ವರ್ಷ ಪಂಚಾಂಗ
ಮಳೆಯನ್ನಳೆಯಲು ಮಾಪನ ಬೇಕು. ಆದರೆ ಎಷ್ಟು ಮಳೆ ಬರಹುದೆಂದು ತಿಳಿಯ ಹಿಂದಿನವರು ನಕ್ಷತ್ರಗಳ ಆಧಾರದಲ್ಲಿ...

ಮಳೆಯನ್ನಳೆಯಲು ಮಾಪನ ಬೇಕು. ಆದರೆ ಎಷ್ಟು ಮಳೆ ಬರಹುದೆಂದು ತಿಳಿಯ ಹಿಂದಿನವರು ನಕ್ಷತ್ರಗಳ ಆಧಾರದಲ್ಲಿ ನಿಖರವಾಗಿ ಗುರುತಿಸಿದ್ದಾರೆ. ಈ ಬಾರಿಯ ವಿಜಯ ಸಂವತ್ಸರದಲ್ಲಿ ಅಂದರೆ 2013ರಲ್ಲಿ ಸುರಿಯುವ ಮಳೆಯ ಪ್ರಮಾಣವು ಉತ್ತಮವಾಗಿದೆ ಎಂದು ಪಂಚಾಂಗದಲ್ಲಿ ತಿಳಿಸಿದ್ದಾರೆ.
ಜ್ಯೇಷ್ಠ ಮಾಸ ಶುಕ್ಲ ಪಕ್ಷ ತೃತೀಯ ಅಂದರೆ ಜೂನ್ 21ಕ್ಕೆ ಜಲಭರಿತ ಮಳೆಯಲ್ಲಿ ಸೂರ್ಯನು ಆರಿದ್ರಾ ನಕ್ಷತ್ರ ಪ್ರವೇಶಿಸುವನು. ತಮೋ ನಾಮಕ ಮೇಘವು ಅನಿಲ ಮಂಡಲದಿಂದ ಕೂಡಿಕೊಂಡು ಬಿರುಗಾಳಿ, ಸಿಡಿಲು, ಮಿಂಚು ಮುಂತಾದ ಘರ್ಜನೆಯೊಂದಿಗೆ ಯುಕ್ತವಾಗಿ 4 ಕೊಳಗಳ ನೀರನ್ನು ಸುರಿಸುವುದು.
ಮಳೆಯು ಅಧಿಕವಾಗಿದ್ದರೂ ಅಕಾಲ ವೃಷ್ಟಿ, ಖಂಡ ವೃಷ್ಟಿಯಾಗಿ ಬರುವುದರಿಂದ ಕೆಲವು ದೇಶಗಳಲ್ಲಿ ದವಸ ಧಾನ್ಯ, ಫಲ ಪೈರುಗಳು ವೃದ್ಧಿಯಾದರೂ ಕೆಲವು ಕಡೆಗಳಲ್ಲಿ ನೆರೆ, ಭೂಕಂಪ, ಜ್ವಾಲಾಮುಖಿ ಇತ್ಯಾದಿ ದುರ್ಘಟನೆ ಉಂಟಾಗಿ ಪ್ರಜೆಗಳಿಗೆ ಕಷ್ಟನಷ್ಟ ಬರಲಿದೆ.
