ಉಸಿರಿನ ಪಾಠ
ಶರೀರ- ಮನಸ್ಸಿನ ನಡುವೆ ಇರುವ ಕೊಂಡಿಯೇ ಪ್ರಾಣ. ಮುಂಡಕ ಉಪನಿಷತ್ತಿನ ಪ್ರಕಾರ 'ಉಸಿರಾಟ ಶಾಸ್ತ್ರ' ಎನ್ನುತ್ತಾರೆ.

ನಮ್ಮ ಯೋಚನಾ ಜೀವಿಯು ನಮ್ಮ ಭೌತಿಕ ಜೀವಿಗಿಂತ ಭಿನ್ನ. ಇವೆರೆಡೂ ಏಕೆ ಬೇರೆಯಾಗುವುದಿಲ್ಲ? ಮನಸ್ಸು ಹಾಗೂ ಶರೀರಗಳ ನಡುವೆ ಒಂದು ಸಂಬಂಧವಿರಲೇಬೇಕು. ಈ ಕೊಂಡಿಯು ಬಹಳ ಕೌತುಕ. ಶರೀರ- ಮನಸ್ಸಿನ ನಡುವೆ ಇರುವ ಕೊಂಡಿಯೇ ಪ್ರಾಣ. ಮುಂಡಕ ಉಪನಿಷತ್ತಿನ ಪ್ರಕಾರ ಇದು ಪ್ರಾಣ ಅಲ್ಲ. ಇದನ್ನು 'ಉಸಿರಾಟ ಶಾಸ್ತ್ರ' ಎನ್ನುತ್ತಾರೆ.
ಪ್ರಾಣ ಎಂಬುದು ತುಸು ಉನ್ನತ ಮಟ್ಟದ್ದು. ಮುಂಡಕ ಉಪನಿಷತ್ತಿನ ಪ್ರಕಾರ, 'ಪ್ರಜ್ಞೆಯ ಕೇಂದ್ರ ಸ್ಥಾನವಾದ ಆತ್ಮದಿಂದ ಹರಿದುಬರುವ ಚೈತನ್ಯವೇ ಪ್ರಾಣ. ಇತರ ಉಪನಿಷತ್ತುಗಳು ನಮ್ಮ ಜೀವನ ನಿರಂತರವಾಗಿ ರಕ್ಷಿಸುವ ಎರಡು ಕಾವಲುಗಾರರ ಬಗ್ಗೆ ಮಾತನಾಡುತ್ತವೆ.
ಅವುಗಳೆಂದರೆ ಪ್ರಾಣ ಹಾಗೂ ಅಪಾನ. ಪ್ರಾಣ ಹಾಗೂ ಅಪಾನಗಳ ನಡುವೆ ಒಂದು ಹಾದಿ ಇದೆ. ಈ ಪಥವನ್ನು ಪೂರಕ, ರೇಚಕ ಹಾಗೂ ಕುಂಭಕ ಎನ್ನುತ್ತಾರೆ. ಇದು ವೈದ್ಯಕೀಯ ವಿಜ್ಞಾನಕ್ಕೆ ಒಳ್ಳೆಯ ಆಹಾರವಾಗಿದೆ. ಶರೀರ ಹಾಗೂ ಮನಸ್ಸಿನ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಆದರೆ ಉಸಿರಾಟದ ರೀತಿಯ ಮೇಲೆ ಯಾವ ಸಂಶೋಧನೆಯೂ ನಡೆಯುತ್ತಿಲ್ಲ. ನಾವು ಮನಸ್ಸು, ಮನೋವಿಜ್ಞಾನದ ಬಗ್ಗೆ ಬೇಕಾದಷ್ಟು ಮಾತನಾಡುತ್ತೇವೆ. ಆದರೆ ಶರೀರ ಹಾಗೂ ಮನಸ್ಸಿನಷ್ಟೇ ಮುಖ್ಯವಾದ ಪ್ರಾಣದ ಬಗ್ಗೆ ಏನೂ ಹೇಳುವುದಿಲ್ಲ.
