ಭಕ್ತಿ-ಜ್ಯೋತಿಷ್ಯ

ಭೋಗಮಂಡಲ

ಭೋಗಮಂಡಲ
Published On :

ಪ್ರತಿಯೊಬ್ಬ ಮಾನವ ಎಲ್ಲಿಯೇ ಇದ್ದರೂ ಮತ್ತು ಎಂಥದ್ದೇ ಪರಿಸ್ಥಿತಿಯಲ್ಲಿ ಇದ್ದರೂ ಆನಂದದಿಂದ ಇರಬೇಕೆಂಬುದೇ ಅವನ ಇಚ್ಛೆ. ಇದನ್ನು ಸಾಧಿಸಲು ಎರಡು ಮಾರ್ಗಗಳು. ಒಂದು ಪ್ರಪಂಚ ಹಾಗೂ ಎರಡನೆಯದು ಪರಮಾರ್ಥ.
ಹಲವರು ಐಷಾರಾಮಿ ವಸ್ತುಗಳನ್ನು ಸಂಪಾದಿಸಿ ಅವುಗಳಿಂದ ಸುಖ ಸಿಗುತ್ತದೆಂದು ಭಾವಿಸಿದ್ದಾರೆ. ಅಂದರೆ ಇರುವುದಕ್ಕೆ ದೊಡ್ಡಮನೆ (ಬಂಗಲೆ) ಶರೀರಕ್ಕೆ ಚೆನ್ನಾಗಿರುವ ಉಡುಪುಗಳನ್ನು ಒದಗಿಸುವುದು ಮತ್ತು ದೇಹಕ್ಕೆ ರುಚಿ ರುಚಿಯಾದ ತಿಂಡಿ ತಿನಿಸು ಕೊಡುವುದರಿಂದ ಸುಖ ಶಾಂತಿ ಪಡೆಯಬಹುದೆಂದು ಅವರ ನಂಬಿಕೆ.
ಅಂದರೆ ಐಹಿಕ ಸುಖವೇ ನಿಜವಾದ ಸುಖವೆಂದು ತಿಳಿದು ಹಲವರು ಅವುಗಳ ಹಿಂದೆ ಬಿದ್ದಿದ್ದಾರೆ. ಅವುಗಳನ್ನು ಸಂಪಾದಿಸಲು ಮುಖ್ಯವಾಗಿ ದುಡ್ಡು ಬೇಕು. ಆದುದರಿಂದ ಎಲ್ಲರೂ ದುಡ್ಡಿನ ಸಂಪಾದನೆಯಲ್ಲಿಯೇ ನಿರತರಾಗಿದ್ದಾರೆ. ದುಡ್ಡಿನ ಅವಶ್ಯಕತೆ ಎಲ್ಲರಿಗೂ ಹಾಗೂ ಎಲ್ಲದಕ್ಕೂ ಇರುತ್ತದೆಂಬುದು ನಿಜವಿದ್ದರೂ ದುಡ್ಡೇ ಸರ್ವಸ್ವವಲ್ಲ.
ಹಣ ಸಂಪಾದನೆಯಲ್ಲಿಯೇ ಮುಳುಗಿದವರು ಅದನ್ನು ಏತಕ್ಕಾಗಿ ಸಂಪಾದಿಸಬೇಕೆಂಬುದನ್ನೂ ಮರೆತು ಬಿಡುತ್ತಾರೆ. ದುಡ್ಡು ಸುಖದ ಸಾಧನೆಯಾಗಬಹುದಲ್ಲದೇ ಹೊರತು ಸುಖವನ್ನು ಕೊಡಲಾರದೆಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ದುಡ್ಡಿನಲ್ಲಿ ನಿಜವಾದ ಸುಖವಿಲ್ಲವೆಂಬುದು ಅರಿವಾಗುವಷ್ಟರಲ್ಲಿ ದೇಹಕ್ಕೆ ರೋಗ ಹಾಗೂ ಮುಪ್ಪು ಆವರಿಸುತ್ತದೆ ಮತ್ತು ಪರಮಾರ್ಥದೆಡೆ ಒಲವಾಗುತ್ತವೆ.
ಪರಮಾರ್ಥದಿಂದ ಅತ್ಯಂತ ದುಃಖ ನಿವೃತ್ತಿ ಹಾಗೂ ಪರಮಾನಂದ ಪ್ರಾಪ್ತಿಯಾಗುತ್ತದೆ. ಪರಮಾರ್ಥದಲ್ಲಿ ನಿಜವಾದ ಸುಖ ಮನಶ್ಶಾಂತಿ ದೊರೆಯುತ್ತದೆ. ಸಾಮಾನ್ಯವಾಗಿ ಎಲ್ಲರೂ ಸೇವಾ ವೃತ್ತಿ ಹೊಂದಿದ ಮೇಲೆ ಅಧ್ಯಾತ್ಮದೆಡೆ ಗಮನ ಹರಿಸಲು ಇಚ್ಚಿಸುತ್ತಾರೆ. ಆದರೆ ದೇಹಾರೋಗ್ಯ ಸರಿಯಿರುವಾಗಲೇ ಮತ್ತು ಸಾಕಷ್ಟು ಹಣವಿರುವಾಗಲೇ ಅಧ್ಯಾತ್ಮದೆಡೆ ಗಮನ ಕೊಡುವುದು ಶ್ರೇಯಸ್ಕರ. ಅಧ್ಯಾತ್ಮವು ವೃದ್ಧರಿಗೆ ಮಾತ್ರವಿರದೆ ತರುಣರಿಗೂ ಅವಶ್ಯವಿರುತ್ತದೆ.
ಪ್ರಪಂಚ ಹಾಗೂ ಪರಮಾರ್ಥಗಳು ಒಂದಕ್ಕೊಂದು ವಿರೋಧವಿರದೆ ಪೂರಕವಿರುತ್ತದೆ. ಶಾಂತಿ ಹಾಗೂ ಸಮಾಧಾನ ಪವಿತ್ರ ಹಿಮಾಲಯದಲ್ಲಷ್ಟೇ ಅಲ್ಲದೆ ಹೃದಯಾಂತಃಕರಣದಲ್ಲಿಯೂ ಇರುತ್ತದೆ. ಶಾಂತಿ ಹಾಗೂ ಸಮಾಧಾನ ಪಡೆಯುವುದಕ್ಕೆ ಪ್ರಪಂಚವನ್ನು ತೊರೆದು ಅರಣ್ಯಕ್ಕೆ ಹೋಗುವುದರ ಅವಶ್ಯಕತೆ ಇರುವುದಿಲ್ಲ.  
ಪ್ರಯಾಣಕ್ಕೆ ಹೇಗೆ ಕುದುರೆ ಹಾಗೂ ಥಡಿ ಎರಡೂ ಬೇಕೋ ಹಾಗೆಯೇ ನಿಜವಾದ ಸುಖ ದೊರಕಿಸುವುದಕ್ಕೆ ಪ್ರಪಂಚ ಹಾಗೂ ಪರಮಾರ್ಥಗಳು ಬೇಕು. ಥಡಿಯಿಲ್ಲದಿದ್ದರೂ ಪ್ರವಾಸ ಮಾಡಬಹುದು. ಆದರೆ ಕುದುರೆಯಿಲ್ಲದೇ ಮಾಡಲಾಗುವುದಿಲ್ಲ. ಆದುದರಿಂದ ಕುದುರೆಯ ಕಿಮ್ಮತ್ತು ಕುದುರೆ ಹಾಗೂ ಥಡಿಯ ಕಿಮ್ಮತ್ತು ಥಡಿಗೆ ಕೊಡಬೇಕು.
ಅದರಂತೆ ಪ್ರಪಂಚ ಹಾಗೂ ಪರಮಾರ್ಥಕ್ಕೆ ಯೋಗ್ಯ ಬೆಲೆ ಕೊಡಬೇಕು. ಪರಮಾರ್ಥಕ್ಕೆ ಅಗ್ರಸ್ಥಾನ ನೀಡಬೇಕು. ಏಕೆಂದರೆ ಪರಮಾರ್ಥದಲ್ಲಿ ನಿಜವಾದ ಸುಖವಿರುತ್ತದೆ. ಪ್ರಪಂಚದಲ್ಲಿನ ಸುಖ ದುಃಖಮಿಶ್ರಿತ ಹಾಗೂ ಕ್ಷಣಿಕವಾಗಿರುತ್ತದೆ. ಆದರೆ ಪ್ರಪಂಚದಲ್ಲಿ ತ್ಯಾಗ ಮಾಡುವುದು ಅವಶ್ಯವಿರುವುದಿಲ್ಲ. ನಾವು ಎಷ್ಟೇ ಇಂದ್ರಿಯ ಸುಖ ಸಂಪಾದಿಸಿದರೂ, ತೃಪ್ತಿ ಸಮಾಧಾನ ಲಭಿಸುವುದಿಲ್ಲ. ಇನ್ನೂ ಬೇಕು ಬೇಕು ಎಂದೆನಿಸುತ್ತದೆ.
ಆದ್ದರಿಂದ ಇಂದ್ರಿಯ ಸುಖಕ್ಕೆ ಅತಿಯಾಗಿ ಬಲಿಯಾಗದೇ, ಪ್ರಾರಬ್ಧಾನುಕಾರವಾಗಿ ಬಂದ ವಿಷಯಗಳನ್ನು ಆನಂದದಿಂದ ಸ್ವೀಕರಿಸಬೇಕು  ಮತ್ತು ಪ್ರಯತ್ನದಿಂದ ಪರಮಾರ್ಥ ಸಾಧಿಸಬೇಕು. ನಾವು ಎಲ್ಲಿಯೇ ಇದ್ದರೂ  ಮತ್ತು ಎಂಥದ್ದೇ ಪರಿಸ್ಥಿತಿಯಲ್ಲಿದ್ದರೂ ಆನಂದದಿಂದಿರುವುದನ್ನು ಮಾಡಿಕೊಳ್ಳಬೇಕು.

-ಗಣಪತರಾವ ಮಹಾರಾಜ ಕನ್ನೂರ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.