ಅಶ್ವಿನಿ ನಕ್ಷತ್ರದಿಂದ ರೇವತಿ ನಕ್ಷತ್ರದವರೆಗೆ ಪ್ರತೀ 13 ಅಂಶ 20 ಕಲಾ ಅಂತರದಿಂದ ಸೂರ್ಯನು ಒಂದೊಂದು ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇವುಗಳಿಗೆ ಮಳೆ ನಕ್ಷತ್ರವೆಂದೂ, ಮಹಾ ನಕ್ಷತ್ರಗಳೆಂದು ಕರೆಯುವ ವಾಡಿಕೆ. ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ ಈ ನಾಲ್ಕು ನಕ್ಷತ್ರಗಳು ಬೇಸಿಗೆಯಲ್ಲಿ ಮಳೆ ಬರುವ ನಕ್ಷತ್ರಗಳು. ಸೂರ್ಯ ಮೃಗಶಿರಾ ನಕ್ಷತ್ರ ಪ್ರವೇಶಿಸಿದ ಕೂಡಲೇ ಮಳೆಗಾಲ ಪ್ರಾರಂಭವಾಗುವುದು. ಚಿತ್ತಾ ನಕ್ಷತ್ರ ಮುಗಿದ ನಂತರ ಬಹುತೇಕ ಎಲ್ಲಾ ಕಡೆಯಲ್ಲಿ ಮಳೆ ಕಡಿಮೆಯಾಗುತ್ತದೆ. ಮೃಗಶಿರಾ ನಕ್ಷತ್ರದವರೆಗಿನ 9 ನಕ್ಷತ್ರಗಳು ಮಳೆಗಾಲದ ನಕ್ಷತ್ರಗಳು ಹಾಗೂ ಮಳೆ ಬರುವಂಥ ನಕ್ಷತ್ರಗಳು.
ಈ ಎಲ್ಲಾ ನಕ್ಷತ್ರಗಳಲ್ಲಿ ಮಳೆ ಬರುತ್ತದೆ ಎಂದೇನಿಲ್ಲ. ಕೆಲವು ನಕ್ಷತ್ರಗಳಲ್ಲಿ ಒಳ್ಳೆಯ ಮಳೆ ಬಂದರೆ ಕೆಲವು ನಕ್ಷತ್ರಗಳಲ್ಲಿ ಮಧ್ಯಮ ಮಳೆ ಬರುತ್ತದೆ. ಇನ್ನೂ ಕೆಲವು ನಕ್ಷತ್ರಗಳಲ್ಲಿ ಕನಿಷ್ಠ ಮಳೆ ಬರುತ್ತದೆ. ಜ್ಯೋತಿಷ ಶಾಸ್ತ್ರದಲ್ಲಿ ಉತ್ತಮ, ಮಧ್ಯಮ, ಕನಿಷ್ಠ ಮಳೆಯಾಗುವುದಕ್ಕೆ ಕೆಲವು ನಿಯಮಗಳಿವೆ.
ಸಾಮಾನ್ಯವಾಗಿ ಮಳೆ ನಕ್ಷತ್ರ ಪ್ರವೇಶವಾಗುವ ಸಮಯದಲ್ಲಿ ನಿತ್ಯ ನಕ್ಷತ್ರವು ಪುರುಷ ಸಂಜ್ಞಕವೋ ಅಥವಾ ಸ್ತ್ರೀ ಸಂಜ್ಞಕವೋ ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಇದರಿಂದ ಮಳೆ ಹೇಗೆ ಆಗುತ್ತದೆ ಎಂಬುದನ್ನು ಕಂಡುಹಿಡಿಯಬಹುದು.
ಸೂರ್ಯ ನಕ್ಷತ್ರದಿಂದ ನಿತ್ಯ ನಕ್ಷತ್ರದವರೆಗೆ ಎಣಿಸಿ ಬಂದ ಸಂಖ್ಯೆಗೆ 9ರಿಂದ ಭಾಗಿಸಿದಾಗ ಉಳಿಯುವ ಶೇಷವು ಒಂದು. ಅಂದರೆ ಮೂಷಕ ವಾಹನ. ಎರಡು ಉಳಿದರೆ ಮಯೂರ ವಾಹನ. ಆರು ಉಳಿದರೆ ಮಹಿಷ ವಾಹನ. ಏಳು ಉಳಿದರೆ ಖರ ವಾಹನ. ಎಂಟು ಉಳಿದರೆ ಗಜ ವಾಹನ. ಒಂಭತ್ತು ಉಳಿದರೆ ಅಶ್ವ ವಾಹನ. ಹೀಗೆ ಒಟ್ಟು ಒಂಭತ್ತು ವಾಹನಗಳು.
