ಅಶುಭ ಘಳಿಗೆ
ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳು ಶುಭಕಾರ್ಯದ ಸಮಯ. ಈ ಸಮಯದಲ್ಲೇ ಮದುವೆಗೆ ದಿನ ನಿಗದಿ ಮಾಡಿ ಮದುವೆಯಾಗುವ ಸಭಾ ಭವನವನ್ನು ಮುಂಗಡವಾಗಿ ಬುಕ್ಕಿಂಗ್ ಮಾಡುತ್ತಾರೆ. ಏಕೆಂದರೆ, ಈ ವೇಳೆ ಶಾಲೆಗೆ ರಜೆ ಇದ್ದು, ಎಲ್ಲರೂ ನಿಶ್ಚಿಂತರಾಗಿರುವ ಸಮಯ.
ಆದರೆ ಈ ವರ್ಷ ಫೆ.25ರಿಂದ ಏಪ್ರಿಲ್ 23 ವರೆಗೆ ಮದುವೆಗೆ ದಿನ ನಿಗದಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಸಮಯದಲ್ಲಿ ಶುಕ್ರನು ಅಸ್ತನಾಗುತ್ತಾನೆ.
ಶುಕ್ರನು ಮನುಷ್ಯನ ದೇಹದಲ್ಲಿ ಕಾಲ ಪುರುಷನ ಕಾಮ ಸ್ವರೂಪಿಯಾಗಿರುತ್ತಾನೆ. ಶುಕ್ರನು ಕಳತ್ರಕಾರಕನೆನ್ನುತ್ತಾರೆ. ಅಂದರೆ ಪುರುಷರ ಜಾತಕದಲ್ಲಿ ಅವರ ಹೆಂಡತಿಯನ್ನೂ, ಸ್ತ್ರೀಯರ ಜಾತಕದಲ್ಲಿ ಅವರ ಗಂಡನನ್ನೂ ಸೂಚಿಸುತ್ತಾನೆಂದು ಹೇಳುತ್ತಾರೆ.
ಒಬ್ಬ ವ್ಯಕ್ತಿಯ ಜಾತಕದಲ್ಲಿ ಶುಕ್ರನ ಬಲಾಬಲ ನೋಡಿಕೊಂಡು ಆ ವ್ಯಕ್ತಿಯ ಹೆಂಡತಿ, ಸಂಸಾರದ ವಿಷಯವನ್ನು ಸ್ಪಷ್ಟವಾಗಿ ಹೇಳಬಹುದು. ಮುಖ್ಯವಾಗಿ ಒಬ್ಬನ ಜಾತಕದಲ್ಲಿ ಶುಕ್ರ ಪ್ರಬಲನಾಗಿ ಅವನಿಗೆ ಶುಭ ಸಂಬಂಧ, ಶುಭ ವೀಕ್ಷಣೆಯಿದ್ದು, ಪಾಪ ಸಂಬಂಧವಿಲ್ಲದೇ ಇದ್ದಲ್ಲಿ ಒಳ್ಳೆಯ ಹೆಂಡತಿ ಅಥವಾ ಒಳ್ಳೆಯ ಗಂಡ ಸಿಗುವುದು ಸ್ಪಷ್ಟವಾಗಿದೆ.
ಶುಕ್ರ ಜಾತಕದಲ್ಲಿ ಸಬಲನಾಗಿದ್ದರೆ ಒಳ್ಳೆಯ ಫಲ ಸಿಗುವುದು ಖಂಡಿತ. ಶುಕ್ರನು ಶುಭ ಗ್ರಹ. ಇವನ ಜಾತಿ ಬ್ರಾಹ್ಮಣ. ಸ್ತ್ರೀ ಗ್ರಹ. ಶುಕ್ರನು ಯಾವಾಗಲೂ ಸುಖಾಪೇಕ್ಷೆ ಉಳ್ಳವನು. ಶುಕ್ರನು ಜಾತಕದಲ್ಲಿ ಪ್ರಬಲನಾದರೆ ಇಂಥವರು ಸುಖ ಬಯಸುತ್ತಾರೆ. ಶುಕ್ರನ ದೇಹ ಬಹಳ ಸುಂದರವಾಗಿರುತ್ತದೆ. ಶುಕ್ರನ ದೆಸೆಯಿಂದ ವಾತ, ಕಫ ಕಂಡುಬರುತ್ತದೆ.
ಶುಕ್ರ ಅಸ್ತನಾಗುವುದರಿಂದ ಗ್ರಹವೂ ಬಲಹೀನವಾಗಿರುತ್ತದೆ. ಅದಲ್ಲದೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ ಶುಭ ಕೆಲಸಗಳು, ವಿವಾಹ ನಿಶ್ಚಯ, ವಿವಾಹ ಸಂಬಂಧದ ಬಗ್ಗೆ ಮಾತನಾಡುವುದು, ಹೆಣ್ಣು ನೋಡುವುದು ಇದೆಲ್ಲವನ್ನೂ ಮಾಡಬಾರದೆಂದು ಹೇಳುತ್ತಾರೆ.
