ಭಕ್ತಿ-ಜ್ಯೋತಿಷ್ಯ

ಸಂಕ್ರಾಂತಿ ಸಂಭ್ರಮ

ಸಂಕ್ರಾಂತಿ ಸಂಭ್ರಮ
Published On :

ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಕಾಲವೇ ಸಂಕ್ರಾಂತಿ. ಪ್ರತಿ ಮಾಸದಲ್ಲೂ ಇಂತಹ ಬದಲಾವಣೆ ಸಂಭವಿಸುತ್ತಿದ್ದರೂ, ಧನು ರಾಶಿಯಿಂದ ಮಕರ ರಾಶಿಗೆ ಆತ ಕಾಲಿಡುವ ಕಾಲವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ ಇದೇ ಮಕರ ಸಂಕ್ರಾತಿ.
ಇದು ಸೂರ್ಯನ ಚಲನೆಗೆ ಸಂಬಂಧಿಸಿದ ಹಬ್ಬ. ಸಂಸ್ಕೃತದಲ್ಲಿ ಕ್ರಮೇಣ ಎಂದರೆ ಹೆಜ್ಜೆಯಿಡುವುದು ಎಂದರ್ಥ. ಸಂಕ್ರಮಣ ಎಂದರೆ ಚೆನ್ನಾಗಿ ಹೆಜ್ಜೆ ಇಡುವುದು ಎಂದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೆಜ್ಜೆ ಇಡುವುದೇ ಈ ಸಂಕ್ರಾಂತಿ ಅಥವಾ ಸಂಕ್ರಮಣ.
ಒಂದು ವರ್ಷದಲ್ಲಿ 12 ಸಂಕ್ರಮಣಗಳಿವೆ. ಇವುಗಳಲ್ಲಿ ಎರಡು ಮಾತ್ರ ಪ್ರಮುಖವೆನಿಸಿವೆ. ಮೊದಲನೆಯದು ಮಳೆಗಾಲದಲ್ಲಿ ಅಂದರೆ ಜುಲೈ ತಿಂಗಳ ಮಧ್ಯಭಾಗದಲ್ಲಿ ಬಂದರೆ, ಇನ್ನೊಂದು ಚಳಿಗಾಲದಲ್ಲಿ, ಅಂದರೆ ಜನವರಿ ಮಧ್ಯಭಾಗದಲ್ಲಿ ಬರುತ್ತದೆ. ಸೂರ್ಯನು ಮಿಥುನರಾಶಿ ಬಿಟ್ಟು, ಕರ್ಕಾಟಕ ರಾಶಿಯನ್ನು ಪ್ರವೇಶಿಸುವ ದಿನವನ್ನು ಕರ್ಕಾಟಕ ಸಂಕ್ರಮಣವೆಂದೂ, ಧನುರಾಶಿಯನ್ನು ಬಿಟ್ಟು ಮಕರರಾಶಿಯನ್ನು ಪ್ರವೇಶಿಸುವ ದಿನವನ್ನು ಮಕರ ಸಂಕ್ರಮಣವೆಂದೂ ಕರೆಯಲಾಗುತ್ತದೆ. ಇವುಗಳಲ್ಲಿ ಮುಖ್ಯವೆನಿಸಿದ್ದು ಹಾಗೂ ಪ್ರಮುಖವಾದುದು 'ಮಕರ ಸಂಕ್ರಾಂತಿ'.
ಎಳ್ಳು-ಬೆಲ್ಲದ ಸಂಗಮ
ಸಂಕ್ರಾಂತಿ ಎಳ್ಳು-ಬೆಲ್ಲದ ಹಬ್ಬ. ಎಳ್ಳು ಎಂದರೆ ಸಂಸ್ಕೃತದಲ್ಲಿ ತಿಲ. ಚಳಿಗಾಲದಲ್ಲಿ ಶರೀರಕ್ಕೆ ಎಣ್ಣೆಯ ಅಂಶ ಅತಿ ಅವಶ್ಯ. ಆರೋಗ್ಯ ದೃಷ್ಟಿಯಿಂದ ತಿಲಕ್ಕೆ ವಿಶೇಷವಾದ ಮಹತ್ವವಿದೆ. ಇದು ದೇಹಕ್ಕೆ   ಬಲ ಮತ್ತು ಪುಷ್ಟಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಎಳ್ಳು ಯಾವಾಗಲೂ ಪಾಪ ಪರಿಹಾರಕ.
