ವೇದ ಬೇಧ
ಸೃಷ್ಟಿಯ ಹಲವು ರಹಸ್ಯಗಳನ್ನು ಹೊಂದಿರುವ, ಜೀವನದ ಅನೇಕ ಸಮಸ್ಯೆಗಳಿಗೆ ಬೇರೆ ಬೇರೆ ಕೋನಗಳಲ್ಲಿ...

ಸೃಷ್ಟಿಯ ಹಲವು ರಹಸ್ಯಗಳನ್ನು ಹೊಂದಿರುವ, ಜೀವನದ ಅನೇಕ ಸಮಸ್ಯೆಗಳಿಗೆ ಬೇರೆ ಬೇರೆ ಕೋನಗಳಲ್ಲಿ ಉತ್ತರವನ್ನು ಒದಗಿಸುವ ವೇದ, ಭಗವದ್ಗೀತೆ, ವಿಷ್ಣು ಸಹಸ್ರನಾಮ ಅಧ್ಯಯನದ ಬಗ್ಗೆ ಇಂದಿಗೂ ಹಲವು ಪ್ರಶ್ನೆಗಳು ಉತ್ತರವಿಲ್ಲದೆ ನಿಂತಿವೆ. ಈ ನಿಟ್ಟಿನಲ್ಲಿ ಭಾಗವತದಲ್ಲಿ ಹೇಳಿರುವಂಥ ವೇದ, ಶಾಸ್ತ್ರ, ಪುರಾಣಗಳ ಅಧ್ಯಯನದ ಬಗೆಗಿನ ಕೆಲವು ವಿಚಾರಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
ಸ್ತ್ರೀ ಶೂದ್ರ ಬಹ್ಮ (ದ್ವಿಜ) ಬಂಧೂನಾಂ ತ್ರಯೀ ನ ಶ್ರುತಿಗೋಚರಾ
ಕರ್ಮಶ್ರೇಯಸಿ ಮೂಢಾನಾಂ ಶ್ರೇಯ ಏವಂ ಭವೇದಿಹ
ಇತಿ ಭಾರತಮಾಖ್ಯಾನಂ ಕೃಪಯಾ ಮುನಿನಾ ಕೃತಮ್.
ಈ ಶ್ಲೋಕವನ್ನು ಆಳವಾಗಿ ವಿಶ್ಲೇಷಿಸದೇ ಇದ್ದರೆ, ಬರಿಯ ಗೊಂದಲ ಹಾಗೂ ವಿವಾದ ಹುಟ್ಟುವ ಸಾಧ್ಯತೆ ಇದೆ. ಇಲ್ಲಿ 'ಸ್ತ್ರೀಯರಿಗೆ, ಶೂದ್ರರಿಗೆ ಮತ್ತು ಬ್ರಹ್ಮ ಬಂಧುಗಳಿಗೆ ವೇದ ಮುಟ್ಟುವುದಿಲ್ಲ, ಅದಕ್ಕಾಗಿ ಅವರಿಗೆ ಮುಟ್ಟುವಂತೆ ಒಂದು ಅಧ್ಯಾತ್ಮ ಸಾಹಿತ್ಯ ಕೊಡಬೇಕು ಎಂದು ಬಯಸಿ ವ್ಯಾಸರು ಮಹಾಭಾರತ ರಚಿಸಿದರು' ಎನ್ನಲಾಗಿದೆ.
ಈ ಶ್ಲೋಕದಲ್ಲಿ ಹೇಳಿರುವ ಸತ್ಯ ಸಂದೇಶವನ್ನು ತಿಳಿಯಬೇಕು. ಅಧ್ಯಾತ್ಮ ಜ್ಞಾನ ಎಲ್ಲರಿಗೂ ಮುಟ್ಟಬೇಕು. ಆದರೆ, ಇಲ್ಲಿ ಕೆಲವರಿಗೆ ಅಧಿಕಾರ ಇಲ್ಲ ಎಂದು ಏಕೆ ಹೇಳಿದರು ಎನ್ನುವುದನ್ನು ಮೊದಲು ಅರಿಯಬೇಕು. ಯಾವುದೇ ಅಧ್ಯಯನಕ್ಕೆ ಲಿಂಗ, ಜಾತಿ ಮಾನದಂಡವಿಲ್ಲ.
