ಭಕ್ತಿ-ಜ್ಯೋತಿಷ್ಯ

ಜೀವನಚಕ್ರ

ಚಕ್ರದ ಕಲ್ಪನೆಯ ಹರವು ಎಷ್ಟೆಂದು ಗುರುತಿಸುವುದು ಕಷ್ಟ. ಚಕ್ರವೆಂದೊಡನೆ ಥಟ್ಟನೆ ತೋರಿಕೊಳ್ಳುವ ಅರ್ಥ ಬಂಡಿಯ ಗಾಲಿ.

ಜೀವನಚಕ್ರ
Published On :

ಚಕ್ರದ ಕಲ್ಪನೆಯ ಹರವು ಎಷ್ಟೆಂದು ಗುರುತಿಸುವುದು ಕಷ್ಟ. ಚಕ್ರವೆಂದೊಡನೆ ಥಟ್ಟನೆ ತೋರಿಕೊಳ್ಳುವ ಅರ್ಥ ಬಂಡಿಯ ಗಾಲಿ. ಆ ಗಾಲಿಯ ಆಕಾರವನ್ನು ವರ್ತುಲ ಮಂಡಲ ಎಂದೂ ಕರೆಯುತ್ತಾರೆ. ಅದರ ಸುತ್ತಾಟವನ್ನು ಭ್ರಮಣ ಎನ್ನುವರು.
ಎಣಿಕೆ ಗುಣಾಕಾರಗಳಲ್ಲಿ ಬಳಸುವ ರಾಶಿಚಕ್ರ, ನಕ್ಷತ್ರಚಕ್ರ, ಹಗರಣದಲ್ಲಿ ಎದುದಾಳಿಯ ಮೇಲೆ ಎಸೆಯಲು ಬಳಸುವುದು ಚಕ್ರಾಯುಧ... ಇವೆಲ್ಲ ಚಕ್ರದ ಪ್ರಾಥಮಿಕ ಉಲ್ಲೇಖಗಳು. ದೇವತಾಮೂರ್ತಿಗಳ ಹಿಂಬದಿಯಲ್ಲಿ ಶಿರಶ್ಚಕ್ರ, ಪ್ರಭಾಶ್ಚಕ್ರಗಳು, ಹಾಗೆಯೇ ಧರ್ಮಚಕ್ರ, ಕಾಲಚಕ್ರ, ಕುಂಭಚಕ್ರ, ನಾಡಿಚಕ್ರ, ಷಟ್‌ಚಕ್ರ, ಋಣಿಧನಿಚಕ್ರ ಮೊದಲಾದವುಗಳಲ್ಲಿರುವ ಚಕ್ರದ ಕಲ್ಪನೆ, ಗಾಲಿಗೆ ಸರಿ ಹೊಂದುವುದಿಲ್ಲ. ಧರ್ಮಚಕ್ರವನ್ನಾಗಲಿ, ಕಾಲಚಕ್ರವನ್ನಾಗಲಿ ವರ್ತುಲಾಕಾರವಾಗಿ ನಿರೂಪಿಸುವಾಗ ಕಲ್ಪನೆಯ ಅಂಶವೇ ಹೆಚ್ಚು.
ಚಕ್ರವನ್ನು ಯಾರು ತಿರುಗಿಸುತ್ತಿರುವನೋ ಅವನು ಚಕ್ರವರ್ತಿ. ಯಾವ ಚಕ್ರ? ತಿರುಗಿಸುವುದು ಹೇಗೆ? ಚಕ್ರವೆಂದರೆ ಜನಗಳ ಸಮುದಾಯ, ದೇಶಗಳ ಒಕ್ಕೂಟ, ಭೂಮಿ, ಭೂಮಂಡಲ. ತಿರುಗಿಸುವುದೆಂದರೆ ತನ್ನ ಒಡೆತನವನ್ನು ಅಲ್ಲೆಲ್ಲ ಮೂಡಿಸಿರುವವನು.