ಎಳ್ಳುದಾನ, ಎಳ್ಳಿನಿಂದ ಹೋಮ, ಎಳ್ಳು ಭಕ್ಷಿಸುವುದು, ದೇವ ತರ್ಪಣವನ್ನು ಬಿಳಿ ಎಳ್ಳುಗಳಿಂದ, ಪಿತೃ ತರ್ಪಣವನ್ನು ಕರಿ ಎಳ್ಳುಗಳಿಂದಲೂ ಮಾಡಬೇಕು. ದೇಹಕ್ಕೆ ಶಾಖ ಅತ್ಯಂತ ಅವಶ್ಯಕ. ನರವಾಹಿನಿಗಳು ಚುರುಕಾಗಬೇಕಾದರೆ, ದೇಹಕ್ಕೆ ಹೆಚ್ಚಿನ ಉಷ್ಣತೆ ಸಿಗಬೇಕೆಂದರೆ, ಎಳ್ಳಿನ ಜೊತೆಗೆ ಬೆಲ್ಲ ಸಹಾಯಕ. ಆಯಾಸ ಪರಿಹಾರ, ಶಕ್ತಿವರ್ಧಕ, ಔಷಧೀಯ ಗುಣ ಹೊಂದಿರುವ ಬೆಲ್ಲದ ಸೇವನೆ ಚಳಿಗಾಲದಲ್ಲಿ ದೇಹಕ್ಕೆ ನವಚೈತನ್ಯ ನೀಡುತ್ತದೆ.
ಎಳ್ಳು -ಬೆಲ್ಲವನ್ನು ಅದರ ಮೂಲ ರೂಪದಲ್ಲಿಯೇ ಸ್ವೀಕರಿಸಲು ಯಾರೂ ಇಚ್ಛಿಸುವುದಿಲ್ಲ. ಅದಕ್ಕೆ 'ನಗು ಎಳ್ಳು' ತಯಾರಿಸುವುದು. ಇದರಿಂದಾಗಿ 'ಸಂಕ್ರಾಂತಿ' ಎಳ್ಳು ಸರ್ವಮಾನ್ಯವಾಯಿತು. ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂಬುದು ಈ ಹಬ್ಬದ ಸಂದೇಶ.
ಎಳ್ಳಿನ ಜೊತೆಯಲ್ಲಿ ಎಣ್ಣೆಯ ಅಂಶವು ಹೆಚ್ಚಾಗಿರುವ ಒಣಕೊಬ್ಬರ್, ನೆಲಗಡಲೆ ಬೀಜ, ಇವುಗಳನ್ನು ಕೂಡಾ ಸೇರಿಸಲಾಗುವುದು. ಬೆಲ್ಲದ ಬದಲು ಸಕ್ಕರೆ, ಬರೀ ಸಕ್ಕರೆಯ ಬದಲು ಸಕ್ಕರೆಯಿಂದ ಮಾಡಿದ ವಿವಿಧ ಆಕಾರದ ಅಚ್ಚುಗಳು, ಕುಸುರಿಕಾಳು, ಹಣ್ಣುಗಳು, ಕಬ್ಬಿನ ತುಂಡು ಹೀಗೆ ಸೇರ್ಪಡೆಗಳು ವೈವಿಧ್ಯ ಅಭಿರುಚಿ ಮತ್ತು ಕಲಾವಂತಿಕೆಗಳ ಕುರುಹುಗಳಾಗಿವೆ. ಇವುಗಳನ್ನು ಮನೆ ಮನೆಗೆ ಕೊಂಡೊಯ್ದು ಇಷ್ಟ ಮಿತ್ರರಿಗೆ ವಿತರಿಸುವುದು ಈ ಹಬ್ಬದ ಸಂಭ್ರಮ.
ಮಕರ ಸಂಕ್ರಾಂತಿಯ ಪರ್ವ ಕೇವಲ ಧಾರ್ಮಿಕ ಮಹತ್ವಕ್ಕಷ್ಟೇ ಹೆಸರುವಾಸಿಯಾಗಿಲ್ಲ, ಇದನ್ನು ಪತಂಗ ಹಾರಾಟದ ಪರ್ವ ಎನ್ನುತ್ತಾರೆ.
ಒಟ್ಟಿನಲ್ಲಿ ಸಂಪತ್ತು-ಸಮೃದ್ಧಿಯೊಂದಿಗೆ ಸುಖಸಂತೋಷವನ್ನು ಎಲ್ಲೆಡೆ ಹಂಚುವ 'ಮಕರ ಸಂಕಾಂತಿ' ಎಲ್ಲರ ಬಾಳಿಗೆ ಸಿಹಿಯಾಗಿರಲಿ.
-ಭಾಗ್ಯ ನಂಜುಂಡಸ್ವಾಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.