ಭಕ್ತಿ-ಜ್ಯೋತಿಷ್ಯ

ಪುಣ್ಯ ಸ್ನಾನ

ಪುಣ್ಯ ಸ್ನಾನ
Published On :

ಸ್ನಾನಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ. ನಿತ್ಯ ಅವಶ್ಯದ ಸಂಧ್ಯಾವಂದನೆ, ದೇವಪೂಜೆ ಇತ್ಯಾದಿಗಳಂತೆ ಇದು ಕೂಡ ನಿತ್ಯಕರ್ಮ. ಲೌಕಿಕ ದೃಷ್ಟಿಯಿಂದ ಇದು ಅತಿ ಪಾವಿತ್ರ್ಯ. ಮಾನಸಿಕ ಪ್ರಸನ್ನತೆ, ಧಾರ್ಮಿಕ, ಅಧ್ಯಾತ್ಮ ದೃಷ್ಟಿಯಿಂದಲೂ ಮಹತ್ವ ಇದೆ.
ನಿತ್ಯವೂ ಪ್ರಾತಃಕಾಲದಲ್ಲಿ ಸ್ನಾನ ಮಾಡತಕ್ಕವನನ್ನು ಬಲ, ರೂಪ, ಸ್ವರಶುದ್ಧಿ, ವರ್ಣಶುದ್ಧಿ, ಸುಖಸ್ಪರ್ಶ, ಸುಗಂಧ, ಪರಿಶುದ್ಧತೆ, ತೇಜಸ್ಸು, ಸಕುಮಾರತೆ ಈ ಹತ್ತು ಗುಣಗಳು ತಾವೇ ತಾವಾಗಿ ಸೇವಿಸುತ್ತವೆ ಎಂದು ಮಹಾಭಾರತದಲ್ಲಿ ಹೇಳಿದೆ.
ಪ್ರಾತಃಸ್ನಾನ
ಮುಖ್ಯಸ್ನಾನ ಹಾಗೂ ಗೌಣಸ್ನಾನ ಎಂಬುದಾಗಿ ಸ್ನಾನ ಎರಡು ಪ್ರಕಾರಗಳನ್ನು ಹೊಂದಿದೆ. ನೀರಿನಿಂದ ನಡೆಸುವ ವಾರುಣ ಸ್ನಾನ ಮುಖ್ಯಸ್ಥಾನ ಎನಿಸಿದೆ. ಪಾತಃಸ್ನಾನ ನಿತ್ಯ ಸ್ನಾನ ಎನಿಸುವುದು. ಗ್ರಹಣ ಕಾಲದಲ್ಲಿ, ಸೂತಕಾದಿಗಳಲ್ಲಿ ನಡೆಸುವ ಸ್ನಾನ 'ನೈಮಿತ್ತಿಕ' ವ್ಯತೀಪಾತ, ಅಮಾವಾಸ್ಯೆ ಮುಂತಾದ ಸಂದರ್ಭಗಳಲ್ಲಿಯೂ ನಡೆಸುವ ನದೀ ಸ್ನಾನ ಕಾಮ್ಯಸ್ನಾನ. ಧಾರ್ಮಿಕ, ಚಟುವಟಿಕೆಗಳನ್ನು ನಡೆಸಲು ಸ್ನಾನ ಕ್ರಿಯಾಂಗ ಸ್ನಾನ.
ದೇಹದ ಮಾಲಿನ್ಯವನ್ನು ಪರಿಹರಿಸುವ ಉದ್ದೇಶದಿಂದಲೇ ಅಭ್ಯಂಗ ಪೂರ್ವಕವಾಗಿ ನಡೆಸುವ ಸ್ನಾನ 'ಮಲಾಪಕರ್ಷಣ ಸ್ನಾನ' ಎನಿಸಿದೆ.
