ ವ್ಯಕ್ತಿಯ ಮನೋಭಾವನೆ. ಮನುಷ್ಯನ ಮೋಹದಿಂದಾಗಿ ಶಾಂತಿಯೊಂದಿಗೆ ಅಶಾಂತಿಯೂ ಉತ್ಪನ್ನವಾಗುತ್ತದೆ. ಸ್ವಾರ್ಥವನ್ನು ಮಾತ್ರವೇ ಚಿಂತಿಸುವುದರಿಂದಲೂ ಮನಸ್ಸಿನಲ್ಲಿ ಅಶಾಂತಿ ಉದಯಿಸುತ್ತದೆ. ಅಜ್ಞಾನ, ಶೋಕ, ಚಿಂತೆ, ದುಃಖ ಮೊದಲಾದವು ಅಶಾಂತಿಯ ಕುಟುಂಬ. ಉತ್ಪನ್ನವಾದ ಮೇಲೆ ಅಶಾಂತಿಗೆ ನಾಶವಿರಲೇಬೇಕು. ಶಾಶ್ವತವಾದ ಶಾಂತಿಯು ಅಶಾಂತಿಯನ್ನು ಮೆಟ್ಟಿ ನಿಲ್ಲುತ್ತದೆ. ಆದ್ದರಿಂದ ಮಾನಸಿಕ ಶಾಂತಿಯೇ ಮಾನವನ ನಿಜವಾದ ಆಸ್ತಿ.
ಶಾಂತಿ- ಅಶಾಂತಿಯೊಂದಿಗೆ ಒಳಿತು ಕೆಡಕುಗಳೂ ತಳುಕು ಹಾಕಿಕೊಂಡುವೆ. ಈ ಶಾಂತಿ -ಅಶಾಂತಿ, ಒಳಿತು-ಕೆಡುಕುಗಳು ನಾವು ನೋಡುವ ನಮ್ಮ ದೃಷ್ಟಿಯನ್ನವಲಂಬಿಸಿವೆ. ಇವು ಜತೆಯಾಗಿದ್ದಾಗ ಮಾತ್ರವೇ ಒಂದನ್ನೊಂದು ಹೋಲಿಸಿ, ಪ್ರತ್ಯೇಕಿಸಿ, ಗುರುತಿಸಲು ಸಾಧ್ಯ. ಕೇವಲ ಒಳಿತು ಅಥವಾ ಕೇವಲ ಶಾಂತಿ ಇದ್ದಾಗ ಒಳಿತು ಶಾಂತಿಗಳ ಧನಾತ್ಮಕ ಅಂಶ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಜತೆಗೆ ಋಣಾತ್ಮಕವಾದುದಿದ್ದರೆ ಮಾತ್ರ ಧನಾತ್ಮಕ ಸಂಗತಿಯ ಪೂರ್ಣ ಅರಿವು ಸಾಧ್ಯವಾಗುತ್ತದೆ.
ಏಕೆಂದರೆ ಧನಾತ್ಮಕ ಅಂಶದ ಪ್ರಾಬಲ್ಯದಿಂದ ಋಣಾತ್ಮಕದ ಪ್ರಭಾವ ಕಳೆಗುಂದುತ್ತದೆ. ಅಂತೆಯೇ ಋಣಾತ್ಮಕ ಅಂಶದ ಪ್ರಭಾವ ಜಾಸ್ತಿಯಾದಾಗ ಧನಾತ್ಮಕತೆಯ ತೀವ್ರತೆ ಮಸುಕಾಗುತ್ತದೆ. ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ ಎಂಬ ಉಕ್ತಿಯಂತೆ ಶಾಂತಿ-ಅಶಾಂತಿ, ಸುಖ-ದುಃಖಗಳ ಅನುಭವ ನಮ್ಮ ಮನಸ್ಸಿನ ಭಾವನೆಯನ್ನು, ನಾವು ನೋಡುವ ದೃಷ್ಟಿಯನ್ನು ಅವಲಂಬಿಸಿರುತ್ತದೆ.
ಒಮ್ಮೆ ಬೀರಬಲ್ಲನೊಂದಿಗೆ ಮಾರುವೇಷದಿಂದ ನಗರ ಸಂಚಾರ ಮಾಡುತ್ತಿದ್ದ ಅಕಬರನಿಗೆ ಜನತೆ ತನ್ನ ಬಗ್ಗೆ ಏನನ್ನು ಯೋಚಿಸುತ್ತಿರಬಹುದೆಂದು ತಿಳಿಯುವ ಕುತೂಹಲವಿತ್ತು. ದೂರದಲ್ಲಿ ಬರುತ್ತಿದ್ದ ಕಟ್ಟಿಗೆ ಮಾರುವವನನ್ನು ಕಂಡ ಅಕಬರನು ಈತ ನನ್ನ ಬಗ್ಗೆ ಏನನ್ನು ಯೋಚಿಸುತ್ತಿರಬಹುದೆಂದು ಬೀರಬಲನನ್ನು ಪ್ರಶ್ನಿಸಿದ. ಖಾವಂದರಿಗೆ ಅವನ ಬಗ್ಗೆ ಏನನ್ನಿಸುತ್ತಿದೆಯೋ ಅವನಿಗೂ ನಿಮ್ಮ ಬಗ್ಗೆ ಹಾಗೆಯೇ ಅನ್ನಿಸುತ್ತಿರಬಹುದೆಂದು ಬೀರಬಲ್ ಉತ್ತರಿಸಿದ.