ಪ್ರಾಣ ಎಂಬುದು ಬಹಳ ಶಕ್ತಿಯುತ. ಶರೀರ ಹಾಗೂ ಮನಸ್ಸು ಒಂದಕ್ಕೊಂದು ನಿಕಟ ಸಂಬಂಧ ಹೊಂದಿದೆ. ಪ್ರಾಣದ ಸಹಾಯದಿಂದ ಈ ಎರಡು ಜೀವ ಎಂಬ ಪಟ್ಟಣವನ್ನು ನಿರಂತರವಾಗಿ ಕಾಪಾಡುತ್ತೇವೆ. ಪ್ರಾಣದ ಮೇಲೆ ನಮಗೆ ಹಿಡಿತ ಇದ್ದರೆ ಸಾವಿನ ಮೇಲೂ ನಮಗೆ ಹಿಡಿತವಿರುತ್ತದೆ.
ನಮ್ಮ ಪ್ರಾಚೀನ ಸಂತರು 'ಆಯ್ತು ಮಗುವೇ, ನಾನು ನಾಳೆ ಈ ಶರೀರವನ್ನು ತ್ಯಜಿಸಲಿದ್ದೇನೆ' (ಅಥವಾ ನಾಡಿದ್ದು ಅಥವಾ ಮುಂದಿನ ತಿಂಗಳು) ಎನ್ನುತ್ತಿದ್ದರು. ಮತ್ತು ಹಾಗೆಯೇ ಅದೇ ದಿನ, ಅದೇ ಗಳಿಗೆಯಲ್ಲೇ ಪ್ರಾಣತ್ಯಾಗ ಮಾಡುತ್ತಿದ್ದರು. ಈ ದಿನ ನಾವೇಕೆ ಹಾಗೆ ಹೇಳಲಾಗುವುದಿಲ್ಲ? ಏಕೆಂದರೆ ನಮಗೆ ಆ ತಂತ್ರವು ತಿಳಿದಿಲ್ಲ.
ಇದು ಒಂದು ಸರಳ ತಂತ್ರ. ನಿಮ್ಮ ಶರೀರವನ್ನು ಸುಸ್ಥಿತಿಯಲ್ಲಿಟ್ಟು ಹಿಡಿತದಲ್ಲಿಟ್ಟುಕೊಂಡರೆ ನೀವು ಖಂಡಿತ ಶರೀರವನ್ನು ಇಚ್ಚಾಪೂರ್ವಕವಾಗಿ ತ್ಯಜಿಸಬಹುದು. ಈ ಶರೀರವು ನಿಮ್ಮದು ಎಂದು ನೀವು ಭಾವಿಸಿದ್ದಲ್ಲಿ ನಿಮಗೆ ಅದು ಖಂಡಿತವಾಗಿಯೂ ಗೊತ್ತಿರಲೇಬೇಕು.
ಧ್ಯಾನವೆಂದರೆ ಗಂಟೆಗಟ್ಟಲೆ ಕುಳಿತುಕೊಳ್ಳಬೇಕಿಲ್ಲ. ಕಣ್ಮುಚ್ಚಿ ಸ್ವಲ್ಪ ಕಾಲ ಕುಳಿತು ಮನಸ್ಸಿನಲ್ಲೇ ಶರೀರದ ಸ್ಥಿತಿಯನ್ನು ಅಭ್ಯಾಸ ಮಾಡಬೇಕು. ಮನುಷ್ಯನು ತನ್ನ ಜೀವನ, ಬಾಲ್ಯ, ವೃತ್ತಿ, ಆಸ್ತಿ, ಐಶ್ವರ್ಯ ಮುಂತಾದವುಗಳ ಬಗ್ಗೆ ಆಲೋಚಿಸುತ್ತಾನೆಯೇ ಹೊರತು, ತನ್ನ ಉಸಿರಾಟದ ಬಗ್ಗೆಯಲ್ಲ.