ವಿದ್ಯೆಯನ್ನು ಅರ್ಹತೆ ಇಲ್ಲದವರಿಗೆ ಹೇಳಿದರೆ ಅದು ದುರುಪಯೋಗ. ಹೀಗಾಗಿ ಅರ್ಹತೆ ಪರೀಕ್ಷಿಸದೇ ಯಾವುದೇ ವಿದ್ಯೆ ಕೊಡುವ ಕ್ರಮವಿಲ್ಲ. ವೇದ ಕೂಡಾ ಅಷ್ಟೇ. ಗ್ರಹಿಸುವ ಸಾಮರ್ಥ್ಯ ಇದ್ದವರಷ್ಟೇ ವೇದದ ಅಧಿಕಾರಿಗಳಾಗಬಹುದು.
ಇಲ್ಲಿ 'ಸ್ತ್ರೀಯರಿಗೆ ವೇದವನ್ನು ಗ್ರಹಿಸುವ ಸಾಮರ್ಥ್ಯ ಇಲ್ಲವೇ?' ಎನ್ನುವ ಪ್ರಶ್ನೆ ಎಲ್ಲರಿಗೂ ಬರುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ನಾವು ಇತಿಹಾಸವನ್ನು ನೋಡಬೇಕಾಗುತ್ತದೆ. ಹಿಂದೆ ಸ್ತ್ರೀಯರಲ್ಲಿ ಎರಡು ವರ್ಗವಿತ್ತು. ವೇದಾಧ್ಯಯನಕ್ಕೋಸ್ಕರ ಮದುವೆಯಾಗದೇ ಇರುತ್ತಿದ್ದ 'ಬ್ರಹ್ಮವಾದಿನಿ'ಯರು ಮತ್ತು ಪ್ರಾಥಮಿಕ ಅಧ್ಯಯನದ ನಂತರ ಮದುವೆಯಾಗುತ್ತಿದ್ದ 'ಸತ್ಯವಧು'ಗಳು.
ಬ್ರಹ್ಮವಾದಿನಿಯರು ಸಾಮಾಜಿಕವಾಗಿ ಅತಂತ್ರರಾಗಿರುತ್ತಿದ್ದರು. ರಕ್ಷಣೆ ಇಲ್ಲದ ಹೆಣ್ಣನ್ನು ಸಮಾಜ ಕೆಟ್ಟ ದೃಷ್ಟಿಯಿಂದ ಕಾಣುವ ಅಪಾಯ ಇತ್ತು. ವೇದವ್ಯಾಸರೇ ಹೇಳುವಂತೆ 'ಹೇಗೆ ಮಾರ್ಗದಲ್ಲಿ ಬಿದ್ದಿರುವ ಮಾಂಸದ ತುಂಡನ್ನು ಹದ್ದು- ನಾಯಿಗಳು ನೋಡುತ್ತವೋ ಹಾಗೆ, ರಕ್ಷಣೆ ಇಲ್ಲದ ಹೆಣ್ಣನ್ನು ಸಮಾಜ ಕಾಣುತ್ತದೆ' ಎಂದು. ಇದಕ್ಕಾಗಿ ಸ್ತ್ರೀಯರು ಮದುವೆಯಾಗುವುದೇ ಉತ್ತಮ ಎನ್ನುವ ಸಾಮಾಜಿಕ ಪದ್ಧತಿ ಜಾರಿಗೆ ಬಂತು.
ಇಲ್ಲಿ ಕಾಡುವ ಪ್ರಶ್ನೆಯೇನೆಂದರೆ, 'ಮದುವೆಯಾದ ಹೆಣ್ಣು ಏಕೆ ವೇದಾಧ್ಯಯನ ಮಾಡಬಾರದು?' ಎನ್ನುವುದು. ಈ ವಿಚಾರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, 'ಗರ್ಭಕೋಶ' ಎನ್ನುವ ವಿಶೇಷ ಭಾಗ ಪ್ರಕೃತಿ ಕೇವಲ ಹೆಣ್ಣಿಗೆ ನೀಡಿದೆ. ಆದ್ದರಿಂದ ಸಮಾಜಕ್ಕೆ ಒಂದು ಉತ್ತಮ ಸಂತಾನವನ್ನು ಹೆತ್ತು ಕೊಡುವ ಜವಾಬ್ದಾರಿ ಹೆಣ್ಣಿನಲ್ಲಿದೆ ಎಂಬ ವಿಚಾರ ಗೋಚರವಾಗುತ್ತದೆ.