ಅನುಮತಿಯಿಲ್ಲದೆ ಕಟ್ಟಿಗೆ ಕಡಿದು ಮಾರುವ ಆತನ ಬಗ್ಗೆ ರಾಜನಿಗೆ ದುರಭಿಮಾನವಿತ್ತು. ಆತ ಸಮೀಪಿಸಿದಾಗ ಬೀರಬಲ್ ಆತನನ್ನು ಕುರಿತು 'ನಮ್ಮ ರಾಜ ಸತ್ತ ಸುದ್ದಿ ತಿಳಿಯಿತೆ?" ಎಂದು ಪ್ರಶ್ನಿಸಿದ. ಕಟ್ಟಿಗೆಯ ಹೊರೆಯನ್ನು ಎಸೆದ ಆತ 'ದುಷ್ಟರಾಜ ಸತ್ತರೆ! ಒಳ್ಳೆಯದಾಯಿತು' ಎಂದು ಕುಣಿದಾಡಿದ.
ಸ್ವಲ್ಪ ದೂರ ಹೋದ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತು ಬರುತ್ತಿರುವ ಮುದುಕಿಯನ್ನು ಕುರಿತು ರಾಜ ಮತ್ತು ಬೀರಬಲ್‌ರಲ್ಲಿ ಅದೇ ಸಂಭಾಷಣೆ ನಡೆಯಿತು. ರಾಜನ ಮನಸ್ಸಿನಲ್ಲಿ ಮುದುಕಿಯ ಬಗ್ಗೆ ಕನಿಕರ, ಸಹಾನುಭೂತಿಯಿತ್ತು. ಬೀರಬಲ್ಲನ ಬಾಯಿಯಿಂದ ರಾಜನ ಮರಣ ವಾರ್ತೆ ಕೇಳಿದ ಆ ಮುದುಕಿ ಹುಲ್ಲಿನ ಹೊರೆಯನ್ನು ಇಳಿಸಿ 'ಪುಣ್ಯಾತ್ಮ ಬಾದಶಹನ ಬದಲಿಗೆ ವಿಧಿ ನನ್ನನ್ನಾದರೂ ಕೊಂಡೊಯ್ಯಬಾರದಿತ್ತೆ' ಎಂದು ಅಳುತ್ತಾ ಕೂತಳು.
(ಇದು ಅಂತೆಕಂತೆ ಕತೆ - ತತ್ವ ಮಾತ್ರ ಗ್ರಾಹ್ಯ) ನಾವು (ಯಾರನ್ನು) ಯಾವುದನ್ನು ಯಾವ ಭಾವನೆಯಿಂದ ನೋಡುತ್ತೇವೆಯೋ ಅದು ನಮಗೆ ಹಾಗೆಯೇ ಕಾಣುತ್ತದೆ. ಕಪ್ಪು ಗಾಜಿನ ಕನ್ನಡಕದಿಂದ ಕಾಣುವ ಎಲ್ಲ ವಸ್ತುಗಳು, ಕಪ್ಪಾಗಿಯೂ, ಹಸಿರು ಗಾಜಿನಿಂದ ಕಾಣುವ ಎಲ್ಲವೂ ಹಸಿರಾಗಿಯೇ ಕಾಣುವಂತೆಯೂ ನಮ್ಮ ಮನಸ್ಸಿನ ಭಾವನೆಗಳಿಗೆ ತಕ್ಕಂತೆ, ನಾವು ನೋಡುವ ದೃಷ್ಟಿಯಂತೆ, ಜಗತ್ತಿನ ಶಾಂತಿ-ಅಶಾಂತಿ, ವ್ಯಕ್ತಿಯ ಗುಣಾವಗಣಗಳು ನಮಗೆ ಕಾಣಿಸುತ್ತವೆ. ಹೀಗೆ ಶಾಂತಿ ಇರುವುದು ನಮ್ಮ ಮನಸ್ಸಿನಲ್ಲೇ, ಬೇರೆಲ್ಲೂ ಅಲ್ಲ.
- ಎಸ್. ವೆಂಕಟರಮಣ ಅಡಿಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


