ಆಷಾಢ ವಿಶೇಷ
ಪ್ರತಿ ವರ್ಷ ಆಷಾಢ ಮಾಸ ಪ್ರಾರಂಭವಾದ ನಂತರ ಶುಭ ಕಾರ್ಯಗಳಾದ...

ಪ್ರತಿ ವರ್ಷ ಆಷಾಢ ಮಾಸ ಪ್ರಾರಂಭವಾದ ನಂತರ ಶುಭ ಕಾರ್ಯಗಳಾದ ಮದುವೆ, ಮಾತುಕತೆ, ಗೃಹಪ್ರವೇಶ, ಉಪನಯನ, ವಾಹನ ಹಾಗೂ ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಶುಭ ಕಾರ್ಯಗಳೆಲ್ಲಾ ನಿಷೇಧವಾಗುತ್ತದೆ.
ಇದಕ್ಕೆ ಮುಖ್ಯವಾಗಿ ನೂರಾರು ವರ್ಷಗಳ ಹಿಂದೆ ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತಿದ್ದುದೇ ಕಾರಣ. ಈ ರೀತಿ ನಿರಂತರ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆವುಂಟಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಹೊರಗಿನ ಕೆಲಸಗಳು ಕುಂಠಿತವಾಗುತ್ತಿದ್ದವು. ರೈತರಿಗೆ ಹೊಲ, ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಇರುತ್ತಿತ್ತು. ಹೀಗಾಗಿ ಆಷಾಢದಲ್ಲಿ ಶುಭ ಕಾರ್ಯ ಮಾಡಲು ಅನನುಕೂಲವಾಗಿದ್ದರಿಂದ ಅದನ್ನು ನಿಷೇಧಿಸಿರಬಹುದು.
ಶಾಸ್ತ್ರದಲ್ಲಿಯೂ ಆಷಾಢ 'ಅಶುಭ ಮಾಸ' ಎಂದು ಹೇಳಿಲ್ಲ. ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ- ಸೊಸೆ ಆಷಾಢದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆಗಳಲ್ಲಿ ಪದ್ಧತಿ ಇದೆ.
ಆಷಾಢದ ಬಗ್ಗೆ ಹಲವು ಬಗೆಯ ಮಾತುಗಳಿವೆ. ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು, ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದುಬಂದಿದ್ದು, ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವವ್ರತ ಮಾಡಿದ್ದು ಇದೇ ಆಷಾಢದಲ್ಲಿ ಎಂಬುದು ನಂಬಿಕೆ.
ಅಮರನಾಥದ ಹಿಮಲಿಂಗ ದರ್ಶನ ಆರಂಭವಾಗುವುದು, ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು, ಶುಕ್ರವಾರಗಳಲ್ಲಿ ಲಕ್ಷ್ಮೀಪೂಜೆಯನ್ನು ವಿಶೇಷವಾಗಿ ಆಚರಿಸುವುದು ಆಷಾಢಮಾಸದಲ್ಲಿ.
ಇದಲ್ಲದೆ ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದು, ಇಂದ್ರ ಗೌತಮರಿಂದ ಸಹ ಸಾಕ್ಷನಾಗು ಎಂಬ ಶಾಪ ಪಡೆದ. ಹಾಗೂ ಅದರ ವಿಮೋಚನೆಗೆ ಆಷಾಢ ಸೋಮವಾರ ಸೋಮೇಶ್ವರ ಜಯಂತಿ ವ್ರತ ಮಾಡಿ ಶಾಪ ವಿಮೋಚನೆ ಪಡೆದ.
ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮವಾಸ್ಯೆ ಸಂಜೆ ಜ್ಯೋತಿರ್ ಭೀಮೇಶ್ವರ ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಸಾಧು, ಸಂತರು, ಯತಿಗಳು, ಸನ್ಯಾಸಿಗಳು ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.
ಆಷಾಢ ಶುಕ್ಲ ಪಂಚಮಿ ದಿನದಂದು ಅಮೃತ ಲಕ್ಷ್ಮಿ ವ್ರತ ಆಚರಿಸಲಾಗುತ್ತದೆ. ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮದಿನ ಕೂಡ ಆಷಾಢ ಮಾಸದಲ್ಲೇ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವು ವಿಶೇಷವೇ ಆಗಿದೆ. ಈ ವರ್ಷ ಆಷಾಢ ಮಾಸವು 9-7-13 ರಿಂದ 6-8-13 ರವರೆಗೆ ಇರುವುದು.
- ಕೆ.ಆರ್. ಪ್ರಕಾಶಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