ತೀರ್ಥಾದಿಗಳಲ್ಲಿ ನಡೆಸುವ ಸ್ನಾನ ಕ್ರಿಯಾಸ್ನಾನ, ಗೌಣಸ್ನಾನವೂ ಆರು ಪ್ರಭೇದ ಹೊಂದಿದೆ. ಆಪೋ ಹಿಷ್ಠಾ...' ಇತ್ಯಾದಿ ಮಂತ್ರ ಪಠಣಪೂರ್ವಕವಾಗಿ ನಡೆಸುವ ಸ್ನಾನ ಮಂತ್ರಸ್ನಾನ. ತುಳಸಿ, ಗಂಗೆ ಮುಂತಾದವುಗಳ ಮೃತ್ತಿಕೆಯನ್ನು ಹಚ್ಚಿಕೊಳ್ಳುವುದು ಪಾರ್ಥಿವ ಸ್ನಾನ. ಭಸ್ಮಲೇಪದ ಮೂಲಕ ನಡೆಸುವ ಭಸ್ಮಸ್ನಾನ ಆಗ್ನೇಯ ಸ್ನಾನ. ಬಿಸಿಲಿನಿಂದ ಕೂಡಿದ ಮಳೆಯಿಂದ ನಡೆಸುವ ಸ್ನಾನ ಮಾನಸಸ್ನಾನ.
ನೀರು ಜೀವವಾಹಿನಿ. ಪ್ರಕೃತಿಗೆ ಹಸಿರನ್ನು ಹೊದಿಸುವ ನೀರು ಬದುಕಿಗೆ ಮೂಲಾಧಾರ. ಶರೀರದ ಕೊಳೆಯನ್ನಷ್ಟೇ ತೊಳೆಯದೆ ಮನಸ್ಸಿಗೆ ಉಲ್ಲಾಸವನ್ನೂ ನೀಡಬಲ್ಲ ಸ್ನಾನವು ನಮ್ಮ ನಿತ್ಯದ ಕಾರ್ಯಗಳಲ್ಲಿ ಪ್ರಮುಖವಾದುದು.
ಜಲಪ್ರೋಕ್ಷಣ ಸ್ನಾನ
ನದಿ, ಕೆರೆ, ಬಾವಿಗಳಲ್ಲಿ ಸ್ನಾನ ಮಾಡಲು ಸಾಮರ್ಥ್ಯವಿಲ್ಲದಿದ್ದಲ್ಲಿ ಬಿಸಿ ನೀರಿನಿಂದಾದರೂ ಸ್ನಾನ ಮಾಡಬೇಕು. ಕಂಠಸ್ನಾನವವನ್ನಾದರೂ, ಕಟಿಸ್ನಾನವನ್ನಾದರೂ, ಪಾದಸ್ನಾನವನ್ನಾದರೂ ಮಾಡಬೇಕು. ಒದ್ದೆ ಬಟ್ಟೆಯಿಂದ ಮೈ ಒರೆಸಿಕೊಳ್ಳುವ ಕಾಪಿಲ ಸ್ನಾನವನ್ನಾಗಲೀ, ಜಲವನ್ನು ಪ್ರೋಕ್ಷಣ ಸ್ನಾನವನ್ನಾಗಲಿ ನಡೆಸಬೇಕು.
ಬಿಸಿ ನೀರಿನ ಸ್ನಾನ ಮತ್ತೊಬ್ಬರಿಗೆ ಸೇರಿದ ಸ್ನಾನ- ದೈಹಿಕ ಶುದ್ಧಿಯನ್ನು ತಂದು ಕೊಡಬಲ್ಲದೇ ಹೊರತು ಆ ಸ್ನಾನದಿಂದ ಶಾಸ್ತ್ರದಲ್ಲಿ ಹೇಳಿರುವ ಫಲ ದೊರಕದು. ನದಿ, ತೀರ್ಥ, ಸರೋವರಗಳಲ್ಲಿ ನಡೆಸುವ ಸ್ನಾನದಿಂದಷ್ಟೇ ಆ ಫಲ ದೊರಕಬಲ್ಲದು. ಸೂರ್ಯೋದಯಕ್ಕಿಂತ ಮೊದಲಿನ ನಾಲ್ಕು ಗಳಿಗೆಗಳ ಕಾಲ 'ಅರುಣೋದಯ ಕಾಲ' ಎನಿಸಿದೆ. ಆಗ ನೀರು ಗಂಗೆಯ ನೀರಿನಂತೆ ಪವಿತ್ರವಾಗಿದ್ದು, ಯತಿಗಳಿಗೆ, ಸಾಧನಾ ಕ್ಷೇತ್ರದಲ್ಲಿ ಪ್ರಯತ್ನಶೀಲರಾದ ಸಾಧಕರಿಗೆ ವಿಹಿತವಾದ ಸ್ನಾನಕಾಲವಾಗಿದೆ.
ವಾನಪ್ರಸ್ಥರಿಗೆ ಹೇಗೋ ಹಾಗೇ ಗೃಹಸ್ಥರಿಗೆ ಪ್ರಾತಃಕಾಲದಲ್ಲೂ ಮಧ್ಯಾಹ್ನದಲ್ಲೂ ಸ್ನಾನವು ವಿಹಿತವಾಗಿದೆ. ಯತಿಗಳಿಗೆ ಮೂರು ಕಾಲದಲ್ಲೂ, ಬ್ರಹ್ಮಚಾರಿಗಳು ಬೆಳಗ್ಗೆ ಒಮ್ಮೆ ಮಾತ್ರ ಸ್ನಾನ ನಡೆಸಬೇಕು.
ಆರೋಗ್ಯಕ್ಕೆ ಪುಷ್ಟಿ ನೀಡುವ ಸ್ನಾನದ ಭೌತಿಕ ಪ್ರಯೋಜನಗಳನ್ನು 'ಸುಶೃತ ಸಂಹಿತೆ' ಹೀಗೆ ಸಂಗ್ರಹಿಸಿದೆ.
ಸ್ನಾನದಿಂದ ನಿದ್ರೆ ದೂರವಾಗುತ್ತದೆ, ದಾಹ ಪರಿಹಾರವಾಗುತ್ತದೆ. ಬೆವರು, ತುರಿಕೆ, ತೃಷೆ ಮಾಯವಾಗುತ್ತದೆ. ಆಲಸ್ಯ, ಪಾಪ ದೂರವಾಗುತ್ತದೆ. ಮನಸ್ಸಿಗೆ ನೆಮ್ಮದಿ, ಪುರುಷತ್ವವೂ ಸಾಧ್ಯವಾಗುತ್ತದೆ. ನೀರಿಗೆ ಅಸಾಮಾನ್ಯವಾದ ವೈದ್ಯಕೀಯ ಗುಣವಿದೆ.
ಮಧುಮೇಹ, ಸಂಧಿವಾತದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ದಿನನಿತ್ಯದ ಸ್ನಾನ ಅವಶ್ಯಕ. ಅಷ್ಟೇ ಅಲ್ಲದೇ ವ್ಯಸನಿಗಳನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಸ್ನಾನದ ಪಾತ್ರ ಮಹತ್ವದ್ದು. ಸ್ನಾನ ಸ್ವತಂತ್ರ ಸಾಧನೆ ಎನಿಸಿ ಕೆಲವು ಮಾಸಗಳಲ್ಲಿ, ಹಬ್ಬಹರಿದಿನಗಳಲ್ಲಿ ವಿಶೇಷವಾಗಿ ವಿಹಿತವಾಗಿದೆ.
ಮಾಘ ಸ್ನಾನ
ಪುಷ್ಯ ಮಾಸದ ಶುಕ್ಲ ಏಕಾದಶಿ, ದ್ವಾದಶಿ ಅಥವಾ ಹುಣ್ಣಿಮೆಯಂದು ಪ್ರಾರಂಭಿಸಲಾದ ಮಾಘಸ್ನಾನವನ್ನು ಮಾಘ ಮಾಸದ ದ್ವಾದಶಿ ಅಥವಾ ಹುಣ್ಣಿಮೆಯಂದು ಸಮಾಪ್ತಿಗೊಳಿಸಬೇಕು. ಅಥವಾ ಮಕರ ಸಂಕ್ರಮಣದಿಂದ ಪ್ರಾರಂಭಿಸಿ ಕುಂಭ ಸಂಕ್ರಮಣದವರೆಗೆ ಮಾಘಸ್ನಾನ ನಡೆಸಬೇಕು. ಸಮುದ್ರ ಸ್ನಾನ ಅತಿ ಪ್ರಶಸ್ತವಾದುದು. ಮಹಾನದಿಗಳಲ್ಲಿ ಮೀಯುವಾಗ ಪ್ರಯಾಗ ಸ್ಮರಣೆ ನಡೆಸುತ್ತಿದ್ದರೆ ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿದಷ್ಟು ಪುಣ್ಯ ಬರುವುದು. <

-ಗುರುರಾಜ ಪೋಶೆಟ್ಟಿಹಳ್ಳಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.