ಅತಿಯಾದ ಮಾನಸಿಕ ಒತ್ತಡಕ್ಕೊಳಗಾದ ಹೆಣ್ಣಿನ ಗರ್ಭಕೋಶ ದುರ್ಬಲವಾಗುವ ಅಪಾಯವಿದೆ ಎಂದು ಇಂದಿನ ವೈದ್ಯಶಾಸ್ತ್ರ ಹೇಳುತ್ತದೆ. ವೇದಾಧ್ಯಯನ ಹಾಗೂ ಮಗುವಿನ ಪಾಲನೆ ಹೆಣ್ಣಿಗೆ ಎರಡು ದೋಣಿಯಲ್ಲಿ ಕಾಲಿಟ್ಟ ಪಯಣ. ಇದು ಆಕೆಯಲ್ಲಿ ಜನಿಸುವ ಮಗುವಿನ ಮೇಲೆ ಪ್ರಭಾವ ಬೀರಬಹುದು. 'ಸಮಾಜಕ್ಕೆ ಉತ್ತಮ ಸಂತಾನ ಕೊಡುವುದು ಹೆಣ್ಣಿನ ಕರ್ತವ್ಯ ಹಾಗೂ ಅದು ವೇದಾಧ್ಯಯನ ಮಾಡುವುದಕ್ಕಿಂತ ಹೆಚ್ಚಿನ ಪುಣ್ಯದ ಕೆಲಸ' ಎಂದು ಶಾಸ್ತ್ರ್ತಕಾರರು ಹೇಳುತ್ತಾರೆ.
ಕೆಲವು ಅಸಾಧಾರಣ ಸ್ತ್ರೀಯರಿದ್ದಾರೆ. ವೇದ ಮಂತ್ರವನ್ನು ಕಂಡ ಋಷಿಗಳೂ ಇದ್ದಾರೆ. ಆದರೆ ಸ್ತ್ರೀಯರ ಮೇಲೆ ವೇದಾಧ್ಯಯನದ ಒತ್ತಡ/ ಹೇರಿಕೆ ನಿಷಿದ್ಧ. ಭಗವಂತನ ಸೃಷ್ಟಿಕ್ರಿಯೆಯ ಮೂಲಸಾಧನ ಹೆಣ್ಣು. ಆತ ತನ್ನ ಸೃಷ್ಟಿಕ್ರಿಯೆಗೆ ನಮ್ಮನ್ನು ಮಾಧ್ಯಮವಾಗಿ ಬಳಸುತ್ತಾನೆ ಎನ್ನುವುದು ಹೆಣ್ಣಿಗೆ ಹೆಮ್ಮೆಪಡುವ ಸಂಗತಿ.
ಅಂಥ ಶ್ರೇಷ್ಠ ಕಾರ್ಯ ಮಾಡಲು ಇಂಥ ಕೆಲವು ನಿಯಮಗಳನ್ನು ಶಾಸ್ತ್ರ ಹೇಳುತ್ತದೆ. ದುರ್ಬಲವಾದ ಮಗುವನ್ನು ಕೊಡುವ ತಾಯಿಯಾಗಬಾರದು ಎನ್ನುವ ಉದ್ದೇಶದಿಂದ, ಸ್ತ್ರೀಯರಿಗೆ ಬಲವಂತದ ಉಚ್ಚ ಶಿಕ್ಷಣವನ್ನು ಶಾಸ್ತ್ರ ನಿಷೇಧಿಸುತ್ತದೆ. ಎರಡು ದೋಣಿಯಲ್ಲಿ ಕಾಲಿಟ್ಟು ಮಾಡುವ ಪಯಣ ಎಂದೂ ಶ್ರೇಯಸ್ಕರವಲ್ಲ. ಅಲ್ಲಿ ಒಂದೇ ನಮ್ಮ ಸಂತಾನಕ್ಕೆ ಅಥವಾ ನಮಗೇ ಅನ್ಯಾಯವಾಗುವ ಸಾಧ್ಯತೆ ಹೆಚ್ಚು. ಇವು ಜೀವನದ ಅನುಭವದ ಮಾತೇ ಹೊರತು, ಪಕ್ಷಪಾತದ ಹೇಳಿಕೆಗಳಲ್ಲ.