ಉಸಿರಾಟ ಸರಿಯಾಗಿ ಆಗುತ್ತಿಲ್ಲವೆಂದರೆ, ಉಸಿರಾಟವನ್ನು ನೀವು ನಿಗ್ರಹಿಸಿಲ್ಲವೆಂದೇ ಅರ್ಥ. ಶ್ವಾಸಕೋಶಗಳ ವ್ಯಾಯಾಮ, ಅಂದರೆ ಸರಿಯಾದ ರೀತಿಯಲ್ಲಿ ಉಚ್ಚ್ವಾಸ- ನಿಶ್ವಾಸಗಳನ್ನು ಅಭ್ಯಸಿಸಬೇಕು.
ಆಳವಾದ ಉಸಿರನ್ನು ವಪೆಯ ಸಹಾಯದಿಂದ ತೆಗೆದುಕೊಳ್ಳಬೇಕು. ಈ ವಪೆಯ ಸ್ನಾಯುಗಳು ಅತ್ಯಂತ ಬಲಶಾಲಿಯಾದದ್ದು. ಸ್ವಾಯು ಬಲದಿಂದ ಒಂದು ಬಂಡೆಯನ್ನೇ ಎತ್ತಬಹುದು. ಆದರೆ ಅದರ ಉಪಯೋಗವನ್ನು ನೀವೇ ಅರಿತಿಲ್ಲ.
ಕಿಬ್ಬೊಟ್ಟೆಯನ್ನು ಒಳಗೆಳೆದುಕೊಂಡು ಆಳವಾಗಿ ಉಸಿರೆಳೆಯಬೇಕು. ನವಜಾತು ಶಿಶುಗಳಲ್ಲಿ ನಾವು ಈ ಪ್ರಕ್ರಿಯೆ ಕಾಣಬಹುದು. ಆ ಶಿಶುವಿಗೆ ಯಾರೂ ಇದನ್ನು ಹೇಳಿಕೊಟ್ಟಿರುವುದಿಲ್ಲ. ಆದರೂ ಎಷ್ಟು ಶಿಸ್ತುಬದ್ಧವಾಗಿ ಉಸಿರಾಡುತ್ತದೆ. ಹೊಟ್ಟೆಯನ್ನು ಹೊರದೂಡಿ ಆಮ್ಲಜನಕಕ್ಕೆ ಸಾಕಷ್ಟು ಸ್ಥಳಾವಕಾಶ ಮಾಡಿಕೊಡುತ್ತದೆ. ಸಮಯ ಸಿಕ್ಕಾಗಲೆಲ್ಲಾ ಅಭ್ಯಾಸ ಮಾಡಿದಲ್ಲಿ ಮೂರು ತಿಂಗಳ ಸಮಯದಲ್ಲಿ ಈ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಈ ಮೂಲ ಅಭ್ಯಾಸವನ್ನು ಮಾಡಿಲ್ಲವಾದರೆ ಯೋಗಾಭ್ಯಾಸವನ್ನು ಮಾಡಬಾರದು.
