ಹಚ್ಚೋಣ ಓದುಬತ್ತಿ
ಶಬ್ದಗಳಿಗೆ ಜೋತುಬಿದ್ದು ಅವೇನು ಹೇಳುತ್ತವೆ ಎಂದು ತಿಳಿಯುವ ಹಂಬಲವುಳ್ಳವರೆಲ್ಲ ಪುಸ್ತಕಗಳನ್ನು ಪ್ರೀತಿಸುತ್ತಾರೆ. ನಿನ್ನೆ, ಇಂದು ಮತ್ತು ನಾಳೆಗಳ ಯಾಂತ್ರಿಕತೆಗಿಂತ ಭಿನ್ನವಾಗಿ ಬದುಕನ್ನು ಸಾಗಿಸಲು ಓದುಗಾರಿಕೆ ನೆರವಾಗುತ್ತದೆ. ಪುಸ್ತಕಗಳು ಸಂಸ್ಕೃತಿಯ ನಿರಂತರ ಪ್ರವಾಹದ ಪ್ರತೀಕಗಳು.
ಪುಸ್ತಕಗಳನ್ನು ಶ್ರದ್ಧಾಭಕ್ತಿಗಳಿಂದ ಓದಿ ಮನನ ಮಾಡುಕೊಳ್ಳುವುದು ಮತ್ತು ಸವಿಯುವುದು ಉನ್ನತ ಶಿಕ್ಷಣದ ಮೂಲ ಧ್ಯೇಯಗಳಲ್ಲಿ ಒಂದು. ಅದು ಗತಕಾಲದಲ್ಲಿ ನಮಗಿರುವ ನಂಟು. ವರ್ತಮಾನ ಕಾಲದ ದಾಖಲೆ ಮತ್ತು ಭವಿಷ್ಯತ್ತಿನ ಮುನ್ನೋಟ. ಬದುಕಿನ ನಿರಂತರತೆಯನ್ನು ಅರ್ಥ ಮಾಡಿಕೊಳ್ಳಲು, ಸುಖಾನುಭವ ಹೆಚ್ಚಿಸಿಕೊಳ್ಳಲು ನಾವು ಆಗಾಗ ಓದುತ್ತಿರಬೇಕು.
ಪುಸ್ತಕಗಳು ಮಾನವನ ವಿಚಾರ ಶಕ್ತಿಯ ಭಾವನಾಲೋಕದ ಸ್ಥಾಯೀ ರೂಪ. ಅದು ಜ್ಞಾನದ ಸಂಗ್ರಹ. ಕ್ಷರವಾದ ಮಾತನ್ನು ಅಕ್ಷರವಾಗಿಸಿದ್ದು ಲಿಪಿ. ಆ ಲಿಪಿಯಲ್ಲಿ ಜ್ಞಾನವನ್ನು ಸೆರೆಹಿಡಿದು ದಾಖಲಿಸಿದ್ದು ಪುಸ್ತಕ. ಸುಖ ನಮ್ಮ ವ್ಯಕ್ತಿತ್ವವನ್ನು ನಿಖರಗೊಳಿಸಿ ಶಾಂತಿಯನ್ನು ನೀಡುತ್ತದೆ. ಒಳ್ಳೆಯ ಪುಸ್ತಕಗಳೂ ನಮಗೆ ಆನಂದವನ್ನು ನೀಡಿ ಪದೇ ಪದೇ ಓದುವಂತೆ ಮಾಡುತ್ತವೆ.
ಹೊಸ ವಿಚಾರಗಳಿಗಾಗಿ ವಿಕಾಸಕ್ಕಾಗಿ ಮತ್ತು ಸಾರ್ಥಕತೆಗಾಗಿ ನಾವು ಓದುತ್ತಿರಬೇಕು. ಯಾಂತ್ರಿಕ ಓದು ಗಿಳಿ ಪಾಠವಂತೆ. ನಮ್ಮ ಓದು ಅರ್ಥಮಾಡಿಕೊಳ್ಳುತ್ತ ಮುಂದುವರಿಯಬೇಕು. 'ಜಗತ್ತನ್ನು ಬೆಳಗಲು ಒಬ್ಬ ಸೂರ್ಯ ಬೇಕು. ಬದುಕನ್ನು ಬೆಳಗಿಸಲು ಒಂದು ಪುಸ್ತಕ ಸಾಕು' ಎಂದಿದ್ದಾರೆ ರವೀಂದ್ರನಾಥ ಠಾಗೋರರು.
ಅರಿವಿನ ಬೆಳಕನ್ನು ಚೆಲ್ಲುವ ಉತ್ತಮ ಪುಸ್ತಕಗಳು ನಾಡಿನ ಸಾಂಸ್ಕೃತಿಕ ಪ್ರತೀಕಗಳಾಗಿವೆ. ಬೇರೆ ಮಾಧ್ಯಮಗಳೆಲ್ಲ ಹಳಸಿದಾಗಲೂ ಪುಸ್ತಕಗಳು ಹೊಸತನವನ್ನು ಉಳಿಸಿಕೊಳ್ಳುತ್ತವೆ.
ಲಕ್ಷ್ಮಿಯ ಕೋಶಕ್ಕೂ ಸರಸ್ವತಿಯ ಕೋಶಕ್ಕೂ ಹಿರಿದಾದ ಅಂತರವಿದೆ. ಲಕ್ಷ್ಮಿಯ ಕೋಶವು ಖರ್ಚು ಮಾಡಿದಂತೆ ಬರಿದಾಗುತ್ತದೆ. ಸರಸ್ವತಿಯ ಭಂಡಾರವು ಉಪಯೋಗಿಸಿದಷ್ಟೂ ವರ್ಧಿಸುತ್ತದೆ. ಇದರ ಗುಟ್ಟನ್ನು ತಿಳಿದು ಪುಸ್ತಕಗಳನ್ನು ಓದಿ ಬೇರೆಯವರಿಗೆ ತಿಳಿವಳಿಕೆ ಹಂಚಿದಾಗ ಹೇಳಿದವರ ಮತ್ತು ಕೇಳಿದವರ ಅನುಭವಗಳು ಹೆಚ್ಚುತ್ತಾ ಸಾಗುತ್ತವೆ.
- ಶಿವರಾಮ ಭಟ್ ಹತ್ತೊಕ್ಕಲು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

