ಪಶ್ಚಿಮ ಮುಖಿ
ಮೊದಲು ಅವಿಭಕ್ತ ಕುಟುಂಬದ ವ್ಯವಸ್ಥೆ ಇದ್ದರೆ, ಆಧುನೀಕರಣದ ಹೆಸರಿನಿಂದ ಇಂದು ವಿಭಕ್ತ ಕುಟುಂಬದ ಕಡೆಗೆ...

ಇಂದಿನ ಪೀಳಿಗೆಯನ್ನು ನೋಡಿದಾಗ ಆಧುನೀಕರಣದ ವಿಶ್ವರೂಪ ಗೊತ್ತಾಗುತ್ತದೆ. ಮೊದಲು ಅವಿಭಕ್ತ ಕುಟುಂಬದ ವ್ಯವಸ್ಥೆ ಇದ್ದರೆ ಆಧುನೀಕರಣದ ಹೆಸರಿನಿಂದ ಇಂದು ವಿಭಕ್ತ ಕುಟುಂಬದ ಕಡೆಗೆ ಹೋಗಿ ತಂದೆ, ತಾಯಿ, ಮಗು ಮಾತ್ರ ಮನೆಯಲ್ಲಿದ್ದುಕೊಂಡು ಕಥೆಗಳನ್ನು ಹೇಳುವ ಸಣ್ಣ ಮಕ್ಕಳನ್ನು ತಿದ್ದುವ ಅಜ್ಜ, ಅಜ್ಜಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬಿಡುವ ಕ್ರಮವನ್ನು ಕಾಣುತ್ತಿದ್ದೇವೆ.
ಬೆಳಗ್ಗೆ ಬೇಗ ಎದ್ದು, 'ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ, ಕರಮೂಲೇ ಸ್ಥಿತಾಗೌರೀ ಪ್ರಭಾತೇ ಕರದರ್ಶನಮ್' ಎಂದು ಹೇಳುವ ಕ್ರಮ ಮಾಯವಾಗಿ 8 ಗಂಟೆಯ ನಂತರವೇ ಹಾಸಿಗೆಯಿಂದ ಏಳುವ ಕ್ರಮ ಇಂದಿನವರದ್ದು.
ಬೆಳಗ್ಗೆದ್ದು ಮನೆಯೆದುರು ನೀರು ಹಾಕಿ, ರಂಗೋಲಿ ಬಿಡಿಸುವುದು ಸಂಪ್ರದಾಯವೆಂದು ಕಂಡರೂ ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ. ಮುಸ್ಸಂಜೆಯ ಹೊತ್ತಲ್ಲಿ ಹಿರಣ್ಯಕಶಿಪುವನ್ನು ತೊಡೆಯ ಮೇಲಿರಿಸಿಕೊಂಡು ವಧೆ ಮಾಡಿದ ನರಸಿಂಹಾವತಾರಿ ವಿಷ್ಣುವನ್ನು ನೆನೆಸುವ ಸಮಯ ದೇವರಿಗೆ ದೀಪಹಚ್ಚಿ, ಭಜನೆ ಮಾಡಬೇಕು ಎಂಬುದು ನಮ್ಮ ಸಂಪ್ರದಾಯ. ಆದರೆ ಆ ಕಾಲದಲ್ಲಿ ನಾವು ಕಣ್ಣೀರು ಸುರಿಸುವ ಧಾರಾವಾಹಿಗಳಲ್ಲಿ ಮಗ್ನರಾಗಿರುತ್ತೇವೆ.
ಇಂದು ಸಂಬಂಧ ಬೆಳೆಸುವಾಗಲೂ ಹಿಂದಿನ ಪದ್ಧತಿ ಅನುಸರಿಸುತ್ತಿಲ್ಲ. ಇಂದಿನ ಹುಡುಗಿಯರಿಗೆ ಸಂಬಂಧ ನೋಡುವಾಗ ಒಂದೇ ಹುಡುಗನಿರುವ, ಮದುವೆ ಆದ ಕೂಡಲೇ ಬೇರೆ ಮನೆ ಮಾಡುವ ಹುಡುಗನನ್ನೇ ಆರಿಸುತ್ತಾರೆ. ಎಂಥ ದುರಂತ ನೋಡಿ.
ಇನ್ನೊಂದು ದುರಂತ ಎಂದರೆ ಮಕ್ಕಳನ್ನು ತಿದ್ದುವ ಕೆಲಸ ಶಾಲೆಯಲ್ಲೂ ಆಗುತ್ತಿಲ್ಲ. ಮನೆಯಲ್ಲೂ ಆಗುತ್ತಿಲ್ಲ. ಏಕೆಂದರೆ ಮಗುವನ್ನು ನಾವು ಪ್ರೀತಿಸುವ ಕ್ರಮ ಈ ರೀತಿಯದ್ದಾಗಿದೆ. ಶಾಲೆಯಲ್ಲಿ ನೀನು ಹೀಗೆ ಮಾಡಬಾರದು ಇದು ತಪ್ಪು ಎಂದು ಹೇಳಿದರೆ ಮರುದಿನ ತಂದೆ ತಾಯಿ ಶಾಲೆಯಲ್ಲಿ ದೂರು ಕೊಡಲು ತಯಾರಾಗುತ್ತಾರೆ. ಅಧ್ಯಾಪಕರಿಗೂ ಎಲ್ಲರೊಂದಿಗೆ ಎಲ್ಲರಿಗೂ ಬೇಕಾದ ರೀತಿ ಬಾಳುವ ಅನಿವಾರ್ಯತೆ ಇದೆಯಲ್ಲವೇ?
ಈಗೀಗ ನಾವು ಪ್ರತಿಯೊಂದು ವಿಷಯಕ್ಕೂ ಒಂದೊಂದು ದಿನವನ್ನು ನಿಗದಿ ಮಾಡಿದ್ದೇವೆ. ಅದರಲ್ಲಿ ಪ್ರೇಮಿಗಳ ದಿನವೂ ಒಂದು. ಅದನ್ನು ಆಚರಿಸುವ ರೀತಿಯೂ ಅದ್ಭುತ. ಈ ಎಲ್ಲದರ ಪರಿಣಾಮಗಳಲ್ಲಿ ಮುಖ್ಯವಾದುದೆಂದರೆ ವಿವಾಹ ವಿಚ್ಛೇದನ ಅತಿಯಾಗಿರುವುದು. ಹೊಂದಾಣಿಕೆ ಎಂದರೆ ಅರ್ಥವನ್ನೇ ಕಲಿಯದೇ ಟಿವಿಯಲ್ಲಿ ಕಾಣುತ್ತಿರುವುದೇ ನಿಜವಾದ ಜೀವನ ಎಂಬ ಅಹಂನಲ್ಲಿ ಯುವ ಜನತೆ ಸಾಗುತ್ತಿರುವುದು ದುರಂತವೇ ಸರಿ.
ಯಾವ ತಂದೆ ತಾಯಿ ಮಕ್ಕಳು ಹೇಳಿದ್ದನ್ನೆಲ್ಲಾ ಮರು ಮಾತನಾಡದೇ ತೆಗೆದುಕೊಡುತ್ತಾರೋ ಅಥವಾ ತಪ್ಪು ಮಾಡಿದಾಗ ಗಮನಿಸದೇ ಅಥವಾ ಶಿಕ್ಷಿಸದೇ, ಸರಿ ಮಾಡಿದಾಗ ಪ್ರಶಂಸಿಸದೇ ಇದ್ದಾಗ ಅದು ತಪ್ಪಾಗುತ್ತದೆ.
ಇಂದಿನ ವಿದ್ಯಾಭ್ಯಾಸವೆಂದರೆ ಜೀವನ ಮೌಲ್ಯವನ್ನು ಬೆಳೆಸುವ ಬದಲು ಕೇವಲ ಪರೀಕ್ಷೆಗಳಲ್ಲಿ ಪಾಸು ಮಾಡುವುದಷ್ಟೇ ಆಗಿದೆ. ಹೀಗಾಗಿಯೇ ಒಬ್ಬ ರ್ಯಾಂಕ್ ಹೋಲ್ಡರ್ ದೊಡ್ಡ ಕಳ್ಳನಾಗಬಹುದು. ದಡ್ಡ ವಿದ್ಯಾರ್ಥಿ ಪ್ರಾಮಾಣಿಕವಾಗಿ ಸಮಾಜದಲ್ಲಿ ಬಾಳಬಹುದು.
ಒಬ್ಬ ಸಾಧು ಸಮುದ್ರದ ದಂಡೆಯಲ್ಲಿ ನಿಂತು, ಒಂದು ಹುಲ್ಲುಕಡ್ಡಿಯನ್ನು ಗಮನಿಸುತ್ತಿದ್ದ. ಅದು ಸಮುದ್ರದೊಳಗೆ ಹೋಗಲು ಪ್ರಯತ್ನಿಸುತ್ತಿತ್ತು. ಆದರೆ ಸಮುದ್ರ ಅದನ್ನು ಹೊರಗೆ ಹಾಕುತ್ತಲೇ ಇತ್ತು. ಈ ಬಗ್ಗೆ ಸಾಧು ಸಮುದ್ರನಲ್ಲಿ ಕೇಳಿದಾಗ ಅದು ಹೇಳುತ್ತದೆ, 'ನಾನು ಒಂದು ಹುಲ್ಲುಕಡ್ಡಿಯನ್ನು ಸೇರಿಸಿಕೊಂಡರೆ ಅಂತ ಹಲವು ಹುಲ್ಲುಕಡ್ಡಿಗಳು ನನ್ನೊಳಗೆ ಬರಬಹುದು, ಆಗ ನಿಧಾನವಾಗಿ ನನ್ನ ಅಸ್ತಿತ್ವವೇ ಇಲ್ಲವಾಗಬಹುದು' ಎಂದು.
ಅದೇ ರೀತಿ ನಾವು ನಮ್ಮಲ್ಲಿ ಒಂದೊಂದು ಕೆಟ್ಟ ಅಭ್ಯಾಸವನ್ನು ಸೇರಿಸಿಕೊಳ್ಳುತ್ತಾ ಹೋದರೆ ಕೊನೆಗೆ ನಮ್ಮ ಅಸ್ತಿತ್ವವೇ ಇಲ್ಲವಾಗಬಹುದು. ಆದ್ದರಿಂದ ಮಕ್ಕಳಲ್ಲಿ ನಾವು ಹಿತಶತ್ರುಗಳಾದರೆ ಮೌಲ್ಯಗಳನ್ನು ಅವರಲ್ಲಿ ಅಳವಡಿಸುವವರಾಗಿ ಪಾಶ್ಚಿಮಾತ್ಯದ ಕಡೆಗೆ ಹೋಗದೇ ನಮ್ಮ ತನವನ್ನು ಉಳಿಸಿಕೊಳ್ಳಬೇಕಾಗಿದೆ.
- ಕೆ. ಸುಬ್ರಹ್ಮಣ್ಯ ಆಚಾರ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