ಯೋಗಿ ಎಂದರೆ, ಕುಂಭಕ ಎಂದರೇನೆಂದು ತಿಳಿದಿರುವವನು. ಕುಂಭಕವನ್ನು ಅರಿತವರಿಗೆ ಸಾವನ್ನೆದುರಿಸುವುದು ಸುಲಭ. ಧಾರಣಶಕ್ತಿಯ ಕುಂಭಕವನ್ನರಿತವರಿಗೆ ದೇಹ ಬಿಡುವುದೂ ಸುಲಭ. ಅವನಿಗೆ ಪ್ರಾಣದ ಗತಿಯ ಅರಿವು ಚೆನ್ನಾಗಿರುತ್ತದೆ. ಆಗ ಉಸಿರಾಟವು ಯಾವ ತೊಡಕೂ ಇಲ್ಲದಂತೆ ನಿಶ್ಶಬ್ದವಾಗಿ ನಡೆಯುತ್ತದೆ. ಧ್ಯಾನಿಸುವಾಗ ಮನಸ್ಸು ಯಾವುದರಲ್ಲಿ ಕೇದ್ರೀಕೃತವಾಗಿರಬೇಕು? ಮನಸ್ಸು ನಿಮ್ಮ ಉಸಿರಾಟದ ಗತಿಯನ್ನು ಗಮನಿಸಬೇಕು. ಉಸಿರಾಟ ಸರಾಗವಾಗಿ ಆಗುತ್ತಿದೆಯೇ ಎಂದು ಗಮನಿಸಿ. ಆಳವಾಗಿ ಉಸಿರೆಳೆದುಕೊಂಡು ಶಬ್ದವೇನಾದರೂ ಇದೆಯಾ ಎಂದು ಪೂರ್ಣವಾಗಿ ತರಬೇತುಗೊಳಿಸಿ.
ದಿನಪೂರ್ತಿ ರಾಕ್ಷಸನಾಗಿದ್ದು, ಸಂಜೆಯಾಗುತ್ತಿದ್ದಂತೆ ಸಂತನಾಗಲು ಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ದಿನಪೂರ್ತಿ ಕಾಳಸಂತೆ ಮಾರಾಟ, ಮೋಸ, ಕಳ್ಳತನ, ಸುಳ್ಳು, ಪರಸ್ತ್ರೀ ಮೋಹ- ಇಂಥ ರಾಕ್ಷಸೀ ಕೃತ್ಯಗಳಲ್ಲಿ ತೊಡಗಿ ಸಂಜೆ ಧ್ಯಾನದಲ್ಲಿ ಮನಸ್ಸನ್ನು ತೊಡಗಿಸಲು ಸಾಧ್ಯವಿಲ್ಲ. ಆದ್ದರಿಂದ ಶಿಸ್ತುಬದ್ಧವಾಗಿ ಸುಕಾಮನೆಯಿಂದ ಮನಸ್ಸನ್ನು ಆಹ್ಲಾದಗೊಳಿಸಿಕೊಳ್ಳಬೇಕು.
ಉದಾಹರಣೆಗೆ ಒಂದು ಮೂಗಿನ ಹೊಳ್ಳೆ ಕಟ್ಟಿದೆ ಎಂದಿಟ್ಟುಕೊಳ್ಳಿ. ಇನ್ನೊಂದು ಚಟುವಟಿಕೆಯಿಂದ ಇದೆ. ಈಗ ಕಟ್ಟಿಕೊಂಡ ಹೊಳ್ಳೆಯನ್ನು ತೆರೆಯಬೇಕು. ಹೇಗೆ? ಕಟ್ಟಿಕೊಂಡ ಹೊಳ್ಳೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ಆಳವಾಗಿ ಉಸಿರೆಳೆದುಕೊಳ್ಳಬೇಕು. ಆಗ ಕಟ್ಟಿಕೊಂಡ ಮೂಗು ಬಿಡಿಸಿಕೊಳ್ಳುತ್ತದೆ. ಉಚ್ಚ್ವಾಸ ನಿಶ್ವಾಸಗಳೆರಡೂ ಸರಾಗವಾಗಿ ನಡೆದಲ್ಲಿ ಅದೇ ಸುಷುಮ್ನ. ಸುಷುಮ್ನ ಜಾಗೃತವಾಗಬೇಕಾದರೆ ಉಸಿರಾಟ ಶಾಸ್ತ್ರ, ಪ್ರಾಣವಿದ್ಯೆಯನ್ನು ಅಭ್ಯಸಿಸಬೇಕು.
- ಶ್ವಾಸಗುರು ವಚನಾನಂದ ಸ್ವಾಮೀಜಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