ವೇದ ಸಂಸ್ಕೃತ ಅತ್ಯಂತ ಭಿನ್ನ, ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಬಲ್ಲ ಪಂಡಿತರಿಗೇ ವೇದ ಅರ್ಥವಾಗುವುದಿಲ್ಲ. ವೇದದ ಅಂತರಂಗ, ಅದರಲ್ಲಿರುವ ಅಧ್ಯಾತ್ಮ ರಹಸ್ಯ ಅತ್ಯಂತ ಗುಹ್ಯ, ಹೀಗಾಗಿ ವೇದದ ಮೇಲ್ನೋಟದ ಅರ್ಥ ತಿಳಿಯಲಿಕ್ಕೇ ಒಂದು ಜನ್ಮ ಸಾಲದು. ಆದ್ದರಿಂದ ಇಡೀ ಜೀವನವನ್ನು ವೇದಾಧ್ಯಯನಕ್ಕೆ ಮುಡಿಪಾಗಿಡಲು ಬದ್ಧರಾದವರು ಮಾತ್ರ ವೇದಾಧ್ಯಯನಕ್ಕೆ ಕೈ ಹಾಕಬೇಕು, ಹಾಗೆ ಅಧ್ಯಯನ ಮಾಡಲು ಬ್ರಾಹ್ಮಣ್ಯದ ಅರ್ಹತೆ ಬಹಳ ಮುಖ್ಯ. ಗೀತೆಯಲ್ಲಿ ಹೇಳುವಂತೆ.
ಶಮಃ ದಮಃ ಶೌಚಂ ಕ್ಷಾಂತಿ ಅರ್ಜವಮ್ ಏವ ಚ॥
ಜ್ಞಾನಂ ವಿಜ್ಞಾನಮ್ ಆಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ ॥18-42॥
ಭಗವಂತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು, ನೈರ್ಮಲ್ಯ, ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ- ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ ಮತ್ತು ಆಸ್ತಿಕತೆ- ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು. ಈ ಎಲ್ಲಾ ಅರ್ಹತೆಗಳು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಎಲ್ಲರಿಗೂ ಬರಬೇಕೆಂದೇನೂ ಇಲ್ಲ. ಆ ರೀತಿ ಬ್ರಾಹ್ಮಣದ ಅರ್ಹತೆ ಇಲ್ಲದ, ಆದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ 'ಬ್ರಹ್ಮಬಂಧು'ಗಳಿಗಾಗಿ, ಸದಾ ಸೇವಾ ಮಾರ್ಗದಲ್ಲಿ ನಿರತರಾಗಿರುವ ಶೂದ್ರವರ್ಣದವರಿಗಾಗಿ ಮತ್ತು ಸ್ತ್ರೀಯರಿಗಾಗಿ ವ್ಯಾಸರು ಮಹಾಭಾರತ ರಚಿಸಿದರು.
ಏನು ಮಾಡಬೇಕು- ಏನು ಮಾಡಬಾರದು ಎಂದು ಅರಿಯದವರಿಗೆ, ಒಂದು ಶ್ರೇಯಸ್ಸಿನ ಮಾರ್ಗ ತೋರಿಸುವುದು ವ್ಯಾಸರ ಭಾರತ ರಚನೆಯ ಮೂಲ ಉದ್ದೇಶವಾಗಿತ್ತು. ಹೀಗಿರುವಾಗ ಮಹಾಭಾರತದ ಅಂಗವಾದ ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮವನ್ನು ಸ್ತ್ರೀಯರು ಓದಬಾರದೆಂಬುದು ಅಸಂಗತ. ಭಾರತಕ್ಕೆ ಗಂಡಸು- ಹೆಂಗಸು- ಶೂದ್ರ- ಬ್ರಾಹ್ಮಣ ಎನ್ನುವ ಬೇಧವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮವೇದ.
- ಮೋಹನಗೌಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