ಗಜ ವಾಹನ ಉತ್ತಮ ಮಳೆ ಬರುವ ವಾಹನ. ಮಂಡೂಕ ವಾಹನ ಅತಿವೃಷ್ಟಿ ತರಿಸುವ ವಾಹನ. ಮಹಿಷ ವಾಹನ ಬರೀ ಮಳೆ ಬರುವ ವಾಹನ. ಮೂಷಿಕ ವಾಹನ ಅಲ್ಪವೃಷ್ಟಿಯ ವಾಹನವೂ, ಖರ ಅನಾವೃಷ್ಟಿಯ ವಾಹನವೂ ಆಗಿದೆ. ಮಯೂರ ವಾಹನ ವೃಷ್ಟಿನಾಶಕ ವಾಹನವಾಗಿದ್ದರೆ, ಜಂಬೂಕ ಮಧ್ಯಮ ವೃಷ್ಟಿಯ ವಾಹನ. ಮೇಷ ವಾಹನ ಮಧ್ಯಮ ವೃಷ್ಟಿಯವಾಹನ.
ಪುರುಷ, ಸ್ತ್ರೀ ನಕ್ಷತ್ರ
ಅಶ್ವಿನಿಯಿಂದ ರೇವತಿ ನಕ್ಷತ್ರದವರೆಗೆ ಪುರುಷ, ಸ್ತ್ರೀ, ನಪುಂಸಕ ನಕ್ಷತ್ರಗಳೆಂದು 3 ಭಾಗಗಳಿವೆ. ಆರಿದ್ರ, ಪುನರ್ವಸು, ಪುಷ್ಯ, ಆಶ್ಲೇಷಾ, ಮಘಾ, ಹುಬ್ಬಾ, ಉತ್ತರಾ, ಹಸ್ತ, ಚಿತ್ತಾ, ಸ್ವಾತಿ ಈ ಹತ್ತು ನಕ್ಷತ್ರಗಳು ಸ್ತ್ರೀ ನಕ್ಷತ್ರಗಳು. ಮೂಲಾ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠಾ, ಶತಭಿಷಾ, ಪೂರ್ವಭಾದ್ರ, ಉತ್ತರಭಾದ್ರ, ರೇವತಿ, ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ ಈ 13 ನಕ್ಷತ್ರಗಳು ಪುರುಷ ನಕ್ಷತ್ರಗಳು. ವಿಶಾಖ, ಅನುರಾಧ, ಜ್ಯೇಷ್ಠ ಈ ಮೂರು ನಕ್ಷತ್ರಗಳು ನಪುಂಸಕ ನಕ್ಷತ್ರಗಳು.
ಮಹಾ ನಕ್ಷತ್ರಗಳು ನಿತ್ಯ ನಕ್ಷತ್ರಗಳಿಂದ ಆಗುವ ಯೋಗಗಳಿಂದ ಬೇರೆ ಬೇರೆ ಪರಿಣಾಮಗಳಾಗುತ್ತವೆ. ಉದಾ: ಆರಿದ್ರ ನಿತ್ಯ ನಕ್ಷತ್ರದ ದಿನ ಪುಷ್ಯ, ಮಳೆಯ ಪ್ರವೇಶವಾದರೆ ಆರಿದ್ರ ಸ್ತ್ರೀ ನಕ್ಷತ್ರ, ಪುಷ್ಯ ಸ್ತ್ರೀ ನಕ್ಷತ್ರ ಇದರಿಂದ ಸ್ತ್ರೀ ಯೋಗವೆನ್ನುತ್ತಾರೆ. ಪುನರ್ವಸು ನಿತ್ಯ ನಕ್ಷತ್ರ. ಇದು ಸ್ತ್ರೀ ನಕ್ಷತ್ರ. ಈ ದಿನ ಮೃಗಶಿರಾ ಮಳೆಯ ನಕ್ಷತ್ರವು ಪುರುಷ ನಕ್ಷತ್ರ. ಆದುದರಿಂದ ಇಲ್ಲಿ ಸ್ತ್ರೀ ಪುರುಷ ಯೋಗವಾಗುವುದು. ಮಹಾ ನಕ್ಷತ್ರಗಳು ನಿತ್ಯ ನಕ್ಷತ್ರಗಳು ಎರಡೂ ನಪುಂಸಕವಾದರೆ ಗಾಳಿ ಬಂದು ಮಳೆಗೆ ತಡೆಯಾಗುವುದು.