ಸೂರ್ಯನನ್ನು ಚಕ್ರರೂಪಿಯಾಗಿ ನಾವು ಪರಿಗಣಿಸಿದ್ದೆವು. ಈ ಸೂರ್ಯನೇ ಮುಂದೆ ವಿಷ್ಣುರೂಪಿಯಾಗಿ ಸುದರ್ಶನ ರೂಪಿಯಾದ ಚಕ್ರವು ವಿಷ್ಣುವಿನ ಆಯುಧವಾಯಿತು ಎನ್ನುವ ಅಭಿಪ್ರಾಯವಿದೆ. ಮೋಹಿನಿ ರೂಪ ತಳೆದ ವಿಷ್ಣು ರಾಹುವಿನ ಹನನ ಮಾಡಲು ಈ ಸುದರ್ಶನ ಚಕ್ರವನ್ನು ಸೂರ್ಯಚಂದ್ರರಿಂದ ಪಡೆದ ಎಂಬ ಕತೆ ಮಹಾಭಾರತದ ಆದಿ ಪರ್ವದಲ್ಲಿದೆ.
ಚಕ್ರ ವಿವಿಧ ವ್ಯವಹಾರಗಳನ್ನು ವರ್ಣಿಸಲು ಸಾಂಕೇತಿಕವಾಗಿ ಬಳಸಲ್ಪಟ್ಟಿದೆ. 'ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ' ಎಂದು ಶಂಕರಾಚಾರ್ಯರು ಇಹ ಸಂಸಾರ ಮುಗಿಯದ ಚಕ್ರವನ್ನು ವರ್ಣಿಸಿದ್ದಾರೆ. ಚಕ್ರವು ಗತಿ ಸೂಚಕವಾಗಿರುವಂತೆ ಸಂರಕ್ಷಣೆಯ ಸೂಚಕವೂ ಹೌದು. ಸ್ತ್ರೀಯರು ಧರಿಸುವ ಕಂಕಣವೂ ಮಕ್ಕಳ ಕೈಯಲ್ಲಿ ಅಥವಾ ಕಾಲಲ್ಲಿ ತೊಡಿಸುವ ಕಡಗವೂ ಭೂತಾದಿ ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುವ ಒಂದು ಚಕ್ರವೆಂದೇ ಅದರ ಬಳಕೆ ಆರಂಭವಾಯಿತೆಂದು ಹೇಳಲಾಗಿದೆ.
ಪ್ರಾಚೀನ ಶಿಲ್ಪಗಳಲ್ಲಿ ಚಕ್ರವನ್ನು ನಿರೂಪಿಸುವಾಗ ಷಟ್ಕೋಣ ಯಂತ್ರವನ್ನು ಅದರಲ್ಲಿ ಅಳವಡಿಸಿರುವುದು ಕಂಡು ಬರುತ್ತದೆ. ಷಟ್ಕೋಣವೆಂದರೆ ಆರು ತುದಿಗಳಿರುವ ವಿನ್ಯಾಸ. ಗಂಡು ತ್ರಿಕೋಣ, ಹೆಣ್ಣು ತ್ರಿಕೋಣದೊಂದಿಗೆ ಕೂಡಿಕೊಂಡಾಗ ಷಟ್ಕೋಣ ಸಿದ್ಧವಾಗುತ್ತದೆ. ಈ ಆರು ತುದಿಗಳನ್ನು ಸೇರಿಸಿ ಗೆರೆ ಎಳೆದರೆ ವರ್ತುಲಾಕಾರವಾಗುತ್ತದೆ. ಚಕ್ರದ ರೂಪ ಅದು.
ಆಗಮ ಶಾಸ್ತ್ರದಲ್ಲಿ ಆರು ಕೊನೆಗಳು ಆರು ಗುಣಗಳೆಂದು ಸಂಕೇತ, ಇದನ್ನು ಷಾಡ್ಗುಣ್ಯವೆನ್ನುತ್ತಾರೆ. ಜ್ಞಾನ, ಶಕ್ತಿ, ಐಶ್ವರ್ಯ, ವೀರ್ಯ, ಬಲ, ತೇಜಸ್ಸು ಇವೇ ಆರು ಗುಣಗಳು. ಇವು ಪರಸ್ಪರ ಪೂರಕವಾಗಿ ಪೋಷಕವಾಗಿ ಸಮ ಪ್ರಮಾಣದಲ್ಲಿ ಕೂಡಿಯೇ ಚಕ್ರವಾಗಿದೆ.