ಆದರೆ ಕೆಲವರು ಅನಿವಾರ್ಯ ಸಂದರ್ಭದಲ್ಲಿ ಮದುವೆಗೆ ಜ್ಯೋತಿಷ್ಯರಲ್ಲಿ ದಿನ ನಿಗದಿ ಮಾಡುವುದು ಇದೆ. ಈ ಸಂದರ್ಭದಲ್ಲಿ ಏನಾದರೂ ಒಂದು ಉಪಶಮನ ಮಾಡುವ ಕ್ರಮವನ್ನು ಜ್ಯೋತಿಷ್ಯರು ಹೇಳುತ್ತಾರೆ. ಆದರೆ ಇದರಿಂದ ಫಲ ಇಲ್ಲ.
ಏಕೆಂದರೆ ಶುಕ್ರನು ಕಣ್ಣು ಮುಚ್ಚಿರುವುದರಿಂದ ಅವನು ಕಣ್ಣು ತೆರೆಯದೆ ಇರುವುದರಿಂದ ನಾವು ಮಾಡಿದ ಶುಭ ಕೆಲಸಕ್ಕೆ ಫಲ ಸಿಗುವುದಿಲ್ಲ. ಶುಕ್ರನು ಅಸ್ತನಾಗಿರುವಾಗ ಕೆಲವು ವ್ಯವಹಾರದಲ್ಲಿ ಹಣಕಾಸು ನಷ್ಟವಾಗುತ್ತದೆ. ಕೆಲವು ವಿವಾಹ ಸಂಬಂಧಗಳು ನಿಶ್ಚಯವಾಗಿದ್ದರೂ ಮುರಿದು ಬೀಳುವ ಸಂಭವ ಇದೆ. ಮದುವೆ ವಿಚ್ಛೇದನಕ್ಕಾಗಿ ವ್ಯಾಜ್ಯವು ನ್ಯಾಯಾಲಯದಲ್ಲಿದ್ದು, ಅದರಿಂದ ಪ್ರತಿಕೂಲ ಆದೇಶವಾಗುವ ಸಂಭವ ಇದೆ.
ಶುಕ್ರನು ಕಾರಕನಾಗಿರುವ ಕಾವ್ಯ, ಗಾಯನ, ಸಂಗೀತ ಮತ್ತು ಕಲಾ ಕೌಶಲ್ಯದವರಿಗೆ ಒಂದಲ್ಲ ಒಂದು ತೊಂದರೆಗಳು, ಅಡೆತಡೆಗಳು, ಹಣಕಾಸಿನ ತೊಂದರೆಗಳು ಎದುರಾಗುತ್ತದೆ. ಇಲ್ಲಿ ವಿಶೇಷವಾಗಿ ಚಿತ್ರ ನಿರ್ಮಾಪಕರಿಗೆ ತೊಂದರೆಗಳು ಎದುರಾಗಿ ತಾವು ನಿರೀಕ್ಷೆ ಮಾಡಿದಂತೆ ನಡೆಯುವುದಿಲ್ಲ. ನಟ ನಟಿಯರಿಗೂ ವಿನಾ ಕಾರಣ ಕೆಲವು ತೊಂದರೆಗಳು ಬರುತ್ತದೆ. ವ್ಯವಹಾರಗಳು ಸರಿಯಾಗಿ ನಡೆಯುವುದಿಲ್ಲ. ಅತ್ಯಾಚಾರ ಮಾಡಿದವರಿಗೆ ತೊಂದರೆಗಳು ಇದ್ದೇ ಇರುತ್ತವೆ.
ಶುಕ್ರನು ಅಸ್ತನಾಗಿರುವ ಸಮಯದಲ್ಲಿ ವಿಶೇಷವಾಗಿ ಸ್ತ್ರೀ ದೇವತೋಪಾಸನೆ, ಅಂದರೆ ಪಾರ್ವತಿ ಮತ್ತು ಲಕ್ಷ್ಮಿದೇವಿಯರನ್ನು ಪೂಜಿಸಬೇಕು. ದುರ್ಗಾಷ್ಟೋತ್ತರ ಶತ ನಾಮಾವಳಿ, ಅಥ ಶುಕ್ರಾಷ್ಟೋತ್ತರ ಶತನಾಮಾವಳಿ, ಮಹಾಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ (ಶುಕ್ರ ಶಾಂತಿ) ಓದಿದರೆ ಒಳ್ಳೆಯದು.
= ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