ಮಹಾ ನಕ್ಷತ್ರ, ನಿತ್ಯ ನಕ್ಷತ್ರಗಳೆರಡೂ ಸ್ತ್ರೀ ನಕ್ಷತ್ರಗಳಾದರೆ ಸಿಡಿಲು, ಗಾಳಿಯಿಂದ ಮಳೆ ಕಡಿಮೆಯಾಗುವುದು. ಮಹಾನಕ್ಷತ್ರ ಪುರುಷ ನಕ್ಷತ್ರ ಮತ್ತು ನಿತ್ಯ ನಕ್ಷತ್ರ ಸ್ತ್ರೀ ಯೋಗವಾದರೆ ಉತ್ತಮ ಮಳೆ.
ಮಧ್ಯಮ ಮಳೆ
ಮಹಾನಕ್ಷತ್ರ ಪುರುಷ ನಕ್ಷತ್ರವಾಗಿ ನಿತ್ಯ ನಕ್ಷತ್ರ ನಪುಂಸಕ ಯೋಗವಾದರೆ ಮಹಾ ನಕ್ಷತ್ರ ಸ್ತ್ರೀ ನಕ್ಷತ್ರವಾಗಿ ನಿತ್ಯ ನಕ್ಷತ್ರ ನಪುಂಸಕ ಯೋಗವಾದರೆ ಮಧ್ಯಮ ಮಳೆ. ಜೂನ್ 7ರಿಂದ ಮಹಾನಕ್ಷತ್ರ ಮೃಗಶಿರಾ ಮಳೆ ಶುರು. ಆ ದಿನದ ನಿತ್ಯ ನಕ್ಷತ್ರ ರೋಹಿಣಿ. ಇದರಿಂದ ಮಳೆ ನಕ್ಷತ್ರ ಪುರುಷ, ನಿತ್ಯ ನಕ್ಷತ್ರ ರೋಹಿಣಿಯೂ ಪುರುಷ ನಕ್ಷತ್ರ. ಇದರಿಂದ ಎರಡೂ ಪುರುಷ ನಕ್ಷತ್ರವಾಗಿರುವುದರಿಂದ ಮಳೆ ಕಡಿಮೆ.
ಜೂನ್ 21ರಂದು ಮಹಾನಕ್ಷತ್ರ ಆರಿದ್ರ, ಆ ದಿನದ ನಿತ್ಯ ನಕ್ಷತ್ರ ಅನುರಾಧ. ಇದರಿಂದ ಮಳೆ ನಕ್ಷತ್ರ ಸ್ತ್ರೀ, ನಿತ್ಯ ನಕ್ಷತ್ರ ನಪುಂಸಕ. ಹೀಗಾಗಿ, ಸಾಧಾರಣ ಮಳೆ. ಜುಲೈ 5ರಂದು ಮಹಾನಕ್ಷತ್ರ ಪುನರ್ವಸು ಆರಂಭ. ಆ ದಿನದ ನಕ್ಷತ್ರ ಮೃಗಶಿರಾ. ಮಳೆ ನಕ್ಷತ್ರ ಸ್ತ್ರೀ, ನಿತ್ಯ ನಕ್ಷತ್ರ ಪುರುಷ. ಹೀಗಾಗಿ, ಭಾರಿ ಮಳೆ.
ಜುಲೈ 19ರಿಂದ ಮಹಾನಕ್ಷತ್ರ ಪುಷ್ಯ ಆರಂಭ. ನಿತ್ಯ ನಕ್ಷತ್ರ ಜ್ಯೇಷ್ಠ. ಮಹಾನಕ್ಷತ್ರ ಸ್ತ್ರೀ, ನಿತ್ಯ ನಕ್ಷತ್ರ ನಪುಂಸಕ. ಹೀಗಾಗಿ, ಸಾಧಾರಣ ಮಳೆ. ಆಗಸ್ಟ್ 2ರಿಂದ ಆಶ್ಲೇಷಾ ಮಹಾನಕ್ಷತ್ರ ಆರಂಭ. ಆ ದಿನದ ನಿತ್ಯ ನಕ್ಷತ್ರ ಮೃಗಶಿರಾ. ಸ್ತ್ರೀ, ಪುರುಷ ನಕ್ಷತ್ರ. ಭಾರಿ ಮಳೆ.
ಆಗಸ್ಟ್ 16ರಿಂದ ಮಘಾ ಮಹಾನಕ್ಷತ್ರ ಆರಂಭ. ನಿತ್ಯ ನಕ್ಷತ್ರ ಜ್ಯೇಷ್ಠ. ಮಹಾನಕ್ಷತ್ರ ಸ್ತ್ರೀ, ನಿತ್ಯ ನಕ್ಷತ್ರ ನಪುಂಸಕ. ಸಾಧಾರಣ ಮಳೆ. ಆಗಸ್ಟ್ 30ರಿಂದ ಹುಬ್ಬಾ ಮಹಾ ನಕ್ಷತ್ರ ಆರಂಭ.ಆ ದಿನದ ನಿತ್ಯ ನಕ್ಷತ್ರ ಆರಿದ್ರ. ಮಹಾನಕ್ಷತ್ರ ಸ್ತ್ರೀ, ನಿತ್ಯ ನಕ್ಷತ್ರ ಸ್ತ್ರೀ. ಇದರಿಂದ ಸ್ತ್ರೀ ಮತ್ತು ಸ್ತ್ರೀ ನಕ್ಷತ್ರ ಆಗಿರುವುದರಿಂದ ಸಿಡಿಲು ಗಾಳಿಯಿಂದ ಮಳೆ ಕಡಿಮೆ ಸುರಿಯುತ್ತದೆ.
ಸೆಪ್ಟೆಂಬರ್ 19ರಂದು ಉತ್ತರ ಮಹಾನಕ್ಷತ್ರ ಆರಂಭ. ಆ ದಿನದ ನಿತ್ಯ ನಕ್ಷತ್ರ ಮೂಲಾ. ಮಹಾನಕ್ಷತ್ರ ಸ್ತ್ರೀ, ನಿತ್ಯ ನಕ್ಷತ್ರ ಪುರುಷ. ಹೀಗಾಗಿ, ಭಾರಿ ಮಳೆ. ಸೆ. 26ರಂದು ಹಸ್ತಾ ಮಹಾನಕ್ಷತ್ರ ಪ್ರವೇಶ. ನಿತ್ಯ ನಕ್ಷತ್ರ ಆರಿದ್ರ. ಮಹಾನಕ್ಷತ್ರ ಸ್ತ್ರೀ, ನಿತ್ಯ ನಕ್ಷತ್ರ ಸ್ತ್ರೀ. ಸಿಡಿಲು ಗಾಳಿ ಸಹಿತ ಕಡಿಮೆ ಮಳೆ.
ಅಕ್ಟೋಬರ್ 30ರಂದು ಚಿತ್ತಾ ಮಹಾನಕ್ಷತ್ರ ಆರಂಭ. ಆ ದಿನದ ನಿತ್ಯ ನಕ್ಷತ್ರ ಮೂಲಾ ಸ್ತ್ರೀ ನಕ್ಷತ್ರ.
ನಿತ್ಯ ನಕ್ಷತ್ರ ಪುರುಷ. ಭಾರಿ ಮಳೆ. ಹೀಗೆ ಪಂಚಾಂಗಗಳ ಅಂಕಿಅಂಶದಂತೆ ಈ ವರ್ಷ ಒಳ್ಳೆಯ ಮಳೆ ಸುರಿಯುವ ಸಾಧ್ಯತೆ ಇದೆಯಿದೆ.
- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