ಯಿನ್- ಯಂಗ್

ಚೀನಿಯರು ರೂಪವಿಲ್ಲದ ಮತ್ತು ದ್ವೈತ ಭಾವನೆಗೆ ಅವಕಾಶವಿರದ ವೃತ್ತವನ್ನು ಚಕ್ರವೆಂದು ಬಗೆದು ಜಗತ್ತಿನ ಉತ್ಪತ್ತಿಗೆ ಅದೇ ಕಾಣವೆಂದು, ಮೂಲವೆಂದೂ ಅದರಲ್ಲಿ ಅವ್ಯಕ್ತವಾದರೂ ವಿಶಿಷ್ಟವಾದ ಪ್ರಕೃತಿ ಭಾಗ (ಯಿನ್) ಮತ್ತು ಪುರುಷ ಭಾಗ (ಯಂಗ್) ಅಡಗಿವೆಯೆಂದೂ ನಿರ್ದೇಶಿಸುತ್ತಾರೆ.

ಜೀವನಚಕ್ರ
ಇಂದು ಪ್ರತಿ ಕ್ಷೇತ್ರದಲ್ಲೂ ಅನಿವಾರ್ಯವೆನಿಸಿ ಸರ್ವವ್ಯಾಪಿಯಾಗಿರುವ ಚಕ್ರ ಜನಜೀವನದ ಒಂದು ಆಧಾರ. ಆ ಜೀವನದೊಂದಿಗೆ ನಮ್ಮ ಇಂದಿನ ಜೀವನವನ್ನು ಹೋಲಿಸಿಕೊಂಡಾಗ, ನಾವು ಎಷ್ಟು ದೂರ ಸಾಗಿ ಬಂದಿದ್ದೇವೆ ಎಂಬುದು ಗೊತ್ತಾಗುವುದು.
ಚಕ್ರ ನಡೆದು ಬಂದ ದಾರಿ ಇದೇ ಎಂದು ಖಚಿತವಾಗಿ ಹೇಳಲು ನಮಗೆ ಯಾವ ಆಧಾರವೂ ಇಲ್ಲ. ಮೊದಲೇ ಹೇಳಿದಂತೆ ತರ್ಕಬದ್ಧವಾದ ಊಹೆಯೊಂದೇ ಇದಕ್ಕೆ ಆಧಾರ. ಮಾನವೀಯ ವಿಕಸನದ ಪ್ರಾರಂಭದ ದಿನಗಳಲ್ಲಿ ಅವನಿಗಿದ್ದ ಒಂದು ಮುಖ್ಯ ಅವಶ್ಯಕತೆ. ಭಾರವಾದ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಒಯ್ಯುವುದು. ಶ್ರಮಸಾಧ್ಯವಾದ ಈ ಕೆಲಸವನ್ನು ಸುಗಮಗೊಳಿಸಿದ ಸಾಧನ ಚಕ್ರ. ಅದರ ಹಿಂದಿರುವ ತತ್ವ ಹಂತ ಹಂತವಾಗಿ ಅವನ ಅನುಭವಕ್ಕೆ ಈ ರೀತಿ ಬಂದಿದೆ ಎಂಬುದು ಸಮಂಜಸವಾಗಿ ಕಾಣುತ್ತದೆ ಎಂದು ಮಾತ್ರ ಹೇಳಬಹುದು.
ಚಿಕ್ಕ ಕೈಗಡಿಯಾರದಲ್ಲಿರುವ ಪುಟ್ಟ ಚಕ್ರಗಳಿಂದ ಹಿಡಿದು ಭಾರಿ ವಿದ್ಯುದಾಗರಗಳಲ್ಲಿ ಕೆಲಸ ಮಾಡುವ ಟರ್ಬೈನುಗಳವರೆಗೆ ಚಕ್ರ ಅತಿಮುಖ್ಯ. ಹೀಗಿರುವುದರಿಂದ ಚಕ್ರವೇ ಇಲ್ಲದಿದ್ದ ಪ್ರಾಚೀನ ಕಾಲದ ಜೀವನಕ್ರಮ ನಮಗೆ ಕಲ್ಪನಾತೀತವೆನ್ನಿಸುವುದು ಸಹಜವಲ್ಲವೇ?

- ಪ್ರಣವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.