ಭಕ್ತಿ-ಜ್ಯೋತಿಷ್ಯ

ಶ್ರೀಪಾದ

ಶ್ರೀಪಾದ
Published On :

ಶ್ರೀಪಾದರಾಜರ ಸ್ಮರಣೆಯಿಂದಲೇ, ಹರಿದಾಸ ಪರಂಪರೆ ಹಾಗೂ ಕನ್ನಡ ದಾಸಸಾಹಿತ್ಯದ ಇತಿಹಾಸ ಪ್ರಾರಂಭವಾಗುತ್ತದೆ. ಕನ್ನಡ ಸಾಹಿತ್ಯದ ಮೂಲಕ ಭಕ್ತಿ ಸಂಸ್ಕೃತಿಯೊಂದನ್ನು ನಿರ್ಮಿಸಿದ ಮಹಾನುಭಾವರು ಶ್ರೀಪಾದರಾಜರು.
ಅವರು ಸಿದ್ಧಾಂತವನ್ನು, ಬದುಕಿನ ಮೌಲ್ಯಗಳನ್ನು ಸರಳ ಕನ್ನಡದಲ್ಲಿ ಹೇಳಿ ಸಾಹಿತ್ಯ ವಾಹಿನಿಯಲ್ಲಿ ಭಕ್ತಿ ಗಂಗೆಯ ಪಾವಿತ್ರ್ಯತೆಯನ್ನು ಕಾಪಾಡಿದ ಭಾಗವತ್ತೋತಮರು. ದೇವರ ಪೂಜಾ ಕಾಲದಲ್ಲಿ ಪರಂಪರಾಗತ ಮಂತ್ರಸ್ತೋತ್ರಗಳೊಡನೆ ಸವಿಗನ್ನಡದ ದೇವರನಾಮಗಳನ್ನು ಹಾಡುವ ಹೊಸ ಸಂಪ್ರದಾಯವನ್ನು ಪ್ರಾರಂಭಿಸಿ ದ ಹೆಗ್ಗಳಿಕೆ ಈ ಸಂತರದ್ದು.  
ಸುಮಾರು 98 ವರ್ಷ ಜೀವಿಸಿದ್ದ ಶ್ರೀಪಾದರಾಜರ ಜೀವನ ಚರಿತ್ರೆ ರೋಚಕವಾಗಿದೆ. ಚನ್ನಪಟ್ಟಣದ ಅಬ್ಬೂರಿನವರಾದ ಅವರು ಬಾಲ್ಯದಲ್ಲಿ ದನ ಕಾಯುತ್ತಿದ್ದಾಗ ಒಂದು ಮುಸ್ಸಂಜೆ ಅಲ್ಲಿಯ ಪುರುಷೋತ್ತಮ ತೀರ್ಥರನ್ನು ಕಾಣಲು ಬಂದ ಶ್ರೀರಂಗದ ಪದ್ಮನಾಭತೀರ್ಥರ ಪರಂಪರೆಯ ಮಾಧ್ವಯತಿ ಸ್ವರ್ಣವರ್ಣತೀರ್ಥರು ಈ ಬಾಲಕನನ್ನು ಅಬ್ಬೂರು ಎಷ್ಟು ದೂರವಿದೆ ಎಂದು ಪ್ರಶ್ನಿಸಿದರು.
ಆಗ, 'ಸ್ವಾಮಿ ನನ್ನ ನೋಡಿ, ಮನೆಗೆ ಹಿಂತಿರುಗುತ್ತಿರುವ ಈ ದನಕರುಗಳ ನೋಡಿ, ಮುಳುಗುತ್ತಿರುವ ಸೂರ್ಯನನ್ನು ನೋಡಿ, ಈಗ ಅಬ್ಬೂರು ಎಷ್ಟು ದೂರದಲ್ಲಿದೆ ತಿಳಿಯಿತೆ' ಎಂದು ಉತ್ತರವಿತ್ತ.
ಕತ್ತಲೆಗೆ ಮುಂಚೆ ದನಕರುಗಳನ್ನು ಮನೆಗೆ ಕೊಂಡೊಯ್ಯುವುದು ರೂಢಿ. ಆದ್ದರಿಂದ ಅಬ್ಬೂರು ತೀರ ಸನಿಹದಲ್ಲಿದೆಯೆಂಬುದನ್ನು ಹುಡುಗ ಬಹಳ ಧ್ವನಿಪೂರ್ವಕವಾಗಿ ಹೇಳಿದ್ದ. ಬಾಲಕನ ಕುಶಾಗ್ರಮತಿಯನ್ನು ಕಂಡು ಶ್ರೀಗಳಿಗೆ ತುಂಬ ಸಂತೋಷವಾಗಿ ಅವನನ್ನು ಶಿಷ್ಯನ್ನಾಗಿ ಸ್ವೀಕರಿಸಿದರು. ಮುಂದೆ ಶ್ರೀಗಳ ಬದುಕು ದಿನದಿನಕ್ಕೂ ಸಂವೃದ್ಧಿಯಾಯಿತು.
ಜ್ಞಾನ ತಪೋನಿಧಿಗಳಾದ ಶ್ರೀಪಾದರಾಜರು ಕವಿಗಳೆಂಬುದು ಎಷ್ಟು ದಿಟವೋ ಭಕ್ತಾಗ್ರಣಿಗಳು ಎಂಬುದು ಅಷ್ಟೇ ಸತ್ಯ. ಅವರ ಕೃತಿಗಳನ್ನು ಮನಸ್ಸಿಟ್ಟು ಓದುವ ಭಕ್ತರಿಗೆ ಶ್ರೇಯಸ್ಸು ಶತಃಸಿದ್ಧ.
ಸಂಸ್ಕೃತ ಭೂಯಿಷ್ಠ ಪರಿಸರದಲ್ಲಿ ಅಧ್ಯಾತ್ಮಲೋಕದಿಂದ ವಂಚಿತರಾಗಿದ್ದ ಅಸಂಖ್ಯಾತ ಪಾಮರ ವೃಂದಕ್ಕೆ  ಆಚಾರ್ಯ ಮಧ್ವರ ತತ್ವವಾದ ತಿಳಿವಿನ ಬೆಳಕಿನಲ್ಲಿ ಭಕ್ತಿಯ ಮೇರುಮಜಲನ್ನು ತೋರಿ ವ್ಯಾಸ-ದಾಸ ಸಾಹಿತ್ಯವನ್ನು ಸಮನ್ವಯಗೊಳಿಸಿದ ಕೀರ್ತಿ ಶ್ರೀಪಾದರಾಜರಿಗೆ ಸಲ್ಲುತ್ತದೆ.
ಅನಾಥರನ್ನು ಕಂಡೊಡನೆಯೇ ಕರುಣೆ ಉಕ್ಕೇರುವ ಶ್ರೀಪಾದರಾಜರು, 'ಯಾಕೆ ಹುಟ್ಟಿಸಿದೆ ನೀ ಸಾಕಲಾರದೆ ಜಗದೇಕ ಕಾರಣ ಪುರುಷ ಶ್ರೀಕೃಷ್ಣ' ಎಂದು ಪ್ರಶ್ನಿಸುತ್ತಾರೆ.
ಸತಿ ಅನುಕೂಲವಿರಬೇಕು, ಸುತನಲ್ಲಿ ಗುಣಬೇಕು ಮತಿವಂತನಾಗಬೇಕು ಮತ ಹಿಂದಾಗಬೇಕು ಎನ್ನುವ ಸತ್ಸಂಗದ ಅಗತ್ಯವನ್ನು ವಿವೇಕ ಕುಟುಂಬ ನೆಮ್ಮದಿಗಳ ಅಗತ್ಯವನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ.
ದಾಸ ಸಾಹಿತ್ಯ, ವಚನ ಸಾಹಿತ್ಯ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ತತ್ವಗಳನ್ನು ಅರ್ಥಮಾಡಿಕೊಳ್ಳುವುದು ಒಂದೇ, ಶ್ರೀಪಾದರಾಜರ ಗಾನಾಮೃತ ಮನವರಿಕೆ ಮಾಡಿಕೊಳ್ಳುವುದೂ ಒಂದೇ.
ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚಿಸಿದ ಹೆಗ್ಗಳಿಕೆ ಶ್ರೀಪಾದರಾಜರದು. ಏನು ಸುಖವೋ ಎಂಥಾ ಸುಖವೋ ಹರಿ ಧ್ಯಾನ ಮಾಡುವರ ಸಂಗ! ಅನುಭವಿಸಿದವರಿಗೇ ಅದರ ಸುಖಗೊತ್ತು. ಅವನ ಅನಂತ ನಾಮಗಳನ್ನು ಜಾಗೃತಗೊಳಿಸಿದರೆ ಜಗತ್ತೇ ಅವರನ್ನು ಜಾಹೀರಾತು ಮಾಡುತ್ತದೆ. ಅದಕ್ಕೆ ಶ್ರೀಪಾದರಾಜರೇ ಸಾಕ್ಷಿ.

- ